ಎಂಟು ಬೇಡಿಕೆ ಈಡೇರಿಸಿದ್ದೇವೆ; ಹಠ ಬಿಟ್ಟು ಕೆಲಸಕ್ಕೆ ಬನ್ನಿ: ಸಾರಿಗೆ ನೌಕರರಿಗೆ ಸಿಎಂ ಕರೆ

ಸರ್ಕಾರದ ಆದಾಯದಲ್ಲಿ ಶೇ. 85 ಭಾಗ ಸರ್ಕಾರಿ ನೌಕರರ ಪಿಂಚಣಿ, ಸಂಬಳ ಇತ್ಯಾದಿಗೆ ವೆಚ್ಚವಾಗುತ್ತಿದೆ. ಈ ಪರಿಸ್ಥಿತಿಯಲ್ಲಿ 6ನೇ ವೇತನ ಜಾರಿ ಅಸಾಧ್ಯ. ಇದನ್ನು ಅರಿತು ಸಾರಿಗೆ ನೌಕರರು ಮುಷ್ಕರ ಕೈಬಿಡಬೇಕು ಎಂದು ಸಿಎಂ ಬಿಎಸ್​ವೈ ಕರೆ ನೀಡಿದ್ದಾರೆ.

ಸಿಎಂ ಬಿ.ಎಸ್.​ಯಡಿಯೂರಪ್ಪ.

ಸಿಎಂ ಬಿ.ಎಸ್.​ಯಡಿಯೂರಪ್ಪ.

 • Share this:
  ಬೆಂಗಳೂರು(ಏ. 09): ಆರನೇ ವೇತನ ಜಾರಿಗೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಮೂರನೇ ದಿನವೂ ಮುಂದುವರಿಯುತ್ತಿದೆ. ವೇತನ ಜಾರಿ ಮಾಡದಿರುವ ಸರ್ಕಾರದ ನಿಲುವೂ ಅಚಲವಾಗಿಯೇ ಇದೆ. ಎರಡೂ ಕಡೆಯ ಹಠಮಾರಿ ಧೋರಣೆಯಿಂದ ಜನಸಾಮಾನ್ಯರು ಹೈರಾಣಾಗಿ ಹೋಗಿದ್ದಾರೆ. ಈ ವೇಳೆ, ಸಿಎಂ ಯಡಿಯೂರಪ್ಪ ಅವರು ಸಾರಿಗೆ ನೌಕರರಿಗೆ ಆರನೇ ವೇತನ ಆಯೋಗದ ವರದಿ ಅನ್ವಯ ಮಾಡಲು ಸಾಧ್ಯವಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದು, ಸರ್ಕಾರದ ಆರ್ಥಿಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಂತೆ ಕೇಳಿಕೊಂಡಿದ್ದಾರೆ.

  ಸರ್ಕಾರದ ಆದಾಯದಲ್ಲಿ ಶೇ. 88ರಷ್ಟು ಭಾಗ ಸರ್ಕಾರಿ ನೌಕರರ ವೇತನ, ಪಿಂಚಣಿ ಮತ್ತಿತರೆಗೆ ವೆಚ್ಚವಾಗುತ್ತಿದೆ. ಉಳಿದ 15 ಭಾಗ ಮಾತ್ರ ಅಭಿವೃದ್ಧಿ ಕಾರ್ಯಕ್ಕೆ ಸಿಗುತ್ತಿದೆ. ಇವತ್ತಿನ ಈ ಪರಿಸ್ಥಿತಿಯಲ್ಲಿ ಆರನೇ ವೇತನ ಜಾರಿ ಸಾಧ್ಯವೇ ಇಲ್ಲ. ಸರ್ಕಾರಿ ನೌಕರರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಅವರು ಯಾವುದೇ ಕಾರಣಕ್ಕೂ ಹಠಕ್ಕೆ ಬೀಳಬಾರದು ಎಂದು ಮುಖ್ಯಮಂತ್ರಿಗಳು ಕರೆ ನೀಡಿದ್ಧಾರೆ.

  ಈಗಾಗಲೇ ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ ಎಂಟನ್ನು ಈಡೇರಿಸಿದ್ಧೇವೆ. ಅವುಗಳಲ್ಲಿ ಲೋಪದೋಷ ಇದ್ದರೆ ಸರಿಪಡಿಸುತ್ತೇವೆ. ಯಾರದ್ದೋ ಮಾತಿಗೆ ಬಲಿಯಾಗಿ ಈ ರೀತಿ ಹಠ ಮಾಡುವುದು ಸರಿಯಲ್ಲ. ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದನ್ನು ಗಮನಿಸಿ ಮುಷ್ಕರ ಕೈಬಿಟ್ಟು ಕೆಲಸಕ್ಕೆ ಹಾಜರಾಗಿ ಎಂದು ಸಾರಿಗೆ ನೌಕರರಿಗೆ ಸಿಎಂ ಸಲಹೆ ನೀಡಿದ್ದಾರೆ.

  ಇದನ್ನೂ ಓದಿ: Coronavirus - ದೇಶದಲ್ಲಿ ಮತ್ತೆ ಒಂದೂಕಾಲು ಲಕ್ಷಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆ

  ಸಾರಿಗೆ ನೌಕರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕೊಡಬಹುದಲ್ಲವಾ ಎಂಬ ಮಾಧ್ಯಮದ ಪ್ರಶ್ನೆಗೆ ಸಿಎಂ ಯಡಿಯೂರಪ್ಪ, ಯಾರ ಬಳಿ ಮಾತುಕತೆ ಮಾತನಾಡೋದು ಎಂದು ಮರಳಿ ಪ್ರಶ್ನಿಸಿದ್ದಾರೆ. ಈ ಮೂಲಕ ಕೋಡಿಹಳ್ಳಿ ಚಂದ್ರಶೇಖರ್ ಅವರು ಈ ಮುಷ್ಕರದ ನೇತೃತ್ವ ವಹಿಸಿಕೊಂಡಿರುವುದಕ್ಕೆ ಸಿಎಂ ಪರೋಕ್ಷ ಅಕ್ರೋಶ ವ್ಯಕ್ತಪಡಿಸಿದ್ದಾರೆ.

  ಒಂದು ವೇಳೆ, ಮುಷ್ಕರ ಕೈಬಿಡದಿದ್ದರೆ ಸರ್ಕಾರ ಮುಂದಿನ ಕ್ರಮ ಕೈಗೊಳ್ಳುತ್ತದೆ. ಖಾಸಗಿ ಬಸ್ಸುಗಳ ಮೂಲಕ ಪರ್ಯಾಯ ಸಾರಿಗೆ ವ್ಯವಸ್ಥೆ ನಡೆಸುತ್ತೇವೆ. ತಮಗೂ ಆಡಳಿತ ನಡೆಸುವುದು ಗೊತ್ತಿದೆ ಎಂದು ಸಿಎಂ ನಿನ್ನೆಯೂ ಗರಂ ಆಗಿ ಹೇಳಿಕೆ ನೀಡಿದ್ದರು. ಡಿಸಿಎಂ ಲಕ್ಷ್ಮಣ ಸವದಿ ಅವರಂತೂ ಈ ಮುಷ್ಕರ ಸಾರಿಗೆ ನಿಗಮಗಳ ಖಾಸಗೀಕರಣಕ್ಕೆ ಎಡೆಯಾಗಬಾರದು ಎಂದೂ ಎಚ್ಚರಿಕೆ ನೀಡದ್ದಾರೆ.

  ಮಂಗಳವಾರ ಪ್ರಾರಂಭವಾದ ಸಾರಿಗೆ ನೌಕರರ ಮುಷ್ಕರ ರಾಜ್ಯಾದ್ಯಂತ ಮೂರು ದಿನಗಳಿಂದ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಓಡಾಟಕ್ಕೆ ಸರ್ಕಾರಿ ಬಸ್ಸುಗಳನ್ನೇ ನೆಚ್ಚಿಕೊಂಡ ಬಹುತೇಕ ಪ್ರಯಾಣಿಕರು ಪರದಾಡುವಂತಹ ಸ್ಥಿತಿ ಇದೆ. ಖಾಸಗಿ ಬಸ್ಸುಗಳು ಕಾರ್ಯಾಚರಣೆಗೆ ಇಳಿದರೂ ಕೂಡ ಸಮರ್ಪಕ ರೀತಿಯಲ್ಲಿ ಸಾರಿಗೆ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಪ್ರಯಾಣಿಕರೂ ಕೂಡ ಖಾಸಗಿ ಬಸ್ಸುಗಳ ಬಗ್ಗೆ ಅನುಮಾನದಿಂದಲೇ ನೋಡುತ್ತಿದ್ಧಾರೆ. ಜೊತೆಗೆ ಕೆಲ ಕಡೆ ಖಾಸಗಿ ಬಸ್ಸುಗಳು ಮನಬಂದಂತೆ ಟಿಕೆಟ್ ದರ ನಿಗದಿ ಮಾಡಿರುವುದು ತಿಳಿದುಬಂದಿದೆ.

  ವರದಿ: ಕೃಷ್ಣ ಜಿ.ವಿ.
  Published by:Vijayasarthy SN
  First published: