ರಾಜ್ಯ ಸಂಪುಟ ರಚನೆ ಆಯ್ತು, ಇನ್ನೇನಿದ್ದರೂ ಖಾತೆ ಹಂಚಿಕೆ ಸರ್ಕಸ್; ಸ್ವಲ್ಪ ಎಡವಿದರೂ ಯಡಿಯೂರಪ್ಪ ಸರ್ಕಾರ ಢಮಾರ್?

Live Karnataka Cabinet Expansion News: ಆರ್. ಅಶೋಕ್, ಕೆ.ಎಸ್. ಈಶ್ವರಪ್ಪ, ಶ್ರೀರಾಮುಲು ಹಾಗೂ ಜಗದೀಶ್ ಶೆಟ್ಟರ್ ಅವರಿಗೆ ಯಾವ ಖಾತೆ ನೀಡುವುದು? ಎಂಬುದೇ ಇದೀಗ ಬಿಜೆಪಿ ಹೈಕಮಾಂಡ್​ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ವಿಚಾರದಲ್ಲಿ ಬಿಜೆಪಿ ನಾಯಕರು ಸ್ವಲ್ಪ ಎಡವಿದರೂ ಸರ್ಕಾರ ಪತನ ಖಚಿತ ಎಂದೂ ವ್ಯಾಖ್ಯಾನಿಸಲಾಗುತ್ತಿದೆ.

MAshok Kumar | news18
Updated:August 20, 2019, 2:43 PM IST
ರಾಜ್ಯ ಸಂಪುಟ ರಚನೆ ಆಯ್ತು, ಇನ್ನೇನಿದ್ದರೂ ಖಾತೆ ಹಂಚಿಕೆ ಸರ್ಕಸ್; ಸ್ವಲ್ಪ ಎಡವಿದರೂ ಯಡಿಯೂರಪ್ಪ ಸರ್ಕಾರ ಢಮಾರ್?
ಶ್ರೀರಾಮುಲು, ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್.
  • News18
  • Last Updated: August 20, 2019, 2:43 PM IST
  • Share this:
ಕಳೆದ ಮೂರು ವಾರಗಳಿಂದ ಕಗ್ಗಂಟಾಗಿಯೇ ಇಳಿದಿದ್ದ ರಾಜ್ಯ ಸಚಿವ ಸಂಪುಟ ಕೊನೆಗೂ ಇಂದು ರಚನೆಯಾಗಿದೆ. ಬಿ.ಎಸ್. ಯಡಿಯೂರಪ್ಪ ನೇತೃತ್ವದ ಮೊದಲ ಸಂಪುಟದಲ್ಲಿ 17 ಜನ ಶಾಸಕರು ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಲ್ಲಿಗೆ ಬಿಜೆಪಿ ಒಂದು ಹಂತದ ಸವಾಲನ್ನು ಮೆಟ್ಟಿ ನಿಂತಂತಾಗಿದೆ. ಆದರೆ, ಇದೀಗ ಬಿಜೆಪಿ ನಾಯಕರ ಮುಂದಿರುವ ದೊಡ್ಡ ಸವಾಲು ಎಂದರೆ ಖಾತೆ ಹಂಚಿಕೆ. ಯಾರ್ಯಾರಿಗೆ ಯಾವ ಯಾವ ಖಾತೆ ನೀಡಬೇಕು? ಎಂಬುದೇ ಇದೀಗ ಬಿಜೆಪಿ ನಾಯಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ಪಕ್ಷವನ್ನು ತಕ್ಕ ಮಟ್ಟಿಗೆ ಎಲ್ಲರೂ ಸಚಿವ ಸ್ಥಾನದ ಆಕಾಂಕ್ಷಿಗಳೆ. ಲಭ್ಯವಿರುವ ಖಾತೆಗಳಿಗಿಂತ ಪಕ್ಷದಲ್ಲಿನ ಆಕಾಂಕ್ಷಿಗಳ ಸಂಖ್ಯೆಯೇ ಹೆಚ್ಚು. ಇದೇ ಕಾರಣಕ್ಕೆ ರಾಜ್ಯ ಸಂಪುಟ ರಚನೆ ಎಂಬುದು ಕಳೆದ ಮೂರು ವಾರಗಳಿಂದ ಕಗ್ಗಂಟಾಗಿಯೇ ಉಳಿದಿತ್ತು. ಸಚಿವರ ಆಯ್ಕೆ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯ ಮೂಡಬಾರದು ಎಂಬ ಕಾರಣಕ್ಕೆ ಸಂಪುಟ ರಚನೆಯನ್ನು ತಡ ಮಾಡಲಾಗಿತ್ತು.

ಆದರೆ, ಬಿಜೆಪಿ ನಾಯಕರು ಕೊನೆಗೂ ಇಂದು ಸಂಪುಟ ರಚನೆ ಮಾಡಿದ್ದಾರೆ. ಅಲ್ಲಿಗೆ ಒಂದು ಹಂತದ ಸವಾಲನ್ನು ಗೆದ್ದಂತಾಗಿದೆ. ಆದರೆ, ಇದೀಗ ಆಯ್ಕೆಯಾಗಿರುವ ಎಲ್ಲಾ ಸಚಿವರು ಪ್ರಬಲ ನಾಯಕರೇ ಆಗಿದ್ದು, ಪ್ರಬಲ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಯಾರಿಗೆ ಯಾವ ಖಾತೆ? ಎಂಬುದು ಪ್ರಸ್ತುತ ಬಿಜೆಪಿ ನಾಯಕರ ಎದುರಿನ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಇದನ್ನೂ ಓದಿ : ಯಡಿಯೂರಪ್ಪ ಸಂಪುಟದಲ್ಲಿ ಹೈದ್ರಾಬಾದ್, ಉತ್ತರ ಕರ್ನಾಟಕಕ್ಕೆ ಅನ್ಯಾಯ ಆರೋಪ; ಬೂದಿ ಮುಚ್ಚಿದ ಕೆಂಡದಂತಿರುವ ಭಿನ್ನಮತ!

ಡಿಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿರುವ ಅಶೋಕ್, ಈಶ್ವರಪ್ಪ ಹಾಗೂ ರಾಮುಲು;

ಕಳೆದ ಭಾರಿ ಬಿಜೆಪಿ ಸರ್ಕಾರ ರಚಿಸಿದ್ದಾಗ ಭಿನ್ನಮತಗಳ ಕಾರಣದಿಂದಾಗಿಯೇ ಒಂದೇ ಅವಧಿಯಲ್ಲಿ ಮೂರು ಮುಖ್ಯಮಂತ್ರಿಗಳನ್ನು ಕಂಡ ಕುಖ್ಯಾತಿಗೆ ಪಕ್ಷ ಒಳಗಾಗಿತ್ತು. ಹೀಗಾಗಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಎರಡು ಡಿಸಿಎಂ ಹುದ್ದೆಗಳನ್ನು ರಚಿಸಿ ಆರ್. ಅಶೋಕ್ ಹಾಗೂ ಈಶ್ವರಪ್ಪ ಅವರನ್ನು ಈ ಸ್ಥಾನದಲ್ಲಿ ಕೂರಿಸಿ ಸಮಾಧಾನ ಪಡಿಸಲಾಗಿತ್ತು.

ಹೀಗಾಗಿ ಈ ಬಾರಿಯೂ ಈ ಇಬ್ಬರೂ ನಾಯಕರು ಉಪ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ಬಿ.ಎಸ್. ಯಡಿಯೂರಪ್ಪ ಪಕ್ಷದ ಪ್ರಬಲ ನಾಯಕ ಶ್ರೀರಾಮುಲು ಅವರಿಗೆ ಕಳೆದ ಬಾರಿಯ ಚುನಾವಣೆಯ ಸಮಯದಲ್ಲಿ ಬಿಜೆಪಿ ಬಹುಮತ ಪಡೆದರೆ ಡಿಸಿಎಂ ಹುದ್ದೆ ನೀಡುವ ಭರವಸೆ ನೀಡಿದ್ದರು.ಹೀಗಾಗಿ, ಈ ಭಾರಿಯ ಸರ್ಕಾರದಲ್ಲಿ ಎಷ್ಟು ಡಿಸಿಎಂ ಹುದ್ದೆಗಳನ್ನು ರಚಿಸಲಾಗುತ್ತದೆ? ಹಾಗೂ ಯಾರ್ಯಾರನ್ನು ಈ ಸ್ಥಾನದಲ್ಲಿ ಕೂರಿಸಲಾಗುತ್ತದೆ? ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೆ, ಈ ಮೂವರಲ್ಲಿ ಯಾರೊಬ್ಬರನ್ನು ಕಡೆಗಣಿಸಿದರೂ ಪಕ್ಷದೊಳಗೆ ಮತ್ತೊಂದು ಸುತ್ತಿನ ಭಿನ್ನಮತ ಖಚಿತ ಎಂದೂ ಹೇಳಲಾಗುತ್ತಿದೆ.

ಗೃಹ ಖಾತೆಯ ಮೇಲೆ ಕಣ್ಣಿಟ್ಟಿರುವ ಈಶ್ವರಪ್ಪ:

ಶಿವಮೊಗ್ಗ ಶಾಸಕ ಕೆ.ಎಸ್. ಈಶ್ವರಪ್ಪ ಬಿಜೆಪಿಯ ಮೊದಲ ಹಂತದ ನಾಯಕರು. ಆರಂಭದಿಂದಲೂ ಪಕ್ಷವನ್ನು ಕಟ್ಟಿ ಬೆಳೆಸಿದವರ ಪೈಕಿ ಪ್ರಮುಖರು. ಅಲ್ಲದೆ, ಶಿವಮೊಗ್ಗದಲ್ಲಿ ಬಿ.ಎಸ್. ಯಡಿಯೂರಪ್ಪನವರಿಗೆ ಸಮಾನಾಗಿ ನಿಲ್ಲಬಲ್ಲ ಏಕೈಕ ನಾಯಕ.

ಬಿಜೆಪಿಯಲ್ಲಿ ನಾಯಕತ್ವದ ವಿಚಾರದಲ್ಲಿ ಯಡಿಯೂರಪ್ಪನವರಿಗೆ ಟಾಂಗ್ ನೀಡಬೇಕು ಎಂಬ ಉದ್ದೇಶದಿಂದಲೇ ಈಶ್ವರಪ್ಪ ಕುರುಬ ಜನಾಂಗ ಸೇರಿದಂತೆ ಹಿಂದುಳಿದ ಜನ ಸಮುದಾಯದ ಮತಗಳನ್ನು ಸೆಳೆಯಲು ರಾಯಣ್ಣ ಬ್ರಿಗೇಡ್ ಅನ್ನು ಸ್ಥಾಪಿಸಿದ್ದರು. ಆದರೆ, ಯಡಿಯೂರಪ್ಪ ಸತತವಾಗಿ ಹೈಕಮಾಂಡ್ ಮೇಲೆ ಒತ್ತಡ ಹೇರಿ ರಾಯಣ್ಣ ಬ್ರಿಗೇಡ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಲ್ಲಿ ಯಶಸ್ವಿಯಾಗಿದ್ದರು.

ಹೀಗಾಗಿ ಆರಂಭದಿಂದಲೂ ಯಡಿಯೂರಪ್ಪನವರ ವಿರುದ್ಧ ಅಸಮಾಧಾನ ಹೊಂದಿರುವ ಈಶ್ವರಪ್ಪ ನಂ.2 ಹುದ್ದೆಯಾದ ಡಿಸಿಎಂ ಹುದ್ದೆಯ ಜೊತೆಗೆ ಪ್ರಬಲ ಗೃಹ ಖಾತೆಯನ್ನೂ ಕೇಳುವ ಸಾಧ್ಯತೆ ಇದೆ. ಆದರೆ, ಈ ಖಾತೆಗೂ ಆರ್. ಅಶೋಕ್ ಹಾಗೂ ಶ್ರೀ ರಾಮುಲು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ ಎಂಬುದು ಉಲ್ಲೇಖಾರ್ಹ.

ಇದನ್ನೂ ಓದಿ : Karnataka Cabinet: 15 ವರ್ಷಗಳಲ್ಲೇ ಮೊದಲ ಬಾರಿಗೆ ಸಚಿವ ಸ್ಥಾನದಿಂದ ವಂಚಿತರಾದ ಜಾರಕಿಹೊಳಿ ಸಹೋದರರು​​

ಮಾಜಿ ಸಿಎಂ ಶೆಟ್ಟರ್​ಗೆ ಯಾವ ಖಾತೆ?; ಕುತೂಹಲದಲ್ಲಿ ಜನತೆ!

ಮಾಜಿ ಸಿಎಂ ಒಬ್ಬರು ಮತ್ತೆ ಇನ್ನೊಬ್ಬರ ಸಂಪುಟದಲ್ಲಿ ಸಚಿವರಾಗಿ ಕೆಲಸ ನಿರ್ವಹಿಸುವುದು ರಾಜಕೀಯ ಸಂಪ್ರದಾಯದಲ್ಲಿ ತೀರಾ ವಿರಳ. ಹೀಗಾಗಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ ಸ್ಪೀಕರ್ ಹುದ್ದೆ ನೀಡಲಿದೆ ಎಂದೇ ರಾಜಕೀಯ ವಠಾರದಲ್ಲಿ ಹೇಳಲಾಗುತ್ತಿತ್ತು. ಆದರೆ, ಈ ಎಲ್ಲಾ ಊಹೆಗಳನ್ನೂ ಉಲ್ಟಾ ಹೊಡೆಸಿರುವ ಹೈಕಮಾಂಡ್ ಜಗದೀಶ್ ಶೆಟ್ಟರ್ ಅವರನ್ನು ಸಂಪುಟಕ್ಕೆ ಆಯ್ಕೆ ಮಾಡಿದೆ. ಆದರೆ, ಮಾಜಿ ಮುಖ್ಯಮಂತ್ರಿಗಳ ಘನತೆಗೆ ತಕ್ಕಂತೆ ಯಾವ ಖಾತೆ ನೀಡುವುದು ಎಂಬುದು ಇದೀಗ ಬಿಜೆಪಿ ನಾಯಕರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ ಎನ್ನಲಾಗುತ್ತಿದೆ.

ಗೃಹ ಇಲಾಖೆ, ಇಂಧನ ಅಥವಾ ಪಿಡಬ್ಲ್ಯೂಡಿ ಈ ಮೂರರಲ್ಲಿ ಒಂದು ಖಾತೆಯನ್ನು ಜಗದೀಶ್ ಶೆಟ್ಟರ್ ಅವರಿಗೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಉಳಿದಂತೆ ರಾಜಾಜಿ ನಗರ ಶಾಸಕ ಸುರೇಶ್ ಕುಮಾರ್, ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಸೇರಿದಂತೆ ಉಳಿದ ಶಾಸಕರಿಗೆ ಖಾತೆ ಹಂಚಿಕೆ ಕುರಿತು ರಾಜ್ಯ ಬಿಜೆಪಿ ನಾಯಕರಿಗೆ ಅಥವಾ ಹೈಕಮಾಂಡ್​ಗೆ ಯಾವುದೇ ತಲೆನೋವಿಲ್ಲ. ಆದರೆ, ಆರ್. ಅಶೋಕ್, ಕೆ.ಎಸ್. ಈಶ್ವರಪ್ಪ, ಶ್ರೀರಾಮುಲು ಹಾಗೂ ಜಗದೀಶ್ ಶೆಟ್ಟರ್ ಅವರಿಗೆ ಯಾವ ಖಾತೆ ನೀಡುವುದು? ಎಂಬುದೇ ಇದೀಗ ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ವಿಚಾರದಲ್ಲಿ ಬಿಜೆಪಿ ನಾಯಕರು ಸ್ವಲ್ಪ ಎಡವಿದರೂ ಸರ್ಕಾರ ಪತನ ಖಚಿತ ಎಂದೂ ವ್ಯಾಖ್ಯಾನಿಸಲಾಗುತ್ತಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ

First published: August 20, 2019, 2:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading