ನವದೆಹಲಿ: (New Delhi) ನೀರಾವರಿ ವಿಷಯ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ಅವರು ಇಂದು ನವದೆಹಲಿಗೆ ಆಗಮಿಸಿದರು. ಸಿಎಂ ಬೊಮ್ಮಾಯಿ ಅವರೊಂದಿಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ (Govind Karjol) ಹಾಗೂ ಆರೋಗ್ಯ ಸಚಿವ ಡಾ. ಸುಧಾಕರ್ (K Sudhakar) ಜೊತೆಗಿದ್ದರು.
ಇಂದು ಸಂಜೆ 4 ಗಂಟೆ ಸಮಯದಲ್ಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ನಾಳೆ ಕೇಂದ್ರ ಆರೋಗ್ಯ ಸಚಿವ ಮುನ್ಸುಖ್ ಮಾಂಡವಿಯ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ನೀಡುತ್ತಿರುವ ಲಸಿಕೆ ಪ್ರಮಾಣ ಹೆಚ್ಚಿಸುವಂತೆ ಮನವಿ ಮಾಡಲಾಗುವುದು. ಮಾಂಡವಿಯ ಭೇಟಿ ವೇಳೆ ಸಿಎಂ ಬೊಮ್ಮಾಯಿ, ರಾಜ್ಯದ ಆರೋಗ್ಯ ಸಚಿವ ಡಾ. ಸುಧಾಕರ್ ಅವರು ಸಹ ಜೊತೆಗೆ ಇರಲಿದ್ದಾರೆ.
ಇಂದು ಕೃಷಿ ಸಚಿವರ ಭೇಟಿ ಮಾಡುತ್ತೇನೆ. ನಂತರ ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿ ಆಗುತ್ತೇನೆ ಎಂದರು. ಇನ್ನು ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಯುವತಿ ಹೇಳಿಕೆ ಆಧರಿಸಿ ತನಿಖೆ ನಡೆಸಲಾಗುತ್ತಿದೆ. ಈ ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ದರೂ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಸೂಚಿಸಿದ್ದೇನೆ ಎಂದರು.
ನೀರಾವರಿ ವಿಷಯಗಳ ಬಗ್ಗೆ ಚರ್ಚೆ
ದೆಹಲಿಯಲ್ಲಿ ಕೇಂದ್ರ ನೀರಾವರಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಚರ್ಚೆ ನಡೆಸಲಿದ್ದಾರೆ. ಮೇಕೆದಾಟು ಯೋಜನೆ ಕಾಮಗಾರಿಗೆ ಕೇಂದ್ರ ನೀರಾವರಿ ಸಚಿವರಿಂದ ಒಪ್ಪಿಗೆ ಪಡೆಯುವ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಕಳಸಾ ಬಂಡೂರಿ ಯೋಜನೆ ಕಾಮಗಾರಿಗಳ ಬಗ್ಗೆಯೂ ಸಿಎಂ ಬೊಮ್ಮಾಯಿ ಕೇಂದ್ರ ಸಚಿವ ಶೇಖಾವತ್ ಜೊತೆ ಚರ್ಚಿಸಲಿದ್ದಾರೆ.
ಇದರೊಂದಿಗೆ ಅಂತರ್ ರಾಜ್ಯ ನದಿ ನೀರು ವಿವಾದ ಕುರಿತಾಗಿಯೂ ಕೇಂದ್ರ ಸಚಿವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಕೇಂದ್ರ ನೀರಾವರಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಜೊತೆಗೆ ಮಾತುಕತೆ ನಡೆಸುವ ಜೊತೆಗೆ ಕಾನೂನು ತಂಡದೊಂದಿಗೂ ಚರ್ಚೆ ನಡೆಸಲಿದ್ದಾರೆ.
ಇದನ್ನು ಓದಿ: Gold Pot; ಮಂತ್ರಾಲಯದ ರಾಯರ ಮಠಕ್ಕೆ 2 ಚಿನ್ನದ ಪಾತ್ರೆ ಸಮರ್ಪಣೆ; ಇವುಗಳ ಮೌಲ್ಯವೆಷ್ಟು ಗೊತ್ತಾ?
ಹೈಕಮಾಂಡ್ ಭೇಟಿ
ಇದಾದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿದ್ದಾರೆ. ರಾಜ್ಯ ಸರ್ಕಾರದ ಆಡಳಿತದ ಬಗ್ಗೆಯೂ ಸಿಎಂ ಹೈಕಮಾಂಡ್ಗೆ ಮಾಹಿತಿ ನೀಡಲಿದ್ದಾರೆ. ಮುಖ್ಯವಾಗಿ ಇನ್ನೂ ಖಾಲಿ ಉಳಿದಿರುವ ನಾಲ್ಕು ಸಚಿವ ಸ್ಥಾನ ಭರ್ತಿ ಸಂಬಂಧ ಸಿಎಂ ಹೈಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಜೊತೆ ಸಿಎಂ ಬೊಮ್ಮಾಯಿ ಈ ಕುರಿತು ಚರ್ಚಿಸಲಿದ್ದಾರೆ.
ಇದರೊಂದಿಗೆ ಆನಂದ್ ಸಿಂಗ್ ಖಾತೆ ಬದಲಾವಣೆ ವಿಚಾರವನ್ನೂ ಸಹ ಬೊಮ್ಮಾಯಿ ಹೈಕಮಾಂಡ್ ಮುಂದೆ ಪ್ರಸ್ತಾಪಿಸಲಿದ್ದಾರೆ. ಸಿಂಗ್ ಖಾತೆಯನ್ನು ಅದಲು- ಬದಲು ಮಾಡುವ ಬಗ್ಗೆ ಸಿಎಂ ಚರ್ಚೆ ನಡೆಸಲಿದ್ದಾರೆ. ಹೀಗಾಗಿ ಸಚಿವ ಆನಂದ್ ಸಿಂಗ್ ಸಿಎಂ ದೆಹಲಿ ಪ್ರವಾಸದಿಂದ ತಮ್ಮ ಖಾತೆ ಬದಲಾವಣೆ ನಿರೀಕ್ಷೆಯಲ್ಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ