Anjanadri Hill: ಅಂಜನಾದ್ರಿ ಬೆಟ್ಟಕ್ಕೆ 430 ಮೀಟರ್ ರೋಪ್ ವೇ ನಿರ್ಮಿಸಲು ಸಿಎಂ ಬೊಮ್ಮಾಯಿ ಸೂಚನೆ

ಅಂಜನಾದ್ರಿ ಬೆಟ್ಟಕ್ಕೆ 430 ಮೀಟರ್ ರೋಪ್ ವೇ ನಿರ್ಮಿಸಲು ಪ್ರಸ್ತಾಪಿಸಲಾಗಿದ್ದು, ಈ ಯೋಜನೆಯ ಟೆಂಡರ್ ಪ್ರಕ್ರಿಯೆಯನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸುವಂತೆ ಪ್ರವಾಸೋದ್ಯಮ ಇಲಾಖೆಗೆ ಮುಖ್ಯಮಂತ್ರಿಯವರು ಸೂಚಿಸಿದರು.

ಅಂಜನಾದ್ರಿ ಬೆಟ್ಟ

ಅಂಜನಾದ್ರಿ ಬೆಟ್ಟ

  • Share this:
ಬೆಂಗಳೂರು: ಕೊಪ್ಪಳ ಜಿಲ್ಲೆಯ ಕಿಷ್ಕಿಂದೆಯ ಅಂಜನಾದ್ರಿ ಬೆಟ್ಟದ (Anjanadri hill) ಸಮಗ್ರ ಅಭಿವೃದ್ಧಿ ಯೋಜನೆಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಿ, ಕೆಲಸ ಪ್ರಾರಂಭಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Bommai) ಅವರು ತಿಳಿಸಿದರು. ಬೆಂಗಳೂರಿನಲ್ಲಿ ಇಂದು ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿ ಯೋಜನೆ (Development Scheme) ಕುರಿತು ಕರೆಯಲಾಗಿದ್ದ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು. ಈ ಯೋಜನೆಗಾಗಿ ಸುಮಾರು 60 ಎಕರೆ ಭೂಮಿ ಅಗತ್ಯವಿದ್ದು, ಇದರಲ್ಲಿ 58 ಎಕರೆ ಖಾಸಗಿ ಜಮೀನಾಗಿದೆ. ಇದನ್ನು ರೈತರ ಒಪ್ಪಿಗೆಯ ಮೇರೆಗೆ ಭೂಸ್ವಾಧೀನ ಪಡಿಸುವಂತೆ ಅಥವಾ ಕೆಐಎಡಿಬಿ ಮೂಲಕ ಖರೀದಿಸುವ ಮೂಲಕ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿಯವರು ಸೂಚಿಸಿದರು.

ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ಸೂಚನೆ

ಯೋಜನೆಯ ಮೊದಲ ಹಂತದಲ್ಲಿ ಅಂಜನಾದ್ರಿಯ ಸಂಪರ್ಕ ರಸ್ತೆ ಅಭಿವೃದ್ಧಿ, ಪರ್ಯಾಯ ರಸ್ತೆಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸಬೇಕು. ರಾಷ್ಟ್ರೀಯ ಹೆದ್ದಾರಿಯಿಂದ ಗಂಗಾವತಿ ವರೆಗಿನ ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ಲೋಕೋಪಯೋಗಿ ಇಲಾಖೆಯ ಮೂಲಕ ಕ್ರಮ ವಹಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಇದಕ್ಕೆ ವಿಸ್ತೃತ ಯೋಜನಾ ವರದಿಯನ್ನು ಕೂಡಲೇ ಸಿದ್ಧಪಡಿಸುವಂತೆ ಸೂಚಿಸಿದರು. ಇದರೊಂದಿಗೆ ಬೆಟ್ಟದ ಬುಡದಲ್ಲಿ ಯಾತ್ರಿಕರಿಗೆ ಪಾರ್ಕಿಂಗ್ ಮತ್ತಿತರ ಮೂಲಸೌಕರ್ಯ ಒದಗಿಸುವ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಂತೆ ಸೂಚಿಸಿದರು. ಯೋಜನೆಯ ಆರ್ಥಿಕ ಅನುಮೋದನೆಗಾಗಿ ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಸಿಎಂ ಬೊಮ್ಮಾಯಿ ಸೂಚಿಸಿದರು.

 ಅಂಜನಾದ್ರಿ ಬೆಟ್ಟಕ್ಕೆ ರೋಪ್‍ ವೇ

ಅಂಜನಾದ್ರಿ ಬೆಟ್ಟಕ್ಕೆ 430 ಮೀಟರ್ ರೋಪ್ ವೇ ನಿರ್ಮಿಸಲು ಪ್ರಸ್ತಾಪಿಸಲಾಗಿದ್ದು, ಈ ಯೋಜನೆಯ ಟೆಂಡರ್ ಪ್ರಕ್ರಿಯೆಯನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸುವಂತೆ ಪ್ರವಾಸೋದ್ಯಮ ಇಲಾಖೆಗೆ ಮುಖ್ಯಮಂತ್ರಿಯವರು ಸೂಚಿಸಿದರು. ಈ ಯೋಜನೆಯಡಿ ರೋಪ್‍ ವೇ ಬೇಸ್‍ನಲ್ಲಿ ಪ್ರವಾಸಿಗರಿಗೆ ಅಗತ್ಯ ಸೌಕರ್ಯ, ಸರದಿಯಲ್ಲಿ ಕಾಯುವ ಸಂದರ್ಭ ಬಂದಾಗ ಅಗತ್ಯ ಮೂಲಸೌಕರ್ಯಗಳು, ಪಾರ್ಕಿಂಗ್ ಸೌಲಭ್ಯಗಳನ್ನು ಕಲ್ಪಿಸಲು ಸೂಚಿಸಿದರು. ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಬೊಮ್ಮಾಯಿ ಸೂಚಿಸಿದರು. ಜುಲೈ 15 ರೊಳಗೆ ತಾವು ಖುದ್ದು ಅಂಜನಾದ್ರಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಇದನ್ನೂ ಓದಿ: Kempegowda Award: ಎಸ್.ಎಂ ಕೃಷ್ಣ, ನಾರಾಯಣ ಮೂರ್ತಿ, ಪ್ರಕಾಶ್ ಪಡುಕೋಣೆಗೆ ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿ

ಸಚಿವರಾದ ಆನಂದ್ ಸಿಂಗ್, ಹಾಲಪ್ಪ ಬಸಪ್ಪ ಆಚಾರ್, ಕೊಪ್ಪಳ ಸಂಸದ ಕರಡಿ ಸಂಗಣ್ಣ, ಶಾಸಕರಾದ ಬಸವರಾಜ ದಡೆಸೂಗುರ,  ಪರಣ್ಣ ಮುನವಳ್ಳಿ, ಅಮರೇಗೌಡ ಬಯ್ಯಾಪೂರ,  ರಾಘವೇಂದ್ರ ಹಿಟ್ನಾಳ,  ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ, ಆರ್ಥಿಕ ಇಲಾಖೆಯ ಕಾರ್ಯದರ್ಶಿ ಏಕ್‍ರೂಪ್ ಕೌರ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಪ್ರಸಾದ್‍ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸಾಲು ಮರದ ತಿಮ್ಮಕ್ಕನಿಗೆ ಸಿಎಂ ಸಹಾಯ

ಮರಗಳನ್ನು ಮಕ್ಕಳಂತೆ ಪೋಷಣೆ ಮಾಡಿ ಜನಪ್ರಿಯರಾಗಿರೋ ಸಾಲು ಮರದ ತಿಮ್ಮಕ್ಕ ಇದೀಗ ತನ್ನ ಸಾಕು ಮಗ ಉಮೇಶ್ ಜೊತೆಯಲ್ಲಿ ಜೀವನವನ್ನು ನಡೆಸುತ್ತಿದ್ದಾರೆ. ಸಾಕು ಮಗ ಉಮೇಶ್ ಜೊತೆಯಲ್ಲಿ ಜೂನ್ 21ರಂದು ಸಿಎಂ ಮನೆಗೆ ತೆರಳಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ರು. ಈ ವೇಳೆ ಸಿಎಂ ಜೊತೆ ವಿಚಾರಿಸಿದರು. ತಿಮ್ಮಕ್ಕನ ವಾಸಕ್ಕೆ ಬೆಂಗಳೂರಿನಲ್ಲಿ ಸೂಕ್ತ ನಿವೇಶನ ಇಲ್ಲದಿರುವುದನ್ನು ಮನಗಂಡ ಸಿಎಂ ತಕ್ಷಣವೇ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್‌ಗೆ ಕರೆ ಮಾಡಿದ್ದಾರೆ. ವಿಶ್ವನಾಥ್ ಜೊತೆ ಮಾತನಾಡಿ ಸಾಲು ಮರದ ತಿಮ್ಮಕ್ಕನಿಗೆ ಬೆಂಗಳೂರಿನಲ್ಲಿ ನಿವೇಶನವನ್ನು ನೀಡುವಂತೆ ತಿಳಿಸಿದ್ದಾರೆ. ಇದರಿಂದಾಗಿ ಶತಾಯುಷಿಯಾಗಿರುವ ಸಾಲುಮರದ ತಿಮ್ಮಕ್ಕನಿಗೆ ಇಳಿವಯಸ್ಸಿನಲ್ಲಿ ಬಿಡಿಎ ವತಿಯಿಂದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 50*80 ಅಳತೆಯ ನಿವೇಶನವನ್ನು ಮಂಜೂರು ಮಾಡಿದೆ.
Published by:Kavya V
First published: