ಮಂಡ್ಯ(ಆ.21): ಭಾರೀ ಮಳೆಯಿಂದಾಗಿ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದು, ಪ್ರವಾಹ ಭೀತಿ ಎದುರಾಗಿದೆ. ಈ ನಡುವೆಯೇ ಇಂದು ಸಿಎಂ ಬಿಎಸ್ ಯಡಿಯೂರಪ್ಪ ಇಂದು ಮಂಡ್ಯ ಜಿಲ್ಲೆಯಲ್ಲಿರುವ ಕೆಆರ್ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದಾರೆ. ಸತತ 5 ಬಾರಿ ಸಿಎಂ ಬಿಎಸ್ವೈ ಕಾವೇರಿ ನದಿಗೆ ಬಾಗಿನ ಅರ್ಪಿಸಿದ್ದಾರೆ. ಇದರೊಂದಿಗೆ ಕಾವೇರಿ ನದಿಗೆ ಅತೀ ಹೆಚ್ಚು ಸಲ ಬಾಗಿನ ಅರ್ಪಿಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.
ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಕೃಷ್ಣರಾಜಸಾಗರ ಅಣೆಕಟ್ಟೆಗೆ ಆಗಮಿಸಿದ ಯಡಿಯೂರಪ್ಪ, ಕಾವೇರಿ ನದಿಗೆ ಬಾಗಿನ ಅರ್ಪಣೆ ಮಾಡಿದರು. ಕಳೆದ ವರ್ಷವೂ ಆಗಸ್ಟ್ 21ರಂದು ಕೆಆರ್ಎಸ್ ಜಲಾಶಯ ಭರ್ತಿಯಾಗಿತ್ತು. ಆಗ ಸಿಎಂ ಬಿಎಸ್ ಯಡಿಯೂರಪ್ಪ ಕಾವೇರಿ ತಾಯಿಗೆ ಬಾಗಿನ ಅರ್ಪಣೆ ಮಾಡಿದ್ದರು. ಈ ವರ್ಷವೂ ಸಹ ಕಾಕತಾಳೀಯ ಎಂಬಂತೆ ಆಗಸ್ಟ್ 21 ಗೌರಿ ಹಬ್ಬದ ದಿನವೇ ಕೆಆರ್ಎಸ್ ಜಲಾಶಯ ಭರ್ತಿಯಾಗಿದ್ದು, ಸಿಎಂ ಯಡಿಯೂರಪ್ಪ ಕಾವೇರಿ ನದಿಗೆ ಬಾಗಿನ ನೀಡಿದ್ದಾರೆ.
ಬಾಗಿನ ಸಮರ್ಪಣೆ ಬಳಿಕ ವೇದಿಕೆ ಕಾರ್ಯಕ್ರಮ ನಡೆಯಿತು. ಜಲಸಂಪನ್ಮೂಲ ಇಲಾಖೆಯ ಒಂದು ವರ್ಷದ ಸಾಧನೆ ಪುಸ್ತಕವನ್ನು ಸಿಎಂ ಬಿಎಸ್ವೈ ಬಿಡುಗಡೆ ಮಾಡಿದರು.
ಮೈಸೂರಿನ ವೈದ್ಯಾಧಿಕಾರಿ ಆತ್ಮಹತ್ಯೆ ಪ್ರಕರಣ: ತನಿಖೆಗೆ ಸಿಎಂ ಆದೇಶ; ಮೃತರ ಕುಟಂಬಕ್ಕೆ 50 ಲಕ್ಷ ಪರಿಹಾರ
ಬಾಗಿನ ಅರ್ಪಣೆ ಮಾಡುವ ವೇಳೆ ಸಂಸದೆ ಸುಮಲತಾ, ಸಚಿವ ರಮೇಶ್ ಜಾರಕಿ ಹೋಳಿ, ಶಾಸಕ ರವೀಂದ್ರ ಶ್ರೀಕಂಠಯ್ಯ, ಎಂಎಲ್ಸಿ ಶ್ರೀಕಂಠೇಗೌಡ, ಸಚಿವರಾದ ಸೋಮಶೇಖರ್, ನಾರಾಯಗೌಡ, ಸಂಸದ ಪ್ರತಾಪ್ ಸಿಂಹ, ಶಾಸಕ ಪುಟ್ಟರಾಜು, ಶ್ರೀನಿವಾಸ್ ಹಾಗೂ ಎಂಎಲ್ಸಿ ಅಪ್ಪಾಜಿಗೌಡ ಭಾಗಿಯಾಗಿದ್ದರು.
ಈ ನಡುವೆ ಕೊಡಗಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಈ ಪರಿಣಾಮ 124.8 ಅಡಿ ಗರಿಷ್ಠ ಮಟ್ಟವಿರುವ ಕೆಆರ್ಎಸ್ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಜಲಾಶಯಕ್ಕೆ 9,568 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ 5,318 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ.
ಬಳಿಕ ಸಿಎಂ ಬಿಎಸ್ವೈ ಎಚ್.ಡಿ.ಕೋಟೆಯ ಕಬಿನಿ ಜಲಾಶಯಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿಯೂ ಸಹ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ. ಬಳಿಕ ಕಬಿನಿ ಜಲಾಶಯದ ಬಳಿ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ. ಬಳಿಕ ನೇರವಾಗಿ ಹೆಲಿಕ್ಯಾಪ್ಟರ್ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ,
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ