ಯಡಿಯೂರಪ್ಪನವರನ್ನು ಟೀಕಿಸಿದ ಮಾತ್ರಕ್ಕೆ ನೀವು ಸಿಎಂ ಆಗಲ್ಲ; ಯತ್ನಾಳ್​ಗೆ ರೇಣುಕಾಚಾರ್ಯ ತಿರುಗೇಟು

ಯಡಿಯೂರಪ್ಪನವರ ನಡೆಯನ್ನು ಬಿಜೆಪಿ ಹೈಕಮಾಂಡ್ ಸಹಿಸಿಕೊಳ್ಳುತ್ತಿಲ್ಲ ಎಂಬುದು ಶುದ್ಧ ಸುಳ್ಳು. ಯತ್ನಾಳ್ ಅವರು ಸ್ವಾರ್ಥಕ್ಕಾಗಿ ಹೇಳಿಕೆ ಕೊಡುತ್ತಿದ್ದಾರೆಯೇ ವಿನಃ ಅದು ಉತ್ತರ ಕರ್ನಾಟಕ ಭಾಗದ ಶಾಸಕರ ಹೇಳಿಕೆ ಅಲ್ಲ. ಅವರು ಮುಖ್ಯಮಂತ್ರಿಯಾಗಲು ಹಗಲುಗನಸು ಕಾಣುತ್ತಿದ್ದಾರೆ ಎಂದು ರೇಣುಕಾಚಾರ್ಯ ಕಿಡಿ ಕಾರಿದ್ದಾರೆ.

news18-kannada
Updated:October 20, 2020, 12:51 PM IST
ಯಡಿಯೂರಪ್ಪನವರನ್ನು ಟೀಕಿಸಿದ ಮಾತ್ರಕ್ಕೆ ನೀವು ಸಿಎಂ ಆಗಲ್ಲ; ಯತ್ನಾಳ್​ಗೆ ರೇಣುಕಾಚಾರ್ಯ ತಿರುಗೇಟು
ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ
  • Share this:
ಬೆಂಗಳೂರು (ಅ. 20): ಯಡಿಯೂರಪ್ಪ ಕೇವಲ ಶಿವಮೊಗ್ಗಕ್ಕೆ ಮಾತ್ರ ಮುಖ್ಯಮಂತ್ರಿ ಎಂಬಂತಾಗಿದ್ದಾರೆ. ಅವರು ಬಿಜೆಪಿ ಹೈಕಮಾಂಡ್​ಗೂ ಸಾಕಾಗಿದ್ದಾರೆ. ಅವರು ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇರುವುದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದರು. ಅದಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ರಾಜ್ಯದಲ್ಲಿ ಯಡಿಯೂರಪ್ಪ ಆಲದ ಮರದ ಇದ್ದಂತೆ. ಆಲದ ಮರದ ಕೆಳಗೆ ಇದ್ದು ನಾವು ರಾಜಕಾರಣ ಮಾಡಬೇಕು. ಯಡಿಯೂರಪ್ಪನವರನ್ನು ಟೀಕೆ ಮಾಡಿದ ಮಾತ್ರಕ್ಕೆ ನೀವು ಸಿಎಂ ಆಗೋಕೆ ಸಾಧ್ಯವಿಲ್ಲ ಎಂದು ಲೇವಡಿ ಮಾಡಿದ್ದಾರೆ.

ಯಡಿಯೂರಪ್ಪನವರ ನಡೆಯನ್ನು ಬಿಜೆಪಿ ಹೈಕಮಾಂಡ್ ಸಹಿಸಿಕೊಳ್ಳುತ್ತಿಲ್ಲ ಎಂಬುದು ಶುದ್ಧ ಸುಳ್ಳು. ಯತ್ನಾಳ್ ಅವರು ಸ್ವಾರ್ಥಕ್ಕಾಗಿ ಹೇಳಿಕೆ ಕೊಡುತ್ತಿದ್ದಾರೆಯೇ ವಿನಃ ಅದು ಯಾವುದೇ ಪಕ್ಷದ್ದಾಗಲಿ ಅಥವಾ ಉತ್ತರ ಕರ್ನಾಟಕ ಭಾಗದ ಶಾಸಕರ ಹೇಳಿಕೆ ಅಲ್ಲ. ಅವರು ಮುಖ್ಯಮಂತ್ರಿಯಾಗಲು ಹಗಲುಗನಸು ಕಾಣುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಿಮ್ಮ ದುರಹಂಕಾರದ ಆಸೆ ಈಡೇರುವುದಿಲ್ಲ. ಉತ್ತರ ಕರ್ನಾಟಕ ಭಾಗದವರ ಸಿಎಂ ಮಾಡೋ ಬಗ್ಗೆ ಚರ್ಚೆಯೇ ಆಗಿಲ್ಲ. ಯಾರೇ ಇಂತಹ ಹೇಳಿಕೆ ನೀಡಿದರೂ ಪಕ್ಷ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತದೆ. ಯತ್ನಾಳ್ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಲಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪ ಕೇಂದ್ರಕ್ಕೂ ಸಾಕಾಗಿದ್ದಾರೆ, ಇನ್ನು ಬಹಳ ದಿನ ಅಧಿಕಾರದಲ್ಲಿ ಇರುವುದಿಲ್ಲ; ಯತ್ನಾಳ ಹೊಸ ಬಾಂಬ್

ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯಲ್ಲಿ ಬಿಜೆಪಿ ಪಕ್ಷದ ಯಾವುದೇ ನಾಯಕರ ಪಾತ್ರ ಇಲ್ಲ. ಕರ್ನಾಟಕದಲ್ಲಿ ನಾಯಕತ್ವದ ಬದಲಾವಣೆ ಇಲ್ಲ. ಅಭಿವೃದ್ಧಿಯ ವಿಷಯದಲ್ಲಿ ಯಡಿಯೂರಪ್ಪ ಯಾರಿಗೂ ತಾರತಮ್ಯ ಮಾಡಿಲ್ಲ ಎಂದು ಎಂಪಿ ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ.

ನಿನ್ನೆ ರಾತ್ರಿ ವಿಜಯಪುರದಲ್ಲಿ ಖಾಸಗಿ ಸಮಾರಂಭವೊಂದರಲ್ಲಿ ಮಾತನಾಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹೈಕಮಾಂಡ್​ಗೂ ಯಡಿಯೂರಪ್ಪ ಸಾಕಾಗಿದ್ದಾರೆ. ಯಡಿಯೂರಪ್ಪನವರ ಬಳಿಕ ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿಯಾಗಲಿದ್ದಾರೆ. ಇನ್ನು ಹೆಚ್ಚು ಸಮಯ ಅವರು ಅಧಿಕಾರದಲ್ಲಿ ಇರುವುದಿಲ್ಲ. ಈ ಹಿನ್ನೆಲೆಯಲ್ಲಿಯೇ ಮೊನ್ನೆ ಉಮೇಶ್ ಕತ್ತಿ ಅವರು ಯಡಿಯೂರಪ್ಪ ಶಿವಮೊಗ್ಗದ ಮುಖ್ಯಮಂತ್ರಿಯೋ ಅಥವಾ ರಾಜ್ಯದ ಮುಖ್ಯಮಂತ್ರಿಯೋ ಎಂದು ಪ್ರಶ್ನಿಸಿದ್ದರು. ಉತ್ತರ ಕರ್ನಾಟಕದ ಶಾಸಕರಿಂದಲೇ ಬಿಜೆಪಿಯಲ್ಲಿ ಹೊಸ ಸಿಎಂ ಆಗಲಿದ್ದಾರೆ ಎಂದು ಹೇಳಿಕೆ ನೀಡಿದ್ದು ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ.
Published by: Sushma Chakre
First published: October 20, 2020, 12:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading