ಬಿಜೆಪಿಯತ್ತ ಸಿ.ಎಂ. ಇಬ್ರಾಹಿಂ? ಕುತೂಹಲ ಕೆರಳಿಸಿದ ಹೇಳಿಕೆ

ಅಜ್ಜಂಪುರದಲ್ಲಿ ನೊಣಬ ಸಮಾಜದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಇಬ್ರಾಹಿಂ ಅವರು ಲಿಂಗಾಯತ ಧರ್ಮ ಮತ್ತು ಯಡಿಯೂರಪ್ಪ ಬಗ್ಗೆ ಗುಣಗಾನ ಮಾಡಿದ್ಧಾರೆ.

news18
Updated:January 16, 2020, 1:48 PM IST
ಬಿಜೆಪಿಯತ್ತ ಸಿ.ಎಂ. ಇಬ್ರಾಹಿಂ? ಕುತೂಹಲ ಕೆರಳಿಸಿದ ಹೇಳಿಕೆ
ಸಿ.ಎಂ. ಇಬ್ರಾಹಿಂ
  • News18
  • Last Updated: January 16, 2020, 1:48 PM IST
  • Share this:
ಚಿಕ್ಕಮಗಳೂರು(ಜ. 16): ಮೊನಚು ಮಾತುಗಳಿಗೆ ಹೆಸರಾಗಿರುವ ಕಾಂಗ್ರೆಸ್ ಮುಖಂಡ ಮತ್ತು ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಅವರು ಯಡಿಯೂರಪ್ಪ ಪರವಾಗಿ ಹೇಳಿಕೆಗಳನ್ನು ನೀಡಿ ಅಚ್ಚರಿ ಮೂಡಿಸಿದ್ಧಾರೆ. ಅಜ್ಜಂಪುರದ ಸೊಲ್ಲಾಪುರದಲ್ಲಿ ಇಂದು ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಅವರು, ತಾನು ಮತ್ತು ಯಡಿಯೂರಪ್ಪ ಯಾವತ್ತಾದರೂ ಒಮ್ಮೆ ಸೇರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ಧಾರೆ. ಈ ಮೂಲಕ ಅವರು ಬಿಜೆಪಿ ಸೇರುವ ಇಂಗಿತವನ್ನು ಪರೋಕ್ಷವಾಗಿ ವ್ಯಕ್ತಪಡಿಸಿರಬಹುದಾ ಎಂಬ ಅನುಮಾನ ಸುಳಿದಿದೆ.

“… ಯಡಿಯೂರಪ್ಪ ನನಗೆ ಆತ್ಮೀಯ ಸ್ನೇಹಿತರು. ರೈಲು ಒಂದೇ, ರೈಲ್ವೆ ಸ್ಟೇಷನ್ ಮಾತ್ರ ಬೇರೆ ಅಷ್ಟೇ. ನಾವು ಅದ್ಯಾವಾಗ ಸೇರುತ್ತೇವೋ(ರಾಜಕೀಯವಾಗಿ) ಗೊತ್ತಿಲ್ಲ ನಂಗೆ. ಒಂದಲ್ಲ ಒಂದು ದಿನಸ ನಾವು ಸೇರುತ್ತೇವೆ ಅನ್ನೋ ವಿಶ್ವಾಸ ಇದೆ” ಎಂದು ತಿಳಿಸಿದರು.

ನೊಣಬ ಸಮಾಜದ ವತಿಯಿಂದ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಬೇಕೆಂದು ಅವರು ಸಲಹೆ ನೀಡುವ ಸಂದರ್ಭದಲ್ಲಿ ಯಡಿಯೂರಪ್ಪ ಜೊತೆಗಿನ ತಮ್ಮ ಸಂಬಂಧದ ಬಗ್ಗೆ ಮಾತನಾಡುವಾಗ ಇಬ್ರಾಹಿಂ ಈ ಮೇಲಿನ ಮಾತುಗಳನ್ನಾಡಿದರು. ಹಾಗೆಯೇ ಮುಂದುವರಿದು ಅವರು, “…ನಾನು ಸಾಬರವನು(ಮುಸ್ಲಿಮ್). ಹೊಸ ಕಾರು ಮಾಡಕೆ ಬರಲ್ಲ. ಹಳೆ ಕಾರಿನ ಸಾಮಾನು ತಗೊಂಡೇ ಹೊಸ ಕಾರು ಮಾಡೋಕೆ ಬರೋದು” ಎಂದು ಹೇಳುವ ಮೂಲಕ ಅವರು ರಾಜಕೀಯ ಧ್ರುವೀಕರಣದ ಸಾಧ್ಯತೆಯನ್ನು ಪರೋಕ್ಷವಾಗಿ ತೋರ್ಪಡಿಸಿದರು.

 ಇದನ್ನೂ ಓದಿ: ಬಗೆಹರಿಯದ ಕೆಪಿಸಿಸಿ ಬಿಕ್ಕಟ್ಟು; ಇನ್ನೊಂದು ವರದಿ ತರಿಸಿಕೊಂಡ ಹೈಕಮಾಂಡ್; ಡಿಕೆಶಿ ಕೊನೆ ಪ್ರಯತ್ನ?

ಸಿದ್ದರಾಮಯ್ಯಗೆ ಲಿಂಗಾಯತ ವಿಭಜನೆ ಬೇಡ ಎಂದಿದ್ದೆ: ಇಬ್ರಾಹಿಂ

ಲಿಂಗಾಯತ ಧರ್ಮ ವಿಚಾರಕ್ಕೆ ಕೈಹಾಕಬೇಡಿ ಎಂದು ಆಗ ಸಿಎಂ ಆಗಿದ್ದ ಸಿದ್ದರಾಮಯ್ಯಗೆ ಇಬ್ರಾಹಿಂ ಸಲಹೆ ನೀಡಿದ್ದರಂತೆ. ಆ ವಿವಾರವನ್ನು ಇಬ್ರಾಹಿಂ ಇಂದು ತಮ್ಮದೇ ಹಾಸ್ಯಶೈಲಿಯಲ್ಲಿ ಮೆಲುಕು ಹಾಕಿದರು. “…ಎಲ್ಲಿ ಲಿಂಗಾಯತರು ಹೆಚ್ಚು ಇದ್ದಾರೋ ಅಲ್ಲಿ ಜಗಳ ಇಲ್ಲ. ಕಾರಣ, ಅದೊಂದು ಮ್ಯಾಗ್ನೆಟಿಕ್ ಪವರ್ ಇದ್ದಂಗೆ. ಬೇರೆ ಸಮಾಜದವರನ್ನು ಎಳೆಯುತ್ತಿರುತ್ತೆ ಅದು. ಅದಕ್ಕೆ ಈ ಜಗಳದಾಗ ಬೀಳಬ್ಯಾಡ ಅಂತ ಸಿದ್ದರಾಮಯ್ಯಗೆ ಹೇಳಿದೆ. ಇದು ಎರಡು ಅಯ್ನೋರ್ ಜಗಳ. ಸತ್ ಮ್ಯಾಗ ಅವ್ರ ಕಾಲು ಇಡಬೇಕು. ಜೀವಂತ ಇರಬೇಕಾದಾಗಾಲೇ ಕಾಲ್ ಇಟ್ಟುಬಿಡ್ತಾರೆ ನೋಡು ಅಂತ ಹೇಳಿದೆ. ಆದರೆ ಸಿದ್ದರಾಮಯ್ಯ ನನ್ ಮಾತು ಕೇಳಿಲ್ಲ” ಎಂದು ಕಾಂಗ್ರೆಸ್ ಮುಖಂಡ ಇಬ್ರಾಹಿಂ ತಿಳಿಸಿದರು.

“ನೀನು ಲಿಂಗಾಯತ ಪರ ಅಂತ ನಮ್ ಪಾರ್ಟಿಯವರೂ ಹೇಳುತ್ತಾ ಇದ್ರು. ನಾನು ಲಿಂಗಾಯತ ಪರ, ಬ್ರಾಹ್ಮಣ ವಿರುದ್ಧ ಅಂತ ಅಲ್ಲ. ನಾನು ಯಾಕೆ ಲಿಂಗಾಯತ ಪರ ಇದ್ದೇನೆ ಅಂದರೆ ಬೇರೆ ಸಮಾಜವನ್ನು ಕರೆದೊಯ್ಯುವ ಶಕ್ತಿ ಆ ಸಮಾಜಕ್ಕೆ ಇದೆ” ಎಂದು ಲಿಂಗಾಯತ ಧರ್ಮದ ಬಗ್ಗೆ ಸಿ.ಎಂ. ಇಬ್ರಾಹಿಂ ಗುಣಗಾನ ಮಾಡಿದರು.ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

Published by: Vijayasarthy SN
First published: January 16, 2020, 1:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading