ಹುಬ್ಬಳ್ಳಿ - ಕಾಂಗ್ರೆಸ್ ಪಕ್ಷವನ್ನು (Congress Party) ನಾನು ಬಿಡ್ತಿಲ್ಲ. ಕಾಂಗ್ರೆಸ್ಸೇ ನನ್ನನ್ನು ಬಿಟ್ಟಿದ್ದು, ಒಂದರ್ಥದಲ್ಲಿ ರೇಪ್ ಮಾಡಿಸಿಕೊಂಡವರ ಸ್ಥಿತಿ ನನ್ನದಾಗಿದೆ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ (C.M. Ibrahim) ಕಾಂಗ್ರೆಸ್ ನಾಯಕರು, ಹೈಕಮಾಂಡ್ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಬಿಟ್ಟು, ಜೆಡಿಎಸ್ (JDS) ಸೇರುವ ಹೊಸ್ತಿಲಲ್ಲಿರೋ ಇಬ್ರಾಹಿಂ, ತಮ್ಮ ಸೀನಿಯಾರಿಟಿಗೆ ಬೆಲೆ ಸಿಗದೇ ಇರೋ ಕಡೆ ನಾನಿರೋಲ್ಲ ಎಂದು ದೃಢವಾದ ನಿರ್ಧಾರ ಪ್ರಕಟಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಸಿ.ಎಂ.ಇಬ್ರಾಹಿಂ, ಕಾಂಗ್ರೆಸ್ ಪಕ್ಷವನ್ನು ನಾನಾಗಿಯೇ ಬಿಡ್ತಿಲ್ಲ, ಬದಲಿಗೆ ಕಾಂಗ್ರೆಸ್ ಪಕ್ಷವೇ ನನ್ನನ್ನು ಬಿಡ್ತಿದೆ. ರೇಪ್ ಮಾಡಿಸಿಕೊಂಡವನ ಸ್ಥಿತಿ ನನ್ನದಾಗಿದೆ ಎಂದು ಅಲವತ್ತುಕೊಂಡಿದ್ದಾರೆ. ವಿಧಾನ ಪರಿಷತ್ ವಿರೋಧ ಪಕ್ಷದ ಸ್ಥಾನ ಕೈ ತಪ್ಪಿರೋದಕ್ಕೆ ಕಿಡಿಕಾರಿದ್ದಾರೆ. ಕಾಂಗ್ರೆಸ್ ಗೆ ಕೇಡುಗಾಲ ಶುರವಾಗಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಕಾಂಗ್ರೆಸ್ ಪಕ್ಷವೇ ನನಗೆ ಬೇಡ ಅಂದಿದೆ. 21 ಜನ ವಿಧಾನ ಪರಿಷತ್ ಸದಸ್ಯರಲ್ಲಿ ನನಗೆ 19 ಜನ ಬೆಂಬಲ ಸೂಚಿಸಿದ್ರು. ಆದರೂ ನನ್ನನ್ನು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನನ್ನಾಗಿ ಮಾಡದಿದ್ದರೆ ಅರ್ಥವೇನು ಎಂದು ಪ್ರಶ್ನಿಸಿದರು. ನನ್ನ ಮನೆಗೆ ಆದಾಯ ತೆರಿಗೆ ಇಲಾಖೆಯವರು ಬಂದಿಲ್ಲ. ಇಡಿ ಅವರು ಬಂದು ದಾಳಿ ಮಾಡಲಿಲ್ಲ. ನೀನು ಖಾಲಿ ಕಂಪನಿ, ಹಾಗಾಗಿ ನಿನಕೈಲಿ ಭಾರ ಹೊರೋಕೆ ಆಗಲ್ಲ. ನಮಗೆ ಖಾಲಿ ಕೈ ಬೇಕಿಲ್ಲ, ಬೆಣ್ಣೆ ಹಚ್ಚೋರು ಬೇಕಂತ ನಮ್ಮನ್ನು ಪಕ್ಕಕ್ಕೆ ಸರಿಸಿದ್ದಾರೆ. ಸಂತೋಷವಾಗಿ ನಾನು ಒಪ್ಪಿಕೊಂಡಿದ್ದೇನೆ.
ಇದನ್ನೂ ಓದಿ: ಸಿಎಂ ಇಬ್ರಾಹಿಂ ಭೇಟಿಯಾದ HDK; ಜೆಡಿಎಸ್ ಸೇರ್ಪಡೆ ಖಚಿತ?
ಸಿದ್ಧರಾಮಯ್ಯ ಬಗ್ಗೆ ಸಿಟ್ಟಿಲ್ಲ.
ಸಿದ್ಧರಾಮಯ್ಯ ಅವರ ಬಗ್ಗೆ ಸಿಟ್ಟಾಗಲಿ, ಬೇಜಾರಾಗಲಿ ಇಲ್ಲ. ಅವರದನ್ನು ಅವರು ನೋಡಿಕೊಳ್ತಿದಾರೆ. ಅವರದ್ದೇ ನೋಡುದು ಕಷ್ಟವಾಗಿದೆ, ಅವರಿಗೆ ಶುಭವಾಗಲಿ. ಅವರ ಪಾಡು ಅವರಿಗೆ, ನನ್ನ ಪಾಡು ನನಗೆ. ಸಿಎಂ ಇಬ್ರಾಹಿಂ ಕಾಂಗ್ರೆಸ್ ಬಿಡಲ್ಲವೆಂದ ಸಿದ್ಧರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದು ಅವರ ವಿಶ್ವಾಸ, ಆದ್ರೆ ಸಿಎಂ ಇಬ್ರಾಹಿ ಜನರಿಂದ ಬಂದವನು. ಕಷ್ಟಪಟ್ಟು, ಕಲ್ಲು-ಮುಳ್ಳುಗಳ ಹಾದಿ ಸವೆಸಿದ್ದೇನೆ. ಮುಳ್ಳು ಚುಚ್ಚಿ ಬಂದ ರಕ್ತದಿಂದ ಹುಟ್ಟಿದವನು. ನನ್ನ ದಾರಿ ನಾನು ನೋಡಿಕೊಳ್ತೇನೆ.
ರೇಪ್ ಮಾಡಿದ ಸ್ಥಿತಿ ನನ್ನದಾಗಿದೆ
ದೇವೇಗೌಡರು ರಾಜ್ಯಸಭಾ ಸದಸ್ಯರಾಗಲು ಅಡ್ಡಗಾಲು ಹಾಕಿರಲಿಲ್ಲ, ಆಗಿನ ಪರಿಸ್ಥಿತಿ ಹಾಗಿತ್ತು. ನನಗೆ ರಾಜ್ಯಸಭಾ ಸ್ಥಾನ ದಕ್ಕದೇ ಇದ್ದರೂ ಜೆಡಿಎಸ್ ನಲ್ಲಿ ನನಗೆ ಗೌರವ ಇತ್ತು. ರಾತ್ರೋರಾತ್ರಿ ವಿರೋಧ ಪಕ್ಷದ ಸ್ಥಾನ ತಪ್ಪಿಸಿದ್ದಾರೆ. ರೇಪ್ ಮಾಡಿದಂತಹ ಸ್ಥಿತಿ ನನ್ನದಾಗಿದೆ. ದೆಹಲಿಯಿಂದ ಅಭಿನಂದನೆ ಸಲ್ಲಿಸಿ, ಬೇರೆ ಹೆಸರು ಕಳಿಸ್ತಾರೆ ಅಂದ್ರೆ ಅರ್ಥವೇನು.
ಕಾಂಗ್ರೆಸ್ ಗೆ ಕೇಡುಗಾಲ.
ಕಾಂಗ್ರೆಸ್ ಪಕ್ಷದಲ್ಲಿ ಪ್ರಜಾಪ್ರಭುತ್ವ ಇಲ್ಲ ಅಂದ್ರೆ ಏನು ಮಾಡಬೇಕು. ಇದೆಲ್ಲದರ ಹಿಂದೆ ಯಾರಿದ್ದಾರೆ ಅನ್ನೋದಕ್ಕಿಂತ ಕಾಂಗ್ರೆಸ್ ಗೆ ಕೆಟ್ಟಕಾಲ ಶುರುವಾಗಿದೆ ಅಂತ ಅರ್ಥ. ಬೇಡೋ ಜಂಗಮ ಇದ್ದಂತೆ ನಾನು. ಜೋಳಿಗೆ ಹಾಕಿಕೊಂಡು ಮುಂದೆ ಹೋಗ್ತೇನೆ. ನನಗಿಷ್ಟವಾದ ಕಡೆ ಇರ್ತೇನೆ ಎಂದು ಹೇಳೋ ಮೂಲಕ ಜೆಡಿಎಸ್ ಪಕ್ಷದ ಸೇರ್ಪಡೆಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ.
ಬಿಜೆಪಿ ಸೇರ್ಪಡೆಯನ್ನು ಅಲ್ಲಗಳೆದ ಇಬ್ರಾಹಿಂ.
ಇದನ್ನೂ ಓದಿ: ಸಿದ್ದರಾಮಯ್ಯ ಯಾರನ್ನ ಭೇಟಿ ಮಾಡ್ತಾರೋ ಅದನ್ನ ಕಟ್ಕೊಂಡು ನನಗೇನು? HD Kumaraswamy
ನನ್ನದು ಬಸವ ತತ್ವ. ಬಿಜೆಪಿಯದ್ದು ಆರ್.ಎಸ್.ಎಸ್. ನ ಕೇಶವಕೃಪಾ ತತ್ವ. ಹೀಗಾಗಿ ನನಗೂ ಬಿಜೆಪಿಗೂ ಹೊಂದಾಣಿಕೆಯಾಗಲ್ಲ. ಅವರೂ ಬಿಜೆಪಿಗೆ ಸೇರುವಂತೆ ಕರೀತಿದಾರೆ. ಆದರೆ ಸಿದ್ಧಾಂತದ ಭಿನ್ನಾಭಿಪ್ರಾಯದ ಕಾರಣಕ್ಕೆ ಆ ಕಡೆ ಹೋಗ್ತಿಲ್ಲ. ಜಾತ್ಯತೀತ ತತ್ವದ ಕಡೆಗೇ ನನ್ನ ನಡೆ ಎಂದು ಹುಬ್ಬಳ್ಳಿಯಲ್ಲಿ ಇಬ್ರಾಹಿಂ ತಿಳಿಸಿದ್ದಾರೆ.
ವರದಿ - ಶಿವರಾಮ ಅಸುಂಡಿ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ