ಮಂಡ್ಯ: ಪ್ರಧಾನಿ ನರೇಂದ್ರ ಮೋದಿ (PM Modi) ನಾಳೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಬೆಳಗಾವಿ (Belagavi) ಉತ್ತರ, ದಕ್ಷಿಣ ಮತಕ್ಷೇತ್ರದಲ್ಲಿ ಬೃಹತ್ ರೋಡ್‌ಶೋ ನಡೆಸಲಿದ್ದಾರೆ. ಸುಮಾರು 8 ಕಿಲೋ ಮೀಟರ್ ರೋಡ್ ಶೋ ಮುಗಿಸಿ, ಶಿವಮೊಗ್ಗಕ್ಕೆ (Shivamogga) ತೆರಳಿ ಏರ್‌ಪೋರ್ಟ್ ಉದ್ಘಾಟನೆ ಮಾಡುತ್ತಾರೆ. ಇದರ ಬೆನ್ನಲ್ಲೇ ಮತ್ತೊಮ್ಮೆ ರಾಜ್ಯಕ್ಕೆ ಮೋದಿ ಆಗಮಿಸಲಿದ್ದು, ಮಾರ್ಚ್ 11ಕ್ಕೆ ಮೋದಿ ಮದ್ದೂರಿಗೆ ಆಗಮಿಸಲಿದ್ದಾರೆ. ಪ್ರಧಾನಿ ಮೋದಿ ಎಂಬ ಬ್ರಹ್ಮಾಸ್ತ್ರ ಪ್ರಯೋಗಿಸುವ ಮೂಲಕ ಜೆಡಿಎಸ್ (JDS) ಭದ್ರಕೋಟೆಯನ್ನು ಹೊಡೆಯುವ ಪ್ಲ್ಯಾನ್ ಬಿಜೆಪಿ ಮಾಡಿದೆ. ಇದರ ನಡುವೆ ರಾಜ್ಯದಲ್ಲಿ ಉತ್ತರ ಪ್ರದೇಶ (Uttar Pradesh) ಮಾಡೆಲ್ಅನ್ನು ಅಳವಡಿಸಲು ಮುಂದಾಗಿದೆ ಎನ್ನಲಾಗಿದೆ. ಆದರೆ ಈ ಕುರಿತಂತೆ ವ್ಯಂಗ್ಯವಾಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಅವರು, ಉತ್ತರ ಪ್ರದೇಶದ ಸಿಎಂ ಯೋಗಿಗೆ (Yogi Adityanath) ಲವ್ (Love) ಬಗ್ಗೆ ಏನು ಗೊತ್ತಿಲ್ಲ. ಎಲ್ಲ ಕಡೆ ಲವ್ ಮಾಡಿಯೇ ಮದುವೆ ಆಗುತ್ತಾರೆ. ಸಿಟಿ ರವಿ ಸಿಟ್ಟು ಬಂದು ಕಪಾಲಕ್ಕೆ ಹೊಡೆದು ಮದುವೆ ಆದ್ನಾ? ಅಪ್ಪ ಅಮ್ಮ ಎಲ್ಲರೂ ಒಪ್ಪಿ ಮದುವೆ ಆಗುತ್ತಾರೆ. ಅದರಲ್ಲಿ ಜಿಹಾದ್ ಏನಿದೆ ಎಂದು ಪ್ರಶ್ನಿಸಿದ್ದಾರೆ.
ಯೋಗಿಗೆ ಲವ್ ಎಂದರೆ ಏನ್ ಗೊತ್ತಾಗುತ್ತೆ?
ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಇಬ್ರಾಹಿಂ ಅವರು, ಬಿಜೆಪಿ ನಾಯಕರಿಗೆ ಲವ್ ಅಂದರೆ ಏನು ಅಂತ ಗೊತ್ತಿಲ್ಲ. ಯೋಗಿಗೆ ಲವ್ ಎಂದರೆ ಏನ್ ಗೊತ್ತಾಗುತ್ತೆ? ಲವ್ ಮಾಡೋದು ಕಾಲೇಜು ಹುಡುಗರು, ಆದರೆ ಇನ್ನು ನಿಮಗೆ ಆ ಚಟ ಹೋಗಿಲ್ಲ ಅಲ್ವಾ! ಇವರಿಗೆ ಎರಡನೇ ಮದುವೆಗೆ ಅವಕಾಶ ಇಲ್ಲ. ಆದರೆ ಸಾಬ್ರಿಗೆ ನಾಲ್ಕು ನಾಲ್ಕು ಮದುವೆ ಆಗಲು ಅವಕಾಶವಿದೆ. ಎರಡನೇ ಮದುವೆಗೆ ಇವರಿಗೆ ಅವಕಾಶ ಮಾಡಿಕೊಟ್ಟರೆ ಆ ಚಟ ತೀರಬಹುದು ಎನ್ನಿಸುತ್ತದೆ. ಇದೆಲ್ಲಾ ರಾಜಕಾರಣಿಗಳಿಗೆ ನಾಚಿಕೆ ತರಿಸುತ್ತದೆ ಎಂದಿದ್ದಾರೆ.
ನನ್ನ ಮಕ್ಕಳು ಕೇಳ್ತಿದ್ದಾರೆ ಸಿ.ಡಿ ಬಗ್ಗೆ ಏನ್ ಹೇಳೋದು?
ರಾಜ್ಯದ ಕ್ಯಾಬಿನೇಟ್ನಲ್ಲಿ 12 ಜನ ಸಿ.ಡಿ ಅವರನ್ನು ಕ್ಯಾಬಿನೆಟ್ನಲ್ಲಿ ಇಟ್ಟುಕೊಂಡಿದ್ದಾರೆ. ಆ ಕ್ಯಾಸೆಟ್ನಲ್ಲಿ ಏನಿದೆ ಅನ್ನೋದನ್ನು ಸಿ.ಟಿ ರವಿ ನೋಡಿದ್ದನಾ? ದಡಕಾ, ಬಡಕಾ ನೋಡಿದ್ದಾರೇನೋ? ಸಿಟಿ ರವಿ ಏನಿದೆ ಆ ಕ್ಯಾಸೆಟಲ್ಲಿ ಹೇಳು ಮಗಾ! ಏನಾದರೂ ಮಾನ ಮರ್ಯಾದೆ ಇದ್ಯಾ? ನನ್ನ ಮಕ್ಕಳು ಕೇಳ್ತಿದ್ದಾರೆ ಸಿ.ಡಿ ಬಗ್ಗೆ ಏನ್ ಹೇಳೋದು?
ಗೋಪಾಲಯ್ಯ ನಾನು ಸ್ಟೇ ತಗೊಂಡಿಲ್ಲ ಅಂತಿದ್ದಾರೆ. ಪಾಪ ಅವರ ತೂಕಕ್ಕೆ ಆ ರೀತಿ ಏನು ಆಗಲ್ಲ ಬಿಡಿ. ಇಂತವರನ್ನ ಇಟ್ಟುಕೊಂಡು ಸರ್ಕಾರ ನಡೆಸಿದರು ಮಳೆ ಬೆಳೆ ಆಗುತ್ತಾ? ಕುಮಾರಸ್ವಾಮಿ ಸಿಎಂ ಆಗ್ತಿದ್ದಂತೆ ವಿಧಾನಸೌಧ ತೊಳೆದು, ನವಗ್ರಹ ಇಟ್ಟು ಪೂಜೆ ಮಾಡುತ್ತೇನೆ. ಕಾವೇರಿ ನೀರಿನಿಂದ ವಿಧಾನ ಸೌಧ ಶುದ್ಧಿ ಮಾಡಿ ನಾವು ಅಲ್ಲಿಗೆ ಹೋಗೋದು ಎಂದರು.
ಶೃಂಗೇರಿ ಪುನರ್ ಸ್ಥಾಪನೆ ಮಾಡಿದ್ದು ಟಿಪ್ಪು
ಇದೇ ವೇಳೆ ಟಿಪ್ಪು ಪರ ಬ್ಯಾಟ್ ಬೀಸಿದ ಸಿ.ಎಂ ಇಬ್ರಾಹಿಂ ಅವರು, ಶೃಂಗೇರಿ ಮೇಲೆ ಪೇಶ್ವೆಗಳು ದಂಡೆತ್ತಿ ಬಂದು ಧ್ವಂಸ ಮಾಡಿದಾಗ ಟಿಪ್ಪು ಮತ್ತೆ ಅದನ್ನು ಪುನರ್ ಸ್ಥಾಪನೆ ಮಾಡಿದರು. ಈ ಮಾತು ನಾನು ಹೇಳಿಲ್ಲ ಪೇಜಾವರ ಶ್ರೀ ಹೇಳಿದರು.
ನಂಜುಡೇಶ್ವರನ ದೇವಾಸ್ಥಾನಕ್ಕೆ ಪಂಚ ವಜ್ರವನ್ನ ಕೊಟ್ಟಿದ್ದು ಟಿಪ್ಪು, ಈಗಲು ಮೊದಲು ಟಿಪ್ಪು ಕೊಟ್ಟಂತ ವಜ್ರಕ್ಕೆ ಆರತಿ ಆಗುತ್ತೆ ಆಮೇಲೆ ಸಲಾಂ ಆರತಿ ಆಗುತ್ತೆ. ಈ ಆರತಿಯನ್ನ ಮಾಡಿಸಿದ್ದು ಶ್ರೀ ಕೃಷ್ಣದೇವರಾಯ ಒಡೆಯರ್ ರವರು. ಕೃಷ್ಣದೇವರಾಯ ಒಡೆಯರ್ಗಿಂತ ದೊಡ್ಡವರ ಮುಂಡೆವಾ ನೀವು ಎಂದು ಪ್ರಶ್ನಿಸಿದರು.
ಟಿಪ್ಪು ಮೈಸೂರು ಆಳಿದರೂ ಕೂಡ ಮೈಸೂರು ನಗರ ಪ್ರವೇಶ ಮಾಡಿರಲಿಲ್ಲ. ಶ್ರೀರಂಗಪಟ್ಟಣ ಬಿಟ್ಟು ಆಚೆ ಹೋಗಲಿಲ್ಲ. ರಾಜಮನೆತನಕ್ಕೆ ತೊಂದರೆ ಕೊಡಲಿಲ್ಲ. ಟಿಪ್ಪು ಪರ ಮಾತನಾಡುವವರು ಇಲ್ಲಾ ಅಂತ ಹೇಳಿ ಬಾಯಿಗೆ ಬಂದಂಗೆ ಮಾತಾಡುತ್ತಿದ್ದಾರೆ.
ಮುಂದೆ ನಾವು ಅಧಿಕಾರಕ್ಕೆ ಬಂದರೆ ಈಗ ಯಾರು ಇಲ್ಲ ಸಲ್ಲದ ಹೇಳಿಕೆಯನ್ನ ರಾಷ್ಟ್ರ ಭಕ್ತರ ಮೇಲೆ ಕೊಡುತ್ತಿದ್ದಾರೋ ಅವರ ವಿರುದ್ಧ ಕಠಿಣ ಕ್ರಮವನ್ನ ಕೈಗೊಳ್ಳುತ್ತೇವೆ. ಕಾನೂನು ಜಾರಿಗೆ ತರುತ್ತೇವೆ ಹಿಜಾಬ್ ಅಂದ್ರೆ ಏನು? ಸೆರಗೂ ತಲೆ ಮೇಲೆ ಸೆರಗು ಹಾಕೋದೆ ಹಿಜಾಬ್. ಸಿ.ಟಿ ರವಿಯವರ ತಾಯಿ ತಲೆ ಮೇಲೆ ಸೆರಗು ಹಾಕಲ್ವಾ? ಇಂದಿರಾ ಗಾಂಧಿ ಸೆರಗು ಹಾಕಿಲಿಲ್ಲವಾ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: Amit Shah: ಕರುನಾಡಿಗೆ ಉತ್ತರ ಪ್ರದೇಶದ ಮಾಡೆಲ್? ಸುಳಿವು ಕೊಟ್ಟರು ಬಸವರಾಜ ಹೊರಟ್ಟಿ, ಸಚಿವ ಸುಧಾಕರ್!
ಲೋಕಲ್ ಬಿಜೆಪಿ ನಾಯಕರಿಗೆ ಗಂಡಸ್ತನ ಇಲ್ಲವೇ?
ಹಳೆ ಮೈಸೂರು ಭಾಗಕ್ಕೆ ವಿಜಯೇಂದ್ರ ಎಂಟ್ರಿ ಕುರಿತಂತೆ ಪ್ರತಿಕ್ರಿಯೆ ನೀಡಿದ ಇಬ್ರಾಹಿಂ, ಅಪ್ಪನ ಕೈಯಲ್ಲಿ ದುಡಿಸಿಕೊಂಡು ಈಗ ಮಗನ ಕೈಯಲ್ಲಿ ದುಡಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ವಿಜಯೇಂದ್ರ ರಾಜಕೀಯವಾಗಿ ಬೆಳೆಯುವುದು ಕಷ್ಟ. ಪಕ್ಷದಲ್ಲಿ ವಿಜಯೇಂದ್ರನನ್ನು ತುಳಿದುಬಿಡುತ್ತಾರೆ. ಹಳೆ ಮೈಸೂರು ಭಾಗಕ್ಕೆ ಅಮಿತ್ ಶಾ, ಮೋದಿ ಕರೆಸುತ್ತಿದ್ದಾರೆ. ಲೋಕಲ್ ಬಿಜೆಪಿ ನಾಯಕರಿಗೆ ಗಂಡಸ್ತನ ಇಲ್ಲವೇ? ಲೋಕಲ್ ನಾಯಕರಿಗೆ ಶಕ್ತಿ ಇಲ್ಲ. ಮೇಲ್ಗಡೆಯಿಂದ ಬಂದು ಇವರಿಗೆ ಇಂಜಕ್ಷನ್ ಕೊಡುತ್ತಿದ್ದಾರೆ ಅಷ್ಟೇ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ