ಹಾಸನ(ಜೂ.11): ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಹಲವು ದಿನಗಳಿಂದ ತಾರಕಕ್ಕೇರಿರುವ ಚರ್ಚೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಯಡಿಯೂರಪ್ಪನವರ ವಿರೋಧಿ ಬಣದವರು ನಾಯಕತ್ವ ಬದಲಾವಣೆಗೆ ಸಹಿ ಸಂಗ್ರಹವನ್ನೂ ಮಾಡಿದ್ದರು. ಇದರ ಮಧ್ಯೆ ಹೈಕಮಾಂಡ್ ಹೇಳಿದರೆ ನಾನು ರಾಜೀನಾಮೆ ನೀಡಲೂ ಸಿದ್ಧನಿದ್ದೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದು ತೀವ್ರ ಚರ್ಚೆಗೆ ಕಾರಣವಾಗಿತ್ತು. ಅದಾದ ಬಳಿಕ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗೆ ಇಳಿಯುವುದು ಪಕ್ಕಾ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ, ನಿನ್ನೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಯಾವುದೇ ಕಾರಣಕ್ಕೂ ಸಿಎಂ ಸ್ಥಾನದಿಂದ ಯಡಿಯೂರಪ್ಪನವರ ಬದಲಾವಣೆ ಇಲ್ಲ ಎಂದು ಹೇಳಿ ಈ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದರು. ಈ ಮಾತು ಸಿಎಂ ಬಿಎಸ್ವೈಗೆ ಇನ್ನಷ್ಟು ಬಲ ತುಂಬಿದೆ. ಇಂದು ಸಿಎಂ ಯಡಿಯೂರಪ್ಪ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಮುಂದಿನ ಎರಡು ವರ್ಷ ನಾನೇ ಸಿಎಂ ಎಂದು ಸ್ಪಷ್ಟಪಡಿಸಿದ್ದಾರೆ.
ನಾನು ಉಳಿದಿರುವ ಎರಡು ವರ್ಷ ಮುಖ್ಯಮಂತ್ರಿ ಆಗಿ ಒಳ್ಳೆ ಕೆಲಸ ಮಾಡುವ ಭರವಸೆ ಕೊಡುತ್ತೇನೆ. ರಾಜ್ಯದ ಅಭಿವೃದ್ಧಿಗೆ ಗಮನ ಕೊಡುವೆ. ಕೇಂದ್ರದ ನಾಯಕರು ನನ್ನ ಮೇಲೆ ವಿಶ್ವಾಸ ಇಟ್ಟು ಯಡಿಯೂರಪ್ಪ ಅವರೇ ಮುಂದುವರಿಯುತ್ತಾರೆ ಎಂದಿದ್ದಾರೆ. ಎಲ್ಲರ ಸಹಕಾರದಿಂದ ಅಭಿವೃದ್ಧಿಯತ್ತ ಗಮನ ಕೊಡುವೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಒಳ್ಳೆಯ ಕೆಲಸ ಮಾಡುವ ಪ್ರಯತ್ನ ಮಾಡುವೆ ಎಂದು ಸಿಎಂ ಬಿಎಸ್ವೈ ಹೇಳಿದ್ದಾರೆ.
ಅರುಣ್ ಸಿಂಗ್ ಹೇಳಿಕೆಯಿಂದ ನನಗೆ 100 ರಷ್ಟು ಬಲ ಬಂದಿದೆ. ಎರಡು ವರ್ಷ ಯಾವುದೇ ಬದಲಾವಣೆ ಇಲ್ಲ, ಬಿಎಸ್ ವೈ ನೇತೃತ್ವದಲ್ಲಿ ಒಳ್ಳೆಯ ಕೆಲಸವಾಗುತ್ತಿದೆ ಎಂದಿದ್ದಾರೆ. ಇದರಿಂದ ನನ್ನ ಜವಾಬ್ದಾರಿ ಜಾಸ್ತಿ ಆಗಿದೆ. ನನ್ನ ಮೇಲೆ ಪ್ರಧಾನಿ, ಅಮಿತ್ ಶಾ ಇಟ್ಟುಕೊಂಡಿರುವ ಪ್ರೀತಿ ವಿಶ್ವಾಸವನ್ನು ಉಳಿಸಿಕೊಳ್ಳುವೆ. ಪ್ರಾಮಾಣಿಕವಾಗಿ ಅಭಿವೃದ್ಧಿ ಪರ ಕೆಲಸ ಮಾಡುತ್ತೇನೆ ಎಂದು ಹೇಳುವ ಮೂಲಕ ಈವರೆಗೆ ಇದ್ದ ಎಲ್ಲಾ ಗೊಂದಲಗಳಿಗೆ ಸಿಎಂ ತೆರೆ ಎಳೆದರು. ಇದೇ ವೇಳೆ ಪರೋಕ್ಷವಾಗಿ ತಮ್ಮ ವಿರುದ್ಧ ಷಡ್ಯಂತ್ರ ಮಾಡುತ್ತಿರುವವರಿಗೆ ಟಾಂಗ್ ನೀಡಿದರು.
ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರೇ ನಾಯಕತ್ವ ಬದಲಾವಣೆ ಇಲ್ಲ ಅಂದಿದ್ದಾರೆ. ಹಾಗಾಗಿ ಈ ಗೊಂದಲ ಮತ್ತೆ ಉದ್ಭವಿಸದು. ಮಾಧ್ಯಮದವರು ಸಹಕಾರ ನೀಡಲಿ ಎಂದರು. ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಬಿಎಸ್ವೈ, ಅವರು ಉಸ್ತುವಾರಿ ಇದ್ದಾರೆ, ಹಾಗಾಗಿ ಬರುತ್ತಿದ್ದಾರೆ ಎಂದರು.
ಇದನ್ನೂ ಓದಿ:Fresh Fruits: ರೈಲಿನಲ್ಲಿ ಬೆಂಗಳೂರಿಗೆ ಬಂದಿಳಿದ ಇಂಪೋರ್ಟೆಡ್ ಹಣ್ಣುಗಳು; ಬೆಲೆಯೂ ಕಡಿಮೆ, ತಾಜಾ ಕೂಡ..!
ಬಿ.ಎಸ್. ಯಡಿಯೂರಪ್ಪ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಯಾರೂ ಕೂಡ ಬಹಿರಂಗವಾಗಿ ಮಾತನಾಡಬಾರದು. ಜೂನ್ 16 ಅಥವಾ 17ರಿಂದ 3 ದಿನ ನಾನು ಕರ್ನಾಟಕ ರಾಜ್ಯ ಪ್ರವಾಸ ಮಾಡುತ್ತೇನೆ ಎಂದು ದೆಹಲಿಯಲ್ಲಿ ಯಡಿಯೂರಪ್ಪ ಪರವಾಗಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬ್ಯಾಟಿಂಗ್ ಮಾಡಿದ್ದರು.
ಯಡಿಯೂರಪ್ಪನವರ ವಿರುದ್ಧ ಯಾರೂ ಬಹಿರಂಗವಾಗಿ ಮಾತನಾಡಬಾರದು. ಹಾಗೇ, ಈ ಬಗ್ಗೆ ಯಡಿಯೂರಪ್ಪ ಕೂಡ ಬಹಿರಂಗ ಹೇಳಿಕೆಗಳನ್ನು ನೀಡಬಾರದು. ಬಿಜೆಪಿ ಪಕ್ಷದ ವೇದಿಕೆಯಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು. ನಾನು ರಾಜ್ಯ ಪ್ರವಾಸ ಮಾಡಿದ ಬಳಿಕ ಎಲ್ಲ ನಾಯಕರ ಅಭಿಪ್ರಾಯ ಸಂಗ್ರಹಿಸುತ್ತೇನೆ ಎಂದಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ