ರಾಜ್ಯದ ಮರಾಠ ಜನರ ಅಭಿವೃದ್ಧಿಗೆ ಪ್ರಾಧಿಕಾರ; ಮರಾಠಿ ಭಾಷೆಗೂ ಇದಕ್ಕೂ ಸಂಬಂಧವಿಲ್ಲ; ಸಿಎಂ ಬಿಎಸ್​ವೈ ಸ್ಪಷ್ಟನೆ

ಪ್ರಾಧಿಕಾರವನ್ನು ರಾಜ್ಯದಲ್ಲಿರುವ ಮರಾಠ ಜನಾಂಗದವರ ಅಭಿವೃದ್ಧಿಗಾಗಿ ರಚಿಸಲು ಉದ್ದೇಶಿಸಲಾಗಿದೆ. ಮರಾಠಿ ಭಾಷೆಗೂ ಈ ಪ್ರಾಧಿಕಾರಕ್ಕೂ ಯಾವುದೇ ಸಂಬಂಧ ಇಲ್ಲ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

 • Share this:
  ಬೆಂಗಳೂರು (ನ.17): ಕನ್ನಡ ರಾಜ್ಯೋತ್ಸವದ ತಿಂಗಳಿನಲ್ಲಿಯೇ 'ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ'ಗೆ ಸರ್ಕಾರ ಮುಂದಾಗಿದ್ದ ಕ್ರಮಕ್ಕೆ ರಾಜ್ಯದೆಲ್ಲೆಡೆ ಪ್ರತಿಭಟನೆ ವ್ಯಕ್ತವಾಗಿದೆ. ಮುಖ್ಯಮಂತ್ರಿಗಳು ಚುನಾವಣೆ ಹಿನ್ನಲೆ ಮರಾಠಿಗರ ಒಲೈಕೆಗೆ ಮುಂದಾಗಿದ್ದಾರೆ. ಈ ಮೂಲಕ ಕನ್ನಡ ಭಾಷೆಗೆ ದ್ರೋಹ ಮಾಡುತ್ತಿದ್ದಾರೆ ಎಂದು ವಿವಿಧ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದವು. ಅಲ್ಲದೇ ಇಂದು ಕೆಲ ಕರವೇ ಕಾರ್ಯಕರ್ತರು ಮುಖ್ಯಮಂತ್ರಿ ನಿವಾಸದ ಮುಂದೆ ಪ್ರತಿಭಟನೆ ನಡೆಸುವ ವಿಫಲ ಯತ್ನ ನಡೆಸಿದರು. ರಾಜ್ಯಾದ್ಯಾಂತ ವ್ಯಕ್ತವಾಗುತ್ತಿರುವ ಈ ಪ್ರತಿಭಟನೆ ಹಿನ್ನಲೆ ಈ ಕುರಿತು ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿಗಳು, ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ರಾಜ್ಯದಲ್ಲಿರುವ ಮರಾಠ ಜನಾಂಗದವರ ಅಭಿವೃದ್ಧಿಗಾಗಿ ರಚಿಸಲು ಉದ್ದೇಶಿಸಲಾಗಿದೆ. ಮರಾಠಿ ಭಾಷೆಗೂ ಈ ಪ್ರಾಧಿಕಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿಸಿದ್ದಾರೆ.  ಮರಾಠ ಜನಾಂಗದವರು ತಲಾತಲಾಂತರಗಳಿಂದ ಕರ್ನಾಟಕದಲ್ಲಿಯೇ ವಾಸವಾಗಿದ್ದು, ಆರ್ಥಿಕವಾಗಿ, ಸಾಮಾಜಿಕವಾಗಿ ಅವರ ಸರ್ವತೋಮುಖ ಅಭಿವೃದ್ಧಿಯಾಗಬೇಕು ಎನ್ನುವ ಆಶಯದಿಂದ ಈ ಪ್ರಾಧಿಕಾರವನ್ನು ಸ್ಥಾಪಿಸಲು ಕ್ರಮವಹಿಸಲಾಗುತ್ತಿದೆ ಎಂದು ಟ್ವೀಟ್​ ಮೂಲಕ ಸಮಾಜಾಯಿಷಿ ನೀಡಿದ್ದಾರೆ. ಈ ಮೂಲಕ ತಮ್ಮ ಈ ನಿರ್ಧಾರವನ್ನು ವಾಪಸ್ಸು ಪಡೆಯುವುದಿಲ್ಲ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.  ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ ಖಂಡಿಸಿರುವ ವಾಟಾಳ್​ ನಾಗರಾಜ್​, ಸರ್ಕಾರ ಈ ತೀರ್ಮಾನವನ್ನು ಇನ್ನು ಹತ್ತು ದಿನದೊಳಗೆ ಹಿಂಪಡೆಯದಿದ್ದರೆ ಡಿ.5ರಂದು ಕರ್ನಾಟಕ ಬಂದ್​ಗೆ ಕರೆ ನೀಡಲಾಗುವುದು ಎಂದು ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೇವಲ 5 ಕೋಟಿ ರೂಪಾಯಿ ಅನುದಾನ ನೀಡಿದರೆ, ಮರಾಠ ಅಭಿವೃದ್ಧಿಗೆ 50 ಕೋಟಿ ನೀಡಿದೆ. ಸರ್ಕಾರ ಈ ನಿರ್ಧಾರದಿಂದ ಈ ಕೊಡಲೇ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದ್ದಾರೆ.

  ಬಂದ್​ ಕುರಿತು ಮುಂದಿನ ಎರಡು ದಿನಗಳಲ್ಲಿ ರಾಜ್ಯದ ಎಲ್ಲ ಕನ್ನಡಪರ ಸಂಘಟನೆ, ರೈ ಮುಖಂಡರೊಂದಿಗೆ ಸಭೆ ನಡೆಸಿ ಹೋರಾಟದ ಕುರಿತು ಸಮಾಲೋಚನೆ ನಡೆಸಲಾಗುವುದು. ಇದಾದ ಬಳಿಕ ಬಂದ್​ಗೆ ಕರೆ ನೀಡಲು ಮುಂದಾಗುತ್ತೇವೆ ಎಂದು ತಿಳಿಸಿದರು.
  Published by:Seema R
  First published: