ಹುಬ್ಬಳ್ಳಿ(ಏ.08): ಸರ್ಕಾರವನ್ನು ಹೇಗೆ ನಡೆಸಬೇಕೆನ್ನೋದು ನಮಗೆ ಗೊತ್ತಿದೆ. ನೀವು ಅದರ ಬಗ್ಗೆ ತಲೆ ಕೆಡಿಸಿಕೊಳ್ಳೋದು ಬೇಡ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ. ಬೆಂಗಳೂರಿಗೆ ತೆರಳಲು ಬೆಳಗಾವಿಯಿಂದ ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಹರಿಹಾಯ್ದರು.
ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಪರ್ಮಿಟ್ ಇಲ್ಲದ ಖಾಸಗಿ ವಾಹನಗಳ ಓಡಾಟಕ್ಕೂ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಪ್ರಯಾಣಿಕರಿಗೆ ಏನಾದ್ರೂ ಆದ್ರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಕ್ಕೆ ಮಾಧ್ಯಮಗಳ ವಿರುದ್ಧ ಸಿಡಿಮಿಡಿಗೊಂಡರು. ಪರ್ಮಿಟ್ ಮುಗಿದ ವಾಹನಗಳ ಅಡ್ಡಾಟಕ್ಕೆ ಅವಕಾಶ ಮಾಡಿಕೊಟ್ಟಿರೋದು ಅಸುಕ್ಷತೆ ಪ್ರಯಾಣಕ್ಕೆ ಸರ್ಕಾರವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ಸಿಎಂ ಸಿಡಿಮಿಡಿಗೊಂಡರು.
ಸರ್ಕಾರ ಹೇಗೆ ನಡೆಸುವುದು ಅಂತ ನಮಗೆ ಗೊತ್ತಿದೆ. ಆದರೆ ನೀವು ಅದರ ಬಗ್ಗೆ ತಲೆ ಕೊಡಿಸಕೊಳ್ಳುವುದು ಬೇಡ. ಸರ್ಕಾರ ಹೇಗೆ ಮುನ್ನಡೆಸಿಕೊಂಡು ಹೋಗಬೇಕನ್ನೋದು ಗೊತ್ತಿದೆ. ಪ್ರಯಾಣಿಕರ ಜವಾಬ್ದಾರಿ ನಾವು ತೆಗೆದುಕೊಳ್ಳುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Explainer: ನೆಟ್ ಝೀರೋ ಎಂದರೇನು?; ಕುತೂಹಲ ಹುಟ್ಟಿಸಿದ ಭಾರತ-ಅಮೆರಿಕ ಭೇಟಿ
ನಾನು ಇವತ್ತು ಬೆಂಗಳೂರಿಗೆ ಹೋಗುತ್ತಿದ್ದೇನೆ, ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ. ಖಾಸಗಿ ವಾಹನಗಳ ದುಪ್ಪಟ್ಟು ಹಣ ವಸೂಲಿ ಮಾಡುತ್ತಿಲ್ಲ. ನಾವು ನಿಗದಿ ಮಾಡಿದ ಹಣ ಮಾತ್ರ ವಸೂಲಿ ಮಾಡುತ್ತಿದ್ದಾರೆ. ಒಂದು ವೇಳೆ ನಾವು ನಿಗದಿಪಡಿಸಿದ ದರ ಬಿಟ್ಟು ದುಪ್ಪಟ್ಟು ಹಣ ವಸೂಲಿ ಮಾಡಿದ್ರೆ ಕ್ರಮ ಜರುಗಿಸುತ್ತೇವೆ. ಖಾಸಗಿ ಬಸ್ ನವರು ಹೆಚ್ಚಿನ ದರ ವಸೂಲಿ ಮಾಡುವಂತಿಲ್ಲ. ಹೆಚ್ಚು ದರ ವಸೂಲಿ ಮಾಡಿದ್ರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳೋದಾಗಿ ಎಚ್ಚರಿಸಿದರು.
ವಿಶೇಷವಾದ ಸಂದರ್ಭದಲ್ಲಿ ಖಾಸಗಿ ವಾಹನ ಓಡಿಸಲಾಗುತ್ತಿದೆ. ಪ್ರಯಾಣಿಕರು ಯಾವುದೇ ಆತಂಕ ಪಡುವುದು ಬೇಡ. ಸಾರಿಗೆ ಮುಷ್ಕರಕ್ಕೆ ಸಂಬಂಧಿಸಿದಂತೆ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಎರಡು ದಿನ ಬೆಳಗಾವಿಯಲ್ಲಿದ್ದೆ, ಲೋಕಸಭಾ ಉಪ ಚುನಾವಣೆಯಲ್ಲಿ ವಾತಾವರಣ ನಮ್ಮ ಪರವಾಗಿದೆ. ಸುರೇಶ್ ಅಂಗಡಿ ಮಾಡಿದ ಕೆಲಸಗಳು ಮತ್ತು ಪ್ರಧಾನಿ ನೇಂದ್ರ ಮೋದಿ ಅವರ ಯೋಜನೆಗಳು ಬಿಜೆಪಿ ಶ್ರೀರಕ್ಷೆಯಾಗಿವೆ. ಸುರೇಶ್ ಅಂಗಡಿ ಗೆದ್ದ ಅಂತರದಲ್ಲಿ ಅವರ ಶ್ರೀಮತಿಯವರು ಗೆಲ್ತಾರೆ. ಮಸ್ಕಿ ಹಾಗೂ ಬಸವಕಲ್ಯಾಣ ಕ್ಷೇತ್ರಳಲ್ಲಿಯೂ ಬಿಜೆಪಿ ಪರ ಅಲೆ ಇದೆ ಎಂಬ ಮಾಹಿತಿ ಸಿಕ್ಕಿದೆ. ಎರಡು ವಿಧಾನಸಭೆ ಮತ್ತು ಒಂದು ಲೋಕಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಹೆಚ್ಚಳ ಆಗ್ತಿರೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಇವತ್ತು ಪ್ರಧಾನಿಗಳ ಜೊತೆ ಸಭೆ ಇದೆ. ಪ್ರಧಾನಿಗಳ ಜೊತೆ ಚರ್ಚಿಸಿದ ನಂತರ ಕೊರೋನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕೊರೋನಾ ನಿಯಂತ್ರಣಕ್ಕೆ ತರಲು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹುಬ್ಬಳ್ಳಿಯಲ್ಲಿ ಯಡಿಯೂರಪ್ಪ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ