ಸಂಪುಟ ಪಟ್ಟಿಯೊಂದಿಗೆ ದೆಹಲಿಯಲ್ಲಿ ಬೊಮ್ಮಾಯಿ; ಇಂದು ಅಥವಾ ನಾಳೆಯೇ ಸಂಪುಟ ವಿಸ್ತರಣೆ?

ಬೊಮ್ಮಾಯಿ ಅವರು ದೆಹಲಿಗೆ ತೆಗೆದುಕೊಂಡು ಹೋಗಿರುವ ಸಂಭಾವ್ಯ ಸಚಿವರ ಹೊಸ ಪಟ್ಟಿಗೆ ವರಿಷ್ಠರು ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಅನುಮತಿಸುವುದು ಖಚಿತ ಎನ್ನಲಾಗಿದೆ. ಇಂದೇ ಪ್ರಮಾಣ ವಚನ ನಡೆಯುವ ಸಂಭವವೂ ಇದೆ.

ಬಸವರಾಜ್ ಬೊಮ್ಮಾಯಿ

ಬಸವರಾಜ್ ಬೊಮ್ಮಾಯಿ

 • Share this:
  ಬೆಂಗಳೂರು: ಕಳೆದ ವಾರ ದೆಹಲಿಗೆ ಸಂಭಾವ್ಯ ಸಚಿವರ ಪಟ್ಟಿ ತೆಗೆದುಕೊಂಡು ಹೋಗಿದ್ದ ನೂತನ ಸಿಎಂ ಬಸವರಾಜ ಬೊಮ್ಮಾಯಿ ಯಾವುದೇ ಅನುಮತಿ ದೊರೆಯದೇ ಬರಿಗೈಯಲ್ಲಿ ವಾಪಸ್ಸಾಗಿದ್ದರು. ಇದೀಗ ಮತ್ತೊಂದು ಪಟ್ಟಿಯೊಂದಿಗೆ ಬೊಮ್ಮಾಯಿ ನಿನ್ನೆ ರಾತ್ರಿ ದಿಢೀರ್ ದೆಹಲಿಗೆ ಹೋಗಿದ್ದಾರೆ. ನಿನ್ನೆ ರಾತ್ರಿಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನ ಭೇಟಿ ಮಾಡಲು ಮಾಡಿದ ಪ್ರಯತ್ನ ಈಡೇರಲಿಲ್ಲ. ಇಂದು ನಡ್ಡ ಅವರನ್ನ ಭೇಟಿಯಾಗುವುದು ಖಚಿತವಾಗಿದೆ. ಸಂಪುಟ ರಚನೆಗೆ ಹೈಕಮಾಂಡ್ ಇಂದು ಒಪ್ಪಿಗೆ ನೀಡುವುದೂ ಖಚಿತ. ಬೊಮ್ಮಾಯಿ ತೆಗೆದುಕೊಂಡು ಹೋಗಿರುವ 20-25 ಮಂದಿ ಹೆಸರು ಇರುವ ಹೊಸ ಪಟ್ಟಿಗೆ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ವರಿಷ್ಠರು ಅನುಮತಿಸುವುದೂ ಬಹುತೇಕ ನಿಶ್ಚಿತ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.

  ಜಯಪ್ರಕಾಶ್ ನಡ್ಡ ಅವರು ಸಂಪುಟ ಪಟ್ಟಿಯನ್ನ ಅಂತಿಮಗೊಳಿಸುತ್ತಿದ್ದಂತೆಯೇ ರಾಜಭವನಕ್ಕೆ ಪಟ್ಟಿ ರವಾನೆಯಾಗಲಿದೆ. ಇಂದು ಸಂಜೆಯೇ ಪ್ರಮಾಣ ವಚನಕ್ಕೆ ಬೊಮ್ಮಾಯಿ ಅವರು ಸಮಯ ಕೇಳುವ ಸಾಧ್ಯತೆ ಇದೆ. ರಾಜ್ಯಪಾಲರು ಇವತ್ತಿಗೆ ಪ್ರಮಾಣ ವಚನಕ್ಕೆ ಸಮಯ ನೀಡದಿದ್ದರೂ ನಾಳೆಯಂತೂ ಸಂಪುಟ ವಿಸ್ತರಣೆ ಖಚಿತ ಎನ್ನಲಾಗುತ್ತಿದೆ.

  ಇದನ್ನೂ ಓದಿ: Yatnal - ಇಡೀ ಕರ್ನಾಟಕವೇ ನನ್ನ ಬೆನ್ನು ಹತ್ತಿ ಬರುತ್ತೆ: ಬಸನಗೌಡ ಪಾಟೀಲ ಯತ್ನಾಳ

  ಬೊಮ್ಮಾಯಿ ಕಳೆದ ವಾರ ದೆಹಲಿಯಲ್ಲಿ ವರಿಷ್ಠರನ್ನ ಭೇಟಿಯಾದಾಗ ಸಂಪುಟ ವಿಸ್ತರಣೆಯ ಅಜೆಂಡಾವೇ ಪ್ರಮುಖವಾಗಿತ್ತು. ಆದರೆ, ಬೊಮ್ಮಾಯಿ ತೆಗೆದುಕೊಂಡು ಹೋಗಿದ್ದ ಪಟ್ಟಿಗೆ ಕೂಡಲೇ ಅನುಮತಿಸಲು ಹೈಕಮಾಂಡ್ ಹಿಂದೇಟು ಹಾಕಿತ್ತು. ಸಾಮಾಜಿಕ ನ್ಯಾಯ, ಪ್ರಾದೇಶಿಕತೆ, ವಯಸ್ಸು ಇತ್ಯಾದಿ ಅಂಶಗಳನ್ನ ಪರಿಗಣಿಸಿ ಸಮತೋಲನವಾಗಿರುವ ಸಂಪುಟ ರಚನೆಗೆ ಗಮನ ವಹಿಸಿ ಎಂದು ಹೊಸ ಪಟ್ಟಿ ತರುವಂತೆ ಬೊಮ್ಮಾಯಿಗೆ ವರಿಷ್ಠರು ಹೇಳಿಕಳುಹಿಸಿದ್ದರು. ಅದರಂತೇ ಬೊಮ್ಮಾಯಿ ಈಗ ಹೊಸ ಪಟ್ಟಿ ತೆಗೆದುಕೊಂಡು ಹೋಗಿದ್ದಾರೆ. ಹೈಕಮಾಂಡ್ ಕೂಡ ತಮ್ಮದೇ ಮೂಲದಿಂದ ಪಟ್ಟಿ ಮಾಡಿಟ್ಟುಕೊಂಡಿದೆ. ಇಂದು ಸಿಎಂ ಬೊಮ್ಮಾಯಿ ಅವರಿಗೆ ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ತೋರಲಿದೆ.

  ಈ ಬಾರಿ ಸಚಿವ ಸಂಪುಟದಲ್ಲಿ ಹಿರಿಯರಿಗೆ ಅವಕಾಶ ಇಲ್ಲ ಎನ್ನುವ ಸುದ್ದಿ ಇದೆ. ನಿನ್ನೆ ರಾತ್ರಿ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರು ಹಿರಿಯರನ್ನ ಕೈಬಿಡುವ ಬಗ್ಗೆ ಹೈಕಮಾಂಡ್ ಏನೇ ತೀರ್ಮಾನ ಮಾಡಿದರೂ ತಾವು ಬದ್ಧರಾಗಿರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಯಡಿಯೂರಪ್ಪ ಅವರ ಅವಧಿಯಲ್ಲಿ ಸಚಿವರಾಗುವುದರಿಂದ ವಂಚಿತರಾಗಿದ್ದ ಆರ್. ಶಂಕರ್ ಅವರು ಈ ಬಾರಿ ಸಚಿವನಾಗುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

  ಇದನ್ನೂ ಓದಿ: ಸಿಎಂ ಬೊಮ್ಮಾಯಿ- ದೇವೇಗೌಡರ ಭೇಟಿ ಹಳೆ‌ ಒಡನಾಟವೋ..ಹೊಸ ರಾಜಕೀಯ ಲೆಕ್ಕಾಚಾರವೋ..?

  ಇದೇ ವೇಳೆ, ಕೊಳ್ಳೇಗಾಲದ ಬಿಎಸ್​ಪಿ ಉಚ್ಛಾಟಿತ ಶಾಸಕ ಎನ್ ಮಹೇಶ್ ಅವರು ಬಿಜೆಪಿ ಸೇರಲು ನಿರ್ಧರಿಸಿದ್ಧಾರೆ. ಆಗಸ್ಟ್ 5ರಂದು ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ ಮೊದಲಾದವರ ಉಪಸ್ಥಿತಿಯಲ್ಲಿ ಮಹೇಶ್ ಅವರು ಬಿಜೆಪಿ ಸೇರಲಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಕೊಳ್ಳೇಗಾಲ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಸಿಗುವ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ಮಹೇಶ್ ಈ ನಿರ್ಧಾರ ಕೈಗೊಂಡರೆನ್ನಲಾಗಿದೆ.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
  Published by:Vijayasarthy SN
  First published: