ಖಾತೆ ಬದಲಾವಣೆ ಸಂಕಟ; ಕೊರೋನಾ ಸಂಕಷ್ಟ ಕಾಲದಲ್ಲಿ ವೈದ್ಯಕೀಯ ಶಿಕ್ಷಣ ಖಾತೆ ಬದಲಾವಣೆ ಅಗತ್ಯವಿತ್ತೆ?

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಎರಡೂ ಖಾತೆ ಒಬ್ಬರ ಬಳಿ ಇದ್ದರೆ ಒಳ್ಳೆಯದು ಎಂಬ ಕಾರಣಕ್ಕೆ ನನಗೆ ಕೊಡಲಾಗಿತ್ತು. ಈಗ ಅದನ್ನು ಯಾರಿಗೇ ಕೊಟ್ಟರೂ ಒಬ್ಬರ ಬಳಿಯೇ ಆ ಎರಡು ಖಾತೆಗಳು ಇರಬೇಕು. ಕೋವಿಡ್ ಪರಿಸ್ಥಿತಿ ನಿರ್ವಹಣೆಯಲ್ಲಿ ಎರಡೂ ಇಲಾಖೆ ಮಧ್ಯೆ ಸಮನ್ವಯತೆ ಇರುವುದು ಅಗತ್ಯ ಎಂದು ಸಚಿವ ಸುಧಾಕರ್ ಅವರು ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದಾರೆ. 

ಸಚಿವ ಡಾ.ಕೆ.ಸುಧಾಕರ್.

ಸಚಿವ ಡಾ.ಕೆ.ಸುಧಾಕರ್.

  • Share this:
ಬೆಂಗಳೂರು; ಸಿಎಂ ಬಿಎಸ್ ಯಡಿಯೂರಪ್ಪ ಸಂಪುಟಕ್ಕೆ ಏಳು ಮಂದಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಖಾತೆ ಬದಲಾವಣೆಯಿಂದ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಭುಗಿಲೆದ್ದಿದೆ. ಕೆಲವರಿಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಅಸಮಾಧಾನಗೊಂಡಿದ್ದರೆ, ಮತ್ತೆ ಕೆಲವರು ಖಾತೆ ಬದಲಾವಣೆಯಿಂದ ಸಿಟ್ಟಾಗಿದ್ದಾರೆ. ಖಾತೆ ಬದಲಾವಣೆ ವಿಷಯದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಇಲ್ಲಿ ಎಡವಿದಂತೆ ಕಾಣುತ್ತದೆ. ಕೆಲವು ಸಚಿವರು ಸಮರ್ಥವಾಗಿ ನಿಭಾಯಿಸುತ್ತಿದ್ದ ಖಾತೆಯನ್ನು ಅದಲು ಬದಲು ಮಾಡಿರುವುದು ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ. ಅದರಲ್ಲಿ ಮುಖ್ಯವಾಗಿ ಡಾ.ಕೆ.ಸುಧಾಕರ್ ಬಳಿಯಿದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಕಿತ್ತು ಜೆ.ಸಿ.ಮಾಧುಸ್ವಾಮಿ ಅವರಿಗೆ ನೀಡಿರುವುದು.

ಈ ಮೊದಲು ವೈದ್ಯಕೀಯ ಶಿಕ್ಷಣ ಖಾತೆಯನ್ನು ಸುಧಾಕರ್ ಅವರಿಗೆ ನೀಡಲಾಗಿತ್ತು. ಶ್ರೀರಾಮುಲು ಆರೋಗ್ಯ ಖಾತೆ ನಿರ್ವಹಿಸುತ್ತಿದ್ದರು. ಆದರೆ ಕೊರೋನಾ ಸಂಕಷ್ಟದ ಸಮಯದಲ್ಲಿ ಎರಡು ಸಚಿವಾಲಯದ ಸಂವಹನ ಕೊರತೆಯಿಂದಾಗಿ ಸಾಕಷ್ಟು ಗೊಂದಲ ಏರ್ಪಡುತ್ತಿತ್ತು. ಇದರಿಂದ ಸರ್ಕಾರ ಸಹ ಮುಜುಗರಕ್ಕೆ ಈಡಾಗುವಂತಾಗಿತ್ತು. ಹೀಗಾಗಿ ಶ್ರೀರಾಮುಲು ಅವರಿಗೆ ಆರೋಗ್ಯ ಖಾತೆಯಿಂದ ಬಿಡುಗಡೆ ನೀಡಿ, ಸಮಾಜ ಕಲ್ಯಾಣ ಇಲಾಖೆ ನೀಡಲಾಗಿತ್ತು. ಸುಧಾಕರ್ ಅವರಿಗೆ ವೈದ್ಯಕೀಯ ಶಿಕ್ಷಣದ ಜೊತೆಗೆ ಆರೋಗ್ಯ ಖಾತೆಯನ್ನು ನೀಡಲಾಗಿತ್ತು. 

ಕೊರೋನಾ ವ್ಯಾಪಕವಾಗಿ ಹಬ್ಬಿದ ಸಮಯದಿಂದಲೂ ಸುಧಾಕರ್ ಆರೋಗ್ಯ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಹಗಲು ರಾತ್ರಿ ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರೊಂದಿಗೆ ನಿರಂತರ ಸಭೆ ನಡೆಸಿ, ಆಗಬೇಕಾದ ಕೆಲಸಗಳ ಬಗ್ಗೆ ನಿಗಾ ವಹಿಸಿದ್ದರು. ಕೇಂದ್ರ ಆರೋಗ್ಯ ಇಲಾಖೆ ನೀಡುವ ಮಾರ್ಗಸೂಚಿಗಳನ್ನು ಸಮರ್ಥವಾಗಿ ರಾಜ್ಯದಲ್ಲಿ ಜಾರಿಗೆ ತರುವಲ್ಲಿ ಶ್ರಮಿಸಿದ್ದರು. ಕೊರೋನಾ ನಿಯಮ, ಮಾರ್ಗಸೂಚಿಗಳನ್ನು ದೇಶದ ಇತರೆ ರಾಜ್ಯಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಗೊಳಿಸಿದ್ದರು. ಸುಧಾಕರ್ ಅವರ ಕಾರ್ಯವೈಖರಿಯನ್ನು ಸ್ವತಃ ಕೇಂದ್ರ ಆರೋಗ್ಯ ಇಲಾಖೆ ಸಹ ಪ್ರಶಂಸಿಸಿತ್ತು. ಆದರೆ, ಇದೀಗ ವೈದ್ಯಕೀಯ ಶಿಕ್ಷಣ ಖಾತೆಯನ್ನು ಸುಧಾಕರ್ ಅವರಿಂದ ಕಸಿದು, ಜೆ.ಸಿ. ಮಾಧುಸ್ವಾಮಿ ಅವರಿಗೆ ನೀಡಲಾಗಿದೆ.

ಇದನ್ನು ಓದಿ: ಖಾತೆ ಹಂಚಿಕೆ ಬಗ್ಗೆ ಸುಧಾಕರ್ ಆಕ್ರೋಶ; ರಾಜಕೀಯವಾಗಿ ಬಿಜೆಪಿ ಆತ್ಮಹತ್ಯೆಯತ್ನ ಎಂದು ಗುಡುಗು

ಕೊರೋನಾ ಸಂಕಷ್ಟದ ಸಮಯದಲ್ಲಿ ಸುಧಾಕರ್ ಅತ್ಯಂತ ಕ್ರಿಯಾಶೀಲರಾಗಿ ಎರಡು ಖಾತೆಗಳನ್ನು ನಿಭಾಯಿಸಿಕೊಂಡು ಬಂದರು. ಸುಧಾಕರ್ ಅವರ ಕಾರ್ಯವೈಖರಿಯನ್ನು ಕೇಂದ್ರ ಸರ್ಕಾರ ಕೂಡ ಶ್ಲಾಘಿಸಿತ್ತು. ದೇಶದ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರ ಪೈಕಿ ಸುಧಾಕರ್ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದ್ದರು. ಪ್ರಧಾನಿಯಿಂದ ಹಿಡಿದು ಕೇಂದ್ರ ಆರೋಗ್ಯ ಸಚಿವಾಲಯದ ಸಭೆಯಲ್ಲಿ ರಾಜ್ಯದ ನಿಲುವು, ಕೈಗೊಂಡ ಯೋಜನೆಗಳನ್ನು ಉತ್ತಮ ರೀತಿಯಲ್ಲಿ ಸುಧಾಕರ್ ಮಂಡಿಸಿದ್ದರು. ಹೀಗಾಗಿ ಕೇಂದ್ರದ ನಾಯಕರೊಂದಿಗೆ ಸುಧಾಕರ್ ಉತ್ತಮ ಬಾಂಧವ್ಯ ಹೊಂದಿದ್ದರು.

ಖಾತೆ ಬದಲಾವಣೆ ಸಂಬಂಧ ಇಂದು ಮೊದಲ ಬಾರಿಗೆ ಸುಧಾಕರ್ ರಾಜ್ಯ ಸರ್ಕಾರದ ವಿರುದ್ಧ ಹಾಗೂ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ. ಬಿಜೆಪಿಗೆ ಮೂರು ಪರ್ಸೆಂಟ್ ವೋಟು ಬಂದಿರಲಿಲ್ಲ. ನಾನು ಬಿಜೆಪಿ ಸೇರಿ 85 ಸಾವಿರ ಮತ ಪಡೆದೆ.  ಐದು ಸಾವಿರ ಮತದಿಂದ 85 ಸಾವಿರ ಮತ ಪಡೆಯುವುದು ಸಾಮಾನ್ಯ ವಿಷಯ ಅಲ್ಲ. ಎಂಥ ಪರಿಸ್ಥಿತಿಯಲ್ಲಿ ನಾನು ರಿಸ್ಕ್ ತೆಗೆದುಕೊಂಡು ಬಿಜೆಪಿಗೆ ಬಂದಿದ್ದೆ ಎಂಬುದು ಗೊತ್ತಿದೆ. ಪಕ್ಷಕ್ಕೆ ಒಳ್ಳೆಯ ಹೆಸರು ತರಲು ನನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸ ಮಾಡಿದ್ದೇನೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಎರಡೂ ಖಾತೆ ಒಬ್ಬರ ಬಳಿ ಇದ್ದರೆ ಒಳ್ಳೆಯದು ಎಂಬ ಕಾರಣಕ್ಕೆ ನನಗೆ ಕೊಡಲಾಗಿತ್ತು. ಈಗ ಅದನ್ನು ಯಾರಿಗೇ ಕೊಟ್ಟರೂ ಒಬ್ಬರ ಬಳಿಯೇ ಆ ಎರಡು ಖಾತೆಗಳು ಇರಬೇಕು. ಕೋವಿಡ್ ಪರಿಸ್ಥಿತಿ ನಿರ್ವಹಣೆಯಲ್ಲಿ ಎರಡೂ ಇಲಾಖೆ ಮಧ್ಯೆ ಸಮನ್ವಯತೆ ಇರುವುದು ಅಗತ್ಯ ಎಂದು ಸಚಿವ ಸುಧಾಕರ್ ಅವರು ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದಾರೆ.
Published by:HR Ramesh
First published: