ಬೆಂಗಳೂರು (ಫೆ.04): ಸಚಿವ ಸಂಪುಟ ವಿಸ್ತರಣೆಗೆ ಇನ್ನೆರಡು ದಿನ ಬಾಕಿ ಇದ್ದು, ವಿಸ್ತರಣೆ ನಡೆಯಲಿದೆಯೋ ಅಥವಾ ಪುನರ್ ರಚನೆಯಾಗಲಿದೆಯೋ ಎಂಬ ಅನುಮಾನ ಹಲವು ಬಿಜೆಪಿ ನಾಯಕರಲ್ಲಿ ಮೂಡಿದೆ. 10:3 ಅನುಪಾತ ಅನುಸರಿಸಲು ಮುಂದಾಗಿರುವ ಸಿಎಂ, ಹಲವು ಸಚಿವಾಕಾಂಕ್ಷಿಗಳಿಗಾಗಿ ಅನೇಕ ಹಿರಿಯ ನಾಯಕರಿಗೆ ಕೊಕ್ ಕೊಡುವ ಸಾಧ್ಯತೆಗಳು ಇವೆ ಎಂಬ ಮಾತು ಕೂಡ ಕೇಳಿಬಂದಿದೆ. ಈ ಎಲ್ಲಾ ಊಹಾಪೋಹಾಗಳಿಗೆ ಖುದ್ದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತೆರೆ ಎಳೆದಿದ್ದು, ಸಂಪುಟ ವಿಸ್ತರಣೆ ಮಾತ್ರ ನಡೆಯಲಿದೆ. ಯಾವುದೇ ಕಾರಣಕ್ಕೂ ಪುನಾರಚನೆ ಮಾಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಪುಟ ಸಭೆಯಲ್ಲಿ ಈ ಕುರಿತು ಮಾತನಾಡಿರುವ ಅವರು, ಈ ಹೇಳಿಕೆ ಮೂಲಕ ಹಾಲಿ ಸಚಿವರಿಗೆ ಧೈರ್ಯ ತುಂಬಿದ್ದಾರೆ. ಹೈ ಕಮಾಂಡ್ ಮುಂದೆ ಯಾವುದೇ ಪುನರ್ರಚನೆ ಪ್ರಸ್ತಾಪವನ್ನು ಮಾಡಿಲ್ಲ. ಇದರಿಂದ ಯಾವುದೇ ಸಚಿವರು ಗೊಂದಲಕ್ಕೆ ಒಳಗಾಗುವುದು ಬೇಡ ಎಂದು ತಿಳಿಸಿದ್ದಾರೆ.
ಅಲ್ಲದೆ, ಸರ್ಕಾರ ರಚನೆಯಾಗಿ ಇನ್ನು ವರ್ಷವಾಗಿಲ್ಲ. ಈ ಹಿನ್ನೆಲೆ ಮುಂದಿನ ಆರು ತಿಂಗಳವರೆಗೂ ಯಾವುದೇ ಪುನರಾಚನೆ ನಡೆಸುವುದಿಲ್ಲ. ಇದಾದ ಬಳಿಕ ಪುನಾರಚನೆ ಮಾಡಬೇಕಾ ಬೇಡವಾ ಎಂಬ ಬಗ್ಗೆ ಹೈ ಕಮಾಂಡ್ ಕ್ರಮ ಕೈಗೊಳ್ಳಲಿದೆ. ಅಲ್ಲಿಯವರೆಗೂ ನಿಶ್ಚಿತೆಯಾಗಿ, ತಮ್ಮ ಖಾತೆಗಳನ್ನು ಜವಾಬ್ಧಾರಿಯಾಗಿ ನಿರ್ವಹಿಸಿಕೊಂಡು ಹೋಗುವಂತೆ ಭರವಸೆ ನೀಡಿದ್ದಾರೆ.
ಇದನ್ನು ಓದಿ: ಸಿಪಿ ಯೋಗೇಶ್ವರ್ಗೆ ಸಚಿವ ಸ್ಥಾನ: ಅಸಮಾಧಾನಗೊಂಡ ಮೂಲ ಬಿಜೆಪಿ ಶಾಸಕರಿಂದ ರಹಸ್ಯ ಸಭೆ
ಇನ್ನು ಪಕ್ಷದಲ್ಲಿ ಹಲವು ಆಕಾಂಕ್ಷಿಗಳು ಇದ್ದ ಹಿನ್ನೆಲೆ ಸಂಪುಟ ವಿಸ್ತರಣೆ ವೇಳೆ ಹಲವು ಹಿರಿಯ ನಾಯಕರು ಪದತ್ಯಾಗಕ್ಕೆ ಮುಂದಾಗಬೇಕು ಎಂಬ ಮಾತು ಕೇಳಿ ಬಂದಿತ್ತು. ಇದಕ್ಕೆ ಸಚಿವ ಮಾಧುಸ್ವಾಮಿ, ಡಿಸಿಎಂ ಗೋವಿಂದ ಕಾರಜೋಳ ಕೂಡ ಸಮ್ಮತಿ ಸೂಚಿಸಿ ರಾಜೀನಾಮೆ ಆಗ್ರಹಿಸಿದರೆ ನೀಡಲು ಸಿದ್ಧ ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಮೂವರು ಹಿರಿಯ ಸಚಿವರು ಕೂಡ ರಾಜೀನಾಮೆ ನೀಡುವ ಮೂಲಕ ಹೊಸಬರಿಗೆ ಅವಕಾಶ ನೀಡಲು ಸಿದ್ದರಾಗಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಈ ಎಲ್ಲಾ ಅಂತೆ-ಕಂತೆ ಕುರಿತು ಪಕ್ಷದಲ್ಲಿ ಹಿರಿಯ ನಾಯಕರು ಅಸಮಾಧಾನ ಕೂಡ ಹೊರ ಹಾಕಿದ್ದರು. ಅಲ್ಲದೇ ಏನಾಗಲಿದೆ ಎಂಬ ಗೊಂದಲಕ್ಕೆ ಒಳಗಾಗಿದ್ದರು. ಇದಕ್ಕೆಲ್ಲಾ ಈಗ ತೆರೆ ಬಿದ್ದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ