ಬೆಂಗಳೂರು(ಆ.24): ಖಾತೆ ವಿಚಾರಕ್ಕೆ ಮುನಿಸಿಕೊಂಡಿದ್ದ ಸಚಿವ ಆನಂದ್ ಸಿಂಗ್ ರಾಜೀನಾಮೆ ನೀಡುತ್ತಾರೆ ಎಂಬ ಮಾತುಗಳು ರಾಜ್ಯ ರಾಜಕಾರಣದಲ್ಲಿ ಕೇಳಿ ಬರುತ್ತಿದ್ದವು. ಆದರೆ ಈ ಮುನಿಸು ಸದ್ಯಕ್ಕೆ ಶಮನವಾಗಿದೆ ಎನ್ನಲಾಗಿದ್ದು, ಆನಂದ್ ಸಿಂಗ್ ಇಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಹೌದು, ಇಂದು ಸಚಿವ ಆನಂದ್ ಸಿಂಗ್ ಅವರು ತಮ್ಮ ರಾಜೀನಾಮೆ ನಿರ್ಧಾರ ತಿಳಿಸಲು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲು ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ್ದರು. ಸಿಂಗ್ ಜೊತೆಗೆ ರಾಜೂಗೌಡ ಕೂಡ ಬಂದಿದ್ದರು. ಸಿಎಂ ಬೊಮ್ಮಾಯಿ ಆನಂದ್ ಸಿಂಗ್ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ದುಡುಕಿನ ನಿರ್ಧಾರ ಕೈಗೊಳ್ಳಬೇಡಿ, ಇರುವ ಖಾತೆಯಲ್ಲೇ ಮುಂದುವರೆಯಿರಿ. ನಾಳೆ ನಾನು ದೆಹಲಿಗೆ ಹೋಗುತ್ತಿದ್ದೇನೆ. ನಿಮ್ಮ ಖಾತೆ ಬದಲಾವಣೆ ಸಂಬಂಧ ವರಿಷ್ಠರ ಜೊತೆ ಚರ್ಚೆ ಮಾಡುತ್ತೇನೆ. ಅಲ್ಲಿ ತನಕ ಸ್ವಲ್ಪ ತಾಳ್ಮೆಯಿಂದ ಇರಿ ಎಂದು ಬೊಮ್ಮಾಯಿ ಸಿಂಗ್ಗೆ ಹೇಳಿದ್ದಾರೆ. ಇದಕ್ಕೆ ಒಪ್ಪಿದ ಆನಂದ್ ಸಿಂಗ್ ಸದ್ಯ ಇರುವ ಖಾತೆಯಲ್ಲೇ ಮುಂದುವರೆಯಲು ಇಚ್ಛಿಸಿ, ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಇದನ್ನೂ ಓದಿ:ಸೆ.15ರವರೆಗೆ ಸರ್ಕಾರಕ್ಕೆ ಗಡುವು ಕೊಟ್ಟ ಖಾಸಗಿ ಶಾಲಾ ಒಕ್ಕೂಟ; ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ
ಸಿಎಂ ಭೇಟಿ ಬಳಿಕ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಆನಂದ್ ಸಿಂಗ್ ವಿಕಾಸಸೌಧಕ್ಕೆ ತೆರಳಿದರು. ಬಳಿಕ ಮಾತನಾಡಿದ ಅವರು, ಈ ಮೊದಲು ಮಾತನಾಡಿದ ವಿಚಾರವನ್ನೇ ಸಿಎಂ ಬಳಿ ಪ್ರಸ್ತಾಪಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಸಿಎಂ ಅವರನ್ನು ಭೇಟಿಯಾಗಿದ್ದೆ. ಇಬ್ಬರೂ ಸಹ ಮೊದಲು ಅಧಿಕಾರ ಸ್ವೀಕಾರ ಮಾಡು ಅಂತ ಹೇಳಿದ್ದರು. ಹೀಗಾಗಿ ಅಧಿಕಾರ ಸ್ವೀಕರಿಸುತ್ತಿದ್ದೇನೆ. ಸಿಎಂ ಅವರು ನನ್ನ ಭಾವನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆ ಎಂದರು. ಬ್ಲಾಕ್ಮೇಲ್ ತಂತ್ರನಾ? ಎಂಬ ಮಾಧ್ಯಮಗಳ ಪ್ರಶ್ನೆಗೆ ಸಿಂಗ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ
ಬಳಿಕ ಆನಂದ್ ಸಿಂಗ್ ಅಧಿಕಾರ ಸ್ವೀಕಾರ ಮಾಡಿದರು. ಪೊಲೀಸ್ ಬಂದೋಬಸ್ತ್ನಲ್ಲಿ ಕಚೇರಿ ಪೂಜೆ ನಡೆಯಿತು. ಕಚೇರಿ ಮುಂಭಾಗ ಬ್ಯಾರಿಕೇಡ್ ಹಾಕಲಾಗಿತ್ತು. ಆನಂದ್ ಸಿಂಗ್ಗೆ ಸದ್ಯ ಕೊಟ್ಟಿರುವ ಖಾತೆ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆ.
ಇದೇ ವೇಳೆ ಮಾತನಾಡಿದ ಸಚಿವ ಆರ್.ಅಶೋಕ್, ಆನಂದ್ ಸಿಂಗ್ ಅವರಿಗೆ ಯಾವುದೇ ಅಸಮಾಧಾನ ಇಲ್ಲ. ಈಗ ಎಲ್ಲವೂ ಬಗೆಹರಿದಿದೆ. ನಾನು, ಸಿಎಂ ಹಾಗೂ ರಾಜೂಗೌಡ ಕುಳಿತು ಚರ್ಚಿಸಿದ್ದೇವೆ. ಆನಂದ್ ಸಿಂಗ್ ಇದಕ್ಕೆ ಒಪ್ಪಿಗೆ ನೀಡಿದ್ದಾರೆ. ಈಗ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅಧಿಕಾರಿಗಳ ಜೊತೆ ಸಭೆಯನ್ನೂ ನಡೆಸಲಿದ್ದಾರೆ ಎಂದರು.
ಇದನ್ನೂ ಓದಿ:B S Yediyurappa: ರಾಜ್ಯ ಪ್ರವಾಸಕ್ಕೆ ಹೊಸ ಕಾರು ಖರೀದಿಸಿದ ಮಾಜಿ ಸಿಎಂ ಯಡಿಯೂರಪ್ಪ
ಮುಂದುವರೆದ ಅವರು, ಆನಂದ್ ಸಿಂಗ್ಗೆ ಯಾವುದೇ ಷರತ್ತು ಹಾಕಿಲ್ಲ. ನಾಳೆ ಸಿಎಂ ದೆಹಲಿಗೆ ತೆರಳುತ್ತಿದ್ದಾರೆ. ಅಲ್ಲಿ ಆನಂದ್ ಸಿಂಗ್ ಖಾತೆ ಬಗ್ಗೆ ಚರ್ಚಿಸಲಿದ್ದಾರೆ ಎಂದು ಹೇಳಿದರು.
ರಾಜೂಗೌಡ ಮಾತನಾಡಿ, ಆನಂದ್ ಸಿಂಗ್ಗೆ ಬ್ಲಾಕ್ಮೇಲ್ ಮಾಡಿಲ್ಲ. ಯಾವುದೇ ಖಾತೆ ದೊಡ್ಡದು, ಸಣ್ಣದು ಅಲ್ಲ. 6 ಕೋಟಿ ಜನರಲ್ಲಿ 30 ಜನರಿಗೆ ಮಾತ್ರ ಸಚಿವರಾಗುವ ಅವಕಾಶ ಸಿಕ್ಕಿದೆ ಎಂದರು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ