ಬೆಂಗಳೂರು(ಸೆ.12): ಬೆಂಗಳೂರಿನಲ್ಲಿ ಆರೋಗ್ಯ ವ್ಯವಸ್ಥೆ ಸರಿಯಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಎದುರಲ್ಲೇ ಹೇಳಿರುವ ಘಟನೆ ಇಂದು ಗೋವಿಂದರಾಜನಗರದಲ್ಲಿ ನಡೆದಿದೆ. ಇದರಿಂದ ಆರೋಗ್ಯ ಸಚಿವ ಸುಧಾಕರ್ ತೀವ್ರ ಮುಜುಗರಕ್ಕೀಡಾಗಿದ್ದಾರೆ.
ಬೆಂಗಳೂರಿನಲ್ಲಿ ಆರೋಗ್ಯ ವ್ಯವಸ್ಥೆ ಸರಿ ಇಲ್ಲ. ಬೆಂಗಳೂರಿಗೆ ತನ್ನದೇ ಆದ ಸ್ವತಂತ್ರ ಆರೋಗ್ಯ ವ್ಯವಸ್ಥೆ ಮಾಡಬೇಕು. ಇದಕ್ಕೆ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ತಿದ್ದೇವೆ. ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ನಡುವೆ ಸಮನ್ವಯತೆ ಇಲ್ಲ. ಅದನ್ನು ಸರಿದೂಗಿಸುವ ಕೆಲಸ ಖಂಡಿತಾ ಮಾಡ್ತೇನೆ. ಒಂದೇ ವ್ಯವಸ್ಥೆಯಲ್ಲಿ ಆರೋಗ್ಯ ವ್ಯವಸ್ಥೆ ತರುವ ಕೆಲಸ ಮಾಡ್ತೇನೆ. ಬೃಹತ್ ಬೆಂಗಳೂರನ್ನು ಅಂತರಾಷ್ಟ್ರೀಯ ಬೆಂಗಳೂರು ಮಾಡ್ತೇವೆ ಎಂದು ಹೇಳಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸದ್ಯದ ಆರೋಗ್ಯ ವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದರು. ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಿಎಂ ಚಾಲನೆ ನೀಡಿದರು. ಸಚಿವರಾದ ವಿ ಸೋಮಣ್ಣ, ಅಶೋಕ್, ಕೆ ಸುಧಾಕರ್, ಮುನಿರತ್ನ, ಭೈರತಿ ಬಸವರಾಜ್, ಗೋಪಾಲಯ್ಯ, ಸಂಸದ ತೇಜಸ್ವಿ ಸೂರ್ಯ, ಶಾಸಕ ಎಸ್ ಆರ್ ವಿಶ್ವನಾಥ್, ಕಾಗಿನೆಲೆಯ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹಾಗೂ ಈಶ್ವಾರನಂದಪುರಿ ಸ್ವಾಮೀಜಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ:Garlic Bread: ಗಾರ್ಲಿಕ್ ಬ್ರೆಡ್ನಲ್ಲಿ ನಿಜವಾಗಿಯೂ ಬೆಳ್ಳುಳ್ಳಿ ಇದೆಯೇ..? ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ
ಸೋಮಣ್ಣ ಅಂದ್ರೆ ವಿಕ್ಟರಿ ಸೋಮಣ್ಣ
ಇದೇ ವೇಳೆ, ಸಿಎಂ ಬೊಮ್ಮಾಯಿ ಸಚಿವ ಸೋಮಣ್ಣನವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಸೋಮಣ್ಣ ಅಂದ್ರೆ ಸೋಮಣ್ಣ ಅಲ್ಲ ವಿ ಸೋಮಣ್ಣ. ಅಂದ್ರೆ ಸೋಮಣ್ಣ, ವಿಕ್ಟರಿ ಸೋಮಣ್ಣ, ವೆರಿಗುಡ್ ಸೋಮಣ್ಣ. ಕಾರ್ಪೊರೇಟರ್ ಆಗಿ, ಶಾಸಕರಾಗಿ ಸಚಿವರಾಗಿದ್ದಾರೆ. ನಲವತ್ತು ವರ್ಷಗಳ ಸಾರ್ವಜನಿಕ ಜೀವನ ಅವರದು. ಎಪ್ಪತ್ತು ವರ್ಷ ಆದ್ರೂ ಇಪ್ಪತ್ತು ವರ್ಷದ ವಯಸ್ಸಿನ ಹಾಗೆ ಕೆಲಸ ಮಾಡಿದ್ದಾರೆ. ನನಗೆ ಭಯ ಪ್ರಾರಂಭವಾಗಿದೆ. ನಾಳೆ ಸೋಮಣ್ಣ ಯಾವ ಕೆಲಸಕ್ಕೆ ಅರ್ಜಿ ತರ್ತಾರೆ ಅಂತ, ಸೋಮಣ್ಣ ಕೆಲಸ ಮಾಡಿಸುವ ಶೈಲಿ ವಿಭಿನ್ನವಾಗಿದೆ. ಪಾದರಸ ತರಹ ಕೆಲಸ ಮಾಡಿಸಿಕೊಂಡು ಹೋಗುತ್ತಾರೆ. ನೋಡಿದ್ರೆ ಇನ್ನೂರು, ಮೂನ್ನೂರು ಕೋಟಿ ಅನುದಾನ ಬಳಕೆ ಮಾಡಿರ್ತಾರೆ. ಜೊತೆಗೆ ಇಲ್ಲಿ ಇರೋರೆಲ್ಲ ಹಾಗೆ ಕೆಲಸ ಮಾಡ್ತಾರೆ ಎಂದು ಸಚಿವ ವಿ.ಸೋಮಣ್ಣಗೆ ಶಹಾಬ್ಬಾಸ್ಗಿರಿ ಕೊಟ್ಟರು.
ನಗೆ ಚಟಾಕಿ ಹಾರಿಸಿದ ಸಿಎಂ
ಈ ಮಧ್ಯೆ ಸಿಎಂ ಬಸವರಾಜ್ ಬೊಮ್ಮಾಯಿ ಬೆಂಗಳೂರು ಸಚಿವರ ಬಗ್ಗೆ ನಗೆ ಚಟಾಕಿಯನ್ನು ಹಾರಿಸಿದರು. ಎಲ್ಲರನ್ನೂ ಆಹ್ವಾನ ಮಾಡುವಾಗ ಮುನಿರತ್ನ ಇದೀಯೇನಪ್ಪಾ ಅಂತಾ ಹುಡುಕಾಡಿದರು. ಈ ಸಂದರ್ಭದಲ್ಲಿ ಮುನಿರತ್ನ ಯಾವುದೋ ಆಲೋಚನೆಯಲ್ಲಿ ಕುಳಿತಿದ್ದರು. ಆಗ ಪಕ್ಕದಲ್ಲೇ ಇದ್ದ ಸಂಸದ ತೇಜಸ್ವಿ ಸೂರ್ಯ ಮುನಿರತ್ನರನ್ನು ಎಚ್ಚರಿಸಿದರು. ಗಲಿಬಿಲಿಗೊಂಡ ಮುನಿರತ್ನ ಏನು ಎಂದು ಸಿಎಂ ಕಡೆ ತಿರುಗಿದರು. ಮುನಿರತ್ನ, ಏನಪ್ಪ ಇಲ್ಲೇ ಇದ್ದೀಯಾ ಎಂದು ಭಾಷಣ ಮುಂದುವರಿಸಿ, ಈ ಬೆಂಗಳೂರಿಗರು ಯಾವಾಗ ಕಾರ್ಯಕ್ರಮಕ್ಕೆ ಸೇರಿಕೊಳ್ತಾರೋ ಯಾವಾಗಾ ಕಾರ್ಯಕ್ರಮದಿಂದ ಬಿಟ್ಟು ಹೋಗ್ತಾರೋ ಗೊತ್ತಾಗಲ್ಲ ಎಂದು ನಕ್ಕರು. ಈ ವೇಳೆ ಸಭಿಕರು ನಗೆಗಡಲಿನಲ್ಲಿ ತೇಲಿದರು.
ಬೆಂಗಳೂರು ಸಚಿವರ ಕಾರ್ಯಕ್ಕೆ ಸಿಎಂ ಮೆಚ್ಚುಗೆ
ಕೋವಿಡ್ ಸಂದರ್ಭದಲ್ಲಿ ಬೆಂಗಳೂರು ಸಚಿವರ ಕಾರ್ಯಕ್ಕೆ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು. ನಮ್ಮ ಬೆಂಗಳೂರಿನ ಸಚಿವರು ಶಕ್ತಿ ಮೀರಿ ಕೋವಿಡ್ ವೇಳೆ ಕೆಲಸ ಮಾಡಿದ್ದಾರೆ. ಪೈಪೋಟಿಯಿಂದ ಒಳ್ಳೊಳ್ಳೆ ಕೆಲಸ ಮಾಡಿದ್ದಾರೆ. ನಮ್ಮ ಈ ಸಚಿವರ ಕಾರ್ಯದಿಂದ ಬೆಂಗಳೂರು ಅಂತರಾಷ್ಟ್ರೀಯವಾಗಿ ಮನ್ನಣೆ ಗಳಿಸ್ತಿದೆ. ಬೆಂಗಳೂರು ಯೋಜನಾ ಬದ್ಧವಾಗಿ ಬೆಳೆಯುತ್ತಿಲ್ಲ. ಮುಂದಿನ ಐವತ್ತು ವರ್ಷಗಳ ಯೋಜನೆಯನ್ನು ಬೆಂಗಳೂರಿಗೆ ರೂಪಿಸಬೇಕಿದೆ ಎಂದರು.
ಇದನ್ನೂ ಓದಿ:Happy Birthday, Amala: ಗಂಡ ಅಕ್ಕಿನೇನಿ ನಾಗಾರ್ಜುನ್ ಜೊತೆ ಜಾಲಿ ಮೂಡ್ನಲ್ಲಿ ಬರ್ತ್ಡೇ ಕ್ವೀನ್ ಅಮಲಾ
ನಾಗರಿಕ ಸೇವೆಗಳ ಅಪ್ಗ್ರೇಡ್
ಬೆಂಗಳೂರಲ್ಲಿ ಯಾರಿಗೆ ಮನೆ ಇದೆ, ಅವರಿಗೆ ದಾಖಲೆ ಇಲ್ಲ. ಅವ್ರ ಸಮಸ್ಯೆ ಬಗೆಹರಿಸ್ತೀವಿ. ಬೆಂಗಳೂರಿನ ಎಲ್ಲಾ ಆಸ್ಪತ್ರೆಗಳಲ್ಲಿ ಸ್ವತಂತ್ರ ವ್ಯವಸ್ಥೆ ಮಾಡಬೇಕಿದೆ. ಅದನ್ನ ನಾನು ಮಾಡುತ್ತೇನೆ. ಪ್ರತೀ ವಾರ್ಡ್ ಗೆ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಸಲುವಾಗಿ ಆಸ್ಪತ್ರೆ ತೆರೆಯಬೇಕಿದೆ. ಬೆಂಗಳೂರಿನಲ್ಲಿ ನಾಗರೀಕರ ಸೇವೆಗಳನ್ನು ಅವರ ಮನೆ ಬಾಗಿಲಿಗೆ, ಮೊಬೈಲಿಗೆ ಕೊಂಡೊಯ್ಯಬೇಕು. ಇದಕ್ಕೆ ಈಗಿರುವ ನಾಗರೀಕ ಸೇವೆಗಳನ್ನು ಅಪ್ಗ್ರೇಡ್ ಮಾಡಬೇಕಿದೆ
ಸೋಮಣ್ಣನ ಕಂಡ್ರೆ ನನಗೆ ಹೊಟ್ಟೆಕಿಚ್ಚು
ವಿ ಸೋಮಣ್ಣ ಅಂದ್ರೆ ವಿಕ್ಟರಿ ಸೋಮಣ್ಣ. ಅವ್ರನ್ನ ಕೇಳಿದೆ ವಯಸ್ಸು ಎಷ್ಟು ಅಂತ. ಅವ್ರು 70 ಪ್ಲಸ್ ಅಂದ್ರು, ಅವ್ರ ವಯಸ್ಸು 70 ಪ್ಲಸ್, ಆದ್ರೆ ಕೆಲಸ 20 ಪ್ಲಸ್. ನನಗೆ ಸೋಮಣ್ಣನ ನೋಡಿದ್ರೆ ಖುಷಿಯೂ ಇದೆ, ಹೊಟ್ಟೆಕಿಚ್ಚೂ ಇದೆ. ಸೋಮಣ್ಣ ಪಾದರಸದ ಹಾಗೆ. ನಾವು ಬ್ಯುಸಿಯಲ್ಲಿರುವಾಗ್ಲೇ ಬಂದು ನೂರಿನ್ನೂರು ಕೋಟಿ ರೂಗೆ ಮಂಜೂರು ತಗೊಂಡು ಹೋಗಿರ್ತಾರೆ. ಈ ಬೆಂಗಳೂರು ಸಚಿವರು ಈಗ ಇದೇ ಥರ ಕಲಿತುಕೊಂಡಿದ್ದಾರೆ. ಇವ್ರೆಲ್ಲಾ ಕೆಲಸ ಮಾಡೋದ್ರಿಂದ ಬೆಂಗಳೂರು ಸಚಿವನಾಗಿ ನನ್ನ ಕೆಲಸ ಕಡಿಮೆ ಆಗಿದೆ ಎಂದು ಶ್ಲಾಘಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ