ಬೆಂಗಳೂರು: ಪಿಎಸ್ ಐ ನೇಮಕಾತಿ ಪ್ರಕರಣ (PSI Scam) ಗಮನಕ್ಕೆ ಬಂದ ತಕ್ಷಣವೇ ಪ್ರಾಥಮಿಕ ತನಿಖೆ ಮಾಡಿಸಿ, ಕೂಡಲೇ ಸಿಐಡಿಗೆ (CID) ತನಿಖೆಯನ್ನು ವಹಿಸಲಾಯಿತು. ಅತ್ಯಂತ ಪ್ರಾಮಾಣಿಕವಾಗಿ, ದಕ್ಷತೆಯಿಂದ ಗೃಹ ಸಚಿವರು (Home Minister) ಕೆಲಸ ಮಾಡಿದ್ದಾರೆ. ಅವರ ಪ್ರಾಮಾಣಿಕತೆ ಮತ್ತು ದಕ್ಷತೆ ಇರುವುದರಿಂದಲೇ ಪ್ರಕರಣ ಹೊರಬಂದಿದೆ. ಗೃಹ ಸಚಿವರ ರಾಜೀನಾಮೆ ಕೇಳಲು ಕಾಂಗ್ರೆಸ್ ಗೆ (Congress) ನೈತಿಕ ಹಕ್ಕಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Bommai ) ತಿರುಗೇಟು ಕೊಟ್ಟರು. ಕಾಂಗ್ರೆಸ್ ನವರ ಕಾಲದಲ್ಲಿ ಪಿಎಸ್‍ಐ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಪ್ರಕರಣ ದಾಖಲಾಗಿ ಹಿರಿಯ ಪೋಲಿಸ್ ಅಧಿಕಾರಿ ಆರೋಪಿಯಾಗಿದ್ದರು. ಮುಂದೆ ಏನಾಯಿತು? ಬಂಧನ ದೂರದ ಮಾತು, ಅವರನ್ನು ವಿಚಾರಣೆಯೂ ಮಾಡಲಿಲ್ಲ. ಇಂಥ ದಿಟ್ಟ ಕ್ರಮವನ್ನು ತೆಗೆದುಕೊಳ್ಳುತ್ತಾರೆ ಎಂದರೆ, ಅಧಿಕಾರಿಗಳಿಗೆ ಯಾವುದೇ ಮುಲಾಜಿಗೆ ಒಳಗಾಗದೆ ತನಿಖೆ ಕೈಗೊಳ್ಳಲು ಮುಕ್ತ ಅಧಿಕಾರವನ್ನು ಅಧಿಕಾರಿಗಳಿಗೆ ನೀಡಲಾಗಿದೆ.
ಜೀರೋ ಟಾಲರೆನ್ಸ್ ಇದೆ
ನಮಗೆ ಇಂಥ ಚಟುವಟಿಕೆಗಳ ಬಗ್ಗೆ ಜೀರೋ ಟಾಲರೆನ್ಸ್ ಇದೆ ಹಾಗೂ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ದೊಡ್ಡವರಾಗಲೀ, ಸಣ್ಣವರಾಗಲಿ ಸ್ವಚ್ಛ ಮಾಡುವ ಕೆಲಸ ನಿರಂತರವಾಗಿ ನಡೆಯಬೇಕೆಂಬ ದೃಷ್ಟಿಯಿಂದ ಈ ಕೆಲಸ ಮಾಡಿದ್ದೇವೆ. ಕಾಂಗ್ರೆಸ್ ಇದ್ದಿದ್ದರೆ, ಇದೇ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುತ್ತಿದ್ದರು. ಹಿಂದೆ ಹೀಗೆ ಮಾಡಿದ್ದಾರೆ, ವಿವರಗಳನ್ನು ಕೊಡಲು ನಾನು ಸಿದ್ಧ. ಯಾರ ರಾಜೀನಾಮೆಯನ್ನು ಕೇಳುವ ಹಕ್ಕು ಅವರಿಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: Chandrashekhar Guruji: ಹುಬ್ಬಳ್ಳಿಯಲ್ಲಿ ಸರಳ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಕಗ್ಗೊಲೆ
ಪ್ರಕರಣದಲ್ಲಿ 50 ಜನರನ್ನು ಬಂಧಿಸಲಾಗಿದ್ದು, 20 ಜನ ಪೊಲೀಸ್ ಅಧಿಕಾರಿಗಳೇ ಇದ್ದಾರೆ. ಯಾರನ್ನು , ಯಾವುದನ್ನೂ ಮುಚ್ಚಿಡುವ ಪ್ರಯತ್ನ ಮಾಡಿಲ್ಲ. ಬಹಳ ನಿಯತ್ತಿನಿಂದ ದಕ್ಷತೆಯಿಂದ ಕೆಲಸ ಮಾಡಿದ್ದಾರೆ. ಯಾರೂ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಅವರು ಇದ್ದದ್ದರಿಂದಲೇ ಇದೊಂದು ಅಂತಿಮ ಘಟ್ಟ ಮುಟ್ಟಿದೆ ಎಂದರು.
ಡಿಕೆಶಿಗೆ ಸಿಎಂ ತಿರುಗೇಟು
ಗೃಹ ಸಚಿವರು ಸದನವನ್ನು ತಪ್ಪು ದಾರಿಗೆ ಎಳೆದಿದ್ದರಿಂದ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಆ ಸಂದರ್ಭದಲ್ಲಿ ಮಾಹಿತಿ ಇರಲಿಲ್ಲ. ಮಾಹಿತಿ ಗೊತ್ತಾದ ಬಳಿಕೆ ಏನು ಮಾಡಿದರು, ಎಷ್ಟು ದಕ್ಷತೆಯಿಂದ ಮಾಡಿದರು ಎನ್ನುವುದು ಮುಖ್ಯವಾಗುತ್ತದೆ ಎಂದರು. ವಿರೋಧಪಕ್ಷದವರು ಗಾಳಿಯಲ್ಲಿ ಹೇಳಿಕೆ ನೀಡುವುದಲ್ಲ. ಸರ್ಕಾರ ಗಂಭೀರವಾಗಿ ಪರಿಗಣಿಸಿರದಿದ್ದರೆ, ಪ್ರಕರಣ ಹೊರಗೆ ಬರುತ್ತಿರಲಿಲ್ಲ. ಸಿಐಡಿ, ಎಸಿಬಿ ಒಳ್ಳೆ ಕೆಲಸ ಮಾಡಿದ್ದಾರೆ. ಎಲ್ಲಿ ಪುರಾವೆ ಇದೆಯೋ ಅಲ್ಲಿ ತನಿಖೆ ಮಾಡಲಾಗಿದೆ. ಪುರಾವೆ ಇಲ್ಲದೆ ಏನೂ ಮಾಡಲಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಪೌರಕಾರ್ಮಿಕರ ನೇಮಕಾತಿ ಐತಿಹಾಸಿಕ ತೀರ್ಮಾನ
ಪೌರಕಾರ್ಮಿಕರನ್ನು ನೇಮಕಾತಿಯು ಐತಿಹಾಸಿಕ ತೀರ್ಮಾನವಾಗಿದ್ದು, ಬೇರೆ ಯಾವ ರಾಜ್ಯದಲ್ಲಿಯೂ ಇದು ಆಗಿಲ್ಲ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. ಸರ್ಕಾರದ ನಿರ್ಣಯವನ್ನು ಪೌರಕಾರ್ಮಿಕರು ಹೃದಯಪೂರ್ವಕವಾಗಿ ಸ್ವಾಗತಿಸಿದ್ದು ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಪೌರಕಾರ್ಮಿಕರ ವಿಶೇಷ ನೇಮಕಾತಿ ಸಲುವಾಗಿ ಸಮಿತಿ ರಚಿಸಲಾಗುತ್ತಿದ್ದು, ಸಮಿತಿಯಲ್ಲಿ ಕಾರ್ಮಿಕ ಮುಖಂಡರು, ನಿಗಮದ ಅಧ್ಯಕ್ಷರು, ಪದಾಧಿಕಾರಿಗಳು, ಕಾನೂನು ಇಲಾಖೆ ಅಧಿಕಾರಿಗಳು ಇರಲಿದ್ದು, ನೇರವಾಗಿ ಹಣ ಪಾವತಿ ಆಗಿದ್ದರೂ, ಖಾಯಂ ಆಗದೆ ಸವಲತ್ತುಗಳು ದೊರಕದವರಿಗೆ ಅನುಮೋದನೆ ಪಡೆದು ನೀಡಲು ತೀರ್ಮಾನಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. ಸಹಕಾರ ನೀಡುವುದಾಗಿ ಹೇಳಿದ್ದಾರೆ ಎಂದರು.
ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಆಯವ್ಯಯದಲ್ಲಿ ಎರಡು ಸಾವಿರ ಕೋಟಿ ರೂ.ಗಳ ಸಂಕಷ್ಟ ಪರಿಹಾರ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ