ಮಠದ ವಿದ್ಯಾರ್ಥಿಗಳ ಅನ್ನ ಕಿತ್ಕೊಂಡ ಸರ್ಕಾರ ಅನ್ನೋ ಅಪವಾದ ಬರೋಲ್ವಾ?; ಶಶಿಕಲಾ ಜೊಲ್ಲೆ ವಿರುದ್ಧ ಸಿಎಂ ಗರಂ

ಮಠದ ವಿದ್ಯಾರ್ಥಿಗಳ ಅಕ್ಕಿ ಕಿತ್ತುಕೊಂಡು ಸರ್ಕಾರ ಅನ್ನೋ ಕೆಟ್ಟ ಹೆಸರು ಬರೋದಿಲ್ವಾ ? ಏನ್ರಿ ಜೊಲ್ಲೆಯವರೇ ಕೂಡಲೇ ಸರಿ ಮಾಡಿ. ಇಲ್ಲದೇ ಹೋದ್ರೆ ಸರಿ ಇರಲ್ಲ ಎಂದು ಸಚಿವೆ ಶಶಿಕಲಾ ಜೊಲ್ಲೆ ವಿರುದ್ದ ಕಿಡಿಕಾರಿದರು.

ಸಿಎಂ ಯಡಿಯೂರಪ್ಪ ಹಾಗೂ ಸಚಿವೆ ಶಶಿಕಲಾ ಜೊಲ್ಲೆ

ಸಿಎಂ ಯಡಿಯೂರಪ್ಪ ಹಾಗೂ ಸಚಿವೆ ಶಶಿಕಲಾ ಜೊಲ್ಲೆ

  • Share this:
ಬೆಂಗಳೂರು(ಫೆ.04) : ಅನ್ನದಾಸೋಹ ಯೋಜನೆ ವಿಚಾರವಾಗಿ ಇಂದು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಆರೋಪ, ಪ್ರತ್ಯಾರೋಪಗಳ ಸುರಿಮಳೆಯೇ ಆಗಿದೆ. ಬಡವರು, ವೃದ್ಧರು, ಮಠದ ಮಕ್ಕಳಿಗಾಗಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಅನ್ನದಾಸೋಹ ಯೋಜನೆಯನ್ನು ಬಿಜೆಪಿ ಸರ್ಕಾರ ರದ್ದುಗೊಳಿಸಿದೆ ಎಂದು ಕಾಂಗ್ರೆಸ್​ನ ಯು.ಟಿ.ಖಾದರ್ ಇಂದು ಆರೋಪ ಮಾಡಿದ್ದರು. ಈ ಮಧ್ಯೆ ಅನ್ನ ದಾಸೋಹ ಯೋಜನೆಯನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ನಿಲ್ಲಿಸಲಾಗಿದೆ ಎಂದು ಆಹಾರ ಸಚಿವೆ ಶಶಿಕಲಾ ಜೊಲ್ಲೆ ಪ್ರತ್ಯಾರೋಪ ಮಾಡಿದ್ದರು. ಏತನ್ಮಧ್ಯೆ ವಿಷಯ ದೊಡ್ಡದಾಗುತ್ತಿದ್ದಂತೆ ಸಿಎಂ ಯಡಿಯೂರಪ್ಪ ಅವರು ಶಶಿಕಲಾ ಜೊಲ್ಲೆ ಮೇಲೆ ಕೋಪಗೊಂಡ ಘಟನೆಯೂ ನಡೆದಿದೆ.

ಸಚಿವ ಸಂಪುಟ ಸಭೆ ಆರಂಭಕ್ಕೂ ಮುನ್ನ ಸಿಎಂ ಬಿಎಸ್​ವೈ ಅವರು, ಮಠದ ವಿದ್ಯಾರ್ಥಿಗಳ ಅಕ್ಕಿ ಕಿತ್ತುಕೊಂಡು ಸರ್ಕಾರ ಅನ್ನೋ ಕೆಟ್ಟ ಹೆಸರು ಬರೋದಿಲ್ವಾ ? ಏನ್ರಿ ಜೊಲ್ಲೆಯವರೇ ಕೂಡಲೇ ಸರಿ ಮಾಡಿ. ಇಲ್ಲದೇ ಹೋದ್ರೆ ಸರಿ ಇರಲ್ಲ ಎಂದು ಸಚಿವೆ ಶಶಿಕಲಾ ಜೊಲ್ಲೆ ವಿರುದ್ದ ಕಿಡಿಕಾರಿದರು.

ನಾಳೆಯಿಂದ ಆಹಾರ ಧಾನ್ಯ ಪೂರೈಕೆಗೆ ಸಿಎಂ ಆದೇಶ

ರಾಜ್ಯದ ಮಠಗಳಿಗೆ ನಾಳೆಯಿಂದಲೇ ಅಕ್ಕಿ, ಗೋಧಿ ಪೂರೈಕೆಗೆ  ಎಷ್ಟೇ ಆರ್ಥಿಕ ಭಾರ ಆದರೂ ನಾಳೆಯಿಂದಲೇ ಅಕ್ಕಿ ಗೋಧಿ ಪೂರೈಕೆಗೆ ಕ್ರಮ ಕೈಗೊಳ್ಳುತ್ತೇವೆ. ಇವತ್ತು ಇದರ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗಿದೆ. ಈ ಬಗ್ಗೆ ಏನೇ ಅಡೆತಡೆ ಇದ್ದರೂ ಅವುಗಳನ್ನೂ ಬಗೆಹರಿಸಲಾಗುವುದು ಎಂದು ಸಿಎಂ ಹೇಳಿದರು.

ಸಿದ್ದಂಗಾ ಮಠಕ್ಕೆ ಅಕ್ಕಿ ಹಾಗೂ ಗೋಧಿಯನ್ನ ರಾಜ್ಯ ಸರ್ಕಾರ ಸ್ಥಗಿತ ಮಾಡಿದೆ ಅಂತ ಮಾಜಿ ಸಚಿವ ಯು.ಟಿ ಖಾದರ್ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಜೊಲ್ಲೆ ಅವರು, ಸಿದ್ದ ಗಂಗಾಮಠಕ್ಕೆ  ಅಕ್ಕಿ ಹಾಗೂ ಗೋಧಿ ಪೂರೈಕೆಯನ್ನು ನಾವು ಸ್ಥಗಿತ ಮಾಡಿಲ್ಲ, ಈ ಹಿಂದೆ ಇದ್ದ ಸರ್ಕಾರವೇ ಸ್ಥಗಿತಗೊಳಿಸಿತ್ತು. ಕೇಂದ್ರ ಸರ್ಕಾರದ ಆದೇಶದ ಅನ್ವಯ ಖಾಸಗಿ ಸಂಸ್ಥೆಗಳಿಗೆ ಆಹಾರಧಾನ್ಯ ಪೂರೈಕೆ ಕಡಿತವಾಗಿತ್ತು ಎಂದು ಸ್ಪಷ್ಟನೆ ನೀಡಿದ್ದರು.

ಮೂರು ತಿಂಗಳ ಕೆಳಗೆ ಸಿದ್ದಗಂಗಾ ಶ್ರೀಗಳು ಹಾಗು ಮುರುಘಾ ಶ್ರೀಗಳು ಈ ವಿಚಾರವನ್ನು ನಮ್ಮ ಗಮನಕ್ಕೆ ತಂದರು. ತಕ್ಷಣವೇ ಇದರ ಬಗ್ಗೆ ನಾವು ಗಮನಹರಿಸಿದೆವು. ರಾಜ್ಯ ಸರ್ಕಾರದಿಂದಲೇ ಆಹಾರಧಾನ್ಯ ಪೂರೈಕೆ ಮಾಡಲು ಸಿದ್ದರಾಗಿದ್ದೇವೆ. ಕಡತವನ್ನ ಈಗಾಗಲೇ ಹಣಕಾಸು ಇಲಾಖೆಗೆ ಕಳುಹಿಸಲಾಗಿದ್ದು, ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯುತ್ತೇವೆ ಅಂತ ಸಚಿವೆ ಜೊಲ್ಲೆ ತಿಳಿಸಿದರು.

ಬಿಜೆಪಿ ಸರ್ಕಾರ ಬಂದ ಮೇಲೆ  ಅಕ್ಕಿ, ಗೋಧಿ ನಿಲ್ಲಿಸಲ್ಲಿಲ್ಲ ಹಿಂದಿನ ಸರ್ಕಾರ ಇದ್ದಾಗಲೇ ಅಕ್ಕಿ, ಗೋಧಿ ಪೂರೈಕೆ ನಿಲ್ಲಿಸಲಾಗಿತ್ತು. ಈ 464 ಸಂಸ್ಥೆಗಳ ಪೈಕಿ 281 ಸಂಸ್ಥೆಗಳು ಖಾಸಗಿಯವು.  12.50 ಲಕ್ಷ ರೂಪಾಯಿ ವಾರ್ಷಿಕವಾಗಿ ಅಕ್ಕಿ, ಗೋಧಿ ಪೂರೈಕೆಗೆ ವೆಚ್ಚವಾಗಲಿದೆ. ವಿವಿಧ ಮಠಗಳು, ಮತ್ತು ಸಂಘ ಸಂಸ್ಥೆಗಳು ಮನವಿ ಮೇರೆಗೆ ಅಕ್ಕಿ ಗೋದಿ ಕೊಡಲು ಮುಂದಾಗುತ್ತೇವೆ. ನಾನು ಸಚಿವೆ ಆಗುವುದಕ್ಕಿಂತ ಮುನ್ನವೇ ಆಹಾರ ಧಾನ್ಯ ಪೂರೈಕೆ ನಿಂತಿತ್ತು. ಸಿಎಂ ಜೊತೆ ಚರ್ಚೆ ನಡೆಸಿ ಆಹಾರ ಧಾನ್ಯಗಳ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದನ್ನೂ ಓದಿ : ಅನ್ನದಾಸೋಹ ಯೋಜನೆ ರದ್ದು, ಸಿದ್ಧಗಂಗಾ ಮಠ ಸೇರಿ ನೂರಾರು ಸಂಸ್ಥೆಗೆ ನೀಡಲಾಗುತ್ತಿದ್ದ ಅಕ್ಕಿ, ಗೋಧಿಗೂ ಕತ್ತರಿ; ಯು.ಟಿ.ಖಾದರ್

ರಾಜಕೀಯ ಪ್ರೇರಿತ ಆರೋಪ ಸರಿಯಲ್ಲ; ಖಾದರ್

ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟೀಕರಣಕ್ಕೆ ಮಾಜಿ ಸಚಿವ ಯುಟಿ ಖಾದರ್​ ಪ್ರತಿಕ್ರಿಯೆ ನೀಡಿದ್ದು, ಸಚಿವರ ಬಗ್ಗೆ ನನಗೆ ಗೌರವವಿದೆ. ಆದರೆ ನಮ್ಮ ಸರ್ಕಾರದ ಅವದಿಯಲ್ಲಿ ಇದನ್ನ ನಿಲ್ಲಿಸಿದ್ದೇವೆ ಎಂದು ರಾಜಕೀಯ ಪ್ರೇರಿತ ಆರೋಪ ಮಾಡುವುದು ಸರಿಯಲ್ಲ. ಸ್ವತಹ ಸ್ವಾಮೀಜಿಗಳೆ ಹೇಳಿದ್ದಾರಲ್ಲ. ಸ್ವಾಮೀಜಿಯವರು ಸುಮ್ಮನೆ ಹೇಳುತ್ತಾರಾ? ಇದಕ್ಕೆ ಕೇಂದ್ರದ ಹಣದ ಅವಶ್ಯಕತೆ ಇಲ್ಲಾ ಅಂದ್ರೆ ರಾಜ್ಯವೇ ಕೊಡಬಹುದು. ಆಹಾರ ಧಾನ್ಯ ನೀಡುವುದನ್ನ ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ ಅಂತ ಸುಳ್ಳು ಆರೋಪ ಮಾಡುವುದಲ್ಲ. ಮುಜುಗರ ತಪ್ಪಿಸಿಕೊಳ್ಳೋಕೆ ಸಚಿವೆ ಶಶಿಕಲಾ ಜೊಲ್ಲೆಯವರು ಆಧಾರ ರಹಿತವಾದ ಆರೋಪ ಮಾಡಿದ್ದಾರೆ ಎಂದು ತಿಳಿದರು.

464 ಸಂಸ್ಥೆಗಳು, 41 ಸಾವಿರ ಫಲಾನುಭವಿಗಳಿಗೆ ಅನ್ನ ದಾಸೋಹದಡಿ ಕೊಡುವ ಅಕ್ಕಿ,  ಗೋಧಿ ನಿಲ್ಲಿಸಲಾಗಿದೆ. ಸಿದ್ದಗಂಗಾ ಮಠದಲ್ಲಿ ಏಳು ಸಾವಿರದ ಮುನ್ನೂರ ಐವತ್ತೊಂಬತ್ತು ವಿದ್ಯಾರ್ಥಿಗಳಿದ್ದಾರೆ. 73, 590 ಕೆ.ಜಿ ಅಕ್ಕಿ, 36,794 ಕೆ.ಜಿ. ಗೋಧಿ ಕೊಡಲಾಗುತ್ತಿತ್ತು. ಒಬ್ಬ ವಿದ್ಯಾರ್ಥಿಗೆ ತಲಾ ಹತ್ತು ಕೆಜಿ ಅಕ್ಕಿ ಮತ್ತು ಐದು ಕೆಜಿ ಗೋಧಿಯನ್ನು ಅನ್ನ ದಾಸೋಹದ ಅಡಿ ಈ ಹಿಂದಿನ ಸರ್ಕಾರ ನೀಡುತ್ತಿತ್ತು. ಇದೀಗ ಬಿಜೆಪಿ ಸರ್ಕಾರ ಕಳೆದ ಎರಡು ತಿಂಗಳ ಹಿಂದೆ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯಿಂದ ಈ ಯೋಜನೆಯನ್ನು ರದ್ದು ಮಾಡಿ ಆದೇಶ ಹೊರಡಿಸಿದೆ ಎಂದು ಮಾಜಿ ಸಚಿವ ಯು.ಟಿ ಖಾದರ್ ಮತ್ತು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ದಾಖಲೆ ಸಮೇತ ಗಂಭೀರ ಆರೋಪ ಮಾಡಿದ್ದರು.
First published: