ಬೆಂಗಳೂರು(ಡಿ. 04): ನಾಳೆ ಕರ್ನಾಟಕ ಬಂದ್ ಮಾಡುವ ಅಗತ್ಯ ಇಲ್ಲ. ಬಂದ್ ಮಾಡಿ ಜನರಿಗೆ ತೊಂದರೆ ಕೊಡಬೇಡಿ ಎಂದು ಕನ್ನಡಪರ ಸಂಘಟನೆಗಳಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ. ಕನ್ನಡಕ್ಕೆ ಏನೇನು ಆದ್ಯತೆ ಕೊಡಬೇಕು ಅದನ್ನ ಕೊಡುತ್ತೇನೆ. ಇನ್ನೂ ಹೆಚ್ಚಿನದಾಗಿ ಕೊಡಲೂ ನಾನು ಸಿದ್ಧನಿದ್ದೇನೆ. ಕನ್ನಡಪರ ಸಂಘಟನೆಗಲ ಮುಖಂಡರು ಏನು ಹೇಳುತ್ತಾರೋ ಅದನ್ನು ಮಾಡಲೂ ತಯಾರಿದ್ಧೇನೆ. ಎಲ್ಲಾ ಸಮಾಜವನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದೇನೆ. ದಯಮಾಡಿ ಬಂದ್ ಮಾಡಬೇಡಿ. ಸರ್ಕಾರಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಯಡಿಯೂರಪ್ಪ ಕೇಳಿಕೊಂಡಿದ್ದಾರೆ.
ಇದೇ ವೇಳೆ, ಮರಾಠಾ ಸಮುದಾಯದ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುವ ಸರ್ಕಾರದ ನಿರ್ಧಾರ ವಿರೋಧಿಸಿ ಕರೆ ನೀಡಿರುವ ಕರ್ನಾಟಕ ಬಂದ್ಗೆ ಎಲ್ಲಾ ಕನ್ನಡಪರ ಸಂಘಟನೆಗಳು ತಮ್ಮ ಬದ್ಧತೆಯನ್ನು ಮತ್ತೊಮ್ಮೆ ಸ್ಪಷ್ಟಪಡಿಸಿವೆ. ಬಹುತೇಕ ಕನ್ನಡಪರ ಸಂಘಟನೆಗಳು ಬಂದ್ಗೆ ಬೆಂಬಲ ನೀಡಿವೆ. ಕರವೇಯ ಕೆಲ ಬಣಗಳು, ಹೋಟೆಲ್ ಮಾಲೀಕರ ಸಂಘ ಮೊದಲಾದ ಹಲವು ಸಂಘಟನೆಗಳು ನೈತಿಕ ಬೆಂಬಲ ನೀಡಿವೆ.
ನಾಳೆ, ಬಲವಂತವಾಗಿ ಬಂದ್ ಆಗುವುದಿಲ್ಲ. ಜನರು ಸ್ವಯಂ ಪ್ರೇರಣೆಯಿಂದ ಬಂದ್ಗೆ ಬೆಂಬಲ ನೀಡಬೇಕು ಎಂದು ಸಂಘಟನೆಗಳು ಸಾರ್ವಜನಿಕರಲ್ಲಿ ಮನವಿ ಮಾಡಿವೆ. ಬಂದ್ನ ನೇತೃತ್ವ ವಹಿಸಿರುವ ಕನ್ನಡ ಒಕ್ಕೂಟ ಮುಖ್ಯಸ್ಥ ವಾಟಾಳ್ ನಾಗರಾಜ್, ನಾಳೆಯ ಕರ್ನಾಟಕ ಬಂದ್ ಹಿಂದೆಂದೂ ಕಾಣದ ರೀತಿಯಲ್ಲಿ ಯಶಸ್ವಿಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹೌದು, ನಾನು ನಿಯತ್ತಿನ ನಾಯಿ; ವಾಟಾಳ್ ನಾಗರಾಜ್ಗೆ ರೇಣುಕಾಚಾರ್ಯ ತಿರುಗೇಟು
ಮರಾಠಾ ಸಮುದಾಯದ ವಿರುದ್ಧವಾಗಿ ಈ ಹೋರಾಟ ನಡೆಯುತ್ತಿಲ್ಲ. ಆದರೆ, ಸರ್ಕಾರ ಚುನಾವಣೆಯಲ್ಲಿ ಮತ ಗಳಿಕೆ ದೃಷ್ಟಿಯಿಂದ ಒಂದು ಸಮುದಾಯದ ಓಲೈಕೆಗೆ ಮುಂದಾಗಿದೆ. ಮರಾಠರಿಗೆ ಪ್ರಾಧಿಕಾರ ರಚನೆ ಮಾಡಿದರೆ ತಮಿಳು, ತೆಲುಗು, ಹಿಂದಿ, ಮಾರ್ವಾಡಿ ಸಮುದಾಯದವರೂ ಅದೇ ಬೇಡಿಕೆಗೆ ಮುಂದಾಗುತ್ತಾರೆ. ಸರ್ಕಾರದ ಕ್ರಮ ಶುದ್ಧ ತಪ್ಪು. ಮುಖ್ಯಮಂತ್ರಿಗಳು ಕನ್ನಡಿಗರ ಭಾವನೆಗಳನ್ನ ಕೆಣಕಿದ್ದಾರೆ. ಬಂದ್ ಮಾಡಿಯೇ ತೀರುತ್ತೇವೆ ಎಂದು ವಾಟಾಳ್ ಹೇಳಿದ್ದಾರೆ.
ಪೊಲೀಸ್ ಆಯುಕ್ತರ ಎಚ್ಚರಿಕೆ:
ಇನ್ನು, ನಾಳೆಯ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಪೊಲೀಸ್ ಆಯುಕ್ತ ಕಮಲ್ ಪಂಥ್, ನಗರದಲ್ಲಿ 15 ಸಾವಿರ ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. 32 ಕೆಎಸ್ಆರ್ಪಿ ಮತ್ತು 32 ಸಿಎಆರ್ ತುಕಡಿಗಳನ್ನ ಹಾಕಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಗೋವುಗಳ ಶಾಪದಿಂದಲೇ ಕಾಂಗ್ರೆಸ್ ಸೋತಿದ್ದು; ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ
ಬಂದ್ಗೆ ಯಾರೂ ಅನುಮತಿ ಕೇಳಿಲ್ಲ. ನಾವೂ ಅನುಮತಿ ಕೊಟ್ಟಿಲ್ಲ. ಬಂದ್ ಮಾಡಿದರೆ ಅದು ಕಾನೂನುಬಾಹಿರವಾಗುತ್ತದೆ. ನಗರದಲ್ಲಿ ಯಾವುದೇ ರ್ಯಾಲಿಗೂ ಅವಕಾಶ ಇಲ್ಲ. ಬಿಎಂಟಿಸಿ ಮತ್ತು ಕೆಎಸ್ಸಾರ್ಟಿಸಿ ಸಂಸ್ಥೆಗಳು ಬಂದ್ಗೆ ಬೆಂಬಲ ಸೂಚಿಸಿಲ್ಲ. ಬಸ್ ಸಂಚಾರವನ್ನು ಯಾರೂ ತಡೆಯುವಂತಿಲ್ಲ ಎಂದು ಕಮಿಷನ್ ಎಚ್ಚರಿಸಿದರು.
ಬಂದ್ ದಿನದಂದು ಭದ್ರತೆಯ ನಿರ್ವಹಣೆಗೆ ಆಯಾ ವಿಭಾಗದ ಡಿಸಿಪಿಗಳಿಗೆ ಹೊಣೆ ವಹಿಸಲಾಗಿದೆ. 300 ಪೊಲೀಸ್ ವ್ಯಾನ್ಗಳು ನಗರಾದ್ಯಂತ ವಿಶೇಷ ಗಸ್ತು ನಡೆಸಲಿವೆ. ಜನರು ಯಾರೂ ಕೂಡ ಭಯ ಪಡುವ ಅಗತ್ಯ ಇಲ್ಲ. ಎಂದಿನಂತೆ ತಮ್ಮ ಚಟುವಟಿಕೆಗಳನ್ನ ಮಾಡಬಹುದು. ಅಹಿತಕರ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರತಿಭಟನೆ ಹಿಂಸಾರೂಪ ತಾಳಿದರೆ ಪೊಲೀಸರು ಯಾವುದೇ ಮುಲಾಜಿಲ್ಲದೆ ಸೂಕ್ರ ಕ್ರಮ ಕೈಗೊಳ್ಳಲಿದ್ದಾರೆ ಎಂದು ಪ್ರತಿಭಟನಾಕಾರರಿಗೆ ಪೊಲೀಸ್ ಕಮಿಷನರ್ ಕಮಲ್ ಪಂಥ್ ಎಚ್ಚರಿಕೆ ನೀಡಿದರು.
ವರದಿ: ಕೃಷ್ಣ ಜಿ.ವಿ. / ಆಶಿಕ್ ಮುಲ್ಕಿ / ಗಂಗಾಧರ ವಾಗಟ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ