ಬೆಂಗಳೂರು (ಮಾ. 8): ಬಿಜೆಪಿ ಸರ್ಕಾರ ಅನೈತಿಕ ಮಾರ್ಗದಿಂದ ಬಂದಿದೆ ಎಂದು ಬಜೆಟ್ ಮಂಡನೆಗೂ ಮುನ್ನವೇ ಸಭಾತ್ಯಾಗ ಮಾಡಿದ ಕಾಂಗ್ರೆಸ್ ನಡೆ ವಿರುದ್ಧ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು. ಬಜೆಟ್ ಮಂಡನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಯಾವುದಾದರೂ ವಿರೋಧ ಪಕ್ಷ ಬಜೆಟ್ ಮಂಡನೆ ವೇಳೆ ಬಾಯ್ಕಾಟ್ ಮಾಡಿರುವ ಉದಾಹರಣೆ ಇದೆಯಾ ಎಂದು ಪ್ರಶ್ನಿಸಿದರು. ಇದೇ ವೇಳೆ ಕಾಂಗ್ರೆಸ್ ನಡೆ ವಿರುದ್ಧ ಗರಂ ಆಗಿದ್ದ ಮುಖ್ಯಮಂತ್ರಿಗಳು, ಬರುವ ಚುನಾವಣೆ ಯಲ್ಲಿ ನಾವು 135 ಸ್ಥಾನ ಗೆದ್ದು, ಸಿದ್ದರಾಮಯ್ಯರನ್ನು ಮತ್ತೊಮ್ಮೆ ವಿರೋಧ ಪಕ್ಷದಲ್ಲಿ ಕೂರಿಸುತ್ತೇನೆ ಎಂದು ಬಹಿರಂಗ ಸವಾಲ್ ಹಾಕಿದರು. ಒಂದು ವೇಳೆ ನನ್ನ ಮಾತು ತಪ್ಪಿದರೆ ನನ್ನನ್ನು ನೀವು ಯಡಿಯೂರಪ್ಪ ಅಂತಾ ಕರೀಬೇಡಿ ಎಂದರು. ಸಿದ್ದರಾಮಯ್ಯ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ಬಗ್ಗೆ ಅವರು ಏನು ಹೇಳುವುದು. ಅವರು ಸದನಕ್ಕೆ ಬರಲಿ, ನಾವು ಅವರ ಕಾಲದಲ್ಲಿ ಏನೇನು ಆಗಿದೆ ಎಂದು ಬಿಚ್ಚಿಡುತ್ತೇವೆ. ಸದನಕ್ಕೆ ಬರಲಿ ಎಂದು ಸಿದ್ದರಾಮಯ್ಯಗೆ ಸವಾಲ್ ಹಾಕಿದರು
ಸಮತೋಲನದ ಬಜೆಟ್
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ರೂಪಿಸಿದ ಬಜೆಟ್ ಇದಾಗಿದ್ದು, ಇಂದು 8ನೇ ಬಾರಿಗೆ ಬಜೆಟ್ ಮಂಡಿಸಿದ್ದೇನೆ. ಕೊರೊನಾದಿಂದ ಆರ್ಥಿಕ ಸಂಕಷ್ಟ ಎದುರಾಗಿದೆ. ಲಾಕ್ಡೌನ್ನಿಂದ ಆರ್ಥಿಕತೆಗೆ ಹೊಡೆತ ಬಿದ್ದಿತ್ತು. ಈ ಆರ್ಥಿಕ ವರ್ಷದ ಕೊನೆಗೆ ಸ್ಥಿತಿ ಸುಧಾರಣೆಯಾಗಿದ್ದು, ಬಜೆಟ್ನಲ್ಲಿ ವಿತ್ತೀಯ ಶಿಸ್ತನ್ನು ಕಾಪಾಡಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಿಳಿಸಿದರು. ಅತ್ಯಂತ ಸಂಕಷ್ಟದ ಸಂದರ್ಭದಲ್ಲಿ ರೂಪಿಸಲಾದ ಬಜೆಟ್ ಇದಾಗಿದೆ. ನೈಸರ್ಗಿಕ ವಿಕೋಪ, ಪ್ರವಾಹ, ಕೋವಿಡ್ ಕಾರಣ ಇಡೀ ರಾಜ್ಯದ ತಲ್ಲಣಗೊಂಡು ಆರ್ಥಿಕ ಚಟುವಟಿಕೆಗಳು ಸ್ಥಗಿತ ಗೊಂಡಿರೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದರಿಂದ ರಾಜಸ್ವ ಸಂಗ್ರಹಣೆಗೂ ದೊಡ್ಡ ಪೆಟ್ಟು ಬಿದ್ದಿದೆ. ಆದರೂ ಕೂಡ ಧೃತಿಗೆಡದೆ ಅಭಿವೃದ್ಧಿಗೆ ಹಣ ಒದಗಿಸಿದ್ದೇನೆ ಎಂದರು.
ಇದನ್ನು ಓದಿ: ಅಯೋಧ್ಯೆಯಲ್ಲಿ ಯಾತ್ರಿ ನಿವಾಸ್ ನಿರ್ಮಾಣಕ್ಕೆ 10 ಕೋಟಿ ರೂ ಮೀಸಲು
ಅಭಿವೃದ್ಧಿ ಮತ್ತು ಜನ ಕಲ್ಯಾಣ ಕಾರ್ಯಕ್ರಮಕ್ಕೆ ಅನುದಾನ ಕೊರತೆ ಯಾಗದ ರೀತಿ ಎಚ್ಚರಿಕೆ ವಹಿಸಲಾಗಿದೆ. ಈ ದೃಷ್ಟಿಯಿಂದ ಸಂಕಷ್ಟದ ಸವಾಲುಗಳಿಗೆ ಪರಿಹಾರ ವುಳ್ಳು , ಸಮತೋಲನ ಬಜೆಟ್ ಇದಾಗಿದೆ. ಪ್ರತಿಕೂಲಪರಿಸ್ಥಿತಿ ಯಲ್ಲೂ ಕೂಡ ಸರ್ವವ್ಯಾಪಿ, ಸರ್ವಸೃಷ್ಟಿ ಬಜೆಟ್ ರೂಪಿಸಿದ್ದೇನೆ. ಕಳೆದ ಬಾರಿಗಿಂತ 8500 ಬಜೆಟ್ ಗಾತ್ರ ಜಾಸ್ತಿ ಯಾಗಿದೆ. ಯಾರಿಗೂ ಹೊರೆಯಾಗದ ಬಜೆಟ್ ಇದಾಗಿದ್ದು, ಯಾವುದಕ್ಕೂ ತೆರಿಗೆ ಹಾಕಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.
ಎಲ್ಲ ವಲಯಗಳು, ಎಲ್ಲಾ ಜಿಲ್ಲೆಗಳಿಗೆ ವಿಶೇಷ ಕಾರ್ಯಕ್ರಮ ಕೊಟ್ಟು, ಸಮತೋಲನ ಕಾಪಾಡಿದ್ದೇನೆ. ಮಹಿಳೆಯರ ಸ್ವಾವಲಂಬಿ, ಉದ್ಯಮಶೀಲತೆ, ಅದ್ಬುಯದಕ್ಕೆ ನೆರವಾಗುವ ಕಾರ್ಯಕ್ರಮ ರೂಪಿಸಿದ್ದೇವೆ. ಉದ್ಯೋಗಸ್ಥ ಮಹಿಳೆಯರಿಗೆ ಪ್ರೋತ್ಸಾಹ ಮಾಡಲಾಗಿದೆ. ಸೇವಾ ವಲಯದ ಮಹಿಳಾ ಉದ್ಯಮಿಗಳಿಗೆ ಸಾಲ ಸೌಲಭ್ಯ ಕೊಡಲಾಗಿದೆ. ಸಂಜೀವಿನಿ ಮೂಲಕ ಆರು ಸಾವಿರ ಸಣ್ಣ ಕೈಗಾರಿಕೆಗೆ ಒತ್ತು ನೀಡುವುದರ ಜೊತೆಗೆ ಗಾರ್ಮೆಂಟ್ ಮಹಿಳಾ ಉದ್ಯೋಗಿಗಳಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ಯೋಜನೆ ಜಾರಿಗೆ ಮುಂದಾಗಿದ್ದೇವೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ