ಶಿರಾ, ಆರ್.ಆರ್ ನಗರ ವಿಧಾನಸಭಾ ಉಪಚುನಾವಣೆ ಘೋಷಣೆ - ಸಂಪುಟ ವಿಸ್ತರಣೆ ಬಹುತೇಕ ಡೌಟ್
ಸಿಎಂ ಬಿಎಸ್ ಯಡಿಯೂರಪ್ಪನವರು ಸಚಿವ ಸಂಪುಟ ವಿಸ್ತರಣೆಯನ್ನು ಬಹುತೇಕ ಮುಂದೂಡಲು ಚಿಂತಿಸಿದ್ದಾರೆ. ಹೇಗಿದ್ದರೂ ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡೋದಿಲ್ಲ. ಹಾಗಾಗಿ ಸದ್ಯ ಉಪಚುನಾವಣೆ ನಂತರ ಸಂಪುಟ ವಿಸ್ತರಣೆ ಮಾಡೋಣ. ಈಗ ಬೇಡ ಎಂದು ಸಿಎಂ ಯಡಿಯೂರಪ್ಪ ನಿರ್ಧರಿಸಿದ್ದಾರೆನ್ನಲಾಗಿದೆ.
ಬೆಂಗಳೂರು(ಸೆ.29): ಕೇಂದ್ರ ಚುನಾವಣೆ ಆಯೋಗವೂ ಶಿರಾ ಹಾಗೂ ಆರ್. ಆರ್ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಘೋಷಿಸಿದೆ. ಮುಂದಿನ ನವೆಂಬರ್ 3ನೇ ತಾರೀಕಿನಂದು ಈ ಎರಡು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಇದಕ್ಕಾಗಿ ಅಕ್ಟೋಬರ್ 9ರಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಬಳಿಕ 17ನೇ ತಾರೀಕಿನಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಇದಾದ ನಂತರ ನವೆಂಬರ್ 10ರಂದು ಎರಡು ಕ್ಷೇತ್ರದ ಫಲಿತಾಂಶ ಪ್ರಕಟಗೊಳ್ಳಲಿದೆ. ಹೀಗಿರುವಾಗಲೇ ಸಂಪುಟ ವಿಸ್ತರಣೆ ಸಾಧ್ಯತೆ ಇದೆ ಎಂದು ಭಾವಿಸಿ ಮಂತ್ರಿ ಸ್ಥಾನಕ್ಕಾಗಿ ರಾಜ್ಯ ಹಾಗೂ ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸುತ್ತಿರುವ ಸಚಿವಾಕಾಂಕ್ಷಿಗಳಿಗೆ ಕಹಿಸುದ್ದಿಯೊಂದು ಇದೆ. ಹೌದು, ಸಿಎಂ ಬಿಎಸ್ ಯಡಿಯೂರಪ್ಪನವರು ಸಚಿವ ಸಂಪುಟ ವಿಸ್ತರಣೆಯನ್ನು ಬಹುತೇಕ ಮುಂದೂಡಲು ಚಿಂತಿಸಿದ್ದಾರೆ. ಹೇಗಿದ್ದರೂ ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡೋದಿಲ್ಲ. ಹಾಗಾಗಿ ಸದ್ಯ ಉಪಚುನಾವಣೆ ನಂತರ ಸಂಪುಟ ವಿಸ್ತರಣೆ ಮಾಡೋಣ. ಈಗ ಬೇಡ ಎಂದು ಸಿಎಂ ಯಡಿಯೂರಪ್ಪ ನಿರ್ಧರಿಸಿದ್ದಾರೆನ್ನಲಾಗಿದೆ. ಇದರಿಂದ ಸಚಿವಾಕಾಂಕ್ಷಿಗಳಿಗೆ ಮತ್ತೆ ನಿರಾಸೆಯಾಗಿದೆ.
ಕಳೆದ ಒಂದು ವಾರದ ಹಿಂದೆಯಷ್ಟೇ ಸಿಎಂ ಯಡಿಯೂರಪ್ಪ ದೆಹಲಿಗೆ ತೆರಳಿದ್ದರು. ಅಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ ಮಾಡಿ ಸಂಪುಟ ವಿಸ್ತರಣೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ರು. ನಂತರ ವಾಪಸ್ಸು ಬಂದು ಹೈಕಮಾಂಡ್ ಒಪ್ಪಿಗಾಗಿ ಒಂದು ವಾರ ಕಾದಿದ್ರು. ನಿನ್ನೆಯಷ್ಟೇ ಒಪ್ಪಿಗೆ ಸಿಗದೆ ಇರೋದ್ರಿಂದ ಮತ್ತೊಮ್ಮೆ ದೆಹಲಿಗೆ ತೆರಳಲು ಸಿದ್ದತೆ ನಡೆಸಿದ್ದಾರೆ. ಇನ್ನೂ ಮೂರು ದಿನಗಳಲ್ಲಿ ಸಿಎಂ ದೆಹಲಿಗೆ ಹೋಗಿ ಸಂಪುಟ ವಿಸ್ತರಣೆ ಬಗ್ಗೆ ನಿರ್ಧಾರ ಕೈಗೊಳ್ಳೋದಾಗಿ ತಿಳಿಸಿದ್ದರು.
ದೆಹಲಿ ಪ್ರವಾಸಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಂದಾಗಿದ್ದಾರೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ವರಿಷ್ಠರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ನಿರ್ಧಾರ ಪ್ರಕಟಿಸಲಿದ್ದಾರೆ. ಸಂಪುಟ ವಿಸ್ತರಣೆ ಮಾಡಲು ಈಗ ಯಾವುದೇ ಸಮಸ್ಯೆ ಇಲ್ಲ. ಮೂರ್ನಾಲ್ಕು ದಿನಗಳಲ್ಲಿ ದೆಹಲಿಗೆ ತೆರಳುತ್ತೇನೆ. ವರಿಷ್ಠರ ಭೇಟಿ ಮಾಡಿ ಸಂಪುಟ ವಿಸ್ತರಣೆ ಕುರಿತು ಮತ್ತೆ ಚರ್ಚೆ ನಡೆಸಲಿದ್ದೇನೆ. ಕೇಂದ್ರದ ನಾಯಕರ ಸಮ್ಮತಿ ಪಡೆದು ಸಂಪುಟ ವಿಸ್ತರಿಸಲಿದ್ದೇನೆ ಎಂದಿದ್ದರು.
ಅಧಿವೇಶನಕ್ಕೂ ಮೊದಲು ಸಂಪುಟ ವಿಸ್ತರಣೆ ಮಾಡಲು ಸಿಎಂ ಬಯಸಿದ್ದರು. ಈ ಸಂಬಂಧ ದೆಹಲಿಗೂ ಹೋಗಿ ಬಂದಿದ್ದರು. ಆದರೆ ಕೊನೆ ಕ್ಷಣದಲ್ಲಿ ಸಂಪುಟ ವಿಸ್ತರಣೆಗೆ ಅನುಮತಿ ಸಿಗುವ ನಿರೀಕ್ಷೆ ಹುಸಿಯಾಗಿತ್ತು. ಇದರಿಂದ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ನಿರಾಸೆಯಾಗಿತ್ತು. ಈಗ ಮತ್ತೊಮ್ಮೆ ಉಪಚುನಾವಣೆ ದಿನಾಂಕ ನಿಗದಿಯಾದ್ದರಿಂದ ಸಂಪುಟ ವಿಸ್ತರಣೆ ಮುಂದೋಗಿದೆ.
ರಾಜ್ಯದಲ್ಲಿ ಇನ್ನೂ 6 ಸಂಪುಟ ದರ್ಜೆಯ ಸಚಿವ ಸ್ಥಾನ ಉಳಿದಿದೆ. ಆದರೆ, ಈ 6 ಸ್ಥಾನಕ್ಕೆ ಬಿಜೆಪಿಯಲ್ಲಿ ಕನಿಷ್ಟ 20ಕ್ಕೂ ಹೆಚ್ಚು ಸಚಿವ ಸ್ಥಾನ ಆಕಾಂಕ್ಷಿಗಳು ಇದ್ದಾರೆ. ಇನ್ನೂ ಉತ್ತರ ಕರ್ನಾಟಕ ಮೂಲದ ಪ್ರಬಲ ನಾಯಕ ಉಮೇಶ್ ಕತ್ತಿ ಆದಿಯಾಗಿ ಈ ಪಟ್ಟಿ ಬಹುದೊಡ್ಡದಿದೆ. ಇದೇ ಕಾರಣಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ ಒಂದು ವರ್ಷವಾದರೂ ಸಹ ಬಿಎಸ್ವೈ ಸಂಪುಟ ವಿಸ್ತರಣೆ ಮಾಡಿರಲಿಲ್ಲ.
Published by:Ganesh Nachikethu
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ