ಶಿವಮೊಗ್ಗ: ಕಳೆದ 15 ದಿನಗಳಿಂದ ಭದ್ರಾವತಿಯಲ್ಲಿ ವಿಐಎಸ್ಎಲ್ (VISL) ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆಗೆ ಜೆಡಿಎಸ್ (JDS) ಬೆಂಬಲ ನೀಡಿದೆ. ಕೇಂದ್ರ ಸರ್ಕಾರ ವಿಐಎಸ್ಎಲ್ ಮುಚ್ಚುವ ನಿರ್ಧಾರ ಖಂಡಿಸಿ ಕಾರ್ಮಿಕರು ಪ್ರತಿಭಟನೆ (Workers Protest) ನಡೆಸುತ್ತಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy), ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim), ಎಂಎಲ್ಸಿ ಬೋಜೇಗೌಡ ಸೇರಿದಂತೆ ಹಲವು ನಾಯಕರು ಭೇಟಿ ನೀಡಿ, ಕಾರ್ಮಿಕರ ಜೊತೆ ಮಾತುಕತೆ ನಡೆಸಿದರು. ಭೇಟಿ ಬಳಿಕ ಮಾತನಾಡಿದ ಸಿಎಂ ಇಬ್ರಾಹಿಂ, ಸೇಲ್ ನ (SAIL) ನವರು ಒಂದು ಕಬ್ಬಿಣ ಬಿಟ್ಟಿಲ್ಲ. ನಮ್ಮನ್ನು ಬೀದಿಗೆ ತಳ್ಳಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಕುಮಾರಣ್ಣ ಇದ್ದಾರೆ, ಕಾರ್ಖಾನೆ ಮುಚ್ಚಲು ಬಿಡಲ್ಲ. ನಿಮಗೆ ಆಗದಿದ್ರೆ ನಮಗೆ ಕೊಡಿ. ನೀವು ಕೊಟ್ಟ ಒಂದು ರೂಪಾಯಿ ವಾಪಸ್ ಕೊಡ್ತೀವಿ. ದೇವೇಗೌಡರು ಬರೆದ ಪತ್ರಕ್ಕೆ ಏನು ಉತ್ತರ ಬರುತ್ತೆ ಕಾಯೋಣ ಎಂದರು.
ಅವರಿಗೆ ಇರೋದು ಎರಡೇ ಫ್ಯೂಸ್
ಇಂದು ಬೊಮ್ಮಾಯಿ ಮುಖ್ಯಮಂತ್ರಿ. ಈ ಕಾರ್ಖಾನೆ ಉಳಿಸುವಾಗ ಅವರಪ್ಪ ಮಂತ್ರಿಯಾಗಿದ್ದ. ಅಪ್ಪನ ಮಾನ ಉಳಿಸಲಿಕ್ಕೆ ವಿಐಎಸ್ಎಲ್ ಉಳಿಸಬೇಕು. ಯಡಿಯೂರಪ್ಪ ತ್ರಿಫ್ಯೂಸ್ ಅಂತಾರೆ, ಆದರೆ ಅವರಿಗೆ ಎರಡೇ ಫ್ಯೂಸ್ ಇರೋದು. ಒಂದು ಮೋದಿ ಕೈಯ್ಯಲ್ಲಿ, ಇನ್ನೊಂದು ಅಮಿತ್ ಶಾ ಕೈಯ್ಯಲ್ಲಿ ಎಂದು ಹೇಳಿದರು.
ಮುಂದುವರಿದ ಮಾತನಾಡಿದ ಸಿಎಂ ಇಬ್ರಾಹಿಂ, ಗೃಹ ಸಚಿವ ಆರಗ ಜ್ಞಾನೇಂದ್ರ ಅರ್ಧ ಹೊಡೆದುಕೊಂಡು ಹೋದ. 12 ಜನ ಮುಂಬೈಗೆ ಹೋಗಿ ಸರ್ಕಾರ ಕೆಡವಿದರು. ಇದರಿಂದ ನಿಮಗೆ ಏನು ಸಿಕ್ತು. ದರಿದ್ರ, ಅಯೋಗ್ಯ ಸೇಲ್ ನವರು ಮಸಣ ಮಾಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಕಾರ್ಖಾನೆ ವಾಪಸ್ ಪಡೆಯುತ್ತೇವೆ
1995ರಲ್ಲಿ ಆಗಿದ್ದು 2023ರಲ್ಲಿ ಪುನಃ ಆಗುತ್ತದೆ. ಈ ಕಾರ್ಖಾನೆಯಲ್ಲಿ ನಾನೂ ಗುತ್ತಿಗೆದಾರ ಆಗಿದ್ದೆ. ಕಾರ್ಖಾನೆ ಋಣ ನಮ್ಮ ಮೇಲಿದ್ದು, ಮೂರು ತಿಂಗಳು ಕಾಯಿರಿ. ನಾವು ಈ ಕಾರ್ಖಾನೆ ವಾಪಸ್ ಪಡೆಯುತ್ತೇವೆ ಎಂದು ಕಾರ್ಮಿಕರಿಗೆ ಭರವಸೆ ನೀಡಿದರು.
ಶಾಸಕ ಸಿ ಟಿ ರವಿ ಎಲ್ಲಿದ್ದಾನೆ ಎಂದು ಪ್ರಶ್ನಿಸಿದ ಸಿಎಂ ಇಬ್ರಾಹಿಂ,ಮೊದಲು ಅಮ್ಮನ ನೋಡು, ಆಮೇಲೆ ಅಜ್ಜಿಯನ್ನ ನೋಡು. ಅಮ್ಮನ ಬಿಟ್ಟು ಅಜ್ಜಿ ನೋಡಲು ಹೊರಟಿದ್ದಾನೆ ಎಂದು ವಾಗ್ದಾಳಿ ನಡೆಸಿದರು.
ಹೆಚ್ಡಿಕೆ ಮಾತು
ಈ ಕಾರ್ಖಾನೆ ಉಳಿಸಲಿಕ್ಕೆ ಇನ್ನೂ ಜನರಿದ್ದಾರೆ. ಇದನ್ನು ಸರ್ಕಾರಕ್ಕೆ ತೋರಿಸಲು ನಾನು ಭದ್ರಾವತಿಗೆ ಬಂದಿದ್ದೇನೆ. ವಿಐಎಸ್ಎಲ್ ಸೇಲ್ ಗೆ ವಿಲೀನ ಮಾಡಿಸುವಾಗ ಒಪ್ಪಂದವಾಗಿತ್ತು. 650 ಕೋಟಿ ರೂ ನಲ್ಲಿ ಅಭಿವೃದ್ಧಿ ಪಡಿಸುವ ಒಪ್ಪಂದ ಆಗಿತ್ತು. ಆದರೆ ದುರಾದೃಷ್ಟವಶಾತ್ ದೇವೇಗೌಡರು ಪ್ರಧಾನಿ ಹುದ್ದೆ ಕಳೆದುಕೊಂಡರು ಎಂದರು.
ಯಾವ ಪುರುಷಾರ್ಥಕ್ಕೆ ವಿಮಾನ ನಿಲ್ದಾಣ ಕಟ್ಟಿದ್ದಾರೆ ಗೊತ್ತಿಲ್ಲ. ಯಡಿಯೂರಪ್ಪ ತನಗೆ ಮಂತ್ರಿ ಸ್ಥಾನ ಕೊಡುವಂತೆ ಬಂದಿದ್ರು. ಆದರೆ ಬಿಜೆಪಿಗೆ ರಾಜೀನಾಮೆ ಕೊಡದಂತೆ ನಾನೇ ಸಲಹೆ ಕೊಟ್ಟಿದ್ದೆ. ಅವತ್ತು ನಾನು ಬಿಜೆಪಿಗೆ ಬೆಂಬಲ ಕೊಡದಿದ್ರೆ, ನಾಲ್ಕು ಬಾರಿ ಸಿಎಂ ಯಾಕೆ ಆಗಿದ್ರಿ.ಇವತ್ತು ಯಾರಿಗೋ ಪರಭಾರೆ ಮಾಡಲು ಸಿಎಂ ಆಗಿದ್ದಾ ಎಂದು ಪ್ರಶ್ನೆ ಮಾಡಿದರು.
ಇದೇನಾ ಡಬಲ್ ಇಂಜಿನ್ ಸರ್ಕಾರ?
ನಿಮಗೆ ಆತ್ಮಸಾಕ್ಷಿ ಇದ್ರೆ ಮೋದಿ ಬಳಿ ಹೋಗಿ. ಕುಟುಂಬ ಬೀದಿ ಪಾಲು ಮಾಡಲು ಬಿಜೆಪಿ ಕಟ್ಟಿಲ್ಲ ಅಂತ ಹೇಳಿ. ಎಂಪಿಎಂ ಕಾರ್ಖಾನೆ ಹಣ ತಿಂದು ತೇಗಿ ಐಷಾರಾಮಿ ಹೊಟೇಲ್ ಕಟ್ಟಿದ್ದೀರಿ. ಇಲ್ಲಿ ಕಾರ್ಮಿಕರನ್ನು ಬೀದಿಗೆ ಹಾಕಲಾಗಿದೆ. ಇದು ಡಬಲ್ ಇಂಜಿನ್ ಸರ್ಕಾರನಾ?
ನಿಮಗೆ ಮೋದಿ ಹತ್ರ ನಾತನಾಡುವ ಧೈರ್ಯ ಇಲ್ಲದಿದ್ರೆ, ನಾಲ್ಕು ತಿಂಗಳ ಕಾಲ ಯಾರಿಗೂ ಪರಭಾರೆ ಮಾಡದಂತೆ ನೋಡಿಕೊಳ್ಳಿ. ನೀವು ಏನೇ ಕುತಂತ್ರ ಮಾಡಿದರೂ ರಾಜ್ಯದಲ್ಲಿ ನಮ್ಮ ಸರ್ಕಾರ ತರುತ್ತೇವೆ ಎಂದು ಹೆಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ