ಬೆಂಗಳೂರು(ಸೆ.30): ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಕುರಿತು ಸಿಬಿಐ ನ್ಯಾಯಾಲಯ ನೀಡಿರುವ ತೀರ್ಪನ್ನು ಸ್ವಾಗತ ಮಾಡುತ್ತೇನೆ. ಸತ್ಯಕ್ಕೆ ಸಂದ ಜಯ ಇದಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಹೇಳಿದ್ದಾರೆ. ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯರೆಲ್ಲರೂ ಸಂತೋಷ ಪಡುವ ಶುಭ ದಿವಸ ಇದಾಗಿದೆ. ಲಕ್ನೋ ಸಿಬಿಐ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದೆೆ. ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾಭಾರತಿ ಸೇರಿದಂತೆ 32 ಆರೋಪಿಗಳನ್ನು ನಿರ್ದೋಷಿ ಎಂದು ತೀರ್ಪು ನೀಡಿದೆ. ಇದು ಉದ್ದೇಶಪೂರ್ವಕವಾಗಿ ನಡೆದ ಕೃತ್ಯ ಅಲ್ಲ ಎಂದು ಅಭಿಪ್ರಾಯಪಟ್ಟಿದೆ. ಸತ್ಯಕ್ಕೆ ಜಯ ಸಿಕ್ಕಿದೆ. ನಾನು ಕೂಡ ಹೋರಾಟದಲ್ಲಿ ನೇರವಾಗಿ ಭಾಗಿಯಾಗಿದ್ದು, ನನಗೆ ವೈಯಕ್ತಿಕವಾಗಿ ಖುಷಿ ತಂದಿದೆ ಎಂದರು.
ಬಹಳ ಜನರು ತೀರ್ಪು ಯಾವ ರೀತಿ ಬರಲಿದೆ ಎಂದು ಕಾಯುತ್ತಿದ್ದರು. ಹೋರಾಟಕ್ಕೆ ಯಾವಾಗಲೂ ಗೆಲುವು ಸಿಗಲಿದೆ ಎನ್ನುವುದು ಸಾಬೀತಾಗಿದೆ. ಅಡ್ವಾಣಿ ಅವರ ಮಾಡಿದ್ದ ಭಾಷಣ ಯಾರು ಮರೆಯಲು ಸಾಧ್ಯವಿಲ್ಲ. ಅಯೋಧ್ಯೆಯಲ್ಲಿ ಈಗಾಗಲೇ ರಾಮ ಮಂದಿರ ನಿರ್ಮಾಣಕ್ಕೆ ಕೆಲಸ ಆರಂಭವಾಗಿದೆ. ಇದಕ್ಕೆ ಅಡ್ವಾಣಿ, ಮುರಳಿ ಮನೋಹರ ಜೋಶಿ ಉಮಾಭಾರತಿ ಹೋರಾಟ ಕಾರಣ. ಈ ತೀರ್ಪನ್ನು ಸ್ವಾಗತ ಮಾಡಿದ್ದೇನೆ ಎಂದರು.
ಆಂಬ್ಯುಲೆನ್ಸ್ ಭ್ರಷ್ಟಾಚಾರದ ಆರೋಪ ಪ್ರಕರಣ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಜೊತೆ ಮಾತುಕತೆ ನಡೆಸಿ ತನಿಖೆಗೆ ಸೂಚನೆ ನೀಡಿದ್ದಾರೆ. ಒಂದು ವಾರದಲ್ಲಿ ವರದಿ ನೀಡುವಂತೆ ತಿಳಿಸಿದರು. ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಲಕ್ನೋನ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುರೇಂದ್ರ ಕುಮಾರ್ ಯಾದವ್ ಅವರು ಇವತ್ತು ನೀಡಿದ ತೀರ್ಪಿನಲ್ಲಿ ಎಲ್ಲಾ 32 ಆರೋಪಿಗಳನ್ನ ಖುಲಾಸೆಗೊಳಿಸಿದ್ದಾರೆ. ಕೋರ್ಟ್ಗೆ ಹಾಜರುಪಡಿಸಿದ ಯಾವ ಸಾಕ್ಷಿಗಳೂ ಗಟ್ಟಿ ಆಗಿಲ್ಲ. ಆರೋಪಿಗಳು ಸಂಚು ರೂಪಿಸಿದ್ದರು ಎನ್ನುವುದಕ್ಕೆ ಪೂರಕವಾಗಿ ಸಮರ್ಪಕ ಸಾಕ್ಷ್ಯಾಧಾರ ಇಲ್ಲ ಎಂದು ತಮ್ಮ 2 ಸಾವಿರ ಪುಟಗಳ ತೀರ್ಪಿನಲ್ಲಿ ನ್ಯಾ| ಎಸ್.ಕೆ. ಯಾದವ್ ಅಭಿಪ್ರಾಯಪಟ್ಟಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ