• Home
  • »
  • News
  • »
  • state
  • »
  • ಸಾಮಾಜಿಕ ಜಾಲತಾಣಗಳಲ್ಲಿ ಗೋ ಬ್ಯಾಕ್ ಸಿಎಂ ಅಭಿಯಾನ: ಚಾಮರಾಜನಗರಕ್ಕೆ ಭೇಟಿ ನೀಡದ ಬಗ್ಗೆ ಆಕ್ರೋಶ

ಸಾಮಾಜಿಕ ಜಾಲತಾಣಗಳಲ್ಲಿ ಗೋ ಬ್ಯಾಕ್ ಸಿಎಂ ಅಭಿಯಾನ: ಚಾಮರಾಜನಗರಕ್ಕೆ ಭೇಟಿ ನೀಡದ ಬಗ್ಗೆ ಆಕ್ರೋಶ

ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ

ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ

2008 ರಿಂದ ಮೂರು ವರ್ಷ ಕಾಲ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲು ಸಹ ಯಡಿಯೂರಪ್ಪ ಅವರು ಚಾಮರಾಜನಗರಕ್ಕೆ ಭೇಟಿ  ನೀಡಿರಲಿಲ್ಲ. ಚಾಮರಾಜನಗರಕ್ಕೆ 14 ಕಿಲೋ ಮೀಟರ್ ಹತ್ತಿರದಲ್ಲಿರುವ ಸಂತೇಮರಹಳ್ಳಿಗೆ ಬಂದರೆ ಹೊರತು ಚಾಮರಾಜನಗರದತ್ತ ತಿರುಗಿಯು ನೋಡಿರಲಿಲ್ಲ, ಇದು ನಗರದ ಜನತೆಯಲ್ಲಿ ಬೇಸರ ಮೂಡಿಸಿದೆ

ಮುಂದೆ ಓದಿ ...
  • Share this:

ಚಾಮರಾಜನಗರ(ನವೆಂಬರ್ 24): ಚಾಮರಾಜನಗರಕ್ಕೆ ಭೇಟಿ ನೀಡದೆ ಮಲೆಮಹದೇಶ್ವರ ಬೆಟ್ಟಕ್ಕೆ ನಾಳೆ ಆಗಮಿಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಗೋ ಬ್ಯಾಕ್ ಸಿಎಂ ಎಂಬ ಅಭಿಯಾನ ಆರಂಭವಾಗಿದೆ. ರಾಜ್ಯದ 26 ನೇ ಮುಖ್ಯಮಂತ್ರಿಯಾಗಿ 2019ರ ಜುಲೈನಲ್ಲಿ  ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪ 16 ತಿಂಗಳು ಕಳೆದರೂ ಚಾಮರಾಜನಗರದತ್ತ ಮುಖ ಮಾಡಿಲ್ಲ. ಆದರೆ, ಇದೆ ತಿಂಗಳು 25, 26 ರಂದು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗು ಶಂಕುಸ್ಥಾಪನೆಗಾಗಿ ಮಲೆಮಹದೇಶ್ವರಬೆಟ್ಟಕ್ಕೆ ಆಗಮಿಸುತ್ತಿರುವ ಯಡಿಯೂರಪ್ಪ ಚಾಮರಾಜನಗರಕ್ಕೇಕೆ ಬರುತ್ತಿಲ್ಲ, ಇಲ್ಲಿಗೆ ಬಂದ್ರೆ ತಮ್ಮ ಅಧಿಕಾರ ಹೋಗಿಬಿಡುತ್ತೆ ಎಂಬ ಮೂಢನಂಬಿಕೆಗೆ ಜೋತು ಬಿದ್ರಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದು ಜಾಲತಾಣಗಳಲ್ಲಿ ಗೋ ಬ್ಯಾಕ್ ಸಿಎಂ ಎಂಬ ಅಭಿಯಾನ ಶುರುಮಾಡಿದ್ದಾರೆ. ಮೂಢ ನಂಬಿಕೆಗೆ ಜೋತು ಬಿದ್ದು ಚಾಮರಾಜನಗರಕ್ಕೆ ಕಾಲಿಡದೆ ಮತ್ತೆ  ಇದಕ್ಕೆ ಶಾಪಗ್ರಸ್ತ ನಗರ ಎಂಬ ಹಣೆಪಟ್ಟಿ ಅಂಟಿಸಲು ಹೊರಟಿದ್ದಾರೆ,


ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಚಾಮರಾಜನಗರಕ್ಕೆ ಹತ್ತಕ್ಕು ಹೆಚ್ಚು ಬಾರಿ ಭೇಟಿ ನೀಡಿ ಐದು ವರ್ಷ ಕಾಲ ರಾಜ್ಯ ಆಳಿದರು. ನೀವು ಸಹ ಧೈರ್ಯವಾಗಿ ಬಂದಿದ್ದರೆ ಐದು ವರ್ಷ ಪೂರೈಸುತ್ತಿದ್ದಿರಿ. ಚಾಮರಾಜನಗರವೇನೋ ಬೇರೆ ಗ್ರಹದಲ್ಲಿ ಇದೆಯೆ? ಇಲ್ಲಿರುವ ನಾವೆಲ್ಲಾ ಅನ್ಯಗ್ರಹಜೀವಿಗಳೇ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪ್ರಶ್ನಿಸಿದ್ದಾರೆ.


ಮುಖ್ಯಮಂತ್ರಿಗಳೇ ಚಾಮರಾಜನಗರಕ್ಕೆ ಬರಬೇಕು ಅಂದ್ರೆ ಪುಣ್ಯ ಮಾಡಿರಬೇಕು, ಚಾಮರಾಜನಗರಕ್ಕೆ ಬಂದ್ರೆ ಅಧಿಕಾರ ಹೋಗಲ್ಲ  ಪೂರ್ಣಾವಧಿ ಅಧಿಕಾರ ಇರುತ್ತೆ ಸಿದ್ದರಾಮಯ್ಯ ತರ ಅಧಿಕಾರ ಮಾಡಬೇಕು ಎಂದ್ರೆ ಧಮ್ ಬೇಕು ಎಂದು ಕೆಲವರು ಪೋಸ್ಟ್ ಮಾಡಿದ್ದಾರೆ.
ಒಂದು ಬಾರಿ ಚಾಮರಾಜನಗರವನ್ನು ನೋಡಿ, ಪುಣ್ಯವಂತರಾಗಿ, ಇಲ್ಲಿಗೆ ಬರಬೇಕಾದರೆ ಪುಣ್ಯ ಮಾಡಿರಬೇಕು  ಎಂದು ಕೆಲವರು ಹೇಳಿದ್ದರೆ, ಇಂತಹವರಿಂದ ನಮ್ಮ ಜಿಲ್ಲೆಗೆ ಕೆಟ್ಟ ಹೆಸರು ಬರುತ್ತಿದೆ  Go back Yadiyurpappa  ಎಂದು ಮತ್ತೆ ಕೆಲವರು ಪೋಸ್ಟ್ ಮಾಡಿದ್ದಾರೆ


2008 ರಿಂದ ಮೂರು ವರ್ಷ ಕಾಲ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲು ಸಹ ಯಡಿಯೂರಪ್ಪ ಅವರು ಚಾಮರಾಜನಗರಕ್ಕೆ ಭೇಟಿ  ನೀಡಿರಲಿಲ್ಲ. ಚಾಮರಾಜನಗರಕ್ಕೆ 14 ಕಿಲೋ ಮೀಟರ್ ಹತ್ತಿರದಲ್ಲಿರುವ ಸಂತೇಮರಹಳ್ಳಿಗೆ ಬಂದರೆ ಹೊರತು ಚಾಮರಾಜನಗರದತ್ತ ತಿರುಗಿಯು ನೋಡಿರಲಿಲ್ಲ, ಇದು ನಗರದ ಜನತೆಯಲ್ಲಿ ಬೇಸರ ಮೂಡಿಸಿದೆ.
ಹಿಂದೆ ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜ ಅರಸು, ಗುಂಡೂರಾವ್, ರಾಮಕೃಷ್ಣ ಹೆಗ್ಗಡೆ, ಎಸ್.ಆರ್.ಬೊಮ್ಮಾಯಿ, ವೀರೇಂದ್ರ ಪಾಟೀಲ್ ಚಾಮರಾಜನಗರಕ್ಕೆ ಭೇಟಿ ನೀಡಿ ಹೋದ ಮೇಲೆ  ಕಾಕತಾಳೀಯ ಎಂಬಂತೆ ರಾಜಕೀಯ ಕಾರಣಗಳಿಗಾಗಿ ಅಧಿಕಾರ ಕಳೆದುಕೊಂಡಿದ್ದರು. ಆದರೆ ಅದರ ಕಳಂಕವನ್ನು ಚಾಮರಾಜಗರಕ್ಕೆ ಅಂಟಿಸಲಾಗುತ್ತು.


ಇದನ್ನೂ ಓದಿ : ಸರ್ಕಾರಿ ಶಾಲಾ ದತ್ತು ಪರಿಕಲ್ಪನೆ ದೇಶದಲ್ಲೇ ಪ್ರಥಮ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ


ಈ ಮೂಡನಂಬಿಕೆಗೆ ಜೋತು ಬಿದ್ದ ಎಸ್.ಬಂಗಾರಪ್ಪ, ವೀರಪ್ಪ ಮೊಯ್ಲಿ, ಹೆಚ್.ಡಿ.ದೇವೇಗೌಡ, ಜೆ.ಹೆಚ್.ಪಟೇಲ್. ಎಸ್.ಎಂ.ಕೃಷ್ಣ, ಧರ್ಮಸಿಂಗ್ ಅವರು ಚಾಮರಾಜನಗರಕ್ಕೆ ಬರುವ ಮನಸ್ಸು ಮಾಡಲಿಲ್ಲ. ಆದರೆ, ಬಿಜೆಪಿ-ಜೆಡಿಎಸ್ ದೋಸ್ತಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಅಧಿಕಾರದ ಕೊನೆ ದಿನಗಳಲ್ಲಿ ಮೂಢನಂಬಿಕೆಯನ್ನು ದಿಕ್ಕರಿಸಿ ಚಾಮರಾನಗರಕ್ಕೆ ಭೇಟಿ ನೀಡಿದ್ದರು.


ನಂತರ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ, ಸದಾನಂದಗೌಡ ಬರಲಿಲ್ಲ, ಜಗದೀಶ್ ಶೆಟ್ಟರ್, ತಮ್ಮ ಅವಧಿಯ ಕೊನೆ ದಿನಗಳಲ್ಲಿ ಬಂದಿದ್ದರು. ನಂತರ ಕಾಂಗ್ರೆಸ್ ಸರ್ಕಾರ ಬಂದಾಗ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ, 10ಕ್ಕು ಹೆಚ್ಚು ಬಾರಿ ಭೇಟಿ ನೀಡಿ ಐದು ವರ್ಷ ಪೂರೈಸುವ  ಮೂಲಕ ಮೂಡನಂಭಿಕೆಯನ್ನು ಹೊಸಕಿ ಹಾಕಿದ್ದರು. ಆದರೆ, ಯಡಿಯೂರಪ್ಪ ಮೂಡನಂಬಿಕೆಗೆ ಜೋತು ಬಿದ್ದು ಚಾಮರಾಜನಗರಕ್ಕೆ ಭೇಟಿ ನೀಡುತ್ತಿಲ್ಲ ಎಂಬುದು ಚರ್ಚೆಗೆ ಗ್ರಾಸವಾಗಿದೆ.

Published by:G Hareeshkumar
First published: