• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಎಣ್ಣೆಕಾಳು ಉತ್ಪಾದನೆಗೆ ಉತ್ತೇಜನ: ಸಂರಕ್ಷಿತ ದರ ಒದಗಿಸಲು ಕ್ರಮ: ಬಸವರಾಜ ಬೊಮ್ಮಾಯಿ

ಎಣ್ಣೆಕಾಳು ಉತ್ಪಾದನೆಗೆ ಉತ್ತೇಜನ: ಸಂರಕ್ಷಿತ ದರ ಒದಗಿಸಲು ಕ್ರಮ: ಬಸವರಾಜ ಬೊಮ್ಮಾಯಿ

  • Share this:

ಬೆಂಗಳೂರು (ಆ. 27):  ರಾಜ್ಯದಲ್ಲಿ ಎಣ್ಣೆಕಾಳು ಉತ್ಪಾದನೆಗೆ ಒತ್ತು ನೀಡುವುದು. ತಾಳೆ ಬೆಳೆಗೆ ಉತ್ತೇಜನ ಹಾಗೂ ಕೃಷಿ ಉತ್ಪನ್ನ ಸಂಸ್ಕರಣೆ, ರಫ್ತಿಗೆ ಒತ್ತು ನೀಡುವ ಕುರಿತು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja bommai) ಅವರು ಇಂದು ಚರ್ಚೆ ನಡೆಸಿದರು.  ರಾಜ್ಯದ ಕೃಷಿ ವಿಷಯಗಳ (Agriculture issues) ಕುರಿತು ಚರ್ಚೆ ನಡೆಸಿದ ಅವರು ಎಣ್ಣೆಕಾಳು ಬೆಳೆಯಲು ಉತ್ತೇಜನ ನೀಡುವ ಭರವಸೆ ನೀಡಿದರು. ಇದರ ಜೊತೆಗೆ ರಾಜ್ಯದಲ್ಲಿ ಎಣ್ಣೆಕಾಳು ಬೆಳೆಗಳಿಗೆ ಸಂರಕ್ಷಿತ ದರ ಒದಗಿಸುವ ಬಗ್ಗೆ ನಿರ್ದಿಷ್ಟವಾಗಿ ನೀತಿ ರೂಪಿಸಲಾಗುವುದು.


ಎಣ್ಣೆಕಾಳು ಬೆಳೆಯಲು ಉತ್ತೇಜನ:
ರಾಜ್ಯದಲ್ಲಿ ಎಣ್ಣೆಕಾಳು ಬೆಳೆಯಲು ಉತ್ತೇಜನ ನೀಡಲಾಗುತ್ತಿದೆ. ಆದರೆ ರೈತರಿಗೆ ವೈಜ್ಞಾನಿಕ ತರಬೇತಿ ಹಾಗೂ ಹೆಚ್ಚಿನ ಬೆಂಬಲದ ಅಗತ್ಯವಿದೆ. ಬೆಲೆಯಲ್ಲಿ ಭಾರಿ ಏರುಪೇರಾಗುವುದರಿಂದ ಉತ್ತಮ ಬೆಲೆ ಖಾತರಿ ಪಡಿಸಲು ಕ್ರಮ ವಹಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರವು ರೈತರು ನಮ್ಮ ದೇಶದಲ್ಲಿ ಬೆಳೆಯುವ ಬೆಳೆಗಳ ಆಮದಿಗೆ ತೆರಿಗೆ ವಿಧಿಸುವ ಮೂಲಕ ದೇಶದ ರೈತರಿಗೆ ನೆರವು ನೀಡಬೇಕು ಎಂದು ತಿಳಿಸಿದರು.
ಎಣ್ಣೆ ಕಾಳುಗಳ ಬಿತ್ತನೆ ಬೀಜಗಳ ಗುಣಮಟ್ಟ ಖಾತರಿ ಪಡಿಸಲು ಹಾಗೂ ಉತ್ಪಾದಕತೆ ಹೆಚ್ಚಿಸಲು ಸಹ ಆದ್ಯತೆ ನೀಡಬೇಕಾಗಿದೆ. ಈ ಕುರಿತು ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳು ಸಂಶೋಧನೆ ನಡೆಸಬೇಕು. ಎಣ್ಣೆ ಬೀಜ ಉತ್ಪಾದನೆ ಹೆಚ್ಚಿಸಲು ಭಾರತ ಸರ್ಕಾರದ ಬೆಂಬಲ ಅಗತ್ಯ ಎಂದು ತಿಳಿಸಿದರು.


ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ


ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕೇಂದ್ರದ ‘ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ’ ಯಡಿ ಕೃಷಿ ಉತ್ಪನ್ನಗಳ ರಫ್ತಿಗೆ ಒತ್ತು ನೀಡುವಂತೆ ಸಲಹೆ ನೀಡಿದರು. ಜೊತೆಗೆ ರಾಜ್ಯದ ಕೈಗಾರಿಕಾ ಇಲಾಖೆಯ ವ್ಯಾಪ್ತಿಯ ರಫ್ತು ಉತ್ತೇಜನ ಸಂಸ್ಥೆಗಳು ಕೃಷಿ ಉತ್ಪನ್ನಗಳ ರಫ್ತಿಗೆ ಬೆಂಬಲ ನೀಡುವಂತೆ ಸಲಹೆ ನೀಡಿದರು.


ಸಮುದ್ರ ಹಾಗೂ ಒಳನಾಡು ಮೀನುಗಾರಿಕೆಗೆ ಇನ್ನಷ್ಟು ಪ್ರೋತ್ಸಾಹ ನೀಡುವ ಅಗತ್ಯವಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಾರ್ಚ್ 31 ರೊಳಗೆ ಮೀನುಗಾರರಿಗೆ 100 ಡೀಪ್ ಸೀ ಟ್ರಾಲರ್ಸ್ ಒದಗಿಸುವ ಕುರಿತು ಯೋಜನೆ ರೂಪಿಸುವಂತೆ ಮೀನುಗಾರಿಕೆ ಇಲಾಖೆಗೆ ನಿರ್ದೇಶನ ನೀಡಿದರು.


ಇದನ್ನು ಓದಿ: PUBG ಆಡಲು ಪೋಷಕರ ಖಾತೆಯಿಂದ 10 ಲಕ್ಷ ಡ್ರಾ ಮಾಡಿ ಮನೆ ತೊರೆದ ಬಾಲಕ


ಮೀನುಗಾರ ಸ್ನೇಹಿ ನೀತಿ ರೂಪಿಸುವ ಕುರಿತು, ಒಳನಾಡು ಮೀನುಗಾರಿಕೆಯಲ್ಲಿ ಸ್ಥಳೀಯವಾಗಿ ಉತ್ತಮ ಮೀನುಮರಿಗಳ ತ್ಪಾದನೆಗೆ ಒತ್ತು ನೀಡುವುದು, ಕೃಷಿ ಮತ್ತು ತೋಟಗಾರಿಕೆ ವಿವಿಗಳ ನಡುವೆ ಉತ್ತಮ ಸಮನ್ವಯ ಸಾಧಿಸಿ, ರೈತರಿಗೆ ಅನುಕೂಲ ಕಲ್ಪಿಸುವುದು ಮೊದಲಾದ ವಿಷಯಗಳ ಕುರಿತು ಚರ್ಚಿಸಲಾಯಿತು. ರಾಜ್ಯದಲ್ಲಿ 10 ಕೃಷಿ-ಹವಾಮಾನ ವಲಯಗಳನ್ನು ಆಧರಿಸಿ ಸಂಶೋಧನೆ ನಡೆಸುವಂತಾಗಬೇಕು ಎಂದು ಮುಖ್ಯಮಂತ್ರಿಗಳು ಅಭಿಪ್ರಾಯ ಪಟ್ಟರು.


ರೈತರ ಜಮೀನಿನಲ್ಲಿ ಬೆಳೆದಿರುವ ಕೃಷಿ ಅರಣ್ಯದಲ್ಲಿ ಮರ ಕಡಿಯಲು, ಮಾರಾಟ ಮಾಡಲು ಇತರ ರಾಜ್ಯಗಳಲ್ಲಿ ಅವಕಾಶವಿದೆ. ಆದರೆ ಕರ್ನಾಟಕದಲ್ಲಿ ಕಠಿಣ ನಿಯಮಗಳಿವೆ. ರೈತರ ಸ್ವಂತ ಬಳಕೆಗೆ ಈ ಮರಗಳನ್ನು ಕಡಿಯಲು ಸಹ ಅನಾನುಕೂಲವಾಗುತ್ತಿರುವ ಬಗ್ಗೆ ಕೇಂದ್ರ ಸಚಿವರು ಮುಖ್ಯಮಂತ್ರಿಗಳ ಗಮನ ಸೆಳೆದರು. ಈ ಬಗ್ಗೆ ನಿಯಮಗಳನ್ನು ಸಡಿಲಿಸಲು ಪರಿಶೀಲಿಸುವುದಾಗಿ ತಿಳಿಸಿದರು.


ಈ ವೇಳೆ  ಕೃಷಿ ಸಚಿವ ಬಿ.ಸಿ. ಪಾಟೀಲ, ತೋಟಗಾರಿಕೆ ಸಚಿವ ಮುನಿರತ್ನ,  ಭಾರತ ಸರ್ಕಾರದ ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ಸುಮಿತಾ ಬಿಸ್ವಾಸ್ ಸೇರಿದಂತೆ ಹಲವು ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

top videos
    First published: