• Home
  • »
  • News
  • »
  • state
  • »
  • ರಾಯಚೂರು ಜಿಲ್ಲೆಗೆ ಈ ಬಾರಿ ಇಲ್ಲವಾ ಮಂತ್ರಿ ಭಾಗ್ಯ? ಸಚಿವ ಸ್ಥಾನಕ್ಕೆ ಅಡ್ಡವಾಗಿ ನಿಂತಿದೆ ಈ ಒಂದು ಕ್ಷೇತ್ರ

ರಾಯಚೂರು ಜಿಲ್ಲೆಗೆ ಈ ಬಾರಿ ಇಲ್ಲವಾ ಮಂತ್ರಿ ಭಾಗ್ಯ? ಸಚಿವ ಸ್ಥಾನಕ್ಕೆ ಅಡ್ಡವಾಗಿ ನಿಂತಿದೆ ಈ ಒಂದು ಕ್ಷೇತ್ರ

 ಬಿಎಸ್​ ಯಡಿಯೂರಪ್ಪ

ಬಿಎಸ್​ ಯಡಿಯೂರಪ್ಪ

ಮುಂಬರುವ ಸಂಪುಟ ವಿಸ್ತರಣೆಯಲ್ಲಿ ರಾಯಚೂರು ಜಿಲ್ಲೆಗೆ ಸಚಿವ ಸ್ಥಾನ ಸಿಗುವುದು ಅನುಮಾನ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಆ ಒಂದು ಕ್ಷೇತ್ರ. ಈ ಕ್ಷೇತ್ರಕ್ಕೆ ಚುನಾವಣೆ ಆಗುವವರೆಗೂ ರಾಯಚೂರಿನವರಿಗೆ ಮಂತ್ರಿಭಾಗ್ಯದ ಸಾಧ್ಯತೆ ಇಲ್ಲ.

  • Share this:

ರಾಯಚೂರು(ಫೆ. 03): ಹಲವು ದಿನಗಳಿಂದ ಸಂಪುಟ ವಿಸ್ತರಣೆ ಮಾಡಲು ಸದಾ ಒಂದಿಲ್ಲೊಂದು ಸಮಸ್ಯೆಗಳು ಎದುರಾಗುತ್ತಿದ್ದವು. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ಫೆ. 6ಕ್ಕೆ ಸಂಪುಟ ವಿಸ್ತರಣೆ ಆಗುವುದು ಖಚಿತವಾಗಿದೆ. ಆದರೆ, ಈ ಬಾರಿಯೂ ರಾಯಚೂರು ಜಿಲ್ಲೆಗೆ ಪ್ರಾತಿನಿಧ್ಯ ಸಿಗುತ್ತದೆ ಎಂದುಕೊಂಡವರಿಗೆ ಮತ್ತೆ ನಿರಾಸೆಯಾಗಲಿದೆ. ಮುಂಬರುವ ಸಂಪುಟ ವಿಸ್ತರಣೆಯಲ್ಲಿ ರಾಯಚೂರು ಜಿಲ್ಲೆಗೆ ಸಚಿವ ಸ್ಥಾನ ಸಿಗುವುದು ಅನುಮಾನ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಆ ಒಂದು ಕ್ಷೇತ್ರ. ಈ ಕ್ಷೇತ್ರಕ್ಕೆ ಚುನಾವಣೆ ಆಗುವವರೆಗೂ ರಾಯಚೂರಿನವರಿಗೆ ಮಂತ್ರಿಭಾಗ್ಯದ ಸಾಧ್ಯತೆ ಇಲ್ಲ.


ಯಡಿಯೂರಪ್ಪ ಸರಕಾರ ರಚನೆಯಾಗಲು ಕಾರಣರಾದ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಅವರಿಗೆ ಮೀಸಲಿಟ್ಟು ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಪ್ರತಾಪಗೌಡ ಪಾಟೀಲ್ 2018 ರಲ್ಲಿ ಚುನಾವಣೆಯಲ್ಲಿ ಅಕ್ರಮವಾಗಿ ಮತದಾನ ಮಾಡಿಸಿದ್ದಾರೆ ಎಂಬ ಆರೋಪದ ಪ್ರಕರಣ ಈಗ ನ್ಯಾಯಾಲಯದ ವಿಚಾರಣೆಯಲ್ಲಿದೆ. ಇದೇ ಕಾರಣಕ್ಕೆ ಮಸ್ಕಿ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿಲ್ಲ. ನ್ಯಾಯಾಲಯದಲ್ಲಿ ಈ ವಿಚಾರಣೆ ವಿಳಂಬವಾಗುವ ಸಾಧ್ಯತೆ ಇದೆ.


ಈ ಹಿಂದೆ ಪ್ರತಿ ಸರಕಾರದಲ್ಲಿಯೂ ರಾಯಚೂರಿನ ದೇವದುರ್ಗದ ಶಾಸಕರೇ ಸಚಿವರಾಗಿದ್ದಾರೆ. ಎಂ ಶಿವಣ್ಣ, ಬಿಟಿ ಲಲಿತಾ ನಾಯಕ್, ಡಾ| ಎ ಪುಷ್ಪಾವತಿ, ಆಲ್ಕೋಡ್ ಹನುಮಂತಪ್ಪ , ಶಿವನಗೌಡ ನಾಯಕ ಸಚಿವರಾಗಿದ್ದರು. ಶಿವನಗೌಡ ನಂತರ ಜಿಲ್ಲೆಯಿಂದ ಸಚಿವರಾಗಿದ್ದು ಸಮ್ಮಿಶ್ರ ಸರಕಾರದಲ್ಲಿ ವೆಂಕಟರಾವ್ ನಾಡಗೌಡ. ಈಗ  ಜಿಲ್ಲೆಯಲ್ಲಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ದೇವದುರ್ಗಾದ ಶಾಸಕ ಶಿವನಗೌಡ ನಾಯಕ ಹಾಗೂ ರಾಯಚೂರು ನಗರದಿಂದ ಎರಡನೆಯ ಬಾರಿ ಆಯ್ಕೆಯಾಗಿರುವ ಡಾ. ಶಿವರಾಜ ಪಾಟೀಲ ಅವರಲ್ಲೊಬ್ಬರನ್ನು ಸಚಿವರನ್ನಾಗಿ ಮಾಡಿದರೆ ಜಿಲ್ಲೆಯ ಅಭಿವೃದ್ದಿಗೆ ಸಹಕಾರಿಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.


ರಾಯಚೂರು ಜಿಲ್ಲೆಯಲ್ಲಿ ಈ ಹಿಂದೆ 2008 ರಲ್ಲಿ ಶಿವನಗೌಡ ನಾಯಕರು ಸಚಿವರಾಗಿದ್ದನ್ನು ಬಿಟ್ಟರೆ ನಂತರದಲ್ಲಿ ಸದಾನಂದ ಗೌಡ, ಜಗದೀಶ ಶೆಟ್ಟರ್ ಹಾಗೂ ಸಿದ್ದರಾಮಯ್ಯ ಸರಕಾರದಲ್ಲಿ ಇಲ್ಲಿಂದ ಒಬ್ಬರೂ ಸಚಿವರಾಗಿರಲಿಲ್ಲ. ಈ ಮಧ್ಯೆ ಕುಮಾಸ್ವಾಮಿ ಸರಕಾರದಲ್ಲಿ ವೆಂಕಟರಾವ್ ನಾಡಗೌಡ ಸಚಿವರಾಗಿದ್ದರು. ಈಗ ಯಡಿಯೂರಪ್ಪ ಸರಕಾರದಲ್ಲಿ ಮತ್ತೆ ರಾಯಚೂರಿಗೆ ಸಚಿವರಿಲ್ಲ. ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳಿದ್ದು ಈ ಸಮಸ್ಯೆಗಳ ಬಗೆಹರಿಸಲು ಜಿಲ್ಲೆಯವರನ್ನು ಸಚಿವರನ್ನಾಗಿ ಮಾಡಬೇಕೆಂದು ಜನರು ಆಗ್ರಹಿಸಿದ್ದಾರೆ.


ಇಂಗ್ಲಿಷ್ ಸಂಕಷ್ಟ: ರಮೇಶ್​ ಜಾರಕಿಹೊಳಿಗೆ ಕೈ ತಪ್ಪಲಿದೆಯಾ ನೀರಾವರಿ ಖಾತೆ?


ರಾಯಚೂರು ಜಿಲ್ಲೆಗೆ ಈಗ ಶ್ರೀರಾಮುಲು ಉಸ್ತುವಾರಿ ಸಚಿವರಾಗಿದ್ದಾರೆ. ಅವರು ಜಿಲ್ಲೆಗೆ ವಿಸಿಟಿಂಗ್ ಸಚಿವರಾಗಿದ್ದಾರೆ. ಜಿಲ್ಲೆಯವರೇ ಸಚಿವರಾದರೆ ಜಿಲ್ಲೆಯ ಜ್ವಲಂತ ಸಮಸ್ಯೆಗೆ ಸ್ಪಂದಿಸಲು ಅನುಕೂಲವಾಗಲಿದೆ. ಅದಕ್ಖಾಗಿ ಜಿಲ್ಲೆಯ ಒಬ್ಬರನ್ನಾದರೂ ಸಚಿವರನ್ನಾಗಿ ಮಾಡಿ ಅಭಿವೃದ್ಧಿ ಮಾಡಬೇಕಾಗಿದೆ.

Published by:G Hareeshkumar
First published: