Amrith Mahotsav- ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ವಿಶೇಷ ಕಾರ್ಯಕ್ರಮ ಘೋಷಿಸಿದ ಸಿಎಂ ಬೊಮ್ಮಾಯಿ

ಅಮೃತ ಗ್ರಾಮ ಪಂಚಾಯಿತಿಗಳು, ರೈತ ಅತ್ಪಾದಕ ಸಂಸ್ಥೆಗಳು, ನಿರ್ಮಲ ನಿಗರ, ಶಾಲಾ ಸೌಲಭ್ಯ, ಅಂಗನವಾಡಿ ಕೇಂದ್ರಗಳು ಹೀಗೆ ವಿವಿಧ ಸ್ತರ ಮತ್ತು ವಿಭಾಗಗಳಲ್ಲಿ ಸ್ವಾತಂತ್ರ್ಯದ ಅಮೃತೋತ್ಸವದ ಸಡಗರಕ್ಕೆ ರಾಜ್ಯ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನ ರೂಪಿಸಿದೆ.

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

  • Share this:
ಬೆಂಗಳೂರು: ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ರಾಜ್ಯ ಬಿಜೆಪಿ ಸರ್ಕಾರ ಕೆಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದ್ದು, ಮಾಣಕ್ ಷಾ ಪರೇಡ್ ಮೈದಾನದಲ್ಲಿ ಅವುಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು. ಸಾಂಪ್ರದಾಯಿಕ ಭಾಷಣದ ಪ್ರತಿಯನ್ನು ಯಥಾವತ್ತಾಗಿ ಓದದ ಸಿಎಂ ಬಸವರಾಜ ಬೊಮ್ಮಾಯಿ, ನಿರರ್ಗಳವಾಗಿ ಸ್ವಾಭಾವಿಕ ಭಾಷಣ ಮಾಡಿದರು. ಭಾಷಣದ ಪ್ರತಿಯ ಮುಖ್ಯಾಂಶಗಳನ್ನು ಉಲ್ಲೇಖಿಸುತ್ತಾ ಅದಕ್ಕೆ ವಿವರಣೆಗಳನ್ನು ನೀಡಿ ಗಮನ ಸೆಳೆದರು.

ಬೆಂಗಳೂರಿನಲ್ಲಿ 75 ಸ್ಲಮ್, 75 ಕೆರೆಗಳ ಅಭಿವೃದ್ದಿ ಮಾಡುತ್ತೇವೆ ಎಂದು ಹೊಸ ಭರವಸೆ ನೀಡಿದ ಸಿಎಂ ಬೊಮ್ಮಾಯಿ, ತನಗೆ ಹಿರಿಯರು ಹಾಗೂ ಭಗವಂತ ಕೊಟ್ಟ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಧಣಿವರಿಯದೇ ರಾಜ್ಯದ ಅಭಿವೃದ್ಧಿಗಾಗಿ ಶ್ರಮ ವಹಿಸುತ್ತೇನೆ ಎಂದರು.

ಹೊಸ ಯೋಜನೆಗಳು:

ಅಮೃತ ಗ್ರಾಮ ಪಂಚಾಯತಿಗಳು: ಆಯ್ದ 750 ಗ್ರಾಮ ಪಂಚಾಯತಿಗಳಲ್ಲಿ ಬೀದಿ ದೀಪಗಳು, ಪ್ರತಿ ಮನೆಗೆ ಕುಡಿಯುವ ನೀರಿನ ಸರಬರಾಜು, ಶೇ.100 ರಷ್ಟು ಘನತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ, ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ವಿಸರ್ಜಿಸುವುದು, ಸೌರವಿದ್ಯುತ್ ಅಳವಡಿಕೆ, ಡಿಜಿಟಲ್ ಲೈಬ್ರರಿಗಳೊಂದಿಗೆ ಸುಸಜ್ಜಿತವಾದ ಶಾಲೆಗಳನ್ನು ಸ್ಥಾಪಿಸಿ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುವ ಯೋಜನೆ ಅನುಷ್ಠಾನ.
ಅಮೃತ ಗ್ರಾಮೀಣ ವಸತಿ ಯೋಜನೆ:ಆಯ್ದ 750 ಗ್ರಾಮ ಪಂಚಾಯತಿಗಳಲ್ಲಿ ವಸತಿ ರಹಿತ ಮತ್ತು ಆಶ್ರಯರಹಿತರನ್ನು ಗುರುತಿಸಿ ಸರ್ವರಿಗೂ ವಸತಿ ಕಲ್ಪಿಸುವ ಯೋಜನೆ ಅನುಷ್ಠಾನ.

ಅಮೃತ ರೈತ ಉತ್ಪಾದಕ ಸಂಸ್ಥೆಗಳು: ರೈತ, ನೇಕಾರ ಮತ್ತು ಮೀನುಗಾರರ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ವಿಶೇಷ ಪ್ರೋತ್ಸಾಹ ನೀಡಲು 750 ಅಮೃತ ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಿ ಪ್ರತಿ ಸಂಸ್ಥೆಗೆ 30 ಲಕ್ಷ ರೂ. ನಂತೆ ಮೂರು ವರ್ಷದ ಅವಧಿಗೆ 225 ಕೋಟಿ ರೂ. ಅನುದಾನ.

ಅಮೃತ ನಿರ್ಮಲ ನಗರ: ಆಯ್ದ 75 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತೆ ಮತ್ತು ಸೌಂದರ್ಯ ಕಾಪಾಡಿಕೊಳ್ಳಲು ಅಮೃತ ನಿರ್ಮಲ ನಗರ ಯೋಜನೆ ರೂಪಿಸಿ ಪ್ರತಿ ಸ್ಥಳೀಯ ಸಂಸ್ಥೆಗೆ 1 ಕೋಟಿ ರೂ.ನಂತೆ 75 ಕೋಟಿ ರೂ.ಗಳನ್ನು ಒದಗಿಸಲಾಗುತ್ತದೆ.

ಅಮೃತ ಶಾಲಾ ಸೌಲಭ್ಯ ಯೋಜನೆ: ಆಯ್ದ 750 ಶಾಲೆಗಳಿಗೆ ಸುಸಜ್ಜಿತ ಕಟ್ಟಡ, ಪ್ರಯೋಗಾಲಯ, ಗ್ರಂಥಾಲಯ, ಶೌಚಾಲಯ ಇತ್ಯಾದಿ ಸಮಗ್ರ ಸೌಲಭ್ಯ ಒದಗಿಸಲು ತಲಾ 10 ಲಕ್ಷ ರೂ.ಗಳಂತೆ 75 ಕೋಟಿ ರೂ.ಗಳನ್ನು ವೆಚ್ಚ.

ಇದನ್ನೂ ಓದಿ: Afghanistan- ಕಾಬೂಲ್ ತಾಲಿಬಾನಿಗಳ ವಶವಾಗುವ ಮುನ್ನ ಶಾಂತಿ ಸೂತ್ರ? ಒಂದೆರಡು ದಿನದಲ್ಲಿ ಸ್ಪಷ್ಟಚಿತ್ರಣ

ಅಮೃತ ಅಂಗನವಾಡಿ ಕೇಂದ್ರಗಳು: ಆಯ್ದ 750 ಅಂಗನವಾಡಿ ಕೇಂದ್ರಗಳ ಮೂಲಸೌಕರ್ಯ ಮೇಲ್ದರ್ಜೆಗೇರಿಸಲು ಪ್ರತಿ ಅಂಗನವಾಡಿಗೆ 1 ಲಕ್ಷ ರೂ.ನಂತೆ7.5 ಕೋಟಿ ರೂ. ಹಣ ವಿನಿಯೋಗ

ಅಮೃತ ಸ್ವಸಹಾಯ ಕಿರು ಉದ್ದಿಮೆಗಳು: ಆಯ್ದ 7,500 ಸ್ವಸಹಾಯ ಗುಂಪುಗಳನ್ನು ಕಿರು ಉದ್ಯಮ ಸಂಸ್ಥೆಗಳಾಗಿ (Micro Enterprises) ರೂಪಿಸಲು ತಲಾ 1 ಲಕ್ಷ ರೂ. ನಂತೆ 75 ಕೋಟಿ ರೂ. ಬೀಜ ಧನವನ್ನು (ಸೀಡ್‌ಮನಿ) ಒದಗಿಸಲಾಗುತ್ತದೆ.

ಅಮೃತ ಸಮುದಾಯ ಅಭಿವೃದ್ಧಿ ಯೋಜನೆ:  ಆಯ್ದ 750 ರಚನಾತ್ಮಕ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಗುರುತಿಸಿ ರಚನಾತ್ಮಕ ಸಾಮುದಾಯಿಕ ಸೇವೆಯಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಲಾಗುವುದು.

ಅಮೃತ ಆರೋಗ್ಯ ಮೂಲಸೌಕರ್ಯ ಉನ್ನತೀಕರಣ ಯೋಜನೆ: ಆಯ್ದ 750 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಸೌಕರ್ಯಗಳ ವಿಸ್ತರಣೆ ಮತ್ತು ಉನ್ನತೀಕರಣಕ್ಕೆ ತಲಾ 20 ಲಕ್ಷ ರೂ.ಗಳಂತೆ 150 ಕೋಟಿ ರೂ. ವೆಚ್ಚ ಮಾಡಲಾಗುವುದು‌.

ಅಮೃತ ಕೌಶಲ್ಯ ತರಬೇತಿ ಯೋಜನೆ: ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳ 75 ಸಾವಿರ ಯುವಕ ಯುವತಿಯರ ಕೌಶಲ್ಯಾಭಿವೃದ್ಧಿಗೆ 2 ವರ್ಷಗಳ ತರಬೇತಿ ಯೋಜನೆಗೆ 112 ಕೋಟಿ ರೂ. ವೆಚ್ಚ.

ಅಮೃತ ಕ್ರೀಡಾ ದತ್ತು ಯೋಜನೆ: ಟೋಕಿಯೋ ಒಲಂಪಿಕ್ಸ್‌ನಲ್ಲಿ ಭಾರತದ ಮತ್ತು ಕರ್ನಾಟಕದ ಕ್ರೀಡಾ ಪಟುಗಳ ಸಾಧನೆ ಗಮನಾರ್ಹವಾದುದು. ಮುಂದಿನ ಪ್ಯಾರೀಸ್ ಒಲಂಪಿಕ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ತೋರಿ ಪದಕ ವಿಜೇತ ಸಾಮರ್ಥ್ಯವುಳ್ಳ ಆಯ್ದ 75 ಕ್ರೀಡಾಪಟುಗಳನ್ನು ರೂಪಿಸಲು ಅಗತ್ಯವಾದ ತರಬೇತಿ ಮತ್ತು ಪ್ರೋತ್ಸಾಹ ನೀಡಲು ಅಮೃತ ಕ್ರೀಡಾ ದತ್ತು ಯೋಜನೆ ಅನುಷ್ಠಾನ.

ಸಿಎಂ ಅಭಯ:

ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಅಸ್ಮಿತೆಯನ್ನು ಕಾಪಾಡಲು ನಾವು ಶಕ್ತರಿದ್ದೇವೆ. ಗಡಿ, ನುಡಿ, ನೆಲ ಮತ್ತು ಜಲದ ರಕ್ಷಣೆಯ ವಿಚಾರದಲ್ಲಿ ರಾಜಿ ಇಲ್ಲ. ಸಂವಿಧಾನದ ಆಶಯಗಳ ಪಾಲನೆಯ ಜೊತೆಗೆ ಒಕ್ಕೂಟ ತತ್ವದ ಆಧಾರದಲ್ಲಿ ನೆರೆ ರಾಜ್ಯಗಳೊಡನೆ ಸುಮಧುರ ಬಾಂಧವ್ಯಕಾಪಾಡಿಕೊಳ್ಳಲು ಬದ್ಧರಾಗಿದ್ದೇವೆ. ಸ್ವಸ್ಥ ಸಮೃದ್ಧ ಕರ್ನಾಟಕ ನಿರ್ಮಾಣದ ಕನಸು ಸಾಕಾರಗೊಳಿಸುವತ್ತ ನಮ್ಮ ನಡೆ ಸಾಗಿದೆ. ಇದರಲ್ಲಿ ನಿಮ್ಮ ಸಹಯೋಗ ಅತಿ ಮುಖ್ಯ. ಬನ್ನಿ, ನಾವು ನೀವೆಲ್ಲರೂ, ಜೊತೆಯಾಗಿ ತಂಡ ಸ್ಫೂರ್ತಿಯಿಂದ ನಾಡ ಕಟ್ಟುವ ಕಾಯಕದಲ್ಲಿ ನಿರತರಾಗುವ ಸಂಕಲ್ಪ ಮಾಡಿ ಅದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡೋಣ ಎಂದು ಆಶಿಸಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಮಗೆಲ್ಲರಿಗೂ ಸಮೃದ್ಧಿಯ ಅಮೃತವನ್ನೇ ಉಣಿಸಲಿ ಎಂದು ಸಿಎಂ ಹಾರೈಸಿದರು.

ವರದಿ: ಕೃಷ್ಣ ಜಿ.ವಿ.
Published by:Vijayasarthy SN
First published: