• Home
  • »
  • News
  • »
  • state
  • »
  • Basavaraj Bommai: ಸೇಫ್ ಗೇಮ್ ಆಡುವ ಬೊಮ್ಮಾಯಿ ಈಗ ನಂಬರ್ 3; ಮಂತ್ರಿಗಿರಿ‌ ಕೊಡಲು ಹಿಂಜರಿದಿದ್ದವರು ಈಗ ಸಿಎಂ ಸ್ಥಾನವನ್ನೇ ಕೊಟ್ಟರು!

Basavaraj Bommai: ಸೇಫ್ ಗೇಮ್ ಆಡುವ ಬೊಮ್ಮಾಯಿ ಈಗ ನಂಬರ್ 3; ಮಂತ್ರಿಗಿರಿ‌ ಕೊಡಲು ಹಿಂಜರಿದಿದ್ದವರು ಈಗ ಸಿಎಂ ಸ್ಥಾನವನ್ನೇ ಕೊಟ್ಟರು!

ಸಿಎಂ ಬಸವರಾಜ ಬೊಮ್ಮಾಯಿ-ಬಿಎಸ್​ ಯಡಿಯೂರಪ್ಪ

ಸಿಎಂ ಬಸವರಾಜ ಬೊಮ್ಮಾಯಿ-ಬಿಎಸ್​ ಯಡಿಯೂರಪ್ಪ

ಜೆಡಿಯುನಲ್ಲಿದ್ದ ಬಸವರಾಜ ಬೊಮ್ಮಾಯಿಯನ್ನು ಹಲವು ವಿರೋಧದ ನಡುವೆ ಬಿಜೆಪಿಗೆ ಕರೆತಂದವರು ಯಡಿಯೂರಪ್ಪ. ಕಾಲಾನಂತರದಲ್ಲಿ ಕೆಜೆಪಿಯಲ್ಲಿದ್ದ ಯಡಿಯೂರಪ್ಪ ಅವರನ್ನು ಭಾರೀ ವಿರೋಧದ ನಡುವೆ ಬಿಜೆಪಿಗೆ ಕರೆತರಲು ಮಹತ್ವದ ಪಾತ್ರ ನಿರ್ವಹಿಸಿದವರು ಬೊಮ್ಮಾಯಿ.

  • Share this:

ಬಸವರಾಜ ಬೊಮ್ಮಾಯಿ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದವರು. ಈ ಬಾರಿಯೂ ಜಲಸಂಪನ್ಮೂಲ ಸಚಿವರಾಗಬೇಕು ಎಂದು ಕನಸು ಕಂಡಿದ್ದರು. ಯಡಿಯೂರಪ್ಪ ಅವರಿಗೂ ಬೊಮ್ಮಾಯಿಗೆ ಜಲಸಂಪನ್ಮೂಲ ಖಾತೆ ಕೊಡಲು ಮನಸ್ಸಿತ್ತು. ಆದರೆ ಪುತ್ರ ವಿಜಯೇಂದ್ರನ ಮಾತು ಕೇಳಿ ಬೊಮ್ಮಾಯಿ ಆಸೆಗೆ ತಕ್ಕಂತೆ ಮಂತ್ರಿ ಸ್ಥಾನ ಕೊಡಲು ಹಿಂದೇಟು ಹಾಕಿದರು. ಕಡೆಗೀಗ ಮುಖ್ಯಮಂತ್ರಿ ಸ್ಥಾನವನ್ನೇ ಕೊಡಬೇಕಾಯಿತು.‌ ಇದಕ್ಕೆ ರಾಜಕೀಯ ಎನ್ನುವುದು.


ಬಿಎಸ್ ವೈಗೆ ಬೊಮ್ಮಾಯಿ, ಬೊಮ್ಮಾಯಿಗೆ ಬಿಎಸ್ ವೈ


ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಸಂಬಂಧ ಬಹಳ ವಿಶೇಷವಾದುದು. ಜೆಡಿಯುನಲ್ಲಿದ್ದ ಬಸವರಾಜ ಬೊಮ್ಮಾಯಿಯನ್ನು ಹಲವು ವಿರೋಧದ ನಡುವೆ ಬಿಜೆಪಿಗೆ ಕರೆತಂದವರು ಯಡಿಯೂರಪ್ಪ. ಕಾಲಾನಂತರದಲ್ಲಿ ಕೆಜೆಪಿಯಲ್ಲಿದ್ದ ಯಡಿಯೂರಪ್ಪ ಅವರನ್ನು ಭಾರೀ ವಿರೋಧದ ನಡುವೆ ಬಿಜೆಪಿಗೆ ಕರೆತರಲು ಮಹತ್ವದ ಪಾತ್ರ ನಿರ್ವಹಿಸಿದವರು ಬೊಮ್ಮಾಯಿ.


ಯಡಿಯೂರಪ್ಪ ಮತ್ತೆ ಬಿಜೆಪಿಗೆ ಬಂದರೆ ಮುಖ್ಯಮಂತ್ರಿ ಆಗುವ ತಮ್ಮ‌ ಕನಸು ಶಾಶ್ವತವಾಗಿ ಮರಿಚಿಕೆ ಆಗುತ್ತೆ ಎಂದು ಅನಂತ ಕುಮಾರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಬಿ.ಎಲ್. ಸಂತೋಷ್ ಅವರಿಗೂ ಯಡಿಯೂರಪ್ಪ ಮತ್ತೆ ಬಿಜೆಪಿಗೆ ಬರುವುದು ಬೇಕಿರಲಿಲ್ಲ. ಅಂಥ ಸಂದರ್ಭದಲ್ಲಿ ಪದೇ ಪದೇ ಗುಜರಾತಿಗೆ ಹೋಗಿ ಪ್ರಧಾನಿ ಅಭ್ಯರ್ಥಿಯಾಗಿದ್ದ ಮೋದಿಗೆ 'ಬಿಜೆಪಿಗೆ ಯಡಿಯೂರಪ್ಪ ಏಕೆ ಬೇಕು?' ಎಂಬುದನ್ನು ಮನವರಿಕೆ ಮಾಡಿಕೊಟ್ಟವರು' ಬೊಮ್ಮಾಯಿ.


ಇದನ್ನೂ ಓದಿ:New CM of Karnataka: ಕರ್ನಾಟಕದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ


ಇಷ್ಟೇ ಅಲ್ಲ, ಯಡಿಯೂರಪ್ಪ ಕಟ್ಟಿದ ಕೆಜೆಪಿಗೆ ಹೋಗದಿದ್ದರೂ ಬೊಮ್ಮಾಯಿ ಎಂದೂ ಯಡಿಯೂರಪ್ಪ ಜೊತೆಗಿನ ಸಂಬಂಧ ಕೆಡಿಸಿಕೊಂಡವರಲ್ಲ. ಇತ್ತೀಚೆಗಂತೂ ಸದನದ ಒಳ-ಹೊರಗೆ ಸರ್ಕಾರವನ್ನು ಸಮರ್ಥಿಸಿದರು‌. ಜಲಸಂಪನ್ಮೂಲ ಇಲಾಖೆಯ ತೀರ್ಮಾನಗಳಿಂದ ಹಿಡಿದು ಯಡಿಯೂರಪ್ಪ ಅವರಿಗೆ ಹಲವು ರೀತಿಯಲ್ಲಿ ಬೆನ್ನಿಗೆ ನಿಂತಿದ್ದರು. ಈಗ ಬೊಮ್ಮಾಯಿ ಬೆನ್ನ ಹಿಂದೆ ಬಿಎಸ್ ವೈ ನಿಂತಿದ್ದಾರೆ.


ಬೊಮ್ಮಾಯಿ ಸೇಫ್ ಗೇಮ್!


ದೆಹಲಿಯಲ್ಲಿ ಒಮ್ಮೆ 'ಪ್ರಹ್ಲಾದ್ ಜೋಷಿ ಮತ್ತು ಜಗದೀಶ್ ಶೆಟ್ಟರ್ ಅವರಿಗಿಂತ ನೀವು ಶಾಣ್ಯರಿದ್ದೀರಿ, ಆದರೂ ನೀವು ಯಾವಾಗಲೂ ಸೇಫ್ ಗೇಮ್ ಆಡೋದೇಕೆ? ಸ್ವಲ್ಪ ಮೈಚಳಿ ಬಿಟ್ಟು ರಾಜಕಾರಣ ಮಾಡಿದರೆ ಉತ್ತಮ ಸ್ಥಾನ ಸಿಗಲಿದೆಯಲ್ಲವೇ?' ಎಂದು ಕೇಳಿದಾಗ ಬೊಮ್ಮಾಯಿ, 'ಜೋಷಿ - ಶೆಟ್ಟರ್ ಇಬ್ಬರಿಗೂ ಆರ್ ಎಸ್ ಎಸ್ ಹಿನ್ನೆಲೆ ಇದೆ. ನಿರ್ಣಾಯಕ ಸಂದರ್ಭದಲ್ಲಿ ಅದು ಅವರಿಗೆ ವರದಾನ ಆಗಲಿದೆ. ನಾನು ಹೊರಗಿನವನಾದ ಕಾರಣ  ಸೇಫ್ ಗೇಮ್ ಆಡುವುದು ಅನಿವಾರ್ಯ' ಎಂದಿದ್ದರು. ಇದೇ ಕಾರಣಕ್ಕೆ ಅವರು ಯಡಿಯೂರಪ್ಪ ಜೊತೆಗಿನ ಸಂಬಂಧ ಕೆಡಿಸಿಕೊಂಡಿರಲಿಲ್ಲ.


ಇದನ್ನೂ ಓದಿ: Basavaraj Bommai: ನೂತನ ಸಿಎಂ ಬಸವರಾಜ ಬೊಮ್ಮಾಯಿ; ತಂದೆ-ಮಗ ಇಬ್ಬರಿಗೂ ಅದೃಷ್ಟ ಒಲಿದ ರೀತಿ ಒಂದೇ!


ಬಸವರಾಜ ಬೊಮ್ಮಾಯಿ ನಂಬರ್ 3


ಬಿಜೆಪಿಯಲ್ಲಿ ಮುಖ್ಯಮಂತ್ರಿ ಹಾಗೂ ರಾಜ್ಯಾಧ್ಯಕ್ಷ ಸ್ಥಾನಗಳು ಸಂಘ ಪರಿವಾರದ ಮೂಲದವರಿಗೇ ಮೀಸಲಾಗಿರುತ್ತಿತ್ತು. ಈ ವಿಷಯದಲ್ಲಿ ಮೊದಲು ನಿಲುವು ಸಡಿಲಿಸಿದ್ದು ಅಸ್ಸಾಂನಲ್ಲಿ. ಈಶಾನ್ಯ ಭಾರತದಲ್ಲಿ ನೆಲೆ ಕಂಡುಕೊಳ್ಳಬೇಕೆಂದು ಸರಬಾನಂದ ಸೋನವಾಲ್ ಅವರನ್ನು ಬಿಜೆಪಿಗೆ ಕರತರಲಾಯಿತು. ನಂತರ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಬಂದಿದ್ದ ಹಿಮಂತ ಬಿಸ್ವಾ ಶರ್ಮಾ ಅವರನ್ನು ಇತ್ತೀಚೆಗೆ ಸಿಎಂ ಮಾಡಿ ಮತ್ತೊಮ್ಮೆ 'ಉದಾರತೆ' ತೋರಲಾಗಿತ್ತು. ಈಗ ಜನತಾ ಪರಿವಾರದಿಂದ ಬಂದ ಬಸವರಾಜ ಬೊಮ್ಮಾಯಿಗೆ ಅವಕಾಶ ಕೊಟ್ಟಿದೆ. ಈ ಮೂಲಕ ಬಿಜೆಪಿ ಕಾಲ ಕಾಲಕ್ಕೆ ಬದಲಾಗುವ ಮುನ್ಸೂಚನೆ ನೀಡಿದೆ.


ಜನತಾದಳದ ಮೂಲಕ ರಾಜಕೀಯಕ್ಕೆ ಬಂದ ಲಿಂಗಾಯತ ಸಮುದಾಯದ ಬಸವರಾಜ ಬೊಮ್ಮಾಯಿ ಯುವ ಜನತಾದಳ ಬೆಳೆಯುವಲ್ಲಿ ಸಾಕಷ್ಟು ಕೊಡುಗೆ ನೀಡಿದವರು. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಬೆಳೆಸಿದವರು. ಆದರೆ ರಾಜಕೀಯ ನಿಂತ ನೀರಲ್ಲ ಎಂಬುದನ್ನು ಅರಿತ ಇವರು, 2008 ರಲ್ಲಿ ಬಿಜೆಪಿ ಪಾಳಯಕ್ಕೆ ಹಾರಿ ಯಡಿಯೂರಪ್ಪ ಅವರ ಗುಂಪಿನಲ್ಲಿ ಗುರುತಿಸಿಕೊಂಡರು. ಬಳಿಕ ನೀರಾವರಿ ಸಚಿವರಾಗಿ ಎರಡನೇ ಅವಧಿಗೆ ಗೃಹ ಸಚಿವರಾಗಿ ಈಗ ಮುಖ್ಯಮಂತ್ರಿಯಾಗಿದ್ದಾರೆ.

Published by:Latha CG
First published: