ಮಧ್ಯರಾತ್ರಿವರೆಗೂ ನಡೆದ ಮುಖ್ಯಮಂತ್ರಿ ಜನತಾ ದರ್ಶನ; ಮೀಟರ್ ಬಡ್ಡಿಯ ಕರಾಳ ರೂಪ ಅನಾವರಣ!

news18
Updated:September 2, 2018, 9:40 AM IST
ಮಧ್ಯರಾತ್ರಿವರೆಗೂ ನಡೆದ ಮುಖ್ಯಮಂತ್ರಿ ಜನತಾ ದರ್ಶನ; ಮೀಟರ್ ಬಡ್ಡಿಯ ಕರಾಳ ರೂಪ ಅನಾವರಣ!
news18
Updated: September 2, 2018, 9:40 AM IST
ನ್ಯೂಸ್ 18 ಕನ್ನಡ

ಬೆಂಗಳೂರು (ಸೆಪ್ಟೆಂಬರ್ 2): ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಶನಿವಾರ ಆರಂಭಿಸಿದ ಅಧಿಕೃತ ಜನತಾದರ್ಶನ ಕಾರ್ಯಕ್ರಮ ಮಧ್ಯರಾತ್ರಿಗೂ ನಡೆದಿತ್ತು. ಕಷ್ಟ ಹೇಳಿಕೊಂಡು ಬಂದ ಜನರ ಶೇ.50ರಷ್ಟು ಸಮಸ್ಯೆಗಳನ್ನು ಮುಖ್ಯಮಂತ್ರಿಗಳು ಸ್ಥಳದಲ್ಲೇ ಬಗೆಹರಿಸಿದರೆ, ಉಳಿದ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸುಮಾರು 1600ಕ್ಕೂ ಹೆಚ್ಚು ಅರ್ಜಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಖುದ್ದು ಮಾತನಾಡಿ, ಪರಿಹಾರ ಒದಗಿಸಲು ನಿರ್ದೇಶನ ನೀಡಿದರು. ಬೆಳಗ್ಗೆ 10 ಗಂಟೆಗೆ ಆರಂಭವಾಗಬೇಕಿದ್ದ ಜನತಾದರ್ಶನ ಎರಡೂವರೆ ತಾಸು ತಡವಾಗಿ ಪ್ರಾರಂಭವಾಯಿತು. ಮುಖ್ಯಮಂತ್ರಿಗಳ ಮೊದಲ ಅಧಿಕೃತ ಜನತಾ ದರ್ಶನಕ್ಕೆ ಬೆಳಗ್ಗೆಯಿಂದಲೇ ಸಾವಿರಾರು ಮಂದಿ ಅರ್ಜಿ ಹಿಡಿದು ಸಿಎಂ ನಿವಾಸದ ಮುಂದೆ ಹಾಜರಾಗಿದ್ದರು. ಅರ್ಜಿಗಳ ನೋಂದಣಿ, ಅಹವಾಲು ಸಲ್ಲಿಸಲು ಬಂದವರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಕುಡಿಯುವ ನೀರು, ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು.

ಮುಖ್ಯಮಂತ್ರಿಗಳು ಮೊದಲಿಗೆ ವಿಕಲಚೇತನರ ಅಹವಾಲುಗಳನ್ನು ಅವರು ಕುಳಿತಿದ್ದ ಸ್ಥಳಕ್ಕೆ ತೆರಳಿ ಆಲಿಸಿದರು. ನಂತರ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ10ಕ್ಕೂ ಹೆಚ್ಚು ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಬಿಡಿಎ, ಬಿಬಿಎಂಪಿ, ಬಿಡಬ್ಲ್ಯೂಎಸ್ ಎಸ್ ಬಿ, ವಿಕಲಚೇತನರ ಕಲ್ಯಾಣ ಇಲಾಖೆ, ಅಂಬೇಡ್ಕರ್, ದೇವರಾಜ ಅರಸು, ವಾಲ್ಮೀಕಿ, ಅಲ್ಪಸಂಖ್ಯಾತ ರ ಅಭಿವೃದ್ಧಿ ನಿಗಮಗಳು, ರಾಜೀವ್ ಗಾಂಧಿ ವಸತಿ ನಿಗಮ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾಧಿಕಾರಿ ಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದು, ಮುಖ್ಯಮಂತ್ರಿಗಳ ನಿರ್ದೇಶನದಂತೆ ಸಾರ್ವಜನಿಕರ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಂಡರು.

ವೈದ್ಯಕೀಯ ಚಿಕಿತ್ಸೆಗೆ ನೆರವು ಕೋರಿ ಬಂದವರಿಗೆ ವಿವಿಧ ವೈದ್ಯಕೀಯ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಮುಖ್ಯಮಂತ್ರಿ ಗಳೇ ಸ್ವತಃ ಮಾತನಾಡಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು.
ಖಾಸಗಿ ಸಾಲದ ಮೂಲಕ ಶೋಷಣೆ, ವೈದ್ಯಕೀಯ ನೆರವು, ಆರ್​ಟಿಇ ಸಮಸ್ಯೆ, ಉದ್ಯೋಗ ಕ್ಕಾಗಿ ಮನವಿ, ವಿವಿಧ ನೆರವು ಕೋರಿ ಬಂದ ವಿಕಲಚೇತನರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಯಿತು.
Loading...

1.56 ಲಕ್ಷ ರೂ. ಸಾಲಕ್ಕೆ 26 ಲಕ್ಷ ರು. ಬಡ್ಡಿ!

ದಾವಣಗೆರೆ ಜಿಲ್ಲೆಯ ಯುವಕನೊಬ್ಬ ಸಾಲದ ಸುಳಿಯಲ್ಲಿ ಸಿಲುಕಿದ ಕಥೆಯಿದು. ಹೊನ್ನಾಳಿ ತಾಲ್ಲೂಕಿನ ರೇವಣಸಿದ್ದಪ್ಪನ ತಂದೆ 6 ವರ್ಷದ ಹಿಂದೆ ಖಾಸಗಿಯವರಿಂದ 1.56 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಅದರಲ್ಲಿ 76 ಸಾವಿರ ರೂಪಾಯಿ ಸಾಲ ತೀರಿಸಿದ್ದರು. ಆದರೆ ಸಾಲಗಾರರ ಕಿರುಕುಳದಿಂದ ನೊಂದು ಮೃತಪಟ್ಟರು. ಸಾಲ ತೀರಿಸುವಂತೆ ಕಿರುಕುಳ ನೀಡಿದ ಸಾಲಗಾರರ ಸಾಲ ಹಿಂತಿರುಗಿಸಿ, ಜಮೀನಿನ ಪತ್ರ ಕೇಳಲು ಹೋದಾಗ 26 ಲಕ್ಷ ರೂ. ಬಾಕಿ ಇದೆ ಎಂದು ಹೇಳಿ, ಜಮೀನಿನ ಕಾಗದಪತ್ರ ನೀಡಲು ನಿರಾಕರಿಸಿ ಆತನಿಗೆ ಜೀವನಾಧಾರವಾಗಿದ್ದ 1 ಎಕರೆ ಜಮೀನಿನ ಕಾಗದಪತ್ರಗಳನ್ನೂ ವಶಪಡಿಸಿಕೊಂಡಿದ್ದರು. ಪೊಲೀಸರಿಗೆ ದೂರು ನೀಡಿದರೂ ನ್ಯಾಯ ದೊರೆಯಲಿಲ್ಲವೆಂದು ಮುಖ್ಯಮಂತ್ರಿಗಳ ಬಳಿ ಬಂದಿದ್ದರು.

ಜನತಾದರ್ಶನದಲ್ಲಿ ರೇವಣಸಿದ್ದಪ್ಪನ ಅಹವಾಲು ಆಲಿಸಿದ ಮುಖ್ಯಮಂತ್ರಿಗಳು ಕೂಡಲೇ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾತನಾಡಿ ಜಮೀನಿನ ಕಾಗದಪತ್ರ ಮರಳಿ ಕೊಡಿಸುವಂತೆ ಹಾಗೂ ಯುವಕನಿಗೆ ಕಿರುಕುಳ ನೀಡಿದರೆ ಆ ಸಾಲಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕುಮಾರಸ್ವಾಮಿ ಸೂಚಿಸಿದರು.

ಮಹಿಳೆ ಮನೆ ವಾಪಸ್

ಬೆಂಗಳೂರಿನ ಗಿರಿನಗರದ ಅಣ್ಣಿಯಮ್ಮ ಅವರ ಪತಿ 1.26 ಲಕ್ಷ ರೂ.ಗಳ ಕೈ ಸಾಲ ಪಡೆದ್ದರು. ಈ ಪೈಕಿ 78 ಸಾವಿರ ರೂ.ಗಳನ್ನು ತೀರಿಸಿಯೂ ಇದ್ದರು. ಈ ಮಧ್ಯೆ ಅಣ್ಣಿಯಮ್ಮನ ಪತಿ ಹೃದಯಾಘಾತವಾಗಿ ಮೃತಪಟ್ಟರು. ಕೆಲಸದ ನಿಮಿತ್ತ ಊರಿಗೆ ತೆರಳಿದ್ದ ಸಂದರ್ಭದಲ್ಲಿ ಸಾಲ ಕೊಟ್ಟ ವ್ಯಕ್ತಿ ಆಕೆಯ ಮನೆಯ ಬೀಗ ಒಡೆದು ಮನೆಯನ್ನು ಸ್ವಾಧೀನಪಡಿಸಿಕೊಂಡು ಅಕ್ರಮವಾಗಿ ಮತ್ತೊಬ್ಬರಿಗೆ ಬಾಡಿಗೆ ಕೊಟ್ಟಿದ್ದರು. ಜನತಾದರ್ಶನದಲ್ಲಿ ಅಣ್ಣಿಯಮ್ಮ ನೆರವಿಗಾಗಿ ಮುಖ್ಯಮಂತ್ರಿ ಗಳ ಮೊರೆಹೋದರು.

ಕೂಡಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತರೊoದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಆಕೆಯೊoದಿಗೆ ಪೊಲೀಸ್ ಇನ್ಸ್​ಪೆಕ್ಟರ್ ಒಬ್ಬರನ್ನು ಕಳುಹಿಸಿ ಆಕೆಯ ಮನೆಯನ್ನು ಪುನ: ಅವರ ಸ್ವಾಧೀನಕ್ಕೆ ಕೊಡಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಮಧ್ಯಪ್ರದೇಶದ ಮಹಿಳೆಗೆ ಮೋಸ

ಮಧ್ಯಪ್ರದೇಶದ ಮಹಿಳೆಯೊಬ್ಬರು ಬೆಂಗಳೂರಿನ ಐಬಿಎಂನಲ್ಲಿ ಕೆಲಸ ಮಾಡುತ್ತಿದ್ದು, 2017ರಲ್ಲಿ 62 ಲಕ್ಷ ರೂ. ಹಣ ನೀಡಿ, ಬಿಲ್ಡರ್ ಬಳಿ ಫ್ಲಾಟ್​ ರಿಜಿಸ್ಟರ್ ಮಾಡಿಸಿದ್ದರು. ಆದರೆ, ಹಣ ಪಡೆದ ಬಿಲ್ಡರ್ ಫ್ಲಾಟ್​ ರಿಜಿಸ್ಟರ್​ ಮಾಡಿಸದೆ, ಹಣವನ್ನು ಹಿಂದಿರುಗಿಸದೆ ರೌಡಿಗಳನ್ನು ಬಿಟ್ಟು ಹೆದರಿಸುತ್ತಿದ್ದಾಗಿ ಆಕೆ ಮುಖ್ಯಮಂತ್ರಿಗಳ ಬಳಿ ದೂರು ನೀಡಿದರು. ತಕ್ಷಣ ಪೊಲೀಸ್​ ಅಧಿಕಾರಿಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು ಸೋಮವಾರ ಮಧ್ಯಾಹ್ನದೊಳಗೆ ಆ ಮಹಿಳೆಯ ಹಣವನ್ನು ವಾಪಸ್ ಕೊಡಿಸುವಂತೆ ಆದೇಶ ನೀಡಿದರು.

ಸಾಗುವಳಿ, ಪೋಡಿ ವಿಚಾರ ಮತ್ತೆ ಬಂದರೆ ಅಧಿಕಾರಿಗಳು ವಜಾ!

ಸಾಗುವಳಿ, ಪೋಡಿ ಸಮಸ್ಯೆ ಪರಿಹಾರಕ್ಕೆ ಆಯಾ ಜಿಲ್ಲಾಧಿಕಾರಿಗಳ ಸಭೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಇನ್ನು ಮುಂದೆ ಸಾಗುವಳಿ, ಪೋಡಿ ಸಮಸ್ಯೆ ಎಂದುಕೊಂಡು ಜನರು ಜನತಾ ದರ್ಶನಕ್ಕೆ ಬಂದರೆ, ಆಯಾ ತಾಲೂಕುಗಳ ತಹಸೀಲ್ದಾರ್ ಮತ್ತು ಎಸಿಗಳನ್ನು ವಜಾ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
First published:September 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ