ಬಿಜೆಪಿ ಹೈ ಕಮಾಂಡ್​ ಅಂಗಳ ತಲುಪಿದ ಫೋನ್​ ಟ್ಯಾಪಿಂಗ್​; ಎಚ್​ಡಿಕೆ ವಿರುದ್ಧ ಸಿಬಿಐ ತನಿಖೆ?

ಫೋನ್​ ಟ್ಯಾಪಿಂಗ್​ ವಿಚಾರದಲ್ಲಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ತನಿಖೆಗೆ ಆಗ್ರಹಿಸಿದ್ದಾರೆ. ಈ ಹಿನ್ನೆಲೆ ಬಿಎಸ್​ ಯಡಿಯೂರಪ್ಪ ಕೂಡ ಕುಮಾರಸ್ವಾಮಿ ಮೇಲೆ ತನಿಖೆ ನಡೆಸುವ ಮೂಲಕ ಅವರನ್ನು ಕಟ್ಟಿಹಾಕುವ ಚಿಂತನೆ ನಡೆಸಿದ್ದಾರೆ.

Seema.R | news18-kannada
Updated:August 16, 2019, 11:36 AM IST
ಬಿಜೆಪಿ ಹೈ ಕಮಾಂಡ್​ ಅಂಗಳ ತಲುಪಿದ ಫೋನ್​ ಟ್ಯಾಪಿಂಗ್​; ಎಚ್​ಡಿಕೆ ವಿರುದ್ಧ ಸಿಬಿಐ ತನಿಖೆ?
ಸಿಎಂ ಬಿಎಸ್​ ಯಡಿಯೂರಪ್ಪ ಮತ್ತು ಎಚ್​ಡಿ ಕುಮಾರಸ್ವಾಮಿ
  • Share this:
ಬೆಂಗಳೂರು (ಆ.16): ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಫೋನ್​ ಟ್ಯಾಪಿಂಗ್​ ವಿಚಾರ ಇದೀಗ ಬಿಜೆಪಿ ಹೈ ಕಮಾಂಡ್​ ಅಂಗಳ ತಲುಪಿದೆ. ಕಾಂಗ್ರೆಸ್​ ನಾಯಕರ ಫೋನ್​ಗಳು​ ಟ್ಯಾಪ್​ ಆಗಿರುವುದಕ್ಕೆ ಈಗಾಗಲೇ ಮೈತ್ರಿ ನಾಯಕರು ಗರಂ ಆಗಿದ್ದು, ತನಿಖೆಗೆ ಆಗ್ರಹಿಸಿದ್ದಾರೆ. ಮೈತ್ರಿ ಸರ್ಕಾರದ ವಿರುದ್ಧ ಯಾರ್ಯಾರು ಪಿತೂರಿ ನಡೆಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಸಿಎಂ ಆಗಿದ್ದ ಕುಮಾರಸ್ವಾಮಿ ಅವರೇ ಫೋನ್​ಗಳನ್ನು ಟ್ಯಾಪಿಂಗ್​ ಮಾಡಿಸಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆ ಮಾಜಿ ಸಿಎಂ ವಿರುದ್ಧ ಸಿಬಿಐ ತನಿಖೆ ನಡೆಸಲು ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಮೈತ್ರಿ ನಾಯಕರ ವಿರುದ್ಧ ಫೋನ್​ ಟ್ಯಾಪಿಂಗ್​ ನಡೆಸಿದ ಕುಮಾರಸ್ವಾಮಿ ವಿರುದ್ಧ ಈಗಾಗಲೇ ಕಾಂಗ್ರೆಸ್​ ನಾಯಕರು ಗರಂ ಆಗಿದ್ದಾರೆ. ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಈ ಕುರಿತು ತನಿಖೆಗೆ ಆಗ್ರಹಿಸಿದ್ದಾರೆ. ಈ ಹಿನ್ನೆಲೆ ಬಿಎಸ್​ ಯಡಿಯೂರಪ್ಪ ಕೂಡ ಕುಮಾರಸ್ವಾಮಿ ಮೇಲೆ ಸಿಬಿಐ ತನಿಖೆ ನಡೆಸುವ ಮೂಲಕ ಅವರನ್ನು ಕಟ್ಟಿಹಾಕುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಆಪರೇಷನ್​ ಕಮಲ ಸಮಯದಲ್ಲಿ ಕಾಂಗ್ರೆಸ್​ ಸೇರಿದಂತೆ ಬಿಜೆಪಿ ಶಾಸಕರ ದೂರವಾಣಿ ಸಂಭಾಷಣೆಯನ್ನು ಕದ್ದು ಆಲಿಸಲಾಗಿದೆ. ಇಲ್ಲಿ ಸಾಕಷ್ಟು ಖಾಸಗಿ ವಿಚಾರಗಳನ್ನು ಇದ್ದು,  ಇದು ಹೊರಬಂದರೆ ಬಿಜೆಪಿ ಸರ್ಕಾರಕ್ಕೆ ಮುಳುವಾಗಲಿದೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಬಿಜೆಪಿ ಸರ್ಕಾರಕ್ಕೆ ಕಂಟಕವಾಗಲಿದ್ದಾರೆ. ಹೀಗಾಗಿ ಈ ದೂರವಾಣಿ ಸಂಭಾಷಣೆಗಳು ಹೊರಬರದಂತೆ ಕಾಪಾಡಬೇಕು ಎಂದರೆ ಕುಮಾರಸ್ವಾಮಿ ಮೇಲೆ ತನಿಖೆ ಅನಿವಾರ್ಯವಾಗಿದೆ. ಕುಮಾರಸ್ವಾಮಿ ವಿರುದ್ಧ ಸಿಬಿಐ ತನಿಖೆ ನಡೆಸುವುದು ಸೂಕ್ತ ಎಂಬ ಮಾತು ಬಿಜೆಪಿ ನಾಯಕರ ಬಾಯಲ್ಲಿ ಕೇಳಿ ಬಂದಿದೆ.

ಈಗಾಗಲೇ ಪೊಲೀಸ್​ ಅಧಿಕಾರಿಗಳ ದೂರವಾಣಿ ಸಂಭಾಷಣೆ ಹೊರಬರುವ ಮೂಲಕ ಮೈತ್ರಿ ಸರ್ಕಾರದಲ್ಲಿ ಫೋನ್​ ಕದ್ಧಾಲಿಕೆಯಾಗಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆ ಅವರ ವಿರುದ್ಧ ತನಿಖೆ ನಡೆಸುವ ಕುರಿತು ಸಿಎಂ ಬಿಎಸ್​ ಯಡಿಯೂರಪ್ಪ, ಮೋದಿ ಮತ್ತು ಶಾ ಬಳಿ ಚರ್ಚೆ ನಡೆಸಲು ಸಜ್ಜಾಗಿದ್ದಾರೆ.

ಇದನ್ನು ಓದಿ: ಗ್ರಾಮಗಳಿಗೆ ಅಲ್ಲ, ಬಡಾವಣೆಗೆ 10 ಕೋಟಿ ನೀಡಿದ ದಾನಿಗಳ ಹೆಸರಿಡಲು ಚಿಂತನೆ; ಸಿಎಂ ಬಿಎಸ್​ ಯಡಿಯೂರಪ್ಪ

ಬಿಜೆಪಿ ಸರ್ಕಾರದಲ್ಲಿಯೂ ಎಚ್​ಡಿಕೆ ಆಯಕಟ್ಟಿನ ಜಾಗದಿಂದ ಮಾಹಿತಿ ಪಡೆಯುವ ಸಾಧ್ಯತೆ ಇದ್ದು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ. ಬಿಜೆಪಿ ಸರ್ಕಾರ ಸುಭದ್ರವಾಗಿರಬೇಕು ಎಂದರೆ ಕುಮಾರಸ್ವಾಮಿ ಅವರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವುದಾ ಬೇಡಾವಾ ಎಂಬ ಕುರಿತು ಬಿಎಸ್​ ಯಡಿಯೂರಪ್ಪ ಚರ್ಚಿಸುವ ಸಾಧ್ಯತೆ ಇದೆ. ಬಳಿಕ ಹೈ ಕಮಾಂಡ್​ ಆದೇಶದಂತೆ ಈ ಪ್ರಕರಣದ ಕುರಿತು ನಿಲುವು ತಾಳಲಿದ್ದಾರೆ ಎನ್ನಲಾಗಿದೆ.

(ವರದಿ: ಧರಣೀಶ್​ ಬೂಕನಕೆರೆ)
Loading...

First published:August 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...