ಹುಬ್ಬಳ್ಳಿ: ಹುಬ್ಬಳ್ಳಿಯ ಭೈರಿದೇವರಕೊಪ್ಪ ದರ್ಗಾ (Byridevarakoppa Dargah) ತೆರವು ಕಾರ್ಯಾಚರಣೆ ನಂತರ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ದಿಢೀರ್ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ. ಹಜರತ್ ಸೈಯದ್ ಮೆಹಮೂದ್ ಷಾ ಖಾದ್ರಿ ದರ್ಗಾಕ್ಕೆ (Hazrath Sayed Mahmood Shah Quadri Dargah) ಸಿಎಂ ಭೇಟಿ ನೀಡಿದರು. ಅಧಿವೇಶನ ಮುಗಿಸಿಕೊಂಡು ಬೆಳಗಾವಿಯಿಂದ ಹುಬ್ಬಳ್ಳಿಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಭೇಟಿ ನೀಡಿದರು. ಪೂರ್ವ ಮಾಹಿತಿ ನೀಡದೇ ದಿಢೀರಾಗಿ ಭೇಟಿ ನೀಡಿದ ಬಸವರಾಜ್ ಬೊಮ್ಮಾಯಿ ಅಚ್ಚರಿ ಮೂಡಿಸಿದ್ದಾರೆ. ಘೋರಿ ತೆರವು ಮತ್ತು ಮಸೀದಿ ತೆರವುಗೊಳಿಸಿದ ಸ್ಥಳ ಪರಿಶೀಲನೆ ಮಾಡಿದರು. ಘೋರಿ ಸ್ಥಳಾಂತರ ಮಾಡಿದ ಸ್ಥಳದ ಪರಿಶೀಲನೆ ಮಾಡಿ, ಅಂಜುಮನ್ ಸಂಸ್ಥೆ, ಸ್ಥಳೀಯ ಮುಸ್ಲಿಂ ಮುಖಂಡರ ಜೊತೆ ಸಿಎಂ ಬೊಮ್ಮಾಯಿ ಚರ್ಚೆ ಮಾಡಿದರು.
ಘೋರಿ ಮತ್ತು ಮಸೀದಿ ತೆರವು ಸ್ಥಳ ಪರಿಶೀಲನೆ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬಸವರಾಜ್ ಬೊಮ್ಮಾಯಿ, ಹುಬ್ಬಳ್ಳಿ - ಧಾರವಾಡ ನಡುವಿನ ಬಿಆರ್ಟಿಎಸ್ ಕಾರಿಡಾರ್ನಲ್ಲಿ 13 ವಿವಿಧ ಧಾರ್ಮಿಕ ಕೇಂದ್ರಗಳನ್ನ ತೆರವು ಮಾಡಲಾಗಿದೆ. ಇದೀಗ ದರ್ಗಾ ತೆರವು ಮಾಡಲಾಗಿದೆ. ಕೆಲವೊಮ್ಮೆ ಇಂತಹ ತೆರವು ಕಾರ್ಯಾಚರಣೆ ಅನಿವಾರ್ಯವಾಗುತ್ತದೆ ಎಂದರು.
ವೈಯಕ್ತಿಕವಾಗಿ ಬೇಸರವಿದೆ
ದರ್ಗಾ ತೆರವು ಮಾಡೋದಕ್ಕೆ ನನಗೂ ವೈಯಕ್ತಿಕವಾಗಿ ಬೇಸರವಿದೆ. ಆದರೆ ಇದು ಅನಿವಾರ್ಯವಾಗಿವಾಗಿತ್ತು. ಸದ್ಯ ದರ್ಗಾ ಮತ್ತು ಘೋರಿ ತೇರು ಮಾಡಲಾಗಿದೆ. ನಗರ ಪ್ರದೇಶ ಬೆಳೆದಂತೆಲ್ಲ ಅಭಿವೃದ್ಧಿ ಕಾರ್ಯ ಅನಿವಾರ್ಯ. ದರ್ಗಾ ತೆರವಿನ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಸಹಕಾರ ನೀಡಿದ್ದಾರೆ. ಅವರೆಲ್ಲರಿಗೂ ನಾನು ಧನ್ಯವಾದ ತಿಳಿಸುತ್ತೇನೆ. ಮಸೀದಿ ಮರು ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡ್ತೇನೆ ಎಂದು ಭರವಸೆ ನೀಡಿದರು.
ರಾಜಕೀಯ ಪಿತೂರಿ ಆರೋಪಕ್ಕೆ ಪ್ರತಿಕ್ರಿಯಿಸದ ಸಿಎಂ
ಬಿಆರ್ಟಿಎಸ್ ಕಾರಿಡಾರ್ನಲ್ಲಿಯೇ ಮತ್ತಷ್ಟು ಧಾರ್ಮಿಕ ಕೇಂದ್ರ ತೆರವು ಮಾಡಬೇಕಿದೆ. ಅದನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು. ದರ್ಗಾ ತೆರವಿನ ಹಿಂದೆ ರಾಜಕೀಯ ಪಿತೂರಿ ಇದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸದೇ ಹಾಗೆಯೇ ಸಿಎಂ ಬೊಮ್ಮಾಯಿ ಹೊರಟು ಹೋದರು.
ಬಿಆರ್ಟಿಎಸ್ ಯೋಜನೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಜರತ್ ಸೈಯದ್ ಮೆಹಮೂದ್ ಷಾ ಖಾದ್ರಿ ದರ್ಗಾ ತೆರವುಗೊಳಿಸಿತ್ತು. ಮೂರು ದಿನಗಳಿಂದ ದರ್ಗಾ ತೆರವು ಕಾರ್ಯಾಚರಣೆ ನಡೆದಿತ್ತು. ದರ್ಗಾದ ಬಳಿ ಪೊಲೀಸ್ ಸರ್ಪಗಾವಲು ಮುಂದುವರಿಸಲಾಗಿದೆ. ಸದ್ಯ ಹುಬ್ಬಳ್ಳಿ - ಧಾರವಡ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಉತ್ತರ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹ
ರಾಜ್ಯ ಸರ್ಕಾರದಿಂದ ಉತ್ತರ ಕರ್ನಾಟಕದ ಅಭಿವೃದ್ಧಿ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂಬ ಆರೋಪ ಮತ್ತೊಮ್ಮೆ ಕೇಳಿಬಂದಿದ್ದು, ಪ್ರತ್ಯೇಕ ಉತ್ತರ ಕಲ್ಯಾಣ ಕರ್ನಾಟಕ ರಾಜ್ಯಕ್ಕೆ ಆಗ್ರಹಿಸಲಾಗಿದೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಉತ್ತರ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಮುಖಂಡರು, ಬೆಳಗಾವಿಯಲ್ಲಿ ಅಧಿವೇಶನ ನಡೆದರೂ ಉತ್ತರ ಕರ್ನಾಟಕದ ಸಮಸ್ಯೆ ಚರ್ಚೆಯಾಗ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಇದನ್ನೂ ಓದಿ: Demolition of Hubballi Dargah: ಕಲಾಪದಲ್ಲಿ ‘ದರ್ಗಾ’ ಗುದ್ದಾಟ; ನನ್ನ ಭೂಮಿ ಕೂಡ ಸ್ವಾಧೀನಪಡಿಸಿಕೊಂಡಿದ್ದಾರೆ ಎಂದ್ರು ಸಿಎಂ
ಸರ್ಕಾರಕ್ಕೆ ಹೋರಾಟದ ಎಚ್ಚರಿಕೆ
ಈ ಭಾಗದ ಅಭಿವೃದ್ಧಿಯ ಸಂಪೂರ್ಣ ಕಡೆಗಣನೆ ಮಾಡಲಾಗಿದೆ. ಕೃಷ್ಣಾ, ಮಹಾದಾಯಿ ಮತ್ತಿತರ ನೀರಾವರಿ ಯೋಜನೆ ಪೂರ್ಣಗೊಳಿಸಲು ನಿರಾಸಕ್ತಿ ತೋರಲಾಗ್ತಿದೆ. ಕೈಗಾರಿಕೆ ಸ್ಥಾಪನೆಯಲ್ಲಿಯೂ ತಾರತಮ್ಯ ಎಸಗಲಾಗುತ್ತಿದೆ. ಐಟಿ-ಬಿಟಿ ಕಂಪನಿಗಳು ಬೆಂಗಳೂರು ಕೇಂದ್ರಿತ ಎಂದು ಮುಖಂಡರು ಕಿಡಿಕಾರಿದರು.
ಪ್ರಾದೇಶಿಕ ಅಸಮಾನತೆ ಹೊಡೆದೋಡಿಸಲು ಯಾವುದೇ ಕ್ರಮವಿಲ್ಲ. ಹೀಗಾಗಿ ಈ ಭಾಗದ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯ ಅಸ್ತಿತ್ವ ಅನಿವಾರ್ಯ. ಪ್ರತ್ಯೇಕ ರಾಜ್ಯಕ್ಕಾಗಿ ಹಂತ ಹಂತವಾಗಿ ಹೋರಾಟ ಮಾಡುವುದಾಗಿ ಹೋರಾಟ ಸಮಿತಿ ಮುಖಂಡ ಸಿದ್ಧು ತೇಜಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ