8th Class- ಎಂಟನೇ ತರಗತಿ ಕೂಡ ಶೀಘ್ರದಲ್ಲೇ ಆರಂಭ? ಸೆ. 1ರಂದು ತೀರ್ಮಾನ ಸಾಧ್ಯತೆ

ಕೋವಿಡ್ ತಜ್ಞರ ಜೊತೆ ಚರ್ಚಿಸಿದ ಬಳಿಕ ಎಂಟನೇ ತರಗತಿ ಆರಂಭದ ಬಗ್ಗೆ ಆಗಸ್ಟ್ 30 ಅಥವಾ ಸೆಪ್ಟೆಂಬರ್ 1ರಂದು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ತಿಳಿಸಿದ್ಧಾರೆ.

ಬಸವರಾಜ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ

  • Share this:
ಬೆಂಗಳೂರು: ಒಂಬತ್ತು ಹಾಗೂ ಮೇಲ್ಪಟ್ಟ ತರಗತಿಗಳು ಈಗಾಗಲೇ ಆರಂಭಗೊಂಡಿವೆ. ಈಗ ಎಂಟನೇ ತರಗತಿ ಆರಂಭಕ್ಕೂ ಒತ್ತಾಯ ಕೇಳಿಬರುತ್ತಿದೆ. ಈ ಬಗ್ಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಎಂಟನೇ ತರಗತಿಯ ಶಾಲೆಗಳ ಆರಂಭ ಮಾಡಬೇಕಾ ಬೇಡವಾ ಎಂಬುದನ್ನು ಆಗಸ್ಟ್ 30 ಅಥವಾ ಸೆಪ್ಟೆಂಬರ್ 1 ರಂದು ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ. ಕುಮಾರಕೃಪಾ ಗೆಸ್ಟ್ ಹೌಸ್‌ನಲ್ಲಿ ಈ ಸಂಬಂಧ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು. ಸೋಮವಾರ 9, 10 ಹಾಗೂ ಮೊದಲ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಮಕ್ಕಳು ಅತ್ಯಂತ ಉತ್ಸಾಹಿಗಳಾಗಿ ಆಗಮಿಸಿದ್ದಾರೆ. ಪೋಷಕರು ಕೂಡ ಶಾಲೆ‌ ಆರಂಭದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನುಳಿದ‌ ತರಗತಿ ಆರಂಭದ ಬಗ್ಗೆ ಚರ್ಚೆ ಮಾಡಿದ್ದೇವೆ.‌ ಈ ತಿಂಗಳ ಅಂತ್ಯಕ್ಕೆ‌ ಅಂದರೆ ಆಗಸ್ಟ್ 30 ಅಥವಾ ಸೆಪ್ಟೆಂಬರ್ 1ರಂದು ಈ ಬಗ್ಗೆ ತೀರ್ಮಾನ ಮಾಡುತ್ತೇವೆ. ಅದಕ್ಕೂ ಮುನ್ನ ಕೋವಿಡ್ ತಜ್ಞರ ಅಭಿಪ್ರಾಯ ಪಡೆಯುತ್ತೇವೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

ಈಗಾಗಲೇ ಆರಂಭಿಸಿರುವ ತರಗತಿ ಬಗ್ಗೆ ಅತ್ಯಂತ ಎಚ್ಚರಿಕೆ ವಹಿಸುತ್ತೇವೆ. ಮುಂದಿನ ಒಂದು ವಾರ ಅಥವಾ ಹತ್ತು ದಿನಗಳ ಕಾಲ ಪರಿಸ್ಥಿತಿ ಗಮನಿಸುತ್ತೇವೆ. ನಮಗೆ ಮಕ್ಕಳ ಆರೋಗ್ಯ ಮುಖ್ಯ. ತಜ್ಞರ ಸಮಿತಿಯಿಂದ ಮಾಹಿತಿ ಪಡೆಯುತ್ತೇವೆ. ನಂತರ ಪ್ರಾಥಮಿಕ ಶಾಲೆ ಹಾಗೂ 8 ನೇ ತರಗತಿ ತೆರೆಯುವ ಬಗ್ಗೆ ನಿರ್ಧಾರ ಮಾಡುತ್ತೇವೆ. ಗಡಿ ಜಿಲ್ಲೆಗಳಲ್ಲಿ‌ ಶಾಲೆ ತೆರೆಯುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಶಾಲೆ ಆರಂಭಿಸುವುದು ಸರ್ಕಾರದ ಮೊದಲ ಆದ್ಯತೆ ಆಗಿದೆ ಎಂದರು‌.

ಮಕ್ಕಳಿಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ:

ಇಷ್ಟು ದಿನ ಕೋವಿಡ್ ಕಾರಣ ಮನೆಯಲ್ಲಿ ಮಕ್ಕಳು ಇರಬೇಕಾದ ಪರಿಸ್ಥಿತಿ ಸೃಷ್ಟಿಯಾಗಿತ್ತು. ಆನ್‌ಲೈನ್ ತರಗತಿಯಿಂದ ಮಕ್ಕಳು ಕಿರಿಕಿರಿ ಅನುಭವಿಸಿದ್ದರು. ಇದೀಗ ಮಕ್ಕಳು ಶಿಕ್ಷಕರ ಸಮ್ಮುಖದಲ್ಲೇ ಕಲಿಯಲಿದ್ದಾರೆ. ಇದು ಮಕ್ಕಳಿಗೆ ನಿಜವಾದ ಸ್ವಾತಂತ್ರ್ಯ. ನಾನು ಇಂದು ಅನೇಕ ಶಾಲೆಗಳಿಗೆ ಭೇಟಿ ನೀಡಿದ್ದೆ. ವಿದ್ಯಾರ್ಥಿಗಳು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸಿಎಂ ತಿಳಿಸಿದರು.

ಇದನ್ನೂ ಓದಿ: Petrol Diesel Prices- ರಾಜ್ಯದ ಕೆಲ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ವ್ಯತ್ಯಯ; ಇಲ್ಲಿದೆ ಇವತ್ತಿನ ದರ

ಮೊದಲ ದಿನ ಶಾಲೆಗೆ ಬಂದವರೆಷ್ಟು?:

ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದಂತೆ ಅನೇಕ ವಿದ್ಯಾರ್ಥಿಗಳು ಹಾಗೂ ಪೋಷಕರು ಸಂತಸದಿಂದ ಶಾಲೆಗೆ ಕಳಿಸಿದ್ದಾರೆ. ಆದರೆ ಮೊದಲ ದಿನವಾದ್ದರಿಂದ ಪೋಷಕರು ಹಾಗೂ ಮಕ್ಕಳಲ್ಲಿ ಭಯ,‌ ಹಿಂಜರಿಕೆ ದೂರವಾಗಿಲ್ಲ. ಮೊದಲ‌ ದಿನ ಶೇ.25ರಷ್ಟು ಸಹ ಹಾಜರಾತಿ ಕೂಡ ದಾಖಲಾಗಿಲ್ಲ. ಒಟ್ಟು ಒಂಬತ್ತನೇ ತರಗತಿ ವಿದ್ಯಾರ್ಥಿಗಳ ಹಾಜರಾತಿ ಕೇವಲ ಶೇ.19.56ರಷ್ಟು ಮಾತ್ರ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಶೇ.53.58ರಷ್ಟು ಹಾಜರಾತಿ ಇದ್ದರೆ, ಕೊಪ್ಪಳ ಜಿಲ್ಲೆಯಲ್ಲಿ ಅತಿ ಕಡಿಮೆ ಶೇ. 2.23ರಷ್ಟು ಹಾಜರಾತಿ ಮಾತ್ರ ಕಂಡು ಬಂದಿದೆ.

ಅದರಲ್ಲೂ ಹತ್ತನೇ ತರಗತಿ ವಿದ್ಯಾರ್ಥಿಗಳ ಹಾಜರಾತಿ ಕೇವಲ ಶೇ.21.08ರಷ್ಟು ಮಾತ್ರ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಶೇ.54.07ರಷ್ಟು ಹಾಜರಾತಿ ಇತ್ತು. ದಾವಣಗೆರೆ ಜಿಲ್ಲೆಯಲ್ಲಿ ಅತಿ ಕಡಿಮೆ ಶೇ. 2.20ರಷ್ಟು ಹಾಜರಾತಿ ಇತ್ತು. ದ್ವಿತೀಯ ಪಿಯುಸಿ ಒಟ್ಟು ಶೇ.36ರಷ್ಟು ಮಾತ್ರ ಹಾಜರಾತಿ ಇದ್ದರೆ, ಇದರಲ್ಲಿ ಕೋಲಾರ‌ ಜಿಲ್ಲೆಯಲ್ಲಿ ಅತಿ ಹೆಚ್ಚು ಶೇ. 64ರಷ್ಟು ಹಾಜರಾತಿ ಕಂಡು ಬಂದಿತು. ಬೀದರ್ ‌ಜಿಲ್ಲೆಯಲ್ಲಿ ಅತಿ ಕಡಿಮೆ ಶೇ. 08ರಷ್ಟು ವಿದ್ಯಾರ್ಥಿಗಳು ಹಾಜರಾದರು.

ವರದಿ: ದಶರಥ್ ಸಾವೂರು
Published by:Vijayasarthy SN
First published: