ಕಲಬುರ್ಗಿ(ಸೆ.17): ಕಲಬುರ್ಗಿ ಸೇರಿದಂತೆ ಕಲ್ಯಾಣ ಕರ್ನಾಟಕದಾದ್ಯಂತ ಇಂದು ಕಲ್ಯಾಣ ಕರ್ನಾಟಕ ಉತ್ಸವ ನಡೆಯಲಿದೆ. ಹೈದರಾಬಾದ್ ಕರ್ನಾಟಕ ವಿಮೋಚನಾ ದಿನದ ಅಂಗವಾಗಿ ಆಯೋಜಿಸಿರುವ ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಕಲಬುರ್ಗಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ಆದರೆ ರಾತ್ರಿಯಿಂದ ಸುರಿಯುತ್ತಿರುವ ಮಳೆ ಕಲ್ಯಾಣ ಕರ್ನಾಟಕ ಉತ್ಸವ ಸಂಭ್ರಮಕ್ಕೆ ಅಡ್ಡಿ ಉಂಡು ಮಾಡುವ ಆತಂಕ ಎದುರಾಗಿದೆ. ಕಲುಬುರ್ಗಿ ಸೇರಿದಂತೆ ಆರು ಜಿಲ್ಲೆಗಳಲ್ಲಿ ಈ ಕಲ್ಯಾಣ ಕರ್ನಾಟಕ ಉತ್ಸವವನ್ನು ನಡೆಸಲಾಗುತ್ತದೆ. ಉತ್ಸವದ ಉದ್ಘಾಟನೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ವಿಶೇಷ ವಿಮಾನದ ಮೂಲಕ ಕಲಬುರ್ಗಿಗೆ ಆಗಮಿಸಲಿದ್ದಾರೆ. ಇಂದು ಬೆಳಗ್ಗೆ 8.30ಕ್ಕೆ ಸಿಎಂ ಬಿಎಸ್ವೈ ಸರ್ದಾರ್ ವಲ್ಲಭಬಾಯ್ ಪಟೇಲ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಿದ್ದಾರೆ. ನಂತರ 9 ಗಂಟೆಗೆ ಡಿ.ಎ.ಆರ್. ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ನಂತರ ಸಿಎಂ ಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದೇ ವೇಳೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. 150 ಕೋಟಿ ರೂಪಾಯಿ ವೆಚ್ಚದ ಜಯದೇವ ಹೃದ್ರೋಗ ಸಂಸ್ಥೆ, 837 ಕೋಟಿ ರೂಪಾಯಿ ವೆಚ್ಚದ ಕಲಬುರ್ಗಿಗೆ ನಿರಂತರ ನೀರು ಪೂರೈಕೆ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸಿಎಂ ಚಾಲನೆ ನೀಡಲಿದ್ದಾರೆ. ನಂತರ ಸಿಎಂ ಯಡಿಯೂರಪ್ಪ ನೇರವಾಗಿ ದೆಹಲಿಗೆ ತೆರಳಲಿದ್ದಾರೆ.
ಚಿಂಚೋಳಿ ಬಳಿ ಹಳ್ಳದಲ್ಲಿ ಕೊಚ್ಚಿ ಹೋದ ತಹಶೀಲ್ದಾರ್ ಕಾರು; ಮರವೇರಿ ಕುಳಿತ ಅಧಿಕಾರಿಯ ರಕ್ಷಣೆ
ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮತ್ತಿತರರು ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಭಾಗಿಯಾಗಲಿದ್ದಾರೆ. ಜಿಟಿ ಜಿಟಿ ಮಳೆಯ ನಡುವೆಯೂ ಕಲ್ಯಾಣ ಕರ್ನಾಟದ ಉತ್ಸವಕ್ಕೆ ಭರದ ಸಿದ್ಧತೆಗಳು ನಡೆದಿವೆ. ಸಿಎಂ ಭವ್ಯ ಸ್ವಾಗತಕ್ಕೆ ಜನತೆ ಸಜ್ಜುಗೊಂಡಿದ್ದಾರೆ. ರಸ್ತೆಯುದ್ದಕ್ಕೂ ಬ್ಯಾನರ್, ಬಂಟಿಂಗ್, ಫ್ಲೆಕ್ಸ್ ಗಳು ರಾರಾಜಿಸುತ್ತಿದ್ದು, ಸಿಎಂ ಮತ್ತಿತರ ಗಣ್ಯರಿಗೆ ಭವ್ಯ ಸ್ವಾಗತ ಕೋರಲಾಗಿದೆ. ಆದರೆ ಉತ್ಸವಕ್ಕೆ ಮಳೆ ಅಡ್ಡಿ ಆತಂಕ ಎದುರಾಗಿದೆ. ರಾತ್ರಿಯಿಂದಲೂ ಸುರಿಯುತ್ತಿರುವ ಮಳೆ ಹೀಗೆಯೇ ಮುಂಧುವರೆದರೆ ಸಿಎಂ ವಿಮಾನ ಲ್ಯಾಂಡ್ ಆಗೋದು ಅನುಮಾನ ಎನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ