• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಸಿಡಿ ಗದ್ದಲದ ನಡುವೆಯೇ ಬಜೆಟ್​ ಮೇಲಿನ ಚರ್ಚೆಗೆ ಸಿಎಂ ಉತ್ತರ: ಸಾಲ ಮಾಡಿದ ಕ್ರಮ ಸಮರ್ಥಿಸಿಕೊಂಡ ಬಿಎಸ್​ವೈ

ಸಿಡಿ ಗದ್ದಲದ ನಡುವೆಯೇ ಬಜೆಟ್​ ಮೇಲಿನ ಚರ್ಚೆಗೆ ಸಿಎಂ ಉತ್ತರ: ಸಾಲ ಮಾಡಿದ ಕ್ರಮ ಸಮರ್ಥಿಸಿಕೊಂಡ ಬಿಎಸ್​ವೈ

ಬಿಎಸ್ ಯಡಿಯೂರಪ್ಪ

ಬಿಎಸ್ ಯಡಿಯೂರಪ್ಪ

ಕೊರೋನಾ ಅನಿರೀಕ್ಷಿತವಾಗಿ ಬಂದೆರಗಿತು. ಸರ್ಕಾರದ ಬಳಿ ಪರಿಹಾರ ನೀಡಲು ಯಾವುದೇ ಮಂತ್ರದಂಡ ಇರಲಿಲ್ಲ. ಸರ್ಕಾರದ ಬೊಕ್ಕಸ ಅಕ್ಷಯ ಪಾತ್ರೆ ಅಲ್ಲ. ಈ ವಾಸ್ತವ ಪ್ರತಿಪಕ್ಷದವರಿಗೂ ಗೊತ್ತಿದೆ

  • Share this:

    ಬೆಂಗಳೂರು (ಮಾ. 24): ಕಳೆದೆರಡು ದಿನಗಳಿಂದ ಸಿಡಿ ವಿಚಾರವಾಗಿ ಸದನದಲ್ಲಿ ಗದ್ದಲ ನಡೆಯುತ್ತಿದ್ದು, ಇಂದು ಕೂಡ ಅಧಿವೇಶನದಲ್ಲಿ ಕಾಂಗ್ರೆಸ್​ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ಮಾಡಿದರು. ವಿಪಕ್ಷ ನಾಯಕರ ಗದ್ದಲದ ನಡುವೆಯೇ ಮುಖ್ಯಮಂತ್ರಿಗಳು ಬಜೆಟ್​ ಮೇಲಿನ ಚರ್ಚೆಗೆ ಉತ್ತರ ನೀಡಿದರು. ಈ ವೇಳೆ ಬಜೆಟ್ ಗಾಗಿ ಸಾಲ ಮಾಡಿದ ಸರ್ಕಾರದ ನಡೆಯನ್ನು ಮುಖ್ಯಮಂತ್ರಿಗಳು ಸಮರ್ಥಿಸಿಕೊಂಡರು. ಸಾಲ ಮಾಡಿದ ಕ್ರಮಕ್ಕೆ ವಿಪಕ್ಷ ಸರ್ಕಾರಗಳ ಟೀಕೆಗೆ ಉತ್ತರಿಸಿದ ಅವರು, ವಿಪಕ್ಷ ನಾಯಕರು ಸಂವೇದನಾ ಶೀಲತೆಯಿಂದ ಮಾತಾಡಿಲ್ಲ. ಸಂದರ್ಭದ ಸೂಕ್ಷ್ಮತೆಯನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಂಡಿಲ್ಲ. ಸಾಲ ಮಾಡದೇ ಇರುವ ಸರ್ಕಾರಗಳಿಲ್ಲ. ಯೋಜನೆಗಳ ಜಾರಿಗೆ ಸಾಲ ಮಾಡಲೇಬೇಕಾಗುತ್ತದೆ. ಸಮೃದ್ಧಿಯ ಸಂದರ್ಭಗಳಲ್ಲೇ ಸರ್ಕಾರಗಳು ಸಾಲ ಮಾಡಿವೆ. ಕೊರೋನಾ ಸಂಕಷ್ಟ, ಪ್ರವಾಹ ಸಂದರ್ಭದಲ್ಲಿ ಸಾಲ ಅನಿವಾರ್ಯ ಆಗಿತ್ತು. ನಾವೇನೂ ಸಾಲ ಮಾಡಿ ತುಪ್ಪ ತಿಂದಿಲ್ಲ. ಮೋಜಿಗಾಗಿ, ಔತಣ ನಡೆಸಲು ಸಾಲದ ಹಣ ಬಳಸಿಲ್ಲ ಎಂದು ಉತ್ತರಿಸಿದರು.


    ಕೊರೋನಾದಿಂದ ಆರ್ಥಿಕತೆಯ ಸ್ಥಗಿತಗೊಂಡಿದೆ. ಇದರಿಂದ ಜಿಡಿಪಿ ಬೆಳವಣಿಗೆ ಕುಂಠಿತಗೊಂಡಿದ್ದು, ತೆರಿಗೆ ಸಂಗ್ರಹದಲ್ಲಿ ಕೊರತೆ ಉಂಟಾಗಿದೆ. ಆದರೂ ಬದ್ಧ ವೆಚ್ಚಗಳು, ಅಭಿವೃದ್ಧಿ ಯೋಜನೆಗಳ ಜಾರಿಗೆ ಕ್ರಮ ಕೈಗೊಂಡಿದ್ದೇವೆ. ಕೊರೋನಾ ಬಳಿಕ ಕಳೆದ ತ್ರೈಮಾಸಿಕದಲ್ಲಿ ಆರ್ಥಿಕ ಚೇತರಿಕೆ ಕಂಡಿದೆ ಎಂದರು.


    ಕೊರೋನಾ ಅನಿರೀಕ್ಷಿತವಾಗಿ ಬಂದೆರಗಿತು. ಸರ್ಕಾರದ ಬಳಿ ಪರಿಹಾರ ನೀಡಲು ಯಾವುದೇ ಮಂತ್ರದಂಡ ಇರಲಿಲ್ಲ. ಸರ್ಕಾರದ ಬೊಕ್ಕಸ ಅಕ್ಷಯ ಪಾತ್ರೆ ಅಲ್ಲ. ಈ ವಾಸ್ತವ ಪ್ರತಿಪಕ್ಷದವರಿಗೂ ಗೊತ್ತಿದೆ ಎಂದು ಉತ್ತರಿಸಿದರು.


    ಇನ್ನು ಈ ಬಾರಿ ಬಜೆಟ್ ನಲ್ಲಿ ಹೊಸ ತೆರಿಗೆ, ಸರ್ ಚಾರ್ಜ್, ಸೆಸ್ ಹಾಕಿಲ್ಲ. ತೆರಿಗೆ ವಸೂಲಿ ಜಾಲದ ವಿಸ್ತರಣೆ, ಸರ್ಕಾರಿ ಸಾಲಗಳ ವಸೂಲಾತಿ, ತೆರಿಗೆಯೇತರ ಆದಾಯ ಸಂಗ್ರಹ ಹೆಚ್ಚಳ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ. ನನ್ನ ಹಿಂದಿನ ಏಳು ಬಜೆಟ್ ಗಳೂ ರಾಜಸ್ವ ಮಿಗತೆ ಬಜೆಟ್ ಗಳಾಗಿದ್ದವು. ಆದರೆ, ಈಗ ಕೊರೋನಾದಿಂದಾಗಿ ರಾಜಸ್ವ ಮಿಗತೆ ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.


    ಈ ಬಾರಿ ಸಂಕಷ್ಟ ಸನ್ನಿವೇಶದ ಪರಿಣಾಮ ಇದನ್ನು ಸರಿಪಡಿಸಲು ಪೂರಕ ಕ್ರಮಗಳನ್ನು ಕೈಗೊಳ್ಳುತ್ತೇವೆ. ಸರ್ಕಾರ ಯಾವುದೇ ವಿಚಾರಗಳನ್ನು ಬಚ್ಚಿಟ್ಟಿಲ್ಲ. ಶೇ. 94 ರಷ್ಟು ಕಳೆದ ಬಾರಿಯ ಬಜೆಟ್ ಅನುಷ್ಟಾನದ ಭರವಸೆಯಿದೆ. ವಿತ್ತೀಯ ಶಿಸ್ತು ಕಾಪಾಡಿಕೊಳ್ಳುತ್ತೇವೆ. ಈ ಬಾರಿ ರಾಜಸ್ವ ಹೆಚ್ಚಳವಾಗುವ ವಿಶ್ವಾಸ ಇದೆ ಎಂದು ಭರವಸೆ ವ್ಯಕ್ತಪಡಿಸಿದರು


    ಇದೇ ವೇಳೆ ರಾಜ್ಯಕ್ಕೆ ಕೇಂದ್ರದಿಂದ ಬಂದ ಅನುದಾನದ ಬಗ್ಗೆ ಮಾಹಿತಿ ನೀಡಿದ ಅವರು, 15,538 ಕೋಟಿ ರೂ. ಕೇಂದ್ರ ಸರಕಾರದಿಂದ ಸಹಾಯಧನ ಬಂದಿದೆ. 24, 273 ಕೋಟಿ ರೂ. ತೆರಿಗೆ ಪಾಲು ಬಂದಿದೆ. ನೆರೆಯ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜಸ್ವ ಚೆನ್ನಾಗಿದೆ.
    ಅಭಿವೃದ್ಧಿ ಚಕ್ರವನ್ನು ಚಾಲನೆಯಲ್ಲಿ ಇರಿಸಿಕೊಳ್ಳಲು ಸಾಲ ಮಾಡಲಾಗಿದೆ. ಕೇಂದ್ರ ಸರ್ಕಾರವೂ ಸಾಲ ಪಡೆಯಲು ಅನುಮತಿ ಕೊಟ್ಟಿದೆ. ಸಾಲ ಮಾಡುವಾಗ ವಿತ್ತೀಯ ಹೊಣೆಗಾರಿಕೆಯನ್ನು ಮೀರುವುದಿಲ್ಲ. ಸ್ಥಗಿತಗೊಂಡಿದ್ದ ಹಿಂದುಳಿದ ವರ್ಗಗಳ ವಿದ್ಯಾರ್ಥಿ ವೇತನ ನೀಡುತ್ತೇವೆ. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸಾವಿರ ಕೋಟಿ ರೂ. ನೀಡುತ್ತೇವೆ. ಕಲ್ಯಾಣ ಕರ್ನಾಟಕ ಮಂಡಳಿಗೆ ಮೂರು ಸಾವಿರ ಕೋಟಿ ರೂ. ನೀಡಲಾಗಿದೆ. ಇಲಾಖೆಗಳಿಗೆ ಅನುದಾನದ ಕೊರತೆ ಮಾಡಿಲ್ಲ. ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಆದಿಜಾಂಬವ ಅಭಿವೃದ್ಧಿ ನಿಗಮಕ್ಕೆ ತಲಾ 150 ಕೋಟಿ ರೂ ನೀಡಲಾಗಿದೆ. ಇಲಾಖೆಗಳ ವಿಲೀನದ ಕುರಿತು ಸಂಪುಟ ಉಪಸಮಿತಿಯ ಶಿಫಾರಸಿನಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಸದನಕ್ಕೆ ತಿಳಿಸಿದರು.


    (ಮಾಹಿತಿ: ಕೃಷ್ಣಾ ಜಿವಿ)

    Published by:Seema R
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು