news18-kannada Updated:December 29, 2020, 5:36 PM IST
ಮಾಜಿ ಸಿಎಂ ಸಿದ್ದರಾಮಯ್ಯ ಅವರಿಂದ ಅಂತಿಮ ನಮನ
ಚಿಕ್ಕಮಗಳೂರು (ಡಿ. 29): ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ವಿಧಾನ ಪರಿಷತ್ ಉಪಸಭಾಪತಿ ಎಸ್ಎಲ್ ಧರ್ಮೇಗೌಡ ಅವರಿಗೆ ರಾಜಕೀಯ ಗಣ್ಯರು ಅಂತಿಮ ನಮನ ಸಲ್ಲಿಸಿದ್ದಾರೆ. ಜಿಲ್ಲೆಯ ಕಡೂರಿನ ಸಖರಾಯಪಟ್ಟಣದ ತೋಟದಲ್ಲಿ ಅವರ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆಸಲಾಗಿದ್ದು, ಒಕ್ಕಲಿಗ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಯಲಿದೆ. ಧರ್ಮೇಗೌಡ ಅವರ ಅಕಾಲಿಕ ಸಾವಿಗೆ ಪಕ್ಷಾತೀತವಾಗಿ ಗಣ್ಯರು ವಿಷಾದ ವ್ಯಕ್ತಪಡಿಸಿದ್ದಾರೆ. ಅವರ ತೋಟದ ಮನೆಯಲ್ಲಿ ಸಂಜೆ ಅಂತ್ಯ ಸಂಸ್ಕಾರ ನಡೆಸಲಿದ್ದು, ಅವರ ಮಗ ಸೋನಾಲ್ ಅಂತಿಮ ವಿಧಿವಿಧಾನ ನಡೆಸಲಿದ್ದಾರೆ. ಇನ್ನು ಇದಕ್ಕೂ ಮುನ್ನ ಸಖರಾಯಪಟ್ಟಣದ ಕಾಲೇಜು ಆವರಣದಲ್ಲಿ ಪಾರ್ಥೀವ ಶರೀರದ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಸಿಎಂ ಬಿಎಸ್ ಯಡಿಯೂರಪ್ಪ, ಸಿ.ಟಿ.ರವಿ, ಶಾಸಕ ರಾಜೇಗೌಡ , ಬೆಳ್ಳಿ ಪ್ರಕಾಶ್ ಮತ್ತು ಕೆ,ಮಾಧುಸ್ವಾಮಿ ಹಾಗೂ ಶಾಸಕರು ಸೇರಿದಂತೆ ಅವರ ಅಭಿಮಾನಿಗಳು ಅಂತಿಮ ದರ್ಶನ ಪಡೆದರು.

ಭೈರತಿ ಬಸವರಾಜು ಅವರಿಂದ ಅಂತಿಮ ನಮನ
ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ , ಧರ್ಮೇಗೌಡರ ಸಾವು ತುಂಬಾ ನೋವುಂಟು ಮಾಡಿದೆ. ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.
ಇದನ್ನು ಓದಿ: ಆತ್ಮಹತ್ಯೆ ಮಾಡಿಕೊಳ್ಳುವಂಥವರಲ್ಲ: ಧರ್ಮೇಗೌಡರ ಸಾವು ಘಟನೆ ತನಿಖೆಗೆ ನಾಯಕರ ಒತ್ತಾಯ
ಮಾಜಿ ಪ್ರಧಾನಮಂತ್ರಿ ಹೆಚ್.ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೆಚ್ ಡಿ ಕುಮಾರಸ್ವಾಮಿ ಕೂಡ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಚ ಸಮರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ವೇಳೆ ತಮ್ಮ ಪಕ್ಷದ ಹಿರಿಯ ಮುಖಂಡರನ್ನು ಕಳೆದುಕೊಂಡಿದ್ದಕ್ಕೆ ಕುಮಾರಸ್ವಾಮಿಯವರು ಕಣ್ಣೀರಿಟ್ಟರು.
ಧರ್ಮೇಗೌಡ ಅವರ ಸ್ನೇಹಿತರಾಗಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಅವರ ಡೆತ್ ನೋಟ್ ಬಹಿರಂಗ ಪಡಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು. ಸಾರ್ವಜನಿಕ ಜೀವನದಲ್ಲಿದ್ದವರು ಹೀಗಾಗಿ ಅವರ ಸಾವಿಗೆ ಬಗ್ಗೆ ಸೂಕ್ತ ತನಿಖೆಯಾಗಬೇಕು. ಅವರು ಆತ್ಮಹತ್ಯೆ ಮಾಡಿಕೊಳ್ಳುವಂತಹ ದುರ್ಬಲ ವ್ಯಕ್ತಿ ಅಲ್ಲ. ಅವರ ಸಾವಿಗೆ ನಿಖರ ಕಾರಣದ ಬಗ್ಗೆ ತನಿಖೆ ನಡೆಯಬೇಕು. ಅವರ ಆತ್ಮಹತ್ಯೆಯಿಂದ ರಾಜ್ಯಕ್ಕೆ, ಕ್ಷೇತ್ರಕ್ಕೆ ನಷ್ಟವಾಗಿದೆ ಎಂದು ಕಣ್ಣೀರಿಟ್ಟರು.
ಇದೇ ವೇಳೆ ಸಿಎಂ ಬಿಎಸ್ ಯಡಿಯೂರಪ್ಪ ಸಮ್ಮುಖದಲ್ಲಿ ಅಗಲಿದ ನಾಯಕನಿಗೆ ಸಕಲ ಸರ್ಕಾರಿ ಗೌರವ ಸಮರ್ಪಣೆ ಮಾಡಲಾಯಿತು.
Published by:
Seema R
First published:
December 29, 2020, 5:11 PM IST