news18-kannada Updated:October 19, 2020, 3:53 PM IST
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
ಶಿವಮೊಗ್ಗ (ಅ.19): ಕೋವಿಡ್-19 ಹಾಗೂ ಪ್ರವಾಹ ನಿರ್ವಹಣೆ ರಾಜ್ಯ ಸರ್ಕಾರದ ಮುಂದಿರುವ ಪ್ರಮುಖ ಕಾರ್ಯವಾಗಿದೆ. ಹೆಚ್ಚಾಗುತ್ತಿರುವ ಕೊರೋನಾ ಸೋಂಕು ನಿಯಂತ್ರಣಕ್ಕೆ ತರುವ ಜೊತೆಗೆ ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕದ ಜನರಿಗೆ ಪರಿಹಾರ ಕಲ್ಪಿಸಬೇಕಾಗಿದೆ. ಈ ಮಧ್ಯೆ ರಾಜ್ಯದ ಅಭಿವೃದ್ದಿಗೂ ಕೂಡ ಗಮನ ನೀಡಬೇಕು. ಇದೇ ಕಾರಣದಿಂದಾಗಿ ಇಂದು ನಾನು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದರು. ಶಿಕಾರಿಪುರದಲ್ಲಿ ಕಸಬಾ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಸುಮಾರು 198 ಕೋಟಿ ರೂ ವೆಚ್ಚದಲ್ಲಿ ಬಹು ವರ್ಷದ ನೀರಾವರಿ ಯೋಜನೆಗೆ ಇಂದು ಚಾಲನೆ ನೀಡಿದ್ದೇನೆ. ಶಿಕಾರಿಪುರ ಮತ್ತು ಸೊರಬದ ನೀರಾವರಿ ಯೋಜನೆ ಆದಷ್ಟು ಬೇಗನೆ ಪೂರ್ಣಗೊಳ್ಳಲಿದೆ. ಶಿವಮೊಗ್ಗದ ಎಲ್ಲಾ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಲು ಸರ್ಕಾರ ಬದ್ಧವಾಗಿದೆ ಎಂದರು.
ಅಕ್ಕಮಹಾದೇವಿ ಜನ್ಮಸ್ಥಳ ಉಡುತಡಿ ಅಭಿವೃದ್ಧಿಗೂ ಬದ್ಧವಾಗಿದ್ದು, ಇದು ಕೂಡ ಆದಷ್ಟು ಬೇಗನೆ ಪೂರ್ಣಗೊಳ್ಳಲಿದೆ. ಕೋವಿಡ್ -19 ಮತ್ತು ಪ್ರವಾಹದ ನಡುವೆಯೂ ಅಭಿವೃದ್ಧಿ ನಿಲ್ಲಬಾರದು ಎಂಬುದು ನನ್ನ ಅನಿಸಿಕೆ. ಹೀಗಾಗಿ ಎಲ್ಲರ ಸಹಕಾರದಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಮುಂದಿನ 2 ವರ್ಷದಲ್ಲಿ ಶಿವಮೊಗ್ಗ ಮತ್ತು ಶಿಕಾರಿಪುರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಬಾಕಿ ಉಳಿದಿರಬಾರದು. ಅದೇ ರೀತಿ ರಾಜ್ಯದ ಎಲ್ಲಾ ಜಿಲ್ಲೆಗಳ ಅಭಿವೃದ್ಧಿಗೆ ಪಣತೊಟ್ಟಿದ್ದೇನೆ ಎಂದರು.
ಅ.21ರಿಂದ ಸಿಎಂ ವೈಮಾನಿಕ ಸಮೀಕ್ಷೆಭಾರೀ ಮಳೆ, ಪ್ರವಾಹದಿಂದ ತತ್ತರಿಸಿರುವ ಕಲ್ಯಾಣ ಕರ್ನಾಟಕದ ಸ್ಥಿತಿಗತಿ ಕುರಿತು ತಿಳಿಯಲು ಅ.21ರಂದು ಬುಧವಾರ ಮುಖ್ಯಮಂತ್ರಿಗಳು ವೈಮಾನೀಕ ಸಮೀಕ್ಷೆ ನಡೆಸಲಿದ್ದಾರೆ. ಕಲಬುರ್ಗಿ, ಯಾದಗಿರಿ, ರಾಯಚೂರು, ಬೀದರ್, ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳು ಭೀಕರ ಮಳೆ ಪ್ರವಾಹಕ್ಕೆ ತುತ್ತಾಗಿದೆ. ಮಹಾರಾಷ್ಟ್ರ ಹಾಗೂ ತೆಲಂಗಾಣದ ಅಣೆಕಟ್ಟುಗಳಿಂದ ಅಧಿಕ ಪ್ರಮಾಣದ ನೀರು ಹೊರ ಬಿಟ್ಟಿರುವ ಪರಿಣಾಮ ನದಿಗಳು ಅಪಾಯ ಮಟ್ಟ ಮೀರಿ ಉಕ್ಕಿಹರಿಯುತ್ತಿದೆ. ಪ್ರವಾಹ ಸಂತ್ರಸ್ತರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಈ ಸಂಬಂಧ ಆಯಾ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದು, ತುರ್ತು ಅಗತ್ಯ ಕ್ರಮಕ್ಕೆ 85 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದಾರೆ. ಕಳೆದೆರಡು ದಿನಗಳ ಹಿಂದೆ ಮಾತನಾಡಿದ್ದ ಅವರು ಶೀಘ್ರದಲ್ಲಿಯೇ ತಾವು ಪ್ರವಾಹ ಪೀಡಿತ ಪ್ರದೇಶಗಳ ಪ್ರವಾಸ ನಡೆಸುವುದಾಗಿ ತಿಳಿಸಿದ್ದರು.
ಈ ಕುರಿತು ಇಂದು ಮಾತನಾಡಿದ ಅವರು, ಈಗಾಗಲೇ ಪರಿಹಾರ ಕಾರ್ಯ ಕೈಗೊಳ್ಳಲಾಗಿದೆ. ಸಂತ್ರಸ್ತರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಈ ಸಂಬಂಧ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಬಳಿ ಮಾತನಾಡಿ, ಚರ್ಚೆ ನಡೆಸಲಾಗಿದೆ. ಅವರು ಕೂಡ ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆ ಎಂದರು.
ವೈಮಾನೀಕ ಸಮೀಕ್ಷೆ ಮೂಲಕ ನೆರೆ ಹಾನಿ ಪರೀಶಿಲಿಸಿ, ಪರಿಹಾರ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಸಂತ್ರಸ್ತರಿಗೆ ನೆರೆ ಪರಿಹಾರ ಕ್ರಮ ನೀಡಲಾಗುತ್ತಿದ್ದು, ಇನ್ನು ಹೆಚ್ಚಿನ ಕ್ರಮಕ್ಕೆ ಸೂಚನೆ ನೀಡಲಾಗುವುದು ಎಂದರು.
Published by:
Seema R
First published:
October 19, 2020, 3:53 PM IST