Ukraine: ಮೃತ Naveen ಕುಟುಂಬಕ್ಕೆ CM ಸಾಂತ್ವನ; ಬೆಳಗ್ಗೆ ಅಷ್ಟೇ ಮಗ ಮಾತನಾಡಿದ್ದ ಎಂದು ಕಣ್ಣೀರಿಟ್ಟ ತಂದೆ

ನವೀನ್ ಅವರ ಮೃತದೇಹವನ್ನು ಭಾರತಕ್ಕೆ ತರಿಸಿಕೊಳ್ಳುವ ಎಲ್ಲ ಪ್ರಯತ್ನ ನಡೆದಿದೆ. ಈ ಸಂಬಂಧ ವಿದೇಶಾಂಗ ಸಚಿವಾಲಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ

ಸಿಎಂ ಬೊಮ್ಮಾಯಿ

ಸಿಎಂ ಬೊಮ್ಮಾಯಿ

  • Share this:
    ಬೆಂಗಳೂರು (ಮಾ. 1):   ಉಕ್ರೇನ್​ನಲ್ಲಿ ನಡೆದ ಶೆಲ್ ದಾಳಿಯಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ನವೀನ ಗ್ಯಾನಗೌಡರ (Naveen Shekhararappa Gyanagoudar) ಸಾವನ್ನಪ್ಪಿರುವುದನ್ನು ಕೇಂದ್ರ ವಿದೇಶಾಂಗ ಇಲಾಖೆ ಖಚಿತಪಡಿಸಿದೆ. ಹಾವೇರಿ ಜಿಲ್ಲೆಯ ರಾಣೆ ಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್​ ಸಾವನ್ನಪ್ಪಿದ್ದು, ಈ ಸುದ್ದಿ ಕರ್ನಾಟಕಕ್ಕೂ ದಿಗ್ಭ್ರಮೆ ಮೂಡಿಸಿದೆ. ನವೀನ್​ ಇನ್ನಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಮನೆಯಲ್ಲಿ ಶೋಕ ಮಡುಗಟ್ಟಿದ್ದು, ಮಗನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ನವೀನ್​ ಸಾವಿಗೆ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ. ನವೀನ್ ಅವರ ತಂದೆ ಶೇಖರಗೌಡ ಅವರಿಗೆ ಕರೆ ಮಾಡಿ ಸಾಂತ್ವನ ತಿಳಿಸಿದ್ದಾರೆ.

    ಪಾರ್ಥಿವ ಶರೀರ ತರಲು ಪ್ರಯತ್ನ
    ನವೀನ್​​ ಸಾವಿನ ಕುರಿತು ವಿಷಾದ ವ್ಯಕ್ತಪಡಿಸಿ ಮಾತನಾಡಿದ ಅವರು, ಇದು ನಿಜಕ್ಕೂ ದೊಡ್ಡ ದುರಂತ. ದೇವರು ನವೀನ್ ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ. ನೀವು ಧೈರ್ಯದಿಂದಿರಿ. ನವೀನ್ ಅವರ ಮೃತದೇಹವನ್ನು ಭಾರತಕ್ಕೆ ತರಿಸಿಕೊಳ್ಳುವ ಎಲ್ಲ ಪ್ರಯತ್ನ ನಡೆದಿದೆ. ಈ ಸಂಬಂಧ ವಿದೇಶಾಂಗ ಸಚಿವಾಲಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದರು.

    ಮೂರು ತಿಂಗಳ ಹಿಂದಷ್ಟೇ ಊರಿಗೆ ಬಂದಿದ್ದ ನವೀನ್​

    ಶೇಖರ ಗೌಡ ಅವರ ಎರಡನೇ ಮಗ ನವೀನ್ ಕಳೆದ ಮೂರು ವರ್ಷಗಳಿಂದ ಉಕ್ರೇನ್​ನಲ್ಲಿ ಎಂಬಿಬಿಎಸ್​ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.  ಕಳೆದ ಮೂರು ತಿಂಗಳ ಹಿಂದೆ ಅಷ್ಟೇ ಊರಿಗೆ ಬಂದು ಹೋಗಿದ್ದ. ಉಕ್ರೇನ್​ನಲ್ಲಿ ಯುದ್ಧ ಆರಂಭವಾದಗಿನಿಂದ ನವೀನ್​ ಕುಟುಂಬದ ಜೊತೆ ಮಾತನಾಡುತ್ತಿದ್ದರು.  ಯುದ್ಧ ಆರಂಭವಾದಗಿನಿಂದ ಮಗ ಸುರಕ್ಷಿತವಾಗಿ ಬರಲಿ ಎಂದು ಪ್ರಾರ್ಥಿಸುತ್ತಿದ್ದೇವು. ಆದರೆ, ಇದೀಗ ಈ ವಿಷಯ ಬರ ಸಿಡಿಲು ಬಡಿದಂತೆ ಆಗಿದೆ ಎಂದು ಕುಟುಂಬಸ್ಥರು ಕಣ್ಣೀರಾಕಿದ್ದಾರೆ.

    ಇನ್ನು ನವೀನ್​ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಶೋಕ ಮಡುಗಟ್ಟಿದ್ದು, ಜಿಲ್ಲೆಯ ಅನೇಕ ಅಧಿಕಾರಿಗಳು ಕುಟುಂಬಸ್ಥರಿಗೆ ಬಂದು ಮಾಹಿತಿ ಖಚಿತ ಪಡಿಸಿ ಸಾಂತ್ವಾನ ತಿಳಿಸಿದ್ದಾರೆ.

    ಸ್ನೇಹಿತರ ಪ್ರಾಣ ಉಳಿಸಿದ್ದ ನವೀನ್​

    ಸ್ನೇಹಿತ ನವೀನ್​ ಅಗಲಿಕೆ ಕುರಿತು ಉಕ್ರೇನ್​ನಲ್ಲಿರುವ ಸ್ನೇಹಿತರು ಕೂಡ ಕಣ್ಣೀರು ಹಾಕಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ನವೀನ್​ ಸ್ನೇಹಿತ ಯಶ್ವಂತ್ ರೆಡ್ಡಿ, ಕಾರ್ಕೀವ್‌ನಲ್ಲಿ ನನಗೆ ಜಾಕೆಟ್ ಎಲ್ಲ ಕೊಟ್ಟು ನನ್ನ ಪ್ರಾಣ ಉಳಿಸಿದ್ದು ನವೀನ್. ಆದರೆ, ಇಂದು ಅವನು ನಮ್ಮ ಬಿಟ್ಟು ಹೋದ. ತುಂಬಾ ಬೇಸರ ಆಗುತ್ತಿದೆ. ಊಟ ತರಲು ಹೊರಗೆ ಹೋದಾಗ ಈ ದುರ್ಘಟನೆ ನಡೆಸಿದೆ ಎಂದು ಘಟನೆ ವಿವರಿಸಿದರು

    ಇದನ್ನು ಓದಿ: ಕರ್ನಾಟಕಕ್ಕೆ ಕರಾಳ ಸುದ್ದಿ: Russia ದಾಳಿಗೆ ಉಕ್ರೇನ್​​ನಲ್ಲಿ ಹಾವೇರಿಯ ವಿದ್ಯಾರ್ಥಿ ನವೀನ್ ಬಲಿ

    ಖಾರ್ಕೀವ್‌ನಲ್ಲಿ ಇಂದು ಬೆಳಿಗ್ಗೆ ನಡೆದ  ಶೆಲ್ ದಾಳಿಯಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದಾರೆ. ಈ ಸುದ್ದಿಯನ್ನು ಅತೀವ ದುಃಖದೊಂದಿಗೆ ಖಚಿತಪಡಿಸುತ್ತಿದ್ದೇವೆ. ಸಚಿವಾಲಯವು ಅವರ ಕುಟುಂಬದ ಜತೆ ಸಂಪರ್ಕದಲ್ಲಿದೆ. ಅವರ ಕುಟುಂಬಕ್ಕೆ ನಮ್ಮ ತೀವ್ರ ಸಂತಾಪಗಳು ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

    ಕರ್ನಾಟಕ ವಿದ್ಯಾರ್ಥಿಗಳ ಕರೆತರುವ ನಿರಂತರ ಪ್ರಯತ್ನ

    ಉಕ್ರೇನ್ ನಿಂದ ಕನ್ನಡದವರನ್ನು ಕರೆತರುವ ಪ್ರಯತ್ನ ನಿರಂತರವಾಗಿ ಜಾರಿಯಲ್ಲಿದ್ದು, ಮುಂಬೈ ಹಾಗೂ ನವದೆಹಲಿಗೆ ಬರುತ್ತಿರುವ ವಿದ್ಯಾರ್ಥಿಗಳನ್ನು ಅವರ ಊರುಗಳಿಗೆ ಕಳುಹಿಸಲು ನೆರವು ಒದಗಿಸಲು ಮುಂಬೈನಲ್ಲಿ ಇಬ್ಬರು ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ

    ಇದನ್ನು ಓದಿ: International Flights: ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಮತ್ತೆ ಬಂದ್? DGCA ಹೊಸಾ ರೂಲ್ಸ್

    ಉಕ್ರೇನ್ ನ ಈಶಾನ್ಯ ಭಾಗದಲ್ಲಿರುವ ಕನ್ನಡದ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದಾರೆ. ವಿದೇಶಾಂಗ ಸಚಿವರೊಂದಿಗೆ ಮಾತನಾಡಿ ಅವರಿಗೆ ಊಟ ವಸತಿ ವ್ಯವಸ್ಥೆ ಮಾಡಲು ಹಾಗೂ ಅವರನ್ನು ಸುರಕ್ಷಿತ ಸ್ಥಳಗಳಿಗಳಿಗೆ ಕಳುಹಿಸಲು ಮಾರ್ಗದರ್ಶನ ನೀಡುವಂತೆ ಕೋರಲಾಗಿದೆ ಎಂದರು. ರೋಮಾನಿಯಾ ಗಡಿಯಲ್ಲಿ ದಟ್ಟಣೆ ಯಾಗುತ್ತಿದ್ದು, ಕನ್ನಡಿಗರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲು ಕೋರಲಾಗಿದೆ ಎಂದು ತಿಳಿಸಿದರು.
    Published by:Seema R
    First published: