ಹೊಸ ಸಂಚಾರಿ​ ನಿಯಮ; ದಂಡದ ಪ್ರಮಾಣ ಇಳಿಸಲು ಸಿಎಂ ಬಿಎಸ್​ವೈ ಸೂಚನೆ

ರಾಜ್ಯ ಸರ್ಕಾರಗಳು ದಂಡ ಇಳಿಕೆಗೆ ಮುಂದಾಗಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ ರಾಜ್ಯಗಳು ದಂಡದ ಮೊತ್ತವನ್ನು ಇಳಿಕೆ ಮಾಡುವುದರಿಂದ ಯಾವುದೇ ಅಡ್ಡಿಯಿಲ್ಲ ಎಂದು ತಿಳಿಸಿದ್ದಾರೆ. 

Seema.R | news18-kannada
Updated:September 11, 2019, 5:36 PM IST
ಹೊಸ ಸಂಚಾರಿ​ ನಿಯಮ; ದಂಡದ ಪ್ರಮಾಣ ಇಳಿಸಲು ಸಿಎಂ ಬಿಎಸ್​ವೈ ಸೂಚನೆ
ಸಿಎಂ ಬಿ.ಎಸ್.ಯಡಿಯೂರಪ್ಪ
Seema.R | news18-kannada
Updated: September 11, 2019, 5:36 PM IST
ಬೆಂಗಳೂರು (ಸೆ.11): ಮೋಟರ್​ ವಾಹನ ಕಾಯ್ದೆ ತಿದ್ದುಪಡಿ 2019ರ ಪ್ರಕಾರ ಜಾರಿಗೆ ಬಂದ  ಹೊಸ ಸಂಚಾರಿ ನಿಯಮದಿಂದಾಗಿ ಈಗಾಗಲೇ ಅನೇಕರು ದುಬಾರಿ ಮೊತ್ತದ ದಂಡ ಕಟ್ಟಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ದಂಡದ ಮೊತ್ತ ನೋಡಿಯೇ ಸ್ವಂತವಾಹನ ಚಾಲನೆ ಬಗ್ಗೆ ಯೋಚಿಸುವಂತಂಹ ಪರಿಸ್ಥಿತಿ ನಿರ್ಮಾಣವಾಗಿದೆ. 

ಸಂಚಾರಿ ನಿಯಮ ಪಾಲಿಸದ ಸವಾರರು ಭಾರೀ ದಂಡ ತೆರಬೇಕಾಗಿದ್ದು, ಈಗಾಗಲೇ ಪೊಲೀಸರ ದಂಡಕ್ಕೆ ವಾಹನ ಸವಾರರು ಬೆಚ್ಚಿ ಬಿದ್ದಿದ್ದಾರೆ. ದೇಶದೆಲ್ಲೆಡೆ ಈ ನಿಯಮದಿಂದ ಜನರು ತತ್ತರಿಸಿದ್ದು, ವಾಹ ಸವಾರರು ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ. ಅಲ್ಲದೇ ಸಂಚಾರಿ ನಿಯಮಕ್ಕೆ ಸಂಬಂಧಿಸಿದಂತೆ ಸವಾರರು ಮತ್ತು ಪೊಲೀಸರ ನಡುವೆ ವಾಗ್ವಾದಕ್ಕೆ ಕೂಡ ಕಾರಣವಾಗಿದೆ.

ಇದೇ ಹಿನ್ನೆಲೆಯಲ್ಲಿ ಈ ವಾಹನ ಸಂಚಾರ ನಿಯಮವನ್ನು ಬದಲಾವಣೆಗೆ ಈಗಾಗಲೇ ಗುಜರಾತ್​, ರಾಜಸ್ಥಾನ, ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಕೂಡ ಈ ಬಗ್ಗೆ ಚಿಂತನೆಗೆ ಮುಂದಾಗಿದ್ದು, ವಾಹನ ಸವಾರರಲ್ಲಿ ನಿಟ್ಟುಸಿರು ಬಿಡುವಂತೆ ಆಗಿದೆ.

ಈಗಾಗಲೇ ಈ ಸಂಬಂಧ ಸಾರಿಗೆ, ಗೃಹ ಇಲಾಖೆ ಉನ್ನತಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ವಾಹನ ಸವಾರರಿಗೆ ದಂಡದ ಹೊರೆ ಅಧಿಕವಾಗುತ್ತಿರುವ ಹಿನ್ನೆಲೆ ಈ ಬಗ್ಗೆ ಮಧ್ಯಮ ವರ್ಗದ ಕುಟುಂಬಗಳು ತತ್ತರಿಸಿದೆ. ಈ ಹಿನ್ನೆಲೆ ಅವರಿಗೆ ಆರ್ಥಿಕ ಹೊರೆ ಕಡಿಮೆ ಮಾಡುವುದು ಸರ್ಕಾರದ ಹೊಣೆಯಾಗಿದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ಅಧಿಕಾರಿಗಳ ಸಭೆ ಕರೆದು ದಂಡದ ಪ್ರಮಾಣ ಕಡಿತಗೊಳಿಸುವ ಬಗ್ಗೆ ಸಿಎಂ ಬಿಎಸ್​ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಗುಜರಾತ್​ ನಲ್ಲಿ ದಂಡದ ಪ್ರಮಾಣ ಇಳಿಕೆ ಮಾಡಿರುವ ಕುರಿತು ವರದಿಯನ್ನು ತರಿಸಿಕೊಂಡು ಅದರಂತೆ ರಾಜ್ಯದಲ್ಲಿ ದಂಡ ಪ್ರಮಾಣ ಇಳಿಕೆ ಕುರಿತು ಚಿಂತನೆ ನಡೆಸುವಂತೆ ಸೂಚನೆ ನೀಡಲಾಗಿದೆ.

ಇದನ್ನು ಓದಿ: ಸೆ. 14ರಂದು ಗೋವಾಕ್ಕೆ ಬಿಎಸ್​ವೈ ಭೇಟಿ; ಮಹದಾಯಿ ಸಮಸ್ಯೆ ಇತ್ಯರ್ಥಕ್ಕೆ ಹೊಸ ಭರವಸೆ

ಇನ್ನು ಈ ದಂಡದಿಂದ ಕೇವಲ ವಾಹನ ಸವಾರರಿಗೆ ಮಾತ್ರವಲ್ಲದೇ ಈ ನಿಯಮದಿಂದ ಪೊಲೀಸರಿಗೂ ತೊಂದರೆಯಾಗುತ್ತಿದೆ. ಕೆಲವು ವಾಹನ ಸವಾರರು ದಂಡ ಕಟ್ಟಲಾರದೇ ಸ್ಥಳದಲ್ಲಿಯೇ ವಾಹನ ಬಿಟ್ಟು ತೆರಳಿರುವ ಪ್ರಕರಣಗಳು ಕೂಡ ನಡೆದಿದೆ. ಇದರಿಂದ ಅವರಿಗೂ ಕೂಡ ಕಿರಿಕಿರಿಯಾಗುತ್ತಿದೆ. ಅಲ್ಲದೇ ವಾಹನಸವಾರರು ರಸ್ತೆಯಲ್ಲಿಯೇ ವಾಗ್ವಾದಕ್ಕೆ ಇಳಿಯುವುದರಿಂದ ಟ್ರಾಫಿಕ್​ ಸಮಸ್ಯೆ ಕೂಡ ಕಾಡುತ್ತಿದೆ.
Loading...

ಈ ಕುರಿತು ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ಲಕ್ಷಣ್​ ಸವದಿ, ಗುಜರಾತ್,ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯದಲ್ಲೂ ಸಹ ಟ್ರಾಫಿಕ್ ನಿಯಮಾವಳಿ ಉಲ್ಲಂಘನೆ ದಂಡದ ಪ್ರಮಾಣವನ್ನು ಕಡಿಮೆಗೊಳಿಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುತ್ತದೆ. ಈ ಸಂಬಂಧ ಇಂದು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿದ್ದು, ಜನಸಾಮಾನ್ಯರಿಗೆ ಹೊರೆಯಾಗದಂತೆ ದಂಡದ ಪ್ರಮಾಣ ಕಡಿಮೆ ಮಾಡಿ,ಕಾನೂನು ಅನುಷ್ಟಾನಗೊಳಿಸಲು ಉದ್ದೇಶಿಸಲಾಗಿದೆ ಎಂದರು

ರಾಜ್ಯಗಳಲ್ಲಿ ದಂಡದ ಪ್ರಮಾಣ ಇಳಿಕೆ ಮಾಡುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ ರಾಜ್ಯಗಳು ದಂಡದ ಮೊತ್ತವನ್ನು ಇಳಿಕೆ ಮಾಡುವುದರಿಂದ ಯಾವುದೇ ಅಡ್ಡಿಯಿಲ್ಲ ಎಂದು ತಿಳಿಸಿದ್ದಾರೆ.

First published:September 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...