ನವದೆಹಲಿ: ಕರ್ನಾಟಕ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಕೂಗು ಇನ್ನೂ ಕಡಿಮೆಯಾಗಿಲ್ಲ. ಸಿಎಂ ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಬೇರೊಬ್ಬರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಬೇಕೆಂದು ಬಿಜೆಪಿಯ ಕೆಲವು ಶಾಸಕರು ಸಹಿ ಕೂಡ ಸಂಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಗೂ ಪ್ರಯಾಣ ಬೆಳೆಸಿದ್ದ ಸಚಿವ ಸಿ.ಪಿ. ಯೋಗೇಶ್ವರ್ ನೇತೃತ್ವದ ತಂಡ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ಸಾಧ್ಯವಾಗದೆ ವಾಪಸ್ ಬಂದಿತ್ತು. ಇದೀಗ ತಮ್ಮ ವಿರೋಧ ಬಣಕ್ಕೆ ಬಿಸಿ ಮುಟ್ಟಿಸಲು ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ದಿಢೀರನೆ ತಮ್ಮ ಮಗ ಬಿ.ವೈ. ವಿಜಯೇಂದ್ರ ಅವರನ್ನು ದೆಹಲಿಗೆ ಕಳುಹಿಸಿದ್ದಾರೆ. ಹೈಕಮಾಂಡ್ ನಾಯಕರ ಜೊತೆ ಮಾತನಾಡಲು ಮಗ ವಿಜಯೇಂದ್ರ ಅವರನ್ನು ಕಳುಹಿಸಿರುವ ಸಿಎಂ ಯಡಿಯೂರಪ್ಪ ತಮ್ಮ ವಿರೋಧಿ ಪಾಳಯಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.
ತಮ್ಮ ನಾಯಕತ್ವದ ವಿರುದ್ಧವೇ ಬಂಡೆದ್ದಿರುವ ಸಚಿವ ಸಿ.ಪಿ. ಯೋಗೇಶ್ವರ್ ವಿಷಯವನ್ನು ಸಿಎಂ ಯಡಿಯೂರಪ್ಪ ತುಂಬಾ ಗಂಭೀರವಾಗಿ ಪರಿಗಣಿಸಿದ್ದಾರೆ. ಸಚಿವ ಸಂಪುಟದಿಂದ ಯೋಗೇಶ್ವರ್ ಕೈಬಿಡಲು ಅನುಮತಿ ಕೊಡುವಂತೆ ಪುತ್ರನ ಮೂಲಕ ಹೈಕಮಾಂಡ್ ನಾಯಕರ ಬಳಿ ದೂರು ದಾಖಲಿಸಿದ್ದಾರೆ. ಸರ್ಕಾರದ ಭಾಗವಾಗಿದ್ದುಕೊಂಡು ಸರ್ಕಾರದ ವಿರುದ್ಧವೇ ಹೇಳಿಕೆ ಕೊಡುತ್ತಿದ್ದಾರೆ. ಇತ್ತೀಚೆಗೆ ರಾಜ್ಯದಲ್ಲಿ 3 ಪಕ್ಷಗಳ ಸರ್ಕಾರ ಇದೆ ಎಂದು ಯೋಗೇಶ್ವರ್ ಹೇಳಿಕೆ ನೀಡಿದ್ದರು. ಯೋಗೇಶ್ವರ್ ಹೇಳಿಕೆಯನ್ನೇ ಆಧಾರವಾಗಿ ಇಟ್ಟುಕೊಂಡು ಇದೀಗ ಬಿಎಸ್ವೈ ಪಕ್ಷದ ವರಿಷ್ಠರಿಗೆ ದೂರು ನೀಡಿದ್ದಾರೆ.
ಕೊರೋನಾ ಸಂಕಷ್ಟ ಕಾಲದಲ್ಲಿ ಯೋಗೇಶ್ವರ್ ರಾಜಕೀಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಿಗದಿದ್ದುದಕ್ಕೆ ಸರ್ಕಾರದ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಸೋತವರನ್ನು ಪರಿಷತ್ ಸದಸ್ಯರನ್ನಾಗಿ ಮಾಡಿ, ಮಂತ್ರಿ ಮಾಡಿದ್ದರೂ ತೃಪ್ತಿ ಇಲ್ಲ. ಇಂಥವರಿಂದ ಪಕ್ಷ ಮತ್ತು ಸರ್ಕಾರದ ವರ್ಚಸ್ಸಿಗೆ ಧಕ್ಕೆ ಆಗಲಿದೆ. ಕೂಡಲೇ ಯೋಗೇಶ್ವರ್ ಕೈ ಬಿಡಲು ಅವಕಾಶ ಮಾಡಿಕೊಡಿ. ಅವರ ಜಾಗಕ್ಕೆ ಪಕ್ಷನಿಷ್ಠರಿಗೆ ಅವಕಾಶ ಮಾಡಿಕೊಡಬಹುದು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಎದುರು ಯೋಗೇಶ್ವರ್ ವಿರುದ್ಧ ದೂರು ನೀಡಲಾಗಿದೆ.
ಇದನ್ನು ಓದಿ: Supreme Court: ಕೋವಿಡ್ ಸಾಂಕ್ರಾಮಿಕ ಬಿಕ್ಕಟ್ಟು; ಸುಪ್ರೀಂಕೋರ್ಟ್ನಲ್ಲಿ ದೇವರನ್ನು ಪ್ರಾರ್ಥಿಸಿದ ನ್ಯಾ. ಚಂದ್ರಚೂಡ್!
ರಹಸ್ಯ ಸ್ಥಳದಲ್ಲಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದ ಬಿ.ವೈ. ವಿಜಯೇಂದ್ರ ಅವರು ಸಿ.ಪಿ. ಯೋಗೇಶ್ವರ್ ವಿರುದ್ಧ ದೂರು ನೀಡಿದ್ದಾರೆ. ನಾಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ವಿಜಯೇಂದ್ರ ಭೇಟಿ ಮಾಡಲಿದ್ದಾರೆ. ಒಂದು ವೇಳೆ ನಾಳೆ ನಡ್ಡಾ ಅನುಮತಿ ನೀಡಿದರೆ ಯೋಗೇಶ್ವರ್ ಗೆ ಗೇಟ್ ಪಾಸ್ ಖಚಿತವಾಗಲಿದೆ. ಈ ಮೂಲಕ ಪಕ್ಷದ ನಾಯಕತ್ವದ ವಿರುದ್ಧವೇ ಗುಡುಗಿದ ಸಿ.ಪಿ. ಯೇಗೇಶ್ವರ್ ಅವರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸೈಲೆಂಟ್ ಆಗಿಯೇ ಕೋಕ್ ಕೊಡಲು ಎಲ್ಲ ತಯಾರಿ ಮಾಡಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ