ಆರ್ಥಿಕ ಹಿಂಜರಿತದ ನಡುವೆಯೂ ನಮ್ಮ ರಾಜ್ಯ ಸುಸ್ಥಿತಿಯಲ್ಲಿದೆ; ಇಲಾಖಾವಾರು ತೆರಿಗೆ ಸಂಗ್ರಹ ಮಾಹಿತಿ ಹಂಚಿಕೊಂಡ ಸಿಎಂ

ಮರಳು ಮಾಫಿಯಾ ವಿಚಾರವಾಗಿ ಮಾತನಾಡಿದ ಸಿಎಂ ಯಡಿಯೂರಪ್ಪ, ಮರಳು ಮಾಫಿಯಾದವರ ವಿರುದ್ಧ ಯಾವುದೇ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಲಾಗುವುದು.  ಜನಸಾಮಾನ್ಯರಿಗೆ ಸುಲಭವಾಗಿ ಮರಳು ಸಿಗುವಂತೆ ಮಾಡುತ್ತೇವೆ. ಜನರಿಗೆ ಮರಳು ಸುಲಭವಾಗಿ ಸಿಗಬೇಕು. ಮಲೇಷಿಯಾ ಮರಳು ತರಿಸಿಕೊಳ್ಳುವ ಅಗತ್ಯವಿಲ್ಲ ಎಂದು ಸಿಎಂ ತಿಳಿಸಿದರು.

HR Ramesh | news18-kannada
Updated:September 11, 2019, 7:18 PM IST
ಆರ್ಥಿಕ ಹಿಂಜರಿತದ ನಡುವೆಯೂ ನಮ್ಮ ರಾಜ್ಯ ಸುಸ್ಥಿತಿಯಲ್ಲಿದೆ; ಇಲಾಖಾವಾರು ತೆರಿಗೆ ಸಂಗ್ರಹ ಮಾಹಿತಿ ಹಂಚಿಕೊಂಡ ಸಿಎಂ
ಸಿಎಂ ಬಿ.ಎಸ್.ಯಡಿಯೂರಪ್ಪ
  • Share this:
ಬೆಂಗಳೂರು: ಜಿಎಸ್‍ಟಿ ತೆರಿಗೆ ಸಂಗ್ರಹದಲ್ಲಿ ಶೇ. 14.3 ರಷ್ಟು ಬೆಳವಣಿಗೆ ಆಗಿದೆ. ಜಿಎಸ್‍ಟಿ ಜಾರಿಯಾದಾಗ 4.51 ಲಕ್ಷ ಮಂದಿ/ಕಂಪೆನಿಗಳು ಜಿಎಸ್‍ಟಿಯಲ್ಲಿ ನೋಂದಾಯಿಸಿಕೊಂಡಿದ್ದರು. ಈಗ ನೋಂದಣಿ ಮಾಡಿಕೊಂಡವರ ಸಂಖ್ಯೆ 8,16,573 ದಾಟಿದೆ. ಜಿಎಸ್‍ಟಿಯಲ್ಲಿ ನೋಂದಾಯಿಸಿಕೊಂಡವರ ಸಂಖ್ಯೆ ಸುಮಾರು ಶೇ. 100 ರಷ್ಟು ಹೆಚ್ಚಳವಾಗಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿಎಸ್​ವೈ, ಆರ್ಥಿಕ ಹಿಂಜರಿತದಿಂದ ಸ್ವಲ್ಪ ಹಿನ್ನಡೆಯಾಗಿದ್ದರೂ, ಇತರ ರಾಜ್ಯಗಳಿಗೆ ಹೋಲಿಸಿದರೆ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ. ತೆರಿಗೆ ಸಂಗ್ರಹವನ್ನು ಕಟ್ಟುನಿಟ್ಟಾಗಿ ನಿರ್ವಹಿಸಲಾಗುತ್ತಿದೆ.  ವ್ಯಾಪಾರದ ಸ್ಥಳಕ್ಕೆ ಭೇಟಿ ನೀಡಿ ತೆರಿಗೆ ಸಂಗ್ರಹ ಮಾಡಲಾಗುತ್ತಿದೆ. ಜಿಎಸ್‍ಟಿ ಪಾವತಿಯಲ್ಲಿ ನಿರ್ಲಕ್ಷ್ಯ ತೋರಿದ 64 ಸಾವಿರಕ್ಕೂ ಹೆಚ್ಚು ಪರವಾನಗಿಗಳನ್ನು ರದ್ದುಪಡಿಸಲಾಗಿದೆ.  ನಿಯಮಿತ ತಪಾಸಣೆ, ಫಾಲೋ ಅಪ್‍ಗಳ ಜೊತೆಗೆ ಇ-ವೇ ಬಿಲ್ಲುಗಳ ತಪಾಸಣೆಯನ್ನೂ ಕಟ್ಟುನಿಟ್ಟಾಗಿ ನಡೆಸುವ ಮೂಲಕ, ತೆರಿಗೆ ಸಂಗ್ರಹದಲ್ಲಿ ವ್ಯತ್ಯಯವಾಗದಂತೆ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮಾಹಿತಿ ನೀಡಿದರು.

ಈ ಸಾಲಿನಲ್ಲಿ 44 ಲಕ್ಷ ಇ-ವೇ ಬಿಲ್‍ಗಳನ್ನು ತಪಾಸಣೆ ಮಾಡಲಾಗಿದೆ. ಜಿಎಸ್‍ಟಿ ವಂಚನೆ ಪ್ರಕರಣಗಳನ್ನು ಪತ್ತೆ ಹಚ್ಚಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಜಾರಿ ಮತ್ತು ಜಾಗೃತಿ ವಿಭಾಗಗಳನ್ನು ಬಲಪಡಿಸಲು ಸೂಚಿಸಲಾಗಿದೆ. ತೆರಿಗೆ ಸೋರಿಕೆಯಾಗದಂತೆ ಕ್ರಮ ವಹಿಸಲು ಸೂಚಿಸಲಾಗಿದೆ. ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಒಟ್ಟಾರೆ ಬೆಳವಣಿಗೆ ಶೇ. 14.16 ರಷ್ಟಿದೆ. ಇತರ ರಾಜ್ಯಗಳಿಗಿಂತ ಉತ್ತಮ ಬೆಳವಣಿಗೆ ಆಗಿದೆ. ಆದರೆ ಇನ್ನೂ ಉತ್ತಮ ಸ್ಥಿತಿಗೆ ತರಬೇಕು ಎಂದು ಸೂಚನೆ ಕೊಟ್ಟಿದ್ದೇನೆ. ಬೆಳವಣಿಗೆ ದರ ನಿಶ್ಚಿತಗೊಳಿಸಲು ಎಲ್ಲ ಪ್ರಯತ್ನ ಮಾಡುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದ್ದೇನೆ. ಜಿಎಸ್‍ಟಿ ಸಂರಕ್ಷಿತ ತೆರಿಗೆ ಮತ್ತು ವಾಸ್ತವ ತೆರಿಗೆ ಸಂಗ್ರಹದ ನಡುವಿನ ಅಂತರ ಕಡಿಮೆಗೊಳಿಸಲು ಶ್ರಮಿಸಬೇಕು ಎಂದು ಸಹ ತಿಳಿಸಿದ್ದೇನೆ. ವಿಭಾಗೀಯ ಜಂಟಿ ಆಯುಕ್ತರು, ರಾಜಸ್ವ ಸಂಗ್ರಹ ಕೊರತೆ ಆಗದಂತೆ ಎಚ್ಚರ ವಹಿಸಿ ಎಂದು ಸೂಚನೆ ನೀಡಿದ್ದೇನೆ. ಮೇಲ್ಮನವಿಗಳನ್ನು ಶೀಘ್ರ ವಿಲೇವಾರಿ ಮಾಡುವಂತೆಯೂ ಸೂಚಿಸಿದ್ದೇನೆ ಎಂದರು.

ಅಬಕಾರಿ ಇಲಾಖೆಯಲ್ಲಿ 2019-2020ನೇ ಸಾಲಿಗೆ 20,950 ರೂ. ತೆರಿಗೆ ಸಂಗ್ರಹದ ಗುರಿ ನಿಗದಿಪಡಿಸಲಾಗಿದೆ. ಏಪ್ರಿಲ್ 1 ರಿಂದ ಆಗಸ್ಟ್ 30 ರವರೆಗೆ 9145.36 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಶೇ. 43.65 ರಷ್ಟು ಗುರಿ ಸಾಧನೆಯಾಗಿದೆ. ತೆರಿಗೆ ಸಂಗ್ರಹ ತೃಪ್ತಿಕರವಾಗಿದ್ದು, ವರ್ಷಾಂತ್ಯಕ್ಕೆ ನಿಗದಿತ ಗುರಿ ಸಾಧಿಸುವ ವಿಶ್ವಾಸವಿದೆ. ತೆರಿಗೆ ಸಂಗ್ರಹದಲ್ಲಿ ಕಳೆದ ವರ್ಷಕ್ಕಿಂತ 952.70 ಕೋಟಿ ರೂ. ಹೆಚ್ಚುವರಿ ಮೊತ್ತ ಸಂಗ್ರಹವಾಗಿದ್ದು, ಶೇ. 11.63 ರಷ್ಟು ಹೆಚ್ಚಳವಾಗಿದೆ ಎಂದು ಮಾಹಿತಿ ನೀಡಿದರು.

ಸಾರಿಗೆ ಇಲಾಖೆ ಹಾಗೂ ಸಾರಿಗೆ ನಿಗಮಗಳ ತೆರಿಗೆ ಸಂಗ್ರಹದ ವಾರ್ಷಿಕ ಗುರಿ 7100 ಕೋಟಿ ರೂ. ಗಳಷ್ಟಿದೆ. ಆಗಸ್ಟ್ 30 ರವರೆಗೆ 2750.82 ಕೋಟಿ ರೂ. ತೆರಿಗೆ ಸಂಗ್ರಹದ ಗುರಿ ನಿಗದಿ ಪಡಿಸಲಾಗಿತ್ತು. ಅದರಲ್ಲಿ 2476 ಕೋಟಿ ರೂ. ತೆರಿಗೆ ಸಂಗ್ರವಾಗಿದೆ. ತೆರಿಗೆ ಸಂಗ್ರಹ ನಿಗದಿತ ಗುರಿಯ ಶೇ. 90 ರಷ್ಟಾಗಿದೆ. ವಾಹನ ಮಾರಾಟದಲ್ಲಿ ಸಾರಿಗೆ ಮತ್ತು ಸಾರಿಗೆಯೇತರ ವಾಹನಗಳ ನೋಂದಣಿಯಲ್ಲಿ ಶೇ. 10.34 ರಷ್ಟು ಕಡಿಮೆಯಾಗಿದೆ. ಇದರಿಂದಾಗಿ ತೆರಿಗೆ ಸಂಗ್ರಹದಲ್ಲಿ ವ್ಯತ್ಯಯವಾಗಿದೆ. ಅಕ್ಟೋಬರ್ ನಂತರ ಸುಧಾರಣೆಯಾಗುವ ನಿರೀಕ್ಷೆ ಇದೆ ಎಂದರು.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ತೆರಿಗೆ ಸಂಗ್ರಹದ ವಾರ್ಷಿಕ ಗುರಿ 11,828 ಕೋಟಿ ರೂ. ಗಳಷ್ಟಿದೆ. ಆಗಸ್ಟ್ 30 ರವರೆಗೆ 4,574.51 ಕೋಟಿ ರೂ. ತೆರಿಗೆ ಸಂಗ್ರಹದ ಗುರಿ ನಿಗದಿ ಪಡಿಸಲಾಗಿತ್ತು. ಅದರಲ್ಲಿ 4,620.30 ಕೋಟಿ ರೂ. ತೆರಿಗೆ ಸಂಗ್ರಹವಾಗಿದ್ದು, ಶೇ. 101.1 ರಷ್ಟಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸಂಗ್ರಹವಾದ ತೆರಿಗೆಗಿಂತ 530. 27 ಕೋಟಿ ರೂ. ತೆರಿಗೆ ಹೆಚ್ಚಳವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆಸ್ತಿ ನೋಂದಣಿಯಲ್ಲಿ ಬೆಂಗಳೂರಿನಲ್ಲಿ ಶೇ.3.86 ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಏಪ್ರಿಲ್ 1 ರಿಂದ ಈವರೆಗೆ 1526.50 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ ಇತ್ತು. ಒಟ್ಟು 1314 ಕೋಟಿ ರೂ. ಅಂದರೆ ಶೇ. 86 ರಷ್ಟು ಸಂಗ್ರಹ ಆಗಿದೆ. ಆರ್ಥಿಕ ವರ್ಷದ ಅಂತ್ಯದ ವೇಳೆಗೆ ನಿಗದಿತ ಗುರಿ ಸಾಧಿಸುವ ವಿಶ್ವಾಸ ಇದೆ. ಇವತ್ತು ಅಧಿಕಾರಿಗಳಿಗೆ ತೆರಿಗೆ ಸಂಗ್ರಹದ ನಿಗದಿತ ಗುರಿ ಸಾಧನೆ ನಿಟ್ಟಿನಲ್ಲಿ ಹಲವು ಸಲಹೆಗಳನ್ನು ನೀಡಿದ್ದೇನೆ. ಅವರ ಸಮಸ್ಯೆಗಳಿಗೂ ಸ್ಪಂದಿಸುವ ಭರವಸೆ ಕೊಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ನಾವು ನಮ್ಮ ನಿಗದಿತ ಗುರಿ ಸಾಧಿಸುವ ವಿಶ್ವಾಸ ಹೊಂದಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಇದನ್ನು ಓದಿ: ಹೊಸ ಸಂಚಾರಿ​ ನಿಯಮ; ದಂಡದ ಪ್ರಮಾಣ ಇಳಿಸಲು ಸಿಎಂ ಬಿಎಸ್​ವೈ ಸೂಚನೆ

ಮರಳು ಮಾಫಿಯಾ ವಿಚಾರವಾಗಿ ಮಾತನಾಡಿದ ಸಿಎಂ ಯಡಿಯೂರಪ್ಪ, ಮರಳು ಮಾಫಿಯಾದವರ ವಿರುದ್ಧ ಯಾವುದೇ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಲಾಗುವುದು.  ಜನಸಾಮಾನ್ಯರಿಗೆ ಸುಲಭವಾಗಿ ಮರಳು ಸಿಗುವಂತೆ ಮಾಡುತ್ತೇವೆ. ಜನರಿಗೆ ಮರಳು ಸುಲಭವಾಗಿ ಸಿಗಬೇಕು. ಮಲೇಷಿಯಾ ಮರಳು ತರಿಸಿಕೊಳ್ಳುವ ಅಗತ್ಯವಿಲ್ಲ. ಮಲೇಷಿಯಾ ಮರಳಿನ ಬಗ್ಗೆ, ಹಿಂದಿನ ಸರ್ಕಾರದ ಬಗ್ಗೆ ನಾನು ಟೀಕೆ ಮಾಡಲ್ಲ. ನಮ್ಮ‌ಲ್ಲೇ ಯಥೇಚ್ಛವಾಗಿ ಮರಳು ಸಿಗುತ್ತಿದೆ. ನಮ್ಮಲ್ಲಿ ಸಿಗುವ ಮರಳೇ ಜನರಿಗೆ ಸಾಕು. ಆ ಮರಳು ಸಾಮಾನ್ಯ ಜನರಿಗೆ ಸಿಗಬೇಕು‌ ಅಷ್ಟೇ. ಆ ರೀತಿಯಲ್ಲಿ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ ಎಂದು ತಿಳಿಸಿದರು.

First published:September 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ