ಕಾರವಾರ (ಜು. 29): ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ಬಸವರಾಜ ಬೊಮ್ಮಾಯಿ ಉತ್ತರ ಕನ್ನಡದ ನೆರೆ ಪರಿಶೀಲನೆ ನಡೆಸಿದರು. ಯಲ್ಲಾಪುರದಲ್ಲಿ ಮಳೆಯಿಂದ ಆದ ಹಾನಿ ವೀಕ್ಷಣೆ ನಡೆಸಿದ ಅವರು, ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು. ಯಲ್ಲಾಪುರದ ಕಳೆ ಗ್ರಾಮಕ್ಕೆ ಮುಖ್ಯಮಂತ್ರಿಗಳು ಭೇಟಿ ನೀಡಿದಾಗ ಸಿಎಂ ಎದುರು ವಿದ್ಯಾರ್ಥಿಗಳು ಕಣ್ಣೀರು ಹಾಕಿದ ಘಟನೆ ನಡೆಯತು. ಮಳೆಯಿಂದ ಶಾಲೆಗೆ ಹೋಗಲು ಆಗುತ್ತಿಲ್ಲ. ವಿದ್ಯುತ್ ಸಂಪರ್ಕವಿಲ್ಲ. ಆನ್ಲೈನ್ ಕ್ಲಾಸ್ಗೆ ತೊಂದರೆಯಾಗಿದೆ ಎಂದು ಅಳಲು ತೋಡಿಕೊಂಡರು.
ಜಿಲ್ಲೆಯಲ್ಲಿ ನೆರೆ ವೀಕ್ಷಣೆ ಮಾಡಿದ ಬಳಿಕ ಅಧಿಕಾರಿಗಳೊಂದಿಗೆ ಕೈಗೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು 200 ಕೋಟಿ ಪರಿಹಾರದ ಭರವಸೆ ನೀಡಿದರು. ಪಿಡಬ್ಲುಡಿ ಇಲಾಖೆಯಿಂದ 100 ಕೋಟಿ, ಆರ್ಡಿಪಿಆರ್ ವತಿಯಿಂದ 100 ಕೋಟಿ ಹಣ ತುರ್ತು ಬಿಡುಗಡೆಗೊಳಿಸುವ ಭರವಸೆ ನೀಡಿದರು. ಮನೆ ಕಳೆದುಕೊಂಡ ಅತಿಕ್ರಮಣದಾರರೂ ಸೇರಿ ಮನೆ ಹಾನಿಗೆ ಕಳೆದ ಬಾರಿಯಂತೆ 10 ಸಾವಿರ ನೀಡಲು ಸೂಚನೆ ನೀಡಲಾಗಿದೆ. ನೆರೆಹಾನಿಗೊಳಗಾದ ಮನೆಗಳಿಗೆ ಮನೆಬಳಕೆ ವಸ್ತುಗಳ ಖರೀದಿಗೆ ತುರ್ತು ಬಿಡುಗಡೆಗೆ ಸೂಚಿಸಿದರು.
ನೆರೆಯಿಂದ ತೀವ್ರ ಹಾನಿಗೊಳಗಾಗಿರುವ ಕಳಚೆ ಗ್ರಾಮ ಪೂರ್ಣ ಸ್ಥಳಾಂತರ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ತಿಳಿಸಿದರು. ತೀವ್ರ ಭೂಕುಸಿತವಾಗಿರುವ ಗ್ರಾಮ ವೀಕ್ಷಿಸಿದ ಅವರು, ಭೂಕುಸಿತದಿಂದ ಮನೆ ನಿರ್ಮಾಣ ಸಾಧ್ಯವಿಲ್ಲದ ಹಿನ್ನಲೆ ಸ್ಥಳಾಂತರ ಮಾಡಿ, ಗ್ರಾಮಕ್ಕೆ ಅಗತ್ಯವಿರುವ ಸುಮಾರು 15 ಎಕರೆ ಪ್ರದೇಶವನ್ನ ಗುರುತಿಸಲು ಹೇಳಿದರು. ಇದೇ ವೇಳೆ ಹತ್ತಾರು ಕಡೆ ಭೂಕುಸಿತವಾಗಿರುವ ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಘಟ್ಟಕ್ಕೆ 10 ಕೋಟಿ ಬಿಡುಗಡೆಯ ಭರವಸೆ ನೀಡಿದರು.
ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡುವ ಮುನ್ನ ಅವರು, ರಾಯಾಪೂರದಲ್ಲಿರುವ ತಂದೆ ಎಸ್. ಆರ್. ಬೊಮ್ಮಾಯಿ ಹಾಗೂ ತಾಯಿ ಗಂಗಮ್ಮ ಅವರ ಸಮಾಧಿ ಸ್ಥಳಕ್ಕೆ ಆಗಮಿಸಿ ತಂದೆ ತಾಯಿ ಆಶೀರ್ವಾದ ಪಡೆದುಕೊಂಡರು.
ಇದನ್ನು ಓದಿ: ಹುಲಿ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿದೆ ಹಳೇ ಮೈಸೂರು ಪ್ರಾಂತ್ಯ
ತಾಲೂಕಿನನ ಬಾರೇಕಳಚೆ - ಕೈಗಾ ರಸ್ತೆ, ಕುಸಿದ ಸೇತುವೆ ಮೊದಲಾದ ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಪ್ರದೇಶಗಳನ್ನು ವೀಕ್ಷಿಸಿ, ಅತಿವೃಷ್ಟಿಯಿಂದ ಬಾಧಿತರಿಗಾಗಿ ಇರುವ ಶಿರೂರು ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಪ್ರವಾಹ ಸಂತ್ರಸ್ತರ ಜೊತೆ ಮಾತನಾಡಿದರು. ಅತಿವೃಷ್ಟಿಯಿಂದ ಬಾಧಿತಗೊಳಗಾದ ಯಲ್ಲಾಪುರ ತಾಲೂಕಿನ ವಿವಿಧ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ಹಾಗೂ ಯಲ್ಲಾಪುರ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ಆಸ್ಪತ್ರೆಯ ವಿವಿಧ ವಿಭಾಗಗಳ ಜೊತೆಗೆ ಕೋವಿಡ್ -19 ಲಸಿಕೆ ನೀಡುವ ಕೇಂದ್ರನ್ನೂ ಪರಿಶೀಲನೆ ಮಾಡಲಾಯಿತು.
ನೆರೆಯಿಂದ ಗ್ರಾಮ, ಸೇತುವೆ ಸಂಪರ್ಕ ಕಡಿತಗೊಂಡಿವೆ. ನೆರೆಯಿಂದ ಸಾವನ್ನಪ್ಪಿದವರ ಮೃತರ ಕುಟುಂಬಕ್ಕೆ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದ ಅವರು, ಕಾರವಾರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸಂತ್ರಸ್ಥರಿಗೆ ಸಾಂತ್ವನ ಹೇಳಿದರು.
ಸಿಎಂ ಎದರು ಕಣ್ಣೀರು ಹಾಕಿದ ವಿದ್ಯಾರ್ಥಿನಿಯರು :
ಭಾರೀ ಮಳೆಯಿಂದಾಗಿ ಗುಡ್ಡ ಕುಸಿತ ದಿಂದ ವಿದ್ಯುತ್ ಸಂಪರ್ಕವಿಲ್ಲ. ಆನ್ಲೈನ್ ಕ್ಲಾಸ್ ಇಲ್ಲದೇ ಕಲಿಕೆ ಸಾಕಷ್ಟು ಅಡ್ಡಿಯಾಗಿದೆ. ಈ ಹಿನ್ನಲೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ವಿದ್ಯಾರ್ಥಿನಿಯರು ಮನವಿ ಮಾಡಿದರು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ