ಬೆಂಗಳೂರು (ಡಿ. 22): ಬ್ರಿಟನ್ನ ಹೊಸ ಸ್ವರೂಪದ ಕೊರೋನಾ ವೈರಸ್ ಜಗತ್ತಿನೆಲ್ಲೆಡೆ ಆತಂಕ ಮೂಡಿಸಿದೆ. ಅತಿ ವೇಗವಾಗಿ ಹರಡಬಲ್ಲ ಈ ವೈರಸ್ ಬಗ್ಗೆ ಭಾರತ ಕೂಡ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದೆ. ಇಂದಿನಿಂದ ಬ್ರಿಟನ್ ಮತ್ತು ಭಾರತದ ನಡುವಿನ ವಿಮಾನ ಹಾರಾಟ ಬಂದ್ ಮಾಡುವ ಮೂಲಕ ಸೋಂಕು ತಡೆಗೆ ಕ್ರಮ ಕೈಗೊಳ್ಳಲಾಗಿದೆ. ಈ ನಡುವೆ ರಾಜ್ಯದಲ್ಲಿ ಕೂಡ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಪಾಲನೆಗೆ ಸರ್ಕಾರ ಮುಂದಾಗಿದೆ. ಈಗಾಗಲೇ ಕಳೆದೊಂದು ವಾರದಿಂದ ಬ್ರಿಟನ್ನಿಂದ ಆಗಮಿಸಿದವರ ಟ್ರಾವೆಲ್ ಹಿಸ್ಟರಿ ಹುಡುಕಾಟ ನಡೆಸಲಾಗಿದೆ. ಅಲ್ಲದೇ ಬ್ರಿಟನ್ನಿಂದ ರಾಜ್ಯಕ್ಕೆ ಬಂದಿಳಿದವರ ಮಾಹಿತಿ ಸಂಗ್ರಹಿಸುವಂತೆ ಈಗಾಗಲೇ ಆರೋಗ್ಯ ಸಚಿವರು ತಿಳಿಸಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿ ಈ ಬಗೆಯ ಪ್ರಕರಣಗಳ ಮಾಹಿತಿ ಕಲೆ ಹಾಕಿ ನೀಡಲು ಆಯಾ ಜಿಲ್ಲಾಧಿಕಾರಿ ಮತ್ತು ಆರೋಗ್ಯಾಧಿಕಾರಿಗಳಿಗೆ ತಿಳಿಸಲಾಗಿದೆ. ಪ್ರತೀ ಜಿಲ್ಲೆಯಲ್ಲೂ ಯುಕೆಯಿಂದ ಬಂದ ಪ್ರಯಾಣಿಕರ ಪಟ್ಟಿಯನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮಾಡಲಿದ್ದಾರೆ. ಈ ಮೂಲಕ ಸೋಂಕು ತಡೆಗೆ ಕ್ರಮ ಕೈಗೊಳ್ಳಲಾಗಿದೆ.
ಕೊರೋನಾ ರೂಪಾಂತರ ಹರಡದಂತೆ ತಡೆಯಲು, ವಿದೇಶಗಳಿಂದ ರಾಜ್ಯಕ್ಕೆ ಆಗಮಿಸುವವರನ್ನು ವಿಮಾನ ನಿಲ್ದಾಣದಲ್ಲೆ ತಪಾಸಣೆ ಮಾಡುತ್ತಿದ್ದೇವೆ. ರಾಜ್ಯದಲ್ಲಿ ವೈರಸ್ ಹರಡದಂತೆ ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಜನರು ಕಿಂಚಿತ್ತೂ ನಿರ್ಲಕ್ಷ್ಯ ಮಾಡದೆ, ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ ಸಹಕರಿಸಿ ಎಂದು ಮನವಿ ಮಾಡುತ್ತಿದ್ದೇನೆ.
— B.S. Yediyurappa (@BSYBJP) December 22, 2020
ಇನ್ನು ಈಗಾಗಲೇ ಜಿಲ್ಲೆಗಳಲ್ಲಿ ಬ್ರಿಟನ್ನಿಂದ ವಾಪಸ್ಸಾದವರ ಮಾಹಿತಿ ಪಡೆದು ಅವರನ್ನು ಐಸೋಲೇಷನ್ಗೆ ಒಳಪಡಿಸುವ ಕಾರ್ಯ ನಡೆಸಲಾಗುತ್ತಿದೆ. ಈ ಬಗ್ಗೆ ಕೆ ಸುಧಾಕರ್ ಮಾಹಿತಿ ನೀಡಿದ್ದು, ಬ್ರಿಟನ್ನಿಂದ ಬಂದವರನ್ನು ಕಡ್ಡಾಯವಾಗಿ ಆರ್ಟಿಪಿಎಸ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ