ರೈತರಿಗೆ ಅನ್ಯಾಯ ಆಗುವುದಿಲ್ಲ; ರೈತರ ದಾರಿ ತಪ್ಪಿಸದಿರಿ: ರೈತ ಸಂಘಟನೆಗಳಿಗೆ ಯಡಿಯೂರಪ್ಪ ಮನವಿ
CM BS Yediyurappa Press Conference - ತಾನು ರೈತ ಕುಟುಂಬದಿಂದ ಬಂದವನು. ರೈತನ ಅನ್ನ ತಿನ್ನುತ್ತಿರುವ ತಾನು ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ತಿದ್ದುಪಡಿ ಕಾಯ್ದೆಯಿಂದ ರೈತರಿಗೆ ಲಾಭವಾಗುತ್ತದೆಯೇ ಹೊರತು ಹಾನಿ ಆಗುವುದಿಲ್ಲ. ಇದಕ್ಕೆ ನಾನು ಚರ್ಚೆ ಮಾಡಲು ಸಿದ್ಧ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರು(ಸೆ. 28): ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆ ಮತ್ತು ಭೂ ಸುಧಾರಣೆ ಕಾಯ್ದೆಗಳಿಗೆ ತರುತ್ತಿರುವ ತಿದ್ದುಪಡಿಯಿಂದ ರೈತರಿಗೆ ಅನ್ಯಾಯ ಆಗಲ್ಲ. ಈ ವಿಚಾರದಲ್ಲಿ ರೈತರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ತಾನು ರೈತನ ಅನ್ನ ತಿನ್ನುತ್ತಿರುವ ನಾನು ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ಈ ತಿದ್ದುಪಡಿ ಕಾಯ್ದೆಗಳು ಐತಿಹಾಸಿಕ ಎನಿಸಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಬಹಳಷ್ಟು ಚರ್ಚೆ ಮಾಡಿದ ನಂತರ ತಿದ್ದುಪಡಿ ತರಲಾಗಿದೆ. ರೈತ ಸಂಘಟನೆಗಳು ಈ ಕಾಯ್ದೆಗಳನ್ನ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಇವತ್ತು ಬೇಕಾದರೆ ಅವರು ಚಳವಳಿ ನಡೆಸಲಿ. ನಾಳೆ ನನ್ನ ಬಳಿ ಬಂದು ಚರ್ಚೆ ಮಾಡಲಿ. ನಾನು ಈ ಕಾಯ್ದೆಗಳ ಬಗ್ಗೆ ಮನವರಿಕೆ ಮಾಡಿಕೊಡುತ್ತೇನೆ. ಸುಮ್ಮನೆ ರೈತರ ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ರೈತರನ್ನ ಬಂಧನದಲ್ಲಿಡುವ ಕೆಲಸ ಮಾಡಬೇಡಿ ಎಂದು ಯಡಿಯೂರಪ್ಪ ಅವರು ಇವತ್ತು ಕರ್ನಾಟಕ ಬಂದ್ ಮಾಡಿರುವ ಸಂಘಟನೆಗಳ ಮುಖಂಡರಿಗೆ ಮನವಿ ಮಾಡಿದ್ದಾರೆ.
ಇದು ನಮ್ಮ ಬೆಳೆ ನಮ್ಮ ಹಕ್ಕು. ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರು ತಾವು ಬೆಳೆದ ಬೆಳೆಯನ್ನ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಎಪಿಎಂಸಿಯನ್ನ ಮುಚ್ಚುತ್ತಿಲ್ಲ. ರೈತರು ಬೇಕಾದರೆ ಎಪಿಎಂಸಿಯಲ್ಲೂ ಬೆಳೆ ಮಾರಾಟ ಮಾಡಬಹುದು. ಯಾರು ಬೇಕಾದರೂ ಕೃಷಿ ಮಾಡಬಹುದು. ಕೃಷಿ ಜಮೀನು ನಾಶ ಆಗುವುದಿಲ್ಲ. ನೀರಾವರಿ ಭೂಮಿಯನ್ನು ಕೊಳ್ಳುವವರು ನೀರಾವರಿಗೆ ಬಳಸಬೇಕು ಎಂಬ ಷರುತ್ತು ಹಾಕಿದ್ದೇವೆ. ಎಲ್ಲ ದೃಷ್ಟಿಯನ್ನೂ ಮನಸ್ಸಲ್ಲಿಟ್ಟುಕೊಂಡು ಕಾಯ್ದೆಗೆ ತಿದ್ದುಪಡಿ ತಂದಿದ್ದೇವೆ. ಇದು ರೈತರಿಗೂ ಒಳಿತಾಗುತ್ತದೆ. ಕೈಗಾರಿಕೆಗಳಿಗೂ ಅನುಕೂಲ ಆಗುತ್ತದೆ. ರೈತರು ಅನಾವಶ್ಯಕವಾಗಿ ಗೊಂದಲಕ್ಕೊಳಗಾಗಬಾರದು. ಇನ್ನಾರು ತಿಂಗಳು ಅಥವಾ ವರ್ಷ ಬಿಟ್ಟು ನೋಡಿದರೆ ನಿಮಗೆ ಈ ಹೊಸ ತಿದ್ದುಪಡಿ ಕಾಯ್ದೆಯಿಂದ ಆಗುವ ಬದಲಾವಣೆ ಅನುಭವಕ್ಕೆ ಬರುತ್ತದೆ ಎಂದು ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ನಾನು ಹಿಂದೆ ಎಪಿಎಂಸಿ ಅಧ್ಯಕ್ಷನಾಗಿದ್ದವನು. ಅಲ್ಲಿ ದಲ್ಲಾಳಿಗಳಿಂದ ರೈತರ ಶೋಷಣೆ ಹೇಗೆ ಆಗುತ್ತೆ ಅಂತ ಗೊತ್ತು. ರೈತ ಎಪಿಎಂಸಿ ಬಿಟ್ಟು ನೇರವಾಗಿ ಮಾರಾಟ ಮಾಡಿದರೆ ಕೇಸ್ ಹಾಕುತ್ತಿದ್ದರು. ಇವತ್ತಿಗೂ ನನ್ನ ಮೇಲೆ ಕೇಸ್ ಇದೆ. ರೈತರಿಗೆ ಹೇಗೆಲ್ಲಾ ಅನ್ಯಾಯ ಆಗುತ್ತೆ ಅಂತ ನನಗೆ ಚೆನ್ನಾಗಿ ಗೊತ್ತಿದೆ. ಎಪಿಎಂಸಿಗೆ ಪೂರ್ಣ ಬಾಗಿಲು ಹಾಕಿಲ್ಲ. ಎಪಿಎಂಸಿಯಲ್ಲೂ ರೈತರು ಮಾರಾಟ ಮಾಡಬಹುದು. ಆದರೆ, ಮದ್ಯವರ್ತಿಗಳಿಗೆ ಕಡಿವಾಣ ಹಾಕಿದ್ದೇವೆ. ರೈತರು ಕೈಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿಯನ್ನು ಹೋಗಲಾಡಿಸಿದ್ದೇವೆ. ಎಲ್ಲಾ ಸಾಧಕ ಬಾಧಕಗಳನ್ನ ಚರ್ಚಿಸಿ ಮಸೂದೆ ರೂಪಿಸಿದ್ದೇವೆ. ರೈತರು, ಸಂಘಟನೆಗಳು ಇದನ್ನ ಅರ್ಥ ಮಾಡಿಕೊಳ್ಳಬೇಕು ಎಂದು ಸಿಎಂ ಹೇಳಿದ್ದಾರೆ.
ಈ ಕಾಯ್ದೆಗೆ ತಿದ್ದುಪಡಿ ತರಲು ಕಾಂಗ್ರೆಸ್ ಪಕ್ಷ ಹಿಂದೆಲ್ಲಾ ಪ್ರಯತ್ನ ಮಾಡಿತ್ತು. ಈಗ ಏನೇನೋ ಹೇಳುತ್ತಿದೆ. ಅವರು ಯಾರೋ ದೆಹಲಿಯಿಂದ ಬಂದಿರುವವರಿಗೋಸ್ಕರ ಹೀಗೆಲ್ಲಾ ಮಾಡುತ್ತಿದ್ದಾರೆ. ಸುರ್ಜೆವಾಲ ಒಂದು ವಾರದ ಹಿಂದಷ್ಟೇ ರಾಜ್ಯಕ್ಕೆ ಬಂದಿದ್ದಾರೆ. ಮೊದಲು ಅವರು ಕಾಂಗ್ರೆಸ್ ಪಕ್ಷ ಸಂಘಟಿಸಲಿ. ಆಮೇಲೆ ಬಿಜೆಪಿಯೋ ಮತ್ತೊಂದರ ಬಗ್ಗೆಯೋ ಮಾತನಾಡಲಿ ಎಂದು ನೂತನ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನ ಬಿಎಸ್ವೈ ಟೀಕಿಸಿದ್ದಾರೆ.
ಸರ್ಕಾರ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಲಿ ಎಂದು ಸಿದ್ದರಾಮಯ್ಯ ಆಗ್ರಹ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ತಾನು ಇದೇ ಕೃಷಿ ಕಾಯ್ದೆ ವಿಚಾರ ಇಟ್ಟುಕೊಂಡು ಚುನಾವಣೆ ಎದುರಿಸುತ್ತೇನೆ. ಕಾಂಗ್ರೆಸ್ನವರು ಗೆಲ್ಲಲಿ ನೋಡೋಣ ಎಂದು ಪ್ರತಿಸವಾಲು ಹಾಕಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ನಾನು ರಾಜ್ಯ ಪ್ರವಾಸ ಕೈಗೊಳ್ಳುತ್ತೇನೆ. ರಾಜ್ಯದ ವಿವಿಧ ಕಡೆ ಪ್ರವಾಸ ಮಾಡಿ ರೈತನ್ನು ಭೇಟಿ ಮಾಡುತ್ತೇನೆ. ಕಾಯ್ದೆಯಿಂದ ಆಗುವ ಅನುಕೂಲಗಳ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡುತ್ತೇನೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ