ವಿಜಯಪುರ, (ಫೆ. 11): ಯಡಿಯೂರಪ್ಪ ಪೂರ್ಣಾವಧಿಗೆ ಸಿಎಂ ಆಗಿರುತ್ತಾರೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ.
ವಿಜಯಪುರ ನಗರದಲ್ಲಿ ಶ್ರೀ ಶಂಕರಲಿಂಗ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ಯಡಿಯೂರಪ್ಪ ನಿಶ್ಚಿಂತೆಯಿಂದ ಸಭದ್ರ ಸರಕಾರವನ್ನು ನಡೆಸುತ್ತಾರೆ ಎಂದರು. ಯುಗಾದಿ ಬಳಿಕ ಸಿಎಂ ಬದಲಾವಣೆಯಾಗಲಿದ್ದಾರೆ ಎಂದು ಯತ್ನಾಳ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಿಮ್ಮಲ್ಲಿ ಏನು ಗೊಂದಲವಿದೆಯೋ ಗೊತ್ತಿಲ್ಲ. ಯಡಿಯೂರಪ್ಪ ಸಿಎಂ ಆಗಿ ಪೂರ್ಣಾವಧಿ ಅಧಿಕಾರ ಪೂರೈಸುತ್ತಾರೆ. ಬಿಜೆಪಿಯಲ್ಲಿ ಯಡಿಯೂರಪ್ಪ ಅವರೇ ಶಾಶ್ವತ ಸಿಎಂ. ನಮ್ಮಲ್ಲಿ ಏನೂ ಗೊಂದಲವಿಲ್ಲ ಎಂದು ನಗುತ್ತಾ ಮುನ್ನಡೆದರು.
ಮೀಸಲಾತಿ ಹೋರಾಟ ವಿಚಾರ
ಇದೇ ವೇಳೆ, ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿ ನೀಡಬೇಕು ಮತ್ತು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹೋರಾಟದ ಕುರಿತು ಪ್ರತಿಕ್ರಿಯಿಸಿದ ಅವರು, ಹಿಂದಿನಿಂದಲೂ ಅನೇಕ ಸಮಾಜಗಳು ಬೇಡಿಕೆ ಇಡುತ್ತ ಬಂದಿವೆ. ಸರಕಾರ ಕಾನೂನು ಚೌಕಟ್ಟಿನಲ್ಲಿ ಪರಿಶೀಲನೆ ಮಾಡುತ್ತದೆ. ಯಾವುದೇ ವಿವಾದ ಗೊಂದಲಗಳಿರದೇ ಸಮಾಜ ಒಟ್ಟಾಗಿ ಇರಬೇಕೆಂಬ ಯೋಚನೆ ನಮ್ಮದು. ಅದೇ ರೀತಿಯ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಮೀಸಲಾತಿ ಬೇಡಿಕೆ ವಿಚಾರದಲ್ಲಿ ಸಿಎಂರನ್ನು ಬೆದರಿಕೆ ಮಾಡುವ ತಂತ್ರ ಎಂಬ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಮಾಜದವರು ತಮ್ಮ ಬೇಡಿಕೆಯನ್ನು ಇಡುತ್ತಾರೆ. ಸಿಎಂ ಅನುಭವದ ಆಧಾರದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತಾರೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ತಿಳಿಸಿದರು.
ಸಚಿವ ಖಾತೆ ಮರು ಹಂಚಿಕೆ ಅಸಮಾಧಾನ ವಿಚಾರ ಕುರಿತು ಮಾತನಾಡಿದ ಅವರು, ಇಂತಿಷ್ಟೇ ಖಾತೆಗಳು ಇರಬೇಕೆಂಬ ನಿಯಮವಿದೆ. ಪೂರೈಕೆಗಿಂತ ಬೇಡಿಕೆ ಆಧಿಕವಾಗಿದ್ದಾಗ ಒತ್ತಡ ಸಹಜ. ಅದುವೇ ರಾಜಕಾರಣ. ನಮ್ಮ ಪಕ್ಷ ಶಾಸಕರ ಅಪೇಕ್ಷೆಯ ಬೇಡಿಕೆ ತಪ್ಪಲ್ಲ. ರಾಜ್ಯಾಧ್ಯಕ್ಷರು, ಸಿಎಂ, ಕೇಂದ್ರ ನಾಯಕರು ಯಾರಾರಿಗೆ ಯಾವ ಅವಕಾಶ ನೀಡಬೇಕೋ ಅದನ್ನು ನೀಡುತ್ತಾರೆ. ಬೇಡಿಕೆಗಾಗಿ ಒತ್ತಡ ಹಾಕುವುದು. ರಾಜಕೀಯದ ಒಂದು ಭಾಗ. ಯಾವುದೇ ಗೊಂದಲ ಇಲ್ಲದೇ ನಮ್ಮ ಪಕ್ಷ, ಸರಕಾರ ಮುನ್ನಡೆಯುತ್ತವೆ. ನಮ್ಮಲ್ಲಿ ಯಾವುದೇ ಸಮಸ್ಯೆಯಿಲ್ಲ. ಒತ್ತಡ ಬೇಡಿಕೆ ಸ್ವಾಭಾವಿಕ, ಇದು ಎಲ್ಲಾ ಪಕ್ಷಗಳಲ್ಲಿ ಇದ್ದಿದ್ದೆ. ಎಲ್ಲವನ್ನೂ ಒಟ್ಟಿಗೆ ಕರೆದೊಯ್ಯವ ಮುತ್ಸದ್ದೀತನ ಸಿಎಂ ಮತ್ತು ನಮ್ಮ ಪಕ್ಷಕ್ಕಿದೆ ಎಂದರು.
ಇದನ್ನು ಓದಿ: ಡಿಕೆ ಶಿವಕುಮಾರ್ ಮನೆಯಲ್ಲಿ ಮದುವೆ ಸಡಗರ; ಅರಿಶಿಣ ಶಾಸ್ತ್ರದ ಸಂಭ್ರಮದ ಚಿತ್ರಗಳು ಇಲ್ಲಿವೆ
ಜಾತ್ರೆಗಳಿಗೆ ಅನುಮತಿ ವಿಚಾರ
ಜಾತ್ರೆ, ಉತ್ಸವಕ್ಕೆ ಅನುಮತಿ ಕೋರಿ ಸಾರ್ವಜನಿಕರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬೇಡಿಕೆಗಳು ಬಂದಿದ್ದವು. ಉತ್ಸವ, ಪರಂಪರೆ, ಆಚರಣೆಗಳಿಗೆ ನಿರ್ಬಂಧ ಸಡಿಲಿಕೆ ಮಾಡುವಂತೆ ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕೋವಿಡ್ ನಿಯಮಗಳ ಪಾಲನೆ ಮಾಡುವ ಮೂಲಕ ಉತ್ಸವ, ಜಾತ್ರೆ ಮಾಡಲು ಅವಕಾಶ ನೀಡಲಾಗಿದೆ. ಇದರಿಂದ ಯಾವುದೇ ತೊಂದರೆಯಾಗಲ್ಲ ಎಂಬ ಅನಿಸಿಕೆ ಇದೆ. ಆದರೆ, ಕೊರೊನಾ ಮುಂಜಾಗೃತೆ ಕ್ರಮ ತೆಗೆದುಕೊಳ್ಳಲೇಬೇಕು. ಇಲ್ಲದಿದ್ದರೆ ಕೊರೊನಾ ಮತ್ತಷ್ಟು ಹರಡುವ ಆತಂಕವೂ ಇದೆ ಎಂದು ಅವರು ತಿಳಿಸಿದರು.
ತುಂಬಾ ದಿನಗಳಿಂದ ಜನರು ದೇವಸ್ಥಾನಕ್ಕೆ ಹೋಗಲಾಗಿಲ್ಲ. ಪೂಜೆ ಪುನಸ್ಕಾರ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಅನುಮತಿ ನೀಡಲಾಗಿದೆ. ಕೊರೋನಾ ಮಾರ್ಗಸೂಚಿ ಪಾಲಿಸದಿದ್ದರೆ ಮತ್ತೆ ಕೊರೋನಾ ತಡೆಯಲು ನಿಯಮಗಳನ್ನು ವಿಸ್ತರಣೆ ಮಾಡಲಾಗುತ್ತದೆ. ಕೊರೊನಾ ನಿರ್ಬಧನೆ ಪಾಲನೆ ಮಾಡದಿದ್ದರೆ ಸೂಚನೆ ನೀಡಿ ಕಡ್ಡಾಯ ಪಾಲನೆ ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ