• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ನೆರೆ ಪರಿಹಾರ ಮಾರ್ಗಸೂಚಿ ಬದಲಿಸಿ, ಹೆಚ್ಚು ಅನುದಾನ ಬಿಡುಗಡೆ ಮಾಡಿ; ಸಿಎಂ ಬೊಮ್ಮಾಯಿ

ನೆರೆ ಪರಿಹಾರ ಮಾರ್ಗಸೂಚಿ ಬದಲಿಸಿ, ಹೆಚ್ಚು ಅನುದಾನ ಬಿಡುಗಡೆ ಮಾಡಿ; ಸಿಎಂ ಬೊಮ್ಮಾಯಿ

ಕೇಂದ್ರ ನಿಯೋಗದ ಜೊತೆ ಸಿಎಂ ಸಭೆ

ಕೇಂದ್ರ ನಿಯೋಗದ ಜೊತೆ ಸಿಎಂ ಸಭೆ

ಕೇಂದ್ರ ಗೃಹ ಸಚಿವಾಲಯದ ಸುಶೀಲ್ ಪಾಲ್ ನೇತೃತ್ವದ ಕೇಂದ್ರ ಅಧ್ಯಯನ ತಂಡ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಪ್ರವಾಹದಿಂದ ಸಂಭವಿಸಿದ ಹಾನಿಯ ಕುರಿತು ಚರ್ಚೆ ನಡೆಸಿತು

  • Share this:

ಬೆಂಗಳೂರು(ಸೆ. 4): ರಾಜ್ಯದಲ್ಲಿ ನೆರೆಯಿಂದ ಉಂಟಾದ ಹಾನಿ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಅಧ್ಯಯನ ತಂಡ (Central Flood Study team) ಇಂದು ರಾಜ್ಯಕ್ಕೆ ಆಗಮಿಸಿದೆ.  ನಾಲ್ಕು ದಿನಗಳ ಕಾಲ ಮೂರು ತಂಡಗಳಲ್ಲಿ ವಿವಿಧ ಜಿಲ್ಲೆಗಳ ಪ್ರವಾಸವನ್ನು ಕೈಗೊಂಡಿದೆ. ಇಂದು ರಾಜಧಾನಿಗೆ ಬಂದಿಳಿದ ಈ ನಿಯೋಗ  ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ(CM Basavaraja Bommai) ಯನ್ನು ಭೇಟಿ ಮಾಡಿತ್ತು. ಈ ವೇಳೆ ನೆರೆ ಹಾನಿ ಬಗ್ಗೆ ಮಾಹಿತಿ ನೀಡಿದ ಸಿಎಂ ಬೊಮ್ಮಾಯಿ, ನಾಲ್ಕು ವರ್ಷದಿಂದ ಪ್ರವಾಹ, ಭೂಕುಸಿತದ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಎನ್.ಡಿ.ಆರ್.ಎಫ್. (NDRF) ಪರಿಹಾರ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿ, ಹೆಚ್ಚುವರಿ ಪರಿಹಾರ ಒದಗಿಸಲು ಶಿಫಾರಸು ಮಾಡುವಂತೆ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ತಂಡಕ್ಕೆ ಸಲಹೆ ಮಾಡಿದರು.


ಕೇಂದ್ರ ಗೃಹ ಸಚಿವಾಲಯದ ಸುಶೀಲ್ ಪಾಲ್ ನೇತೃತ್ವದ ಕೇಂದ್ರ ಅಧ್ಯಯನ ತಂಡ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಪ್ರವಾಹದಿಂದ ಸಂಭವಿಸಿದ ಹಾನಿಯ ಕುರಿತು ಚರ್ಚೆ ನಡೆಸಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಮಿತ್ ಶಾ ಅವರಿಗೆ ಕೇಂದ್ರ ತಂಡ ಕಳುಹಿಸಿರುವುದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದ ಮುಖ್ಯಮಂತ್ರಿಗಳು, ರಕ್ಷಣೆ ಮತ್ತು ತುರ್ತು ಪರಿಹಾರ ಒದಗಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಆದರೆ, ಜನರ ಪುನರ್ವಸತಿಗೆ ಹೆಚ್ಚಿನ ನೆರವಿನ ಅಗತ್ಯವಿದೆ ಎಂದರು.


ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದ ಕೂಡಲೇ ನೂರು ಕೋಟಿ ರೂ. ಬಿಡುಗಡೆ ಮಾಡಿದ್ದು, ಮೂರು ದಿನಗಳೊಳಗೆ ಬೆಳಗಾವಿ ಉತ್ತರ ಕನ್ನಡ ಜಿಲ್ಲೆಗಳಿಗೆ 500 ಕೋಟಿ ರೂ. ಒದಗಿಸಲಾಗಿದೆ.ರಾಜ್ಯದ ವಾಸ್ತವಾಂಶಗಳನ್ನು ವಸ್ತುನಿಷ್ಠವಾಗಿ ಕೇಂದ್ರ ತಂಡದ ಮುಂದಿಡಲಾಗಿದೆ. ಇಂದು ಕ್ಷಣ ಕ್ಷಣದ ಮಾಹಿತಿ ಲಭ್ಯವಾಗುವ ಕಾರಣ, ಕೇಂದ್ರಕ್ಕೂ ಮಾಹಿತಿ ಲಭ್ಯವಿದೆ. ಕಳೆದ ನಾಲ್ಕು ವರ್ಷಗಳಿಂದ ಜನರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಪ್ರತಿವರ್ಷ ಕುಟುಂಬಗಳ ಸ್ಥಳಾಂತರ, ಮನೆ ಕಳೆದುಕೊಳ್ಳುವ ಪರಿಸ್ಥಿತಿ ಹೃದಯ ವಿದ್ರಾವಕವಾಗಿದೆ. ರಸ್ತೆ ಮತ್ತಿತರ ಮೂಲ ಸೌಕರ್ಯಗಳಿಗೆ ಭಾರಿ ಹಾನಿಯಾಗಿದೆ. ಕಳೆದ 15 ವರ್ಷಗಳಲ್ಲಿ ರಸ್ತೆ, ವಿದ್ಯುತ್ ಮತ್ತಿತರ ಸಾರ್ವಜನಿಕ ಸೌಲಭ್ಯಗಳಿಗೆ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡಿರುವ ಹಿನ್ನೆಲೆಯಲ್ಲಿ ಅವುಗಳನ್ನು ಮರು ಸ್ಥಾಪಿಸುವುದು ಸವಾಲಿನ ಕೆಲಸವಾಗಿದೆ.


ಇದನ್ನು ಓದಿ: ಸಾರ್ವಜನಿಕ ಗಣೇಶೋತ್ಸವಕ್ಕೆ ಈ ಬಾರಿ ಸಿಗಲಿದೆ ವಿನಾಯಿತಿ; ನಾಳೆ ಸಭೆ ಬಳಿಕ ಅಧಿಕೃತ ಪ್ರಕಟಣೆ


ರಾಜ್ಯ ಪ್ರಗತಿಪರ ಕೃಷಿ ರಾಜ್ಯವಾಗಿದ್ದು, ಈ ಬಾರಿ ಬಿತ್ತನೆ ಹೆಚ್ಚಾಗಿದ್ದು, ರೈತರೂ ಉತ್ಸಾಹದಿಂದ ಕೃಷಿ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಿದ್ದರು. ಆದರೆ ಪ್ರವಾಹದಿಂದ ಬೆಳೆ ನಷ್ಟವಾಗಿ ತೊಂದರೆ ಅನುಭವಿಸಿದ್ದಾರೆ.*ಆದ್ದರಿಂದ ರಾಜ್ಯಕ್ಕೆ ಗರಿಷ್ಠ ಪ್ರಮಾಣದ ನೆರವು ನೀಡುವಂತೆ ಸಿಎಂ ಮನವಿ ಮಾಡಿದರು*ರಾಜ್ಯವು ವಸ್ತುನಿಷ್ಠ ವರದಿ ಸಲ್ಲಿಸಿರುವುದಲ್ಲದೆ, ಅತ್ಯಂತ ಕ್ರಿಯಾಶೀಲವಾಗಿ ನಷ್ಟದ ವಿವರ ನೀಡಿದೆ ಎಂದು ಕೇಂದ್ರ ತಂಡದ ಮುಖ್ಯಸ್ಥ ಸುಶೀಲ್ ಪಾಲ್ ಮೆಚ್ಚುಗೆ ವ್ಯಕ್ತ ಪಡಿಸಿದರು.


ರಾಜ್ಯದಲ್ಲಿ ಸಂಭವಿಸಿದ ನೆರೆಯಿಂದ ಉಂಟಾದ ಬೆಳೆಹಾನಿಗೆ 38.64 ಕೋಟಿ ಯನ್ನು 45585 ರೈತರಿಗೆ ಪರಿಹಾರ ಬಿಡುಗಡೆ ಮಾಡುತ್ತಿರುವುದಾಗಿ ಕಂದಾಯ ಸಚಿವ ಆರ್ ಅಶೋಕ್ ಘೋಷಣೆ ಮಾಡಿದ್ದಾರೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

Published by:Seema R
First published: