ವಿಜಯಪುರ: ಪತ್ರಕರ್ತರು ಮತ್ತು ರಾಜಕಾರಣಿಗಳ (Journalists and Politicians) ಮಧ್ಯೆ ಅವಿನಾಭಾವ ಸಂಬಂಧ ಇದೆ. ಬೆಳಗ್ಗೆದ್ದು ಮಾಧ್ಯಮ (Media) ನೋಡದಿದ್ದರೆ ಏನೋ ಕಳೆದುಕೊಂಡಂತೆ ಅನುಭವ ಆಗುತ್ತೆ. ಹಾಗಾಗಿ ನಮ್ಮದು ಮತ್ತು ನಿಮ್ಮದು ಗಂಡ ಹೆಂಡತಿಯ ಸಂಬಂಧ ಇದ್ದ ಹಾಗೆ. (Husband and Wife Relationship) ಮಾಧ್ಯಮ ಇಲ್ಲದಿದ್ರೆ ನಮ್ಮನ್ನು ಯಾರು ನೋಡುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು.
ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆಯುತ್ತಿರುವ ಪತ್ರಕರ್ತರ ಸಮ್ಮೇಳನವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ಸಿಎಂ ಬೊಮ್ಮಾಯಿ, ನಮ್ಮದು ಮತ್ತು ನಿಮ್ಮದು ಗಂಡ ಹೆಂಡತಿಯ ಸಂಬಂಧ ಇದ್ದ ಹಾಗೆ. ನಮ್ಮನ್ನ ಬಿಟ್ಟು ನೀವು, ನಿಮ್ಮನ್ನ ಬಿಟ್ಟು ನಾವು ಇರೋಕಾಗಲ್ಲ. ಪತ್ರಿಕೆ ಇರದಿದ್ರೆ ನಮ್ಮನ್ನ ಯಾರೂ ಕೇಳ್ತಿರಲಿಲ್ಲ. ನಮ್ಮ ವ್ಯಕ್ತಿತ್ವವನ್ನು ರೂಪಿಸುವುದು ಮಾಧ್ಯಮಗಳು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ರಿಕೋದ್ಯಮ ಗಟ್ಟಿಗೊಳಿಸುವುದು ಸವಾಲಿನ ಕೆಲಸ
ರಾಜಕಾರಣಿಗಳು ಇರದಿದ್ರೆ ಪತ್ರಿಕೆಯಲ್ಲಿ ಬರೀ ಸ್ಪೋರ್ಟ್ ಸುದ್ದಿ ಬರೆಯಬೇಕಿತ್ತು ಎಂದ ಸಿಎಂ ಬೊಮ್ಮಾಯಿ, ಈಗ ಫ್ರಂಟ್ ಪೇಜ್‌ನಲ್ಲಿ ರಾಜಕಾರಣದ ಸುದ್ದಿ ಇರುತ್ತೆ. ಹಾಗಾಗಿ ರಾಜಕಾರಣ ಮತ್ತು ಪತ್ರಿಕೋದ್ಯಮ ಮಧ್ಯೆ ಆರೋಗ್ಯಕರ ಸಂಬಂಧ ಇರಬೇಕು. ಪ್ರತಿಯೊಬ್ಬ ಓದುಗನೂ ಪತ್ರಕರ್ತನಾಗಿದ್ದಾನೆ. ಇಂತಹ ಸಂದರ್ಭದಲ್ಲಿ ಪತ್ರಿಕೋದ್ಯಮ ಗಟ್ಟಿಗೊಳಿಸುವುದು ಸವಾಲಿನ ಕೆಲಸ. ಕ್ರೆಡಿಬಿಲಿಟಿ, ಎಕ್ಸೆಪ್ಟಿಬಿಲಿಟಿ ಮೂಲಕ ಪತ್ರಿಕೋದ್ಯಮ ಉಳಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಒಂದು ಕೆಲಸ ಬೇಡ ಎಂದರೆ ಹಲವು ಕಾರಣಗಳು ಇರುತ್ತದೆ. ಆದರೆ ಜನರಿಗೆ ಒಳ್ಳೇದಾಗುತ್ತೆ ಎಂದ್ರೆ ಆ ಕೆಲಸ ಮಾಡಬೇಕು ಎಂದ ಅವರು, ಪತ್ರಕರ್ತರು ಪ್ರಾದೇಶಿಕ ಪತ್ರಕರ್ತರು ಆಗಬಾರದು. ಅಖಂಡ ಕರ್ನಾಟಕದ ಪತ್ರಕರ್ತರು ಆಗಬೇಕು. ಎಲ್ಲ ಭಾಗ ಅಭಿವೃದ್ಧಿ ಆಗಬೇಕು ಅಂದ್ರೆ ಎಲ್ಲರೂ ಸಮಗ್ರ ಕರ್ನಾಟಕದ ಬಗ್ಗೆ ಮಾತನಾಡಬೇಕು. ಗ್ರಾಮೀಣ ಪತ್ರಕರ್ತರಿಗೂ ಉಚಿತ ಬಸ್ ಪಾಸ್ ಕೊಡಬೇಕು ಎಂಬುದು ಕೇಳಿದ್ದೀರಿ. ಖಂಡಿತವಾಗಿ ನಾನು ಒಪ್ಪಿಕೊಳ್ಳುತ್ತೇನೆ. ಸಂಘದಿಂದ ಸರ್ಟಿಫೈಡ್ ಮಾಡಿ ಸರಿಯಾದ ರೀತಿಯಲ್ಲಿ ಕೊಟ್ಟರೆ ನಾನು ಬಜೆಟ್‌ನಲ್ಲಿ ಅನುದಾನ ನೀಡಿ ಅನುಕೂಲ ಕಲ್ಪಿಸಲಾಗುವುದು ಎಂದು ಹೇಳಿದರು.
ವಿಜಯಪುರದ ಜನ ಜೋಳದಷ್ಟೆ ಗಟ್ಟಿಯಾಗಿದ್ದಾರೆ
ಇನ್ನು ವಿಜಯಪುರದ ಜನ ಜೋಳದಷ್ಟೆ ಗಟ್ಟಿಯಾಗಿದ್ದಾರೆ ಎಂದ ಸಿಎಂ, ವಿಜಯಪುರ ಅಭಿವೃದ್ಧಿಯತ್ತ ಸಾಗಿದೆ. ಸರ್ವಸ್ವವನ್ನೂ ತ್ಯಾಗ ಮಾಡಿದ ಜನ ಇಲ್ಲಿದ್ದಾರೆ. ಮೂರನೇ ಪೀಳಿಗೆಯ ಕನಸು ನನಸಾಗುವ ದೃಢಸಂಕಲ್ಪದಿಂದ ಕೆಲಸ ಮಾಡಬೇಕಿದೆ. ನಾನು ನೀರಾವರಿ ಸಚಿವನಾಗಿದ್ದಾಗ ಗುತ್ತಿ ಬಸವಣ್ಣ ಯೋಜನೆ ಅಧಿಕಾರಿಗಳು ಯೋಜನೆ ಮಾಡೋದು ಬೇಡ ಎಂದಿದ್ರು. ಸ್ಕೀಂ ಒಂದೇ ಇದೆ, ಎ & ಬಿ ಎಂದು ಸ್ಕೀಂ ಇಲ್ಲ. ನೀರಿನ ವಿಚಾರ ಬಂದಾಗ ಟ್ರಿಬ್ಯೂನಲ್ ಆದೇಶ ಪಾಲನೆ ಮಾಡಬೇಕು. 2009 ಲ್ಲಿ 9ರಲ್ಲಿ 7 ಯೋಜನೆಗಳನ್ನು ನಾನು ಆರಂಭಿಸಿದ್ದೆ. ಆಡಳಿತ ಮಾಡುವವರಲ್ಲಿ ಸ್ಪಷ್ಟತೆ ಇರಬೇಕು ಎಂದು ಹೇಳಿದರು.
ಈ ವೇಳೆ ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆಗೆ ಸಚಿವ ಗೋವಿಂದ ಕಾರಜೋಳ, ಸಚಿವ ಮುರುಗೇಶ ನಿರಾಣಿ, ಸಚಿವ ಸಿ ಸಿ ಪಾಟೀಲ್, ಶಾಸಕ ಯತ್ನಾಳ್ ಸೇರಿ ಹಲವರು ಭಾಗಿಯಾಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ