ಮುಗಿಯದ ಖಾತೆ ಕಗ್ಗಂಟು: ವೈದ್ಯಕೀಯ ಖಾತೆ ಪಡೆಯುವಲ್ಲಿ ಸುಧಾಕರ್ ಯಶಸ್ವಿ​; ಮೂವರಿಗೆ ಖಾತೆ ಮರುಹಂಚಿಕೆ

News 18 Impact: ವೈದ್ಯಕೀಯ ಶಿಕ್ಷಣ ಖಾತೆಯನ್ನು ಸುಧಾಕರ್ ಅವರಿಂದ ಕಸಿದುಕೊಂಡ ಕ್ರಮದ ಸರಿಯೇ ಎಂಬ ಬಗ್ಗೆ ನ್ಯೂಸ್​ 18 ವೆಬ್​ ಕೂಡ ವಿಸ್ತೃತ ವರದಿ ಬಿತ್ತರಿಸಿತ್ತು. ಈ ಹಿನ್ನಲೆ ಎಚ್ಚೆತ್ತ ಮುಖ್ಯಮಂತ್ರಿಗಳು ಕಡೆಗೂ ಡಾ. ಸುಧಾಕರ್​ಗೆ ವೈದ್ಯಕೀಯ ಖಾತೆ ನೀಡಿದ್ದಾರೆ

ಸಚಿವ ಡಾ.ಕೆ.ಸುಧಾಕರ್.

ಸಚಿವ ಡಾ.ಕೆ.ಸುಧಾಕರ್.

  • Share this:
ಬೆಂಗಳೂರು (ಜ. 25): ಸಂಪುಟ ವಿಸ್ತರಣೆ ಹಿನ್ನಲೆ ಖಾತೆ ಬದಲಾವಣೆ ಮಾಡಿದ್ದ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಕ್ರಮಕ್ಕೆ ಕೆಲ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದರು. ತಮ್ಮ ಬಳಿಯಿದ್ದ ಖಾತೆಗಳನ್ನು ಕಿತ್ತುಕೊಂಡ ಸಿಎಂ ವಿರುದ್ಧ ಪರೋಕ್ಷವಾಗಿ ಬಂಡಾಯ ಸಾರಿದ್ದರು. ಇದರಿಂದಾಗಿ  ಸಂದಿಗ್ಧತೆಗೆ ಸಿಲುಕಿದ್ದ ಬಿಎಸ್​ ಯಡಿಯೂರಪ್ಪ ಎರಡನೇ ಬಾರಿ ಖಾತೆ ಬದಲಾವಣೆ ಮಾಡಿ ಮತ್ತೆ ಅಸಂತೃಪ್ತರನ್ನು ತಣ್ಣಾಗಾಗಿಸುವ ಯತ್ನ ನಡೆಸಿದರು. ಅಲ್ಲದೇ , ಶಂಕರ್, ಎಂಟಿಬಿ ನಾಗರಾಜ್​​ ಸೇರಿದಂತೆ ಹಲವು ನಾಯಕರ ಮನವೊಲಿಕೆ ನಡೆಸುವ ಯತ್ನ ನಡೆಸಿದರು.  ಈ ಬಿಕ್ಕಟ್ಟು ಮಾತ್ರ ಶಮನವಾಗಿಲ್ಲ. ಅದರಲ್ಲೂ ಕೋವಿಡ್​ ಸಂದರ್ಭದಲ್ಲಿ ಬಿರುಸಿನ ಕಾರ್ಯ ನಡೆಸಿದ್ದ ಸುಧಾಕರ್​ ತಮ್ಮ ಬಳಿಯಿದ್ದ ವೈದ್ಯಕೀಯ ಖಾತೆ ಕಿತ್ತುಕೊಂಡ ಹಿನ್ನಲೆ ತೀವ್ರ ಬೇಸರಕ್ಕೆ ಒಳಗಾಗಿದ್ದರು. ಈ ಸಂಬಂಧ ಅಸಮಾಧಾನಿತರ ಜೊತೆ ತಮ್ಮ ಮನೆಯಲ್ಲಿ ಸಭೆ ನಡೆಸುವ ಮೂಲಕ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಕೊರೋನಾ ವ್ಯಾಪಕವಾಗಿ ಹಬ್ಬಿದ ಸಮಯದಿಂದಲೂ ಸುಧಾಕರ್ ಆರೋಗ್ಯ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಹಗಲು ರಾತ್ರಿ ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರೊಂದಿಗೆ ನಿರಂತರ ಸಭೆ ನಡೆಸಿ, ಆಗಬೇಕಾದ ಕೆಲಸಗಳ ಬಗ್ಗೆ ನಿಗಾ ವಹಿಸಿದ್ದರು. ಕೇಂದ್ರ ಆರೋಗ್ಯ ಇಲಾಖೆ ನೀಡುವ ಮಾರ್ಗಸೂಚಿಗಳನ್ನು ಸಮರ್ಥವಾಗಿ ರಾಜ್ಯದಲ್ಲಿ ಜಾರಿಗೆ ತರುವಲ್ಲಿ ಶ್ರಮಿಸಿದ್ದರು. ಕೊರೋನಾ ನಿಯಮ, ಮಾರ್ಗಸೂಚಿಗಳನ್ನು ದೇಶದ ಇತರೆ ರಾಜ್ಯಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಗೊಳಿಸಿದ್ದರು. ಸುಧಾಕರ್ ಅವರ ಕಾರ್ಯವೈಖರಿಯನ್ನು ಸ್ವತಃ ಕೇಂದ್ರ ಆರೋಗ್ಯ ಇಲಾಖೆ ಸಹ ಪ್ರಶಂಸಿಸಿತ್ತು. ಆದರೆ, ಇದೀಗ ವೈದ್ಯಕೀಯ ಶಿಕ್ಷಣ ಖಾತೆಯನ್ನು ಸುಧಾಕರ್ ಅವರಿಂದ ಕಸಿದುಕೊಂಡ ಕ್ರಮದ ಸರಿಯೇ ಎಂಬ ಬಗ್ಗೆ ನ್ಯೂಸ್​ 18 ವೆಬ್​​ ಕೂಡ ವಿಸ್ತೃತ ವರದಿ ಬಿತ್ತರಿಸಿತ್ತು. ಈ ಹಿನ್ನಲೆ ಎಚ್ಚೆತ್ತ ಮುಖ್ಯಮಂತ್ರಿಗಳು ಕಡೆಗೂ ಡಾ. ಸುಧಾಕರ್​ಗೆ ವೈದ್ಯಕೀಯ ಖಾತೆ ನೀಡಿದ್ದಾರೆ.

ಇತ್ತ ಆನಂದ್​ ಸಿಂಗ್​​ ಕೂಡ ತಾವೂ ಕೇಳಿದ ಪ್ರವಾಸೋದ್ಯಮ ಖಾತೆಯನ್ನು ಬಿಎಸ್​ ಯಡಿಯೂರಪ್ಪ ನೀಡಲು ವಿಫಲರಾಗಿದ್ದಾರೆ ಎಂದು ಆಕ್ರೋಶಗೊಂಡು ರಾಜೀನಾಮೆ ನೀಡುವ ಬೆದರಿಕೆಯನ್ನು ಹಾಕಿದ್ದರು.  ಜೊತೆ ಜೆಸಿ ಮಾಧುಸ್ವಾಮಿ ಕೂಡ ಸಿಎಂ ವಿರುದ್ಧ ರಾಜೀನಾಮೆ ಅಸ್ತ್ರವನ್ನು ಪ್ರಯೋಗಿಸುವ ತಂತ್ರಕ್ಕೆ ಮುಂದಾಗಿದ್ದರು. ಪದೇ ಪದೇ ಖಾತೆ ಬದಲಾವಣೆ ಮಾಡಿದರೆ ಗೌರವ ಎಲ್ಲಿ ಉಳಿಯುತ್ತದೆ ಎಂದು ತಮ್ಮ ಆಪ್ತವಲಯದಲ್ಲಿ ಪ್ರಶ್ನಿಸಿದ್ದ ಮಾಧುಸ್ವಾಮಿ, ಸಂಪುಟಕ್ಕೆ ರಾಜೀನಾಮೆ ನೀಡಲು ಯೋಜನೆ ರೂಪಿಸಿದ್ದರು. ಈ ಹಿನ್ನಲೆ ಆರ್​ ಅಶೋಕ್​ ಕೂಡ ಅವರ ಸಮಾಧಾನ ಮಾಡುವ ಯತ್ನ ನಡೆಸಿದರೂ ಯಶಸ್ವಿಯಾಗಲಿಲ್ಲ.

ತಮ್ಮ ಕಷ್ಟ ಆಲಿಸಲು ಸಿಎಂ ಮುಂದಾಗದ ಹಿನ್ನಲೆ ನಾಳೆ ಕರ್ನಾಟಕ ಜಲಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮಾಧುಸ್ವಾಮಿ ಮುಂದಾಗಿದ್ದಾರೆ.

ಇದನ್ನು ಓದಿ: ಖಾತೆ ಬದಲಾವಣೆ ಸಂಕಟ; ಕೊರೋನಾ ಸಂಕಷ್ಟ ಕಾಲದಲ್ಲಿ ವೈದ್ಯಕೀಯ ಶಿಕ್ಷಣ ಖಾತೆ ಬದಲಾವಣೆ ಅಗತ್ಯವಿತ್ತೆ?

ಈ ಮೂವರು ನಾಯಕರು ಬಂಡಾಯವೆದ್ದ ಹಿನ್ನಲೆ ಸರ್ಕಾರಕ್ಕೆ ತೊಂದರೆಯಾಗಬಹುದು ಎಂದು ಅರಿತ ಸಿಎಂ ಬಿಎಸ್​ವೈ ಈಗ ಮೂರನೇ ಬಾರಿ ಖಾತೆ ಮರು ಹಂಚಿಕೆ ಮಾಡಿದ್ದಾರೆ. ಜೆಸಿ ಮಾಧುಸ್ವಾಮಿಗೆ ಪ್ರವಾಸೋದ್ಯಮ ಮತ್ತು ಪರಿಸರ ಇಲಾಖೆ, ಆನಂದ್ ಸಿಂಗ್ ಗೆ ಮೂಲ ಸೌಕರ್ಯ ಅಭಿವೃದ್ಧಿ, ವಕ್ಭ್ ಮತ್ತು ಹಜ್ ಇಲಾಖೆ ನೀಡಲಾಗಿದೆ.

ಮತ್ತಷ್ಟು ತೀವ್ರಗೊಂಡ ಅಸಮಾಧಾನ

ಸಚಿವರ ರಾಜೀನಾಮೆ ಅರಿಯುತ್ತಿದ್ದಂತೆ ಹೊಸ ಖಾತೆ ಜವಾಬ್ದಾರಿ ನೀಡಿ ಅವರನ್ನು ಸಮಾಧಾನ ಮಾಡುವ ಯತ್ನ ನಡೆಸಿರುವ ಸಿಎಂ ಕ್ರಮದಿಂದ ಆನಂದ್​ ಸಿಂಗ್​ ಅಸಮಾಧಾನ ಮತ್ತಷ್ಟು ತೀವ್ರಗೊಂಡಿದೆ. ಪ್ರವಾಸೋದ್ಯಮ ಖಾತೆ ಬೇಡಿಕೆ ಇಟ್ಟ ಅವರಿಗೆ  ಮೂಲ ಸೌಕರ್ಯ ಅಭಿವೃದ್ಧಿ, ವಕ್ಭ್ ಮತ್ತು ಹಜ್ ಇಲಾಖೆ  ನೀಡಲಾಗಿದೆ, ಮತ್ತೆ ತಮ್ಮ ಕೇಳಿದ ಖಾತೆ ನೀಡದೆ ಇರುವ ಹಿನ್ನಲೆ ಹೊಸ ಖಾತೆಯ ಜವಬ್ದಾರಿಯನ್ನು ತೆಗೆದುಕೊಳ್ಳದೇ ಇರಲು ಆನಂದ ಸಿಂಗ್​ ನಿರ್ಧಾರ ಮಾಡಿದ್ದಾರೆ. ಈ ಮೂಲಕ  ಮುಖ್ಯಮಂತ್ರಿಗಳಿಗೆ ತಮ್ಮ ಅಸಂತೃಪ್ತಿಯ ಸಂದೇಶ ರವಾನಿಸಿದ್ದಾರೆ.  ಈ ಮೂಲಕ ಖಾತೆ ಕಗ್ಗಂಟ್ಟು ಇನ್ನಷ್ಟು ಬಿಗಿ ಕೊಂಡಿದೆ.
Published by:Seema R
First published: