ಬೆಂಗಳೂರು(ಫೆ.01): ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಕೇಂದ್ರ ಸರ್ಕಾರದ 2020ನೇ ಸಾಲಿನ ಬಜೆಟ್ ಜನಸ್ನೇಹಿಯಾಗಿದೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರ ಜತೆ ಕೇಂದ್ರದ ಬಜೆಟ್ ಬಗ್ಗೆ ಮಾತಾಡಿದ ಬಿ.ಎಸ್ ಯಡಿಯೂರಪ್ಪ, ಪ್ರಧಾನಿ ಮೋದಿ ಸರ್ಕಾರ ಜನಸ್ನೇಹಿ ಮತ್ತು ದೂರದೃಷ್ಟಿ ಬಜೆಟ್ ಮಂಡಿಸಿದೆ. ಈ ಕೇಂದ್ರದ ಬಜೆಟ್ ಸೌಲಭ್ಯಗಳನ್ನು ಬಳಸಿಕೊಂಡು ದೇಶದ ಜನತೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದರು.
ಜನಸ್ನೇಹಿ ಬಜೆಟ್ ಮಂಡಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ರಿಗೆ ಅಭಿನಂದನೆಗಳು. ಹೊಸ ತೆರಿಗೆ ಹಾಕದಂತೆ ವಿನೂತನ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್ನಲ್ಲಿ ರೈತರು, ಬಡವರು ಮತ್ತು ಗ್ರಾಮೀಣ ಭಾಗಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದರು.
ಇನ್ನು ರೈತನ ಆದಾಯ ಹೆಚ್ಚಳಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ. ರೈತರ ಸಮಗ್ರ ಅಭಿವೃದ್ಧಿಗೆ ಬಜೆಟ್ನಲ್ಲಿ ಅನುಕೂಲ ಮಾಡಿಕೊಡಲಾಗಿದೆ. ವಿದ್ಯುತ್ ಸ್ವಾವಲಂಬನೆ ಸಾಧಿಸಲು ಕ್ರಮ ಕೈಗೊಳ್ಳುವ ಯೋಜನೆ ಘೋಷಿಸಲಾಗಿದೆ. ಸೌರ ಪಂಪ್ ಸೆಟ್ ಒದಗಿಸಲು ಯೋಜನೆ ಮತ್ತು ಆಯುಷ್ಮಾನ್ ಭಾರತ್ ಯೋಜನೆಗೂ ಒತ್ತು ನೀಡಲಾಗಿದೆ. ದೇಶದ ಜಿಡಿಪಿ ಪ್ರಗತಿಗೆ ಈ ಬಜೆಟ್ ಕಾರಣವಾಗಲಿದೆ. ಬೆಂಗಳೂರು ಅರ್ಬನ್ ರೈಲು ಯೋಜನೆಗೆ ಅನುಮೋದನೆ ಸಿಕ್ಕಿದೆ. ಇದರಿಂದ ರಾಜ್ಯದ ಬಹಳ ವರ್ಷದ ಬೇಡಿಕೆ ಈಡೇರಿದೆ. ಸದ್ಯದಲ್ಲೇ ಕೇಂದ್ರ ಹಾಗೂ ರಾಜ್ಯದ ಸಹಯೋಗದಲ್ಲಿ ಮೇಲಿನ ಎಲ್ಲಾ ಯೋಜನೆಗಳು ಪೂರ್ಣಗೊಳಿಸುತ್ತೇವೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: Union Budget 2020: ಬಜೆಟ್ ನಂತರ ವಿವಿಧ ವಸ್ತುಗಳ ಬೆಲೆ ಏರಿಕೆ-ಇಳಿಕೆ ಪಟ್ಟಿ
ಕೇಂದ್ರ ಸರ್ಕಾರದ 2020ನೇ ಸಾಲಿನ ಬಜೆಟ್ ಮಂಡನೆಯಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ತೆರಿಗೆ ಸುಧಾರಣೆ ಮಂತ್ರ ಪಠಿಸಿದ್ದಾರೆ. ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಕೆಲವು ವಿನಾಯಿತಿ ಘೋಷಿಸಿದ್ದಾರೆ. ಹಾಗೆಯೇ ತೆರಿಗೆ ಪಾವತಿ ವ್ಯವಸ್ಥೆ ಸರಳಗೊಳಿಸುವುದಾಗಿ ಹೇಳಿದ ನಿರ್ಮಲಾ ಸೀತಾರಾಮನ್, ಕಾಯ್ದೆಯ ಸುಧಾರಣೆಗೆ ಹೊಸ ವ್ಯವಸ್ಥೆ ಜಾರಿ ಮಾಡುವುದಾಗಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು, ಕೇಂದ್ರ ಬಜೆಟ್ನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ 85,000 ಕೋಟಿ ಅನುದಾನ ಘೋಷಣೆ ಮಾಡಿದೆ. ಎಸ್ಸಿ, ಎಸ್ಟಿ ವರ್ಗದ ಕಲ್ಯಾಣಕ್ಕಾಗಿ 53,700 ಕೋಟಿ ರುಪಾಯಿಗಳ ಅನುದಾನ ಘೋಷಣೆ ಮಾಡಲಾಗಿದೆ. ಹಿರಿಯ ನಾಗರೀಕ, ಮಹಿಳಾ ಮತ್ತು ಯುವಕರಿಗೂ ಉತ್ತಮ ಅನುದಾನ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ