ಬೆಂಗಳೂರು: ಅರಣ್ಯ ಸಂರಕ್ಷಣೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ದೇಶದ ನಿಸರ್ಗ ಅರಣ್ಯ ರಕ್ಷಣೆ ಮಾಡೋದು ನಮ್ಮ ನಿಮ್ಮ ಮೇಲೆ ಇದೆ. ಅರಣ್ಯ ಅಧಿಕಾರಿಗಳು, ಅರಣ್ಯ ವಾಸಿಗಳ ಜೊತೆ ಸೌಹಾರ್ದಯುತವಾಗಿ ಇರಬೇಕು. ಅವರ ಜೊತೆ ಅನ್ಯೋನ್ಯ ಸಂಬಂಧ ಇದ್ದರೆ ಮಾತ್ರ ಅರಣ್ಯ ರಕ್ಷಣೆ ಸಾಧ್ಯ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಅರಣ್ಯ ಅಧಿಕಾರಿಗಳ ಕಾರ್ಯಾಗಾರ ಉದ್ಘಾಟಿಸಿ ಬಳಿಕ ಮಾತನಾಡಿದರು. ಬೇಸಿಗೆ ಶುರುವಾಗ್ತಿದೆ. ಈ ವೇಳೆ ಸ್ವಲ್ಪ ಬೆಂಕಿ ಬಿದ್ದರೂ ಇಡೀ ಅರಣ್ಯ ನಾಶ ಆಗುತ್ತದೆ. ಹೀಗಾಗಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಕಾಡಿನಲ್ಲಿ ಪ್ರಾಣಿಗಳಿಗೂ ಉತ್ತಮ ಆಹಾರ ವ್ಯವಸ್ಥೆ ಮಾಡಬೇಕು. ಹಣಕಾಸಿನ ಇತಿಮಿತಿ ಒಳಗೆ ಏನೇನೋ ಮಾಡಲು ಸಾಧ್ಯವೋ ಅದನ್ನು ಇಲಾಖೆಯಲ್ಲಿ ಮಾಡಿಕೊಡುತ್ತೇನೆ. ಆದರೆ ತಾವೆಲ್ಲ ಅರಣ್ಯ ಉಳಿಸಬೇಕು, ಬೆಳೆಸಬೇಕು. ಇದರ ಬಗ್ಗೆ ಹೆಚ್ಚು ಮುತವರ್ಜಿ ವಹಿಸಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು ಎಂದು ಸಿಎಂ ಬಿಎಸ್ವೈ ಅವರು ಸೂಚನೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅರಣ್ಯ ಪ್ರದೇಶದಲ್ಲಿ ಹಣ್ಣಿನ ಮರಗಳನ್ನು ಹೆಚ್ಚು ಬೆಳೆಸಿ. ಇದರಿಂದ ಪ್ರಾಣಿ-ಪಕ್ಷಿಗಳಿಗೆ ಆಹಾರವನ್ನು ಒದಗಿಸುವುದರ ಜೊತೆ ಅರಣ್ಯ ಪ್ರದೇಶದ ಹೆಚ್ಚಳ ಆಗುತ್ತದೆ. ರಾಜ್ಯದಲ್ಲಿ ಹಸಿರು ವಲಯ ಹೆಚ್ಚಳ ಮಾಡಬೇಕು. ಈಗ ಶೇಕಡ 22.8 ರಷ್ಟು ಕಾಡಿನ ಪ್ರಮಾಣವಿದೆ. ಅದನ್ನು ಶೇಕಡಾ 33 ರಷ್ಟು ಹೆಚ್ಚಿಸಬೇಕು. ಅದಕ್ಕೆ ಅಗತ್ಯವಾದ ಎಲ್ಲಾ ರೀತಿಯ ನೆರವನ್ನು ಒದಗಿಸಲಾಗುವುದು ಎಂದು ಯಡಿಯೂರಪ್ಪ ಅವರು ಭರವಸೆ ನೀಡಿದರು.
ಇದನ್ನು ಓದಿ: ಶಿರಸಿ ಬಂದ್ ಯಶಸ್ವಿ; ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟ ಜೋರು!
ಸಭೆಯಲ್ಲಿ ಅರಣ್ಯ ಸಚಿವ ಅರವಿಂದ್ ಲಿಂಬಾವಳಿ ಮಾತನಾಡಿ, ಅಕ್ರಮ ಗಣಿಗಾರಿಕೆಯಿಂದ ಪ್ರಾಣಿಗಳು ಸಂಕಷ್ಟ ಎದುರಿಸುತ್ತಿವೆ. ಇದರಿಂದ ಪ್ರಾಣಿಗಳು ನಗರ ಪ್ರದೇಶಗಳ ಕಡೆ ಬರುತ್ತಿವೆ. ಹೀಗಾಗಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಚಟುವಟಿಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಿ. ಸಾಧ್ಯವಾಗದಿದ್ದಲ್ಲಿ ಕೆಲ ನಿಯಮಗಳನ್ನು ಹೇರಿ ಚಟುವಟಿಕೆ ಅನುಮತಿ ಕೊಡಿ. ಪ್ರಾಣಿಗಳ ದಾಳಿಗೆ ಒಳಗಾಗಿ ಮೃತಪಡುವ ಕುಟುಂಬಕ್ಕೆ ಪರಿಹಾರ ಸ್ವಲ್ಪ ಹೆಚ್ಚಳ ಮಾಡಿ. ಇದರ ಜೊತೆ ಹೆಚ್ಚು ಅರಣ್ಯ ಸಿಬ್ಬಂದಿ ನೇಮಕಕ್ಕೆ ಅವಕಾಶ ಕೊಡಿ ಎಂದು ಹೇಳಿದರು.
2008 ರಲ್ಲಿ ನೀವು ಸಿಎಂ ಆಗಿದ್ದಾಗ ಅರಣ್ಯ ಇಲಾಖೆಯಲ್ಲಿ ದೊಡ್ಡ ಬದಲಾವಣೆ ಆಗಿತ್ತು. ಈಗ ಮತ್ತೆ
ನಿಮ್ಮ ಅವಧಿಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಅರವಿಂದ್ ಲಿಂಬಾವಳಿ ಹೇಳಿದರು. ಜೊತೆಗೆ ಅರಣ್ಯ ಸಿಬ್ಬಂದಿಗಳಿಗೆ ವಾಹನಗಳ ಕೊರತೆ ಇದೆ. ಅವರು ಸ್ವಂತ ಬೈಕ್ಗಳನ್ನು ಬಳಸುತ್ತಿದ್ದಾರೆ. ವಾಹನಗಳನ್ನು ನೀಡುವುದರಿಂದ ಅರಣ್ಯ ರಕ್ಷಣೆ ಅನುಕೂಲ. ಪ್ರಾಣಿಗಳು ಹಾಗೂ ಮನುಷ್ಯ ನಡುವೆ ಸಂಘರ್ಷ ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಬ್ಯಾರಿಕೇಟ್ ವ್ಯವಸ್ಥೆ ಮಾಡಬೇಕು. ಜನರ ಮೇಲೆ ದಾಳಿ ಮಾಡುವ ಆನೆಗಳನ್ನು ಒಂದು ಕಡೆ ತರಬೇಕು. ಸೋಶಿಯಲ್ ಫಾರೆಸ್ಟ್ ಅನ್ನು ಬಯಲು ಪ್ರದೇಶದಲ್ಲಿ ಹೆಚ್ಚು ಮಾಡುತ್ತೇವೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ